ಭಾವ ಭೈರಾಗಿ
ಕವಿತೆ | ಬ್ರಾಹ್ಮನಾಯಿ-ಶೂದ್ರಕೋಳಿ
೧
ಶೂದ್ರ ಕೋಳಿ ಮೇಯುತ್ತಿತ್ತು
ಗಲ್ಲಿಯಲ್ಲಿ;
ಬ್ರಾಹ್ಮ ನಾಯಿ ಹೊಂಚುತಿತ್ತು
– ಅಲ್ಲಿ ಇಲ್ಲಿ,
ಶೂದ್ರಕೋಳಿಗೇನು ಗೊತ್ತು,
ಪಾಪ, ನಾಯಿ ಬ್ರಾಹ್ಮ ಎಂದು?
ತಮ್ಮ ಮನೆಯ ನಾಯಿಯಂತೆ
ಎಂದು ಸುಮ್ಮ ಮೇಯುತ್ತಿತ್ತು.
೨
ಬ್ರಾಹ್ಮನಾಯಿ ಅಪ್ಪಟ ಕಂತ್ರಿ.
ಆದರೇನು? ಕಪಟ ಕುತಂತ್ರಿ!
ಕೊರಳಿನಲ್ಲಿ ಜನ್ನ ಪಟ್ಟೆ;
ಒಡಲಲ್ಲಿ ಖಾಲಿ ಹೊಟ್ಟೆ!
ಮೆಲ್ಲ ಮೆಲ್ಲ ಸುಳಿದು ಸುತ್ತಿ
ಹತ್ತೆ ಬಂತು;
ಸಾಧು ಎಂದು ಶೂದ್ರ ಕೋಳಿ
ನೋಡು ನಿಂತು,
ಹಾರಿ ನೆಗೆದು ಹಿಡಿದುಕೊಂಡು
ಓಡಿ ಹೋಯ್ತು!
ಪಾಲ್ವಡಿನೊಂದ ಗೋಡೆ
ರಕ್ಷೆಯಾಯ್ತು:
ಪಾರ್ವನಾಯ್ದೆ ಶೂದ್ರ ಕೋಳಿ
ಭಕ್ಷ್ಯವಾಯ್ತು!
೩
ಮರಿಯತನದಿ ಮೊದಲುಗೊಂಡು
ಸಾಕಿ ಸಲಹು ಒಲಿದ ತನ್ನ
ಪುಟ್ಟ ಮುದ್ದು ಹುಂಜಗಾಗಿ,
ಕರುಣ ತುಂಬಿದೆದೆಯ ದೇವಿ,
ಗೋಳೋ ಎಂದು ಹುಡುಗಿಯೊಂದು
ಅಳುತಲಿತ್ತು.
‘ಶುದ್ಧ ಶೂದ್ರ ಹುಡುಗಿ’ ಎಂದು
ಹಾರನೊಡನೆ ಹಾರಿ ನಿಂದು,
ಕೇಲಿಗಾಗಿ ಗೇಲಿ ಮಾಡಿ
ಬೀದಿ ಬಾಗಿಲಲ್ಲಿ ಕೂಡಿ
ಬ್ರಾಹ್ಮವೃಂದ ಚಂದ ನೋಡಿ –
ನಗುತಲಿತ್ತು!
–ಕುವೆಂಪು
(‘ಕುವೆಂಪು ಕಾವ್ಯಯಾನ’ ಪುಸ್ತಕದಿಂದ ಈ ಕವಿತೆಯನ್ನು ಆಯ್ದುಕೊಳ್ಳಲಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243