ದಿನದ ಸುದ್ದಿ

ಕೊಡಗು ಪ್ರವಾಹ : ನಿರಾಶ್ರಿತರಿಗೆ ಮನೆ ನಿರ್ಮಾಣ ಸದ್ಯದಲ್ಲೇ ಆರಂಭ

Published

on

ಸುದ್ದಿದಿನ,ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯ ಜನಜೀವನ ಅಸ್ತವ್ಯಸ್ತ ಉಂಟಾಗಿತ್ತು. ಇದರಿಂದ ಹಲವು ಕುಟುಂಬಗಳು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದರು. ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಯಿತು. ಆ ದಿಸೆಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಜಾಗ ಗುರುತಿಸಿದ್ದು, ಸಮತಟ್ಟು ಮಾಡುವ ಕಾರ್ಯ ಪೂರ್ಣಗೊಂಡು, ಬಡಾವಣೆ ನಿರ್ಮಾಣ ಸಂಬಂಧ ಅನುಮೋದನೆ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ.

ಆ ನಿಟ್ಟಿನಲ್ಲಿ ಬಡಾವಣೆಯ ನೀಲ ನಕಾಶೆ ತಯಾರಾಗಿದ್ದು, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಮಾರ್ಗ, ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡವು ಶುಕ್ರವಾರ ಪರಿಶೀಲನೆ ಮಾಡಿದರು ಎಂದು ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಅವರು ತಿಳಿಸಿದ್ದಾರೆ.

ಬಡಾವಣೆ ನಿರ್ಮಾಣ ಸಂಬಂಧ ಇನ್ನೂ ಒಂದು ವಾರದಲ್ಲಿ ಅನುಮೋದನೆ ದೊರೆಯಲಿದ್ದು, ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅನುಮೋದನೆ ದೊರತೆ ನಂತರ ನಿರಾಶ್ರಿತರಿಗೆ ಒಪ್ಪಿಗೆಯಾಗುವ ಮನೆ ನಿರ್ಮಿಸುವ ಕಾರ್ಯ ಶುರುವಾಗಲಿದೆ ಎಂದು ಜಗದೀಶ್ ಅವರು ಮಾಹಿತಿ ನೀಡಿದರು.

ಹಾಗೆಯೇ ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದಲ್ಲಿ ಕೃಷಿ, ತೋಟಗಾರಿಕೆ, ಕಾಫಿ, ಕರಿಮೆಣಸು, ಏಲಕ್ಕಿ, ಬಾಳೆ ಹೀಗೆ ವಿವಿಧ ಬೆಳೆಗಳು ನಷ್ಟ ಉಂಟಾಗಿದ್ದು, ಬೆಳೆ ನಷ್ಟ ಪರಿಹಾರಕ್ಕೆ 100 ಕೋಟಿ ರೂ ಹೆಚ್ಚು ಹಣ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಪ್ರಕೃತಿ ವಿಕೋಪದಿಂದಾಗಿ ಆಸ್ತಿ-ಪಾಸ್ತಿ, ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ವಿವಿಧ ಗ್ರಾಮಗಳಲ್ಲಿ ನಿವೇಶನ ಗುರುತು ಮಾಡಿದೆ.

ಎಲ್ಲೆಲ್ಲಿ ಜಾಗ? ಕರ್ಣಂಗೇರಿ ಗ್ರಾಮದಲ್ಲಿ ನಾಲ್ಕು ಎಕರೆ ಗುರುತಿಸಲಾಗಿದ್ದು, ಸುಮಾರು 80 ನಿವೇಶನಗಳು ಲಭ್ಯವಾಗಲಿದೆ. ಈ ಗ್ರಾಮದಲ್ಲಿ ಕರ್ಣಂಗೇರಿಯ 13, ಮಕ್ಕಂದೂರಿನ 11, ಹಚ್ಚಿನಾಡಿ 1, ಹೊದಕಾನ 9 ಹಾಗೂ ನಗರದ 43 ಕುಟುಂಬಗಳಿಗೆ ಒಟ್ಟು 65 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಿಲಾಗಿದೆ.

ಕೆ.ನಿಡುಗಣೆ ಗ್ರಾಮದಲ್ಲಿ ಅಂದಾಜು 5 ಎಕರೆ ಜಾಗ ಗುರುತಿಸಲಾಗಿದ್ದು, ಕಾಲೂರು ಗ್ರಾಮದ 22 ಕುಟುಂಬಗಳಿಗೆ, ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವೆ ನಂ.103 ರಲ್ಲಿ 7 ಎಕರೆ ಜಾಗ ಗುರುತಿಸಲಾಗಿದ್ದು, ಹೆಬ್ಬೆಟ್ಟಗೇರಿಯ 90 ಕುಟುಂಬಗಳಿಗೆ, ಗಾಳಿಬೀಡು ಗ್ರಾಮದಲ್ಲಿ 13 ಎಕರೆ ಜಾಗ ಗುರುತಿಸಲಾಗಿದ್ದು, 19 ಕುಟುಂಬಗಳಿಗೆ, ನಿಡುವಟ್ಟಿನ 26 ಕುಟುಂಬಗಳಿಗೆ ಬಾರಿಬೆಳ್ಳಚ್ಚು 2 ಕುಟುಂಬಗಳಿಗೆ, ಒಂದನೇ ಮೊಣ್ಣಂಗೇರಿ 9 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.

ಮದೆ ಗ್ರಾಮದ 10 ಎಕರೆ ಜಾಗ ಗುರುತಿಸಲಾಗಿದ್ದು, ಎರಡನೇ ಮೊಣ್ಣಂಗೇರಿಯ 188 ಕುಟುಂಬಗಳಿಗೆ, ಮದೆ ಗ್ರಾಮದ 79 ಕುಟುಂಬಗಳಿಗೆ, ಸಂಪಾಜೆಯಲ್ಲಿ 1.50 ಎಕರೆ ಗುರುತಿಸಲಾಗಿದ್ದು, ಸಂಪಾಜೆಯ 4 ಕುಟುಂಬಗಳಿಗೆ, ಬಿಳಿಗೇರಿಯಲ್ಲಿ 1.88 ಎಕರೆ ಜಾಗ ಗುರುತಿಸಲಾಗಿದ್ದು, ಹೆರವನಾಡಿನ 10 ಕುಟುಂಬಗಳಿಗೆ ಒಟ್ಟು 281 ಕುಟುಂಬಗಳಿಗೆ, ಜಂಬೂರು ಗ್ರಾಮದಲ್ಲಿ 50 ಎಕರೆ ಜಾಗ ಗುರುತಿಸಲಾಗಿದ್ದು, ಮಕ್ಕಂದೂರು ಗ್ರಾಮದ 99 ಕುಟುಂಬಗಳಿಗೆ, ಎಮ್ಮೆತಾಳು ಗ್ರಾಮದ 39 ಕುಟುಂಬಳಿಗೆ, ಮುಕ್ಕೋಡ್ಲು ಗ್ರಾಮದ 9 ಕುಟುಂಬಗಳಿಗೆ, ಮೇಘತ್ತಾಳು ಗ್ರಾಮದ 26 ಕುಟುಂಬಗಳಿಗೆ ಒಟ್ಟು 173 ಕುಟುಂಬಗಳಿಗೆ ಜಾಗ ಗುರುತಿಸಲಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು 2 ಕುಟುಂಬಗಳಿಗೆ, ಕಿರಂಗಂದೂರು 6, ಬೇಳೂರು 4, ಹಾನಗಲ್ಲು 3, ನೆರುಗಳಲೆ 1, ಹಾಡಗೇರಿ 22, ಮುವತ್ತೋಕ್ಲು 4, ಇಗ್ಗೋಡ್ಲು 9, ಕಡಗದಾಳು 11, ಕಾಂಡನಕೊಲ್ಲಿ 5, ಕೊಪ್ಪತ್ತೂರು 3, ಜಂಬೂರು 4, ಗರ್ವಾಲೆ 2, ಶಿರಂಗಳ್ಳಿ 1, ಮಂಕ್ಯ 1, ಕಿಕ್ಕರಳ್ಳಿ 1, ಹಾಲೇರಿ 5 ಒಟ್ಟು 84 ಕುಟುಂಬಗಳಿಗೆ ನಿವೇಶನ ಗುರುತಿಸಲಾಗಿದೆ ಎಂದು ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್ ಅವರು ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version