ಭಾವ ಭೈರಾಗಿ
ಕವಿತೆ | ಮನುಜನು ನಾನು
- ಮೂಲ : ತೆಲುಗಿನ ತಂಗೆಲ್ಲ ರಾಜಗೋಪಾಲ
- ಕನ್ನಡಕ್ಕೆ : ಅರುಣ್ ನವಲಿ
ಸೃಷ್ಠಿ ನಂಗಾಗಿಯೇ ವಿಸ್ತಾರ ಇದೆಯೆಂದೂ
ಭೂ-ಗೋಲ ನಂಗಾಗಿಯೇ ತಿರುಗುತ್ತಲಿದೆಯೆಂದೂ
ಸಮಸ್ತ ಜೀವಕೋಟಿ ನನ್ನಡಿಯಾಳು ಎಂದೂ
ಮೂಢನಂತೆ ನಂಬಿರುವ ಮನುಜನು ನಾನು
ಮೂಢನಂತೆ ನಂಬಿರುವ ಮನುಜನು ನಾನು
ಪೃಥ್ವಿಯನು ತಾಯೆನ್ನುವೆ ನಾನು
ನೇಸರನೇ ತಂದೆ ಅಂದೆ ನಾನು
ನಡಿಗೆ ಬರುವವರೆಗೆ ನಟಿಸಿದವನು ನಾನು
ಹಾರುವಾಗ ಮೋಡವಿದು ಅಡ್ಡಿ ಎಂದೆನು
ಹಾರುವಾಗ ಮೋಡವಿದು ಅಡ್ಡಿ ಎಂದೆನು
ಕಾಲಿಟ್ಟೊಡೆ ಕಾಡಕಡಿದು ದಾರಿ ಮಾಡಿದವನು
ದಡದಿ ನಿಂತು ಕಡಲಲೆಗೆ ಸೆಡ್ಡು ಹೊಡೆದೆನು
ತಾಯ ಗರ್ಬದೀ ಬಂಗಾರ ಉಂಟೆಂದು-
ಬಗೆದುಬಿಟ್ಟೆನು
ಕಡಲ ಕಿಬ್ಬೊಟ್ಟೆಗೆ ಅಮೃತಕೆ ಕಡೆಗೋಲ ಇಟ್ಟೆನು!
ಅರೇ…ನಾಳೆಗೇನೋ ಅಂದೊಡನೆ
ನಾನಿರುವೆನೆ? ಅಂದು ನಕ್ಕು ನಡೆದೆನು.
ನೆಲದ ಮೇಲೆ ಗೆರೆಯಾ ಗೀಚಿ
ನಂದು-ನಿಂದಂತ ಹಂಚಿಕೊಂಡೆನು
ಜಗಳ ಜೂಟಿ ಮಾಡುತ್ತಲೆ ಕಾಲವನ್ನೇ ಮರೆತೆನು
ನಾನೆ ರಾಜನೆಂದೆನು
ದಕ್ಕಿದ್ದೆಲ್ಲ ರಾಜ್ಯವೆಂದುಕೊಂಡೆನು
ಹುಚ್ಚಾಟ-ಕಚ್ಚಾಟವನೇ ಇತಿಹಾಸ ಎಂದೆನು
ಗುರುತಿಗಾಗಿ ಬಂಡೆಗಲ್ಲ ನೆಟ್ಟೆ ನಾನು
ನಾ ಹೇಳಿದಂತೆ ಕೇಳುವಂಥ
ಕೆತ್ತಿದಂತೆ ಕಾಣುವಂಥ
ನನ್ನಂತೆಯೆ ತೋರುವ ದೇವರ ಧರೆಗೆ ತಂದೆನು
ನನ್ನ ಕಾಯುವುದೇ ದೇವರೆಂದು ನಂಬಿನಡೆದೆನು
ಕರುಣೆ ತೋರೋ ದೇವನೆಂದು ಕೈಯ ಮುಗಿದೆನು
ಅದನು-ಇದನು ಕೊಂದು ತಿಂದು
ಕಾಣದಂತ ರೋಗ ಬಂದು ಊರೂರು ಅಲೆದೆನು
ಗಂಡಾಂತರ ಗಡಿ ದಾಟಲು ಕೈಕಟ್ಟಿ ಕೂತೆನು
ಗುಮ್ಮ ಹೋಗಲಮ್ಮ ಎಂದು ಬೆವರು ಬಂದೆನು
ನೀನು ಹಾಡದಿದ್ದರೀಗ ಚಿಗುರು ಚಿಗಿಯಲಿಲ್ಲವೇ?
ನೀನು ಕೇಳದಿದ್ದರೀಗ ವಸಂತ ಕೂಗಲಿಲ್ಲವೇ?
ನೀನು ಕೇಳದಿದ್ದರೀಗ ವಸಂತ ಕೂಗಲಿಲ್ಲವೆ
ನಾ ನಡೆಯೋದು ನಿಂತಕ್ಷಣ ಭೂಬ್ರಮಣೆಯು ನಿಂತಿತೆ
ಏಳುವುದು ತಡವೆಂದು ಹಕ್ಕಿಗಾನ ಅಡಗಿತೆ?
‘ರಾಜ’ನಲ್ಲ ‘ಭೋಜ’ನಲ್ಲ
ಕ್ರಿಮಿಯು ನನ್ನಷ್ಟಕೆ ನಾನೆಂದೆನು
ಬದುಕಿದರೆ ಸಾಕೆಂದು ಬಾಯಿ ಬಾಯಿ ಬಿಟ್ಟೆನು
ಸೃಷ್ಠಿಮಾತ ಮೀರೆನೆಂದು ಗಲ್ಲಗಲ್ಲ ಬಡಿದೆನು
ಏನೋ, ಬುದ್ದಿ ಬಂದಿತೆಂದು ವಿನಯ ಮೆತ್ತಿಕೊಂಡೆನು
ಮದ್ದೂ ನನಗೆ ಸಿಕ್ಕ ಒಡನೇ, ಅದೇ ವರಸೆ ತೆಗೆದೆನು
ಹೊಟ್ಟೆ ತುಂಬಿದಾಗ ನಾನು,
ಯಾರೋ ನೀನು ಎಂದೆನು..!!
ನನಗ್ಯಾರು ಸಾಟಿಯೆಂದು ಅದೇರಾಗ ನುಲಿದೆನು.!!
ಮನುಜನು ನಾನು ಸ್ವಾರ್ಥಿ ಮನುಜನು ನಾನು
ಮಾಯದಾರಿಯಲ್ಲಿ ನಡೆವ ವಿಷಕೂಟವು ನಾನು
ಮನುಜನು ನಾನು ಸ್ವಾರ್ಥಿ ಮನುಜನು ನಾನು
ಸ್ವಾರ್ಥ ದಾರಿಯಲ್ಲಿ ನಡೆವ ಹೇಯ ಜಂತುವು ನಾನು..!
ಸುದ್ದಿದಿನ.ಕಾಂ|ವಾಟ್ಸಾಪ್|9980346243