ಭಾವ ಭೈರಾಗಿ
ಕವಿತೆ | ಜೋಳಿಗೆಯಿಲ್ಲದ ಜಂಗಮ
- ಜಿ. ಮುದ್ದುವೀರಸ್ವಾಮಿ ಹಿರೇಮಳಲಿ, ದಾವಣಗೆರೆ
ಅವನು ಹುಚ್ಚ
ಮಹಾನಗರದ ಬೀದಿಗಳಲ್ಲಿ
ಅಲೆಯುತ್ತಾನೆ
ಏನನ್ನೊ ಹುಡುಕುತ್ತ
ಅಲೆದಾಟ
ನಿಂತ ನೀರಲ್ಲ
ಎಲ್ಲಿಂದಲೊ ಆರಂಭ
ಗಮ್ಯವಿರದ
ನಿಲುಗಡೆ
ಸಾಗುವ ದಾರಿಯ ಇಕ್ಕೆಲಗಳ
ಕಸ ಕಡ್ಡಿ ಖಾಲಿ ನೀರಿನ ಬಾಟಲಿ
ಹರಿದ ಚಪ್ಪಲಿ
ಎಸೆಯುತ್ತ ರಸ್ತೆ ಮಧ್ಯದಿ….
ಹೆಸರಿರದ ಮರದಡಿ ವಿಶ್ರಾಂತಿ
ಬೊಡ್ಡೆಗೊರಗಿಸಿಟ್ಟ ಹಳೆ ದೇವರ
ಪಟಗಳ ವಿಚಾರಣೆ
ದೇವರ ದೈನೇಸಿತನಕೆ
ಮರುಕ: ಚರಂಡಿ ನೀರಿನಲಿ
ಅಸಹಾಯಕ ದೇವತೆಗಳ ಮೋಕ್ಷ
ಯಾರೊ ಕೊಟ್ಟದ್ದ ತಿಂದು
ಉಳಿದದ್ದ ದಿಕ್ಕು ದಿಕ್ಕಿಗೆಸೆದು
ಗುನುಗುತ್ತ ಲಹರಿ ಬಂದಂತೆ
ಪಯಣ
ಮೂಡು ಕೆಟ್ಟರೆ ನಿಂತ
ನಿಲುವಲ್ಲೆ
ವಾಚಾಮಗೋಚರ ಬೈಗುಳ
ಶತ್ರು ಅಗೋಚರ
ಕಸದ ರಾಶಿಯಲಿ ಸಿಕ್ಕ
ಕನ್ನಡ-ಇಂಗ್ಲಿಷ್ ಪತ್ರಿಕೆ
ತುಣುಕುಗಳ ಪಾರಾಯಣ
ಮೊಗದಲಿ ಸಂತೃಪ್ತ ಹಾಸ
ಅಂಗಿಮೇಲೊಂದಂಗಿ
ಅಂಡು ಕಾಣುವ ಚಡ್ಡಿ
ಸೀಗೆ ಪೆಳೆಯಂತಹ ಗಡ್ಡ
ಬದುಕು ನಿಗೂಢ!
ಬಂದಿರುವುದೆಲ್ಲಿಂದ
ಹೋಗ ಬೇಕಿರುವುದೆಲ್ಲಿಗೆ?
ಯಾವುದರ ಹುಡುಕಾಟ
ಜೋಳಿಗೆಯಿಲ್ಲದ ಜಂಗಮ
ನಮ್ಮೊಳಗಿನ ಆತ್ಮ.
ಸುದ್ದಿದಿನ.ಕಾಂ|ವಾಟ್ಸಾಪ್|9980346243