ಅಂತರಂಗ
ಅರಿಮೆಯ ಅರಿವಿರಲಿ – 2 : ಚಿತ್ರಗನ್ನಡಿ ದ್ವಂದ್ವ
- ಯೋಗೇಶ್ ಮಾಸ್ಟರ್
ಮುಗ್ಧರು ಮತ್ತು ಮೂರ್ಖರು; ಈ ಇಬ್ಬರೂ ಸಾಮಾನ್ಯವಾಗಿ ದ್ವಂದ್ವದಿಂದ ಬೇಗ ಪಾರಾಗುತ್ತಾರೆ. ಸಾಮಾನ್ಯವಾಗಿ ಅವರಿಗೆ ದ್ವಂದ್ವವೇ ಆಗದು. ಮೊದಲು ಮೊಸರನ್ನ ತಿನ್ನಲಾ ಅಥವಾ ಪುಳಿಯೋಗರೆ ತಿನ್ನಲಾ? ಮಟನ್ ಕೈಮಾ ತಿನ್ನಲಾ ಅಥವಾ ಚಿಕನ್ ಕಬಾಬ್ ತಿನ್ನಲಾ? ಚೆನ್ನಾಗಿರುವುದು ಹಳದೀ ಬಟ್ಟೆಯೋ ಅಥವಾ ಹಸಿರು ಬಟ್ಟೆಯೋ? ಮೈಸೂರಿಗೆ ರೈಲಿನಲ್ಲಿ ಹೋಗುವುದು ಒಳ್ಳೆಯದೋ ಅಥವಾ ಬಸ್ಸಿನಲ್ಲೋ? ಅವರಿಗೆ ಇಂತಹ ಮಾದರಿಗಳ ದ್ವಂದ್ವವೇ ಅತ್ಯಂತ ತಲೆ ತಿನ್ನುವುದು. ಯಾವುದೋ ಒಂದು ಎನ್ನುವ ಜಾಯಮಾನದವರಲ್ಲ ಅವರು. ಅದೆಷ್ಟು ತಲೆಕೆಡಿಸಿಕೊಳ್ಳುತ್ತಾರೆಂದರೆ ಆ ಕೆಲಸದ ಸಾಧಕ ಬಾಧಕಗಳನ್ನೆಲ್ಲಾ ಚರ್ಚೆ ಮಾಡಿ ಕೊನೆಗೆ ಮೊದಲು ಪುಳಿಯೋಗರೆ ತಿಂದು ನಂತರ ಮೊಸರನ್ನ ತಿಂದು ಮುಗಿಸುತ್ತಾರೆ. ಚಿತ್ರಗನ್ನಡಿ ಸಂಘರ್ಷವೆಂದರೆ ಇದಲ್ಲ.
ತಮ್ಮ ಬಗ್ಗೆ ತಾವು ಏನೋ ಅಂದುಕೊಂಡಿರುವಾಗ, ಅದರಂತೆ ಕಾಣುತ್ತಿದ್ದೇವೆ ಎಂದು ತಾವು ಭಾವಿಸಿರುವಾಗ, ಅಥವಾ ಕಾಣಬೇಕು ಎಂದು ಪ್ರಯತ್ನಿಸುತ್ತಿರುವಾಗ ಇತರರು ಬೇರೆಯೇ ಲಕ್ಷಣದಿಂದ ಗುರುತಿಸಿದಾಗ ಆಗುವ ದ್ವಂದ್ವ ಚಿತ್ರಗನ್ನಡಿ ದ್ವಂದ್ವ. ದ್ವಂದ್ವವು ಪಕ್ವ ಮನಸ್ಸಿನ ಹಲವು ಲಕ್ಷಣಗಳಲ್ಲಿ ಒಂದು. ಅದು ಆರೋಗ್ಯಕರ ಮನಸ್ಸು ಹೌದೋ ಅಲ್ಲವೋ ಹೇಳಲಾಗದು. ಆರೋಗ್ಯದ ಸ್ಥಿತಿಗೆ ದಾರಿಯಾಗಬಹುದು.
ಸದಾ ಚಟುವಟಿಕೆಯಿಂದಲೇ ಇರುವ ಮನಸ್ಸು ತಾನು ದ್ವಂದ್ವರಹಿತವಾಗಿದ್ದಾಗ ಸಂತೃಪ್ತವಾಗುತ್ತದೆ. ಇನ್ನೂ ಮುಂದುವರಿದ ಸಂದರ್ಭದಲ್ಲಿ ಇದೇ ಮನಸ್ಸು ದ್ವಂದ್ವರಹಿತವಾದಾಗ ಶಾಂತವಾಗುತ್ತದೆ. ಶಾಂತತೆ ಆರೋಗ್ಯಕರ ಮನಸ್ಸಿನ ಮಾನದಂಡ.
ಮನಸ್ಸನ್ನು ಹೇಗೋ ಅದೂ ಇದೂ ಮಾಡಿ ತೃಪ್ತಿಪಡಿಸಬಹುದು. ಆದರೆ ಸುಲಭವಾಗಿ ಅದನ್ನು ಶಾಂತಗೊಳಿಸಲಾಗದು. ಶಾಂತಿ ಬೇಕು ಎಂದರೆ ಧ್ಯಾನ, ಪ್ರಾರ್ಥನೆ ಎಂದೆಲ್ಲಾ ಹೇಳಿಕೊಂಡು ಬುದ್ಧ, ಮಹಾವೀರ, ಯೇಸು, ಪತಂಜಲಿಯಂತಹ ಪ್ರತಿಮೆಗಳ ಕಡೆ ನೋಡಲಾರಂಭಿಸುತ್ತಾರೆ.
ಯಾರದೇ ಚಿತ್ರಪಟಗಳನ್ನು ತಂದಿರೋ ಕೆಟ್ಟಿರಿ. ನಿಮಗೆ ಖಂಡಿತ ಬೇಕಾಗಿರುವುದು, ಅವರೆಷ್ಟೇ ಮಹಾತ್ಮರಾಗಿರಲಿ, ಯಾರದೇ ಚಿತ್ರಪಟಗಲ್ಲ. ಕನ್ನಡಿ. ನಿಮ್ಮನ್ನು ನಿಮ್ಮಂತೆಯೇ ತೋರಿಸುವ ಕನ್ನಡಿ. ಅದೊಂದು ಸಿಕ್ಕರೆ ಅರಿಮೆಯನ್ನು ನೀಗಿ ಅರಿವಿನ ಕಡೆಗೆ ಸಾಗಲು ಸಾಧ್ಯ. ಆದ್ದರಿಂದ ಇಲ್ಲಿ ಶಾಂತಿ ಎಂದರೆ ತುಂಬಾ ಆಧ್ಯಾತ್ಮಿಕವಾಗಿ, ತಾತ್ವಿಕವಾಗೆಲ್ಲಾ ಯೋಚಿಸುವುದು ಬೇಡ. ಶಾಂತಿ ಎಂದರೆ ತಿಳಿ ಎಂದಷ್ಟೇ ತಿಳಿಯುವ. ಬಗ್ಗಡದ ನೀರು, ತಿಳಿಯಾದ ನೀರು; ಈ ತಿಳಿ ಇಲ್ಲಿ ಹೇಳುತ್ತಿರುವುದು.
ಸರಿ, ತಿಳಿಯಾದ ಮನಸ್ಸೆಂಬುದಿದೆಯೇ? ಇಲ್ಲ. ಏಕೆಂದರೆ ಮನಸ್ಸೆಂಬುದು ಘನ, ದ್ರವ, ಅನಿಲವ್ಯಾವುದೂ ಅಲ್ಲ. ಆದರೆ ಪ್ರಕೃತಿಯಲ್ಲಿ ಮನುಷ್ಯ ಇತರ ಪ್ರಾಣಿಗಳಿಂದ ತನ್ನನ್ನು ಬೇರ್ಪಡಿಸಿಕೊಳ್ಳಲು ಸಾಧ್ಯವಾಗಿದ್ದು ಮನಸ್ಸು ಎಂಬ ಉಪಕರಣವನ್ನು ಸಮರ್ಥವಾಗಿ ಬಳಸಲು ಸಾಧ್ಯವಾದ್ದರಿಂದ. ಆದರೆ ಮನಸ್ಸು ಬರಿಯ ಉಪಕರಣ ಮಾತ್ರವೇ ಆಗಿದ್ದರೆ ತಲೆ ನೋವಿರುತ್ತಿರಲಿಲ್ಲ. ಮಾಡಬೇಕು ಎಂದು ನಿರ್ದೇಶನ ಕೊಡುವುದೂ ಅದೇ, ಮಾಡಬಾರದು ಎಂದು ನಿರ್ಬಂಧಿಸುವುದೂ ಅದೇ. ಆಸೆ ಪಡುವುದೂ ಅದೇ.
ನಿರಾಸೆಗೊಳಗಾದಾಗ ನರಳುವುದೂ ಅದೇ. ಹೀಗೆ ಒಳಗೆ ಹೊರಗೆ, ತಿಳಿದು, ತಿಳಿಯದೇ, ಬೇಕೆನ್ನುವುದು, ಬೇಡವೆನ್ನುವುದು, ಬೇಕೆನ್ನುತ್ತಾ ಮಾಡದಿರುವುದು, ಬೇಡವೆನ್ನುತ್ತಾ ಮಾಡುವುದು; ಹೀಗೆ ಎಲ್ಲವೂ ತಾನೇ ಆಗಿರುವುದರಿಂದ ಇದರ ರಚನೆ, ವ್ಯವಹಾರ, ಕ್ರಿಯೆ, ಪ್ರತಿಕ್ರಿಯೆ ಎಲ್ಲವೂ ಸಂಕೀರ್ಣಮಯ. ಸಂಕೀರ್ಣವಾಗಿರುವ ಮನಸ್ಸನ್ನು ಒಟ್ಟೊಟ್ಟಿಗೆ ಗ್ರಹಿಸಲು ಹೋದರೆ ಗೋಜಲುಗೋಜಲಾಗಿ ಗೊಂದಲಗಳಾಗುವುದು.
ಸಾಲದಕ್ಕೆ ಒಬ್ಬ ವ್ಯಕ್ತಿಯ ಮನಸ್ಸು ಎಂಬುದಕ್ಕೆ ಭೌತಿಕವಾದ ಅಸ್ತಿತ್ವವಿಲ್ಲ. ಅದರ ಚಟುವಟಿಕೆಗಳು ಮಾತ್ರ ಪ್ರದರ್ಶನದಲ್ಲಿರುತ್ತವೆ. ಅದರ ಚಟುವಟಿಕೆಗಳಿಗೆ ಒಂದು ಇಚ್ಛೆಯ ಮೂಲವಿರುತ್ತದೆ. ಆ ಇಚ್ಛೆಯು ಒಂದೋ ಎರಡೋ ಪ್ರಭಾವಗಳಿಂದ ರೂಪುಗೊಂಡಿರುವುದಿಲ್ಲ. ಮನಸ್ಸಿನ ಬಗ್ಗೆ ಏನೇ ಹೇಳಿದರೂ ಎಲ್ಲವೂ ಗೋಜಲುಗೋಜಲೇ, ಗೊಂದಲಮಯವೇ. ಒಟ್ಟಾರೆ ಅದರ ರಚನೆಯೂ ಸಂಕೀರ್ಣ. ತಿಳಿಯುವುದೂ ಸಂಕೀರ್ಣ. ಅದು ಸಂಕೀರ್ಣ ಎಂದು ತಿಳಿಯುವುದೇ ತಿಳುವಳಿಕೆಯ ಮೊದಲ ಹೆಜ್ಜೆ.
ಈಗ ನಿಧಾನವಾಗಿ ಗಮನಿಸುವ. ಒಂದು ಚಿತ್ರಪಟವನ್ನು ನೋಡಿದಿರಿ. ಅಲ್ಲಿ ನೀವು ಸುಂದರವಾದ ಹೆಣ್ಣಿನ ಚಿತ್ರವನ್ನು ನೋಡಲು ಬಯಸಿದ್ದೀರಿ. ಆದರೆ ಅದೋ ವಾಸ್ತವದಲ್ಲಿ ಒಬ್ಬ ವೃದ್ಧನ ಚಿತ್ರ.ನಿಮ್ಮ ಬಯಕೆಯನ್ನೇ ಅಲ್ಲಿ ಬಿಂಬವಾಗಿಸಬೇಕೆಂದರೆ, ವೃದ್ಧನ ಚಿತ್ರವನ್ನು ಅಳಿಸಬೇಕು. ನೇರವಾಗಿ ಅಳಿಸುತ್ತೀರೋ, ಮಾನಸಿಕವಾಗಿ ಅಳಿಸುತ್ತೀರೋ, ಹೇಗೋ ಅಲ್ಲಿಂದ ವೃದ್ಧನ ಚಿತ್ರ ತೆಗೆದುಹಾಕಿ ಸುಂದರಿಯ ಚಿತ್ರವನ್ನು ಮೂಡಿಸಬೇಕು. ಆಗಲೇ ನಿಮಗೆ ತೃಪ್ತಿ. ಹಾಗೆ ಮಾಡಲು ನಿಮಗೆ ಶ್ರಮಬೇಕು. ನಿಮ್ಮ ಪ್ರಯತ್ನವು ಸಫಲವಾಗುವುದೋ ಇಲ್ಲವೋ. ಅದನ್ನೂ ಹೇಳಲಾಗದು. ಸರಿ, ಇದಕ್ಕೆ ಪರಿಹಾರವೇನು? ನೋಡಲು ಬಯಸಿದ್ದೇನೋ ಸುಂದರಿಯ ಚಿತ್ರ. ಆದರೆ ಇರುವುದು ವೃದ್ಧನ ಚಿತ್ರ. ಈಗ ನಾನು ವೃದ್ಧನ ಚಿತ್ರವನ್ನೇ ನೋಡುತ್ತೇನೆ. ಅದರಲ್ಲಿರುವ ಸೌಂದರ್ಯವನ್ನು ಗುರುತಿಸುತ್ತೇನೆ. ಖುಷಿಪಡುತ್ತೇನೆ. ಅಲ್ಲಿಗೆ ಮನಸ್ಸಿಗೆ ಶಾಂತಿ. ತೃಪ್ತಿಗೂ ಮತ್ತು ಶಾಂತಿಗೂ ಇರುವ ವ್ಯತ್ಯಾಸವೇ ಇದು. ನಮ್ಮ ಕಾಮನೆಯಂತೆ ಮನಸ್ಸನ್ನು ತೃಪ್ತಿಪಡಿಸಿಕೊಳ್ಳಲು ಹೋದಷ್ಟು ಅದು ಕ್ಷೋಭೆಗೊಳ್ಳುತ್ತದೆ. ವಾಸ್ತವವನ್ನು ಸ್ವೀಕರಿಸಿ ಶಾಂತಿಗೊಳಿಸಿಕೊಳ್ಳಲು ಹೋದಾಗ ಅದು ನಿರಾಳವಾಗುತ್ತದೆ.
ಅರಿಮೆಯಿಂದ ಕ್ಷೋಭೆ. ಅರಿವಿನಿಂದ ಶಾಂತಿ. ಬಗ್ಗಡವು ಬರ್ಬರವಾಗಿದ್ದರೆ ತಿಳಿಯು ತಿಳುವಳಿಕೆಗೆ ದಾರಿಯಾಗುತ್ತದೆ. ಸಂಕೀರ್ಣವು ಗೊಂದಲಮಯವಾಗಿದ್ದರೆ, ಸರಳತೆಯು ಸಂಯಮದಲ್ಲಿರುತ್ತದೆ. ಅದಕ್ಕಾಗಿಯೇ ಅರಿಮೆಯನ್ನು ಅರಿಯಬೇಕು. ಇಂಗ್ಲೀಷಲ್ಲಿ ಕಾಂಪ್ಲೆಕ್ಸ್ ಎನ್ನುತ್ತೇವೆ. ಸಾಮಾನ್ಯವಾಗಿ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಅಂದರೆ ಕೀಳರಿಮೆ, ಸುಪೀರಿಯಾರಿಟಿ ಕಾಂಪ್ಲೆಕ್ಸ್ ಅಂದರೆ ಮೇಲರಿಮೆ ಎಂದೆಲ್ಲಾ ತಿಳಿದಿದ್ದೇವೆ. ಆದರೆ ನಮ್ಮಲ್ಲಿ ಎಷ್ಟೆಷ್ಟೋ ಕಾಂಪ್ಲೆಕ್ಸ್ ಗಳಿವೆ. ಬಗೆಗಳೋ ಹಲವು, ವಿನ್ಯಾಸಗಳೋ ವಿಚಿತ್ರ. ಇನ್ನು ಅವುಗಳ ಸಂರಚನೆಯನ್ನು ಅಷ್ಟು ಸುಲಭವಾಗಿ ವಿವರಿಸಲಾಗದು. ಆದರೂ ತಿಳಿಯುವ ಮನಸ್ಸನ್ನು ತಿಳಿಗೊಳಿಸಿಕೊಂಡರೆ ತಿಳಿಯಲು ಸಾಧ್ಯ. ಚಿತ್ರವೆಂಬ ಅರಿಮೆಯಿಂದ ಕನ್ನಡಿಯೆಂಬ ಅರಿವಿಗೆ ಹೊರಳುವುದಕ್ಕೆ ಎಲ್ಲಾ ಕಾಡುವ ಕಾಂಪ್ಲೆಕ್ಸುಗಳ ಗಮನಿಸೋಣ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243