ಅಂತರಂಗ

ನುಡಿಯ ಒಡಲು -09 | ನುಡಿ ಮತ್ತು ಮೆದುಳು

Published

on

  • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು,ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ನುಡಿ ಮತ್ತು ಮೆದುಳುಗಳ ನಡುವಣ ನಂಟಸ್ತಿಕೆ ಎಂತಹದು? ನುಡಿಗೂ ಹಾಗೂ ಮೆದುಳಿಗೂ ನೇರವಾದ ನಂಟಸ್ತಿಕೆ ಇರುವುದರಿಂದ, ಈ ಎರಡೂ ಸಂಗತಿಗಳನ್ನು ಇಲ್ಲಿ ಚರ್ಚಿಸುವ ಅಗತ್ಯವಿದೆ. ಮೆದುಳು ಹಾಗೂ ನುಡಿಯ ನಡುವಣ ನಂಟಸ್ತಿಕೆ ಎಂತಹದು? ಯಾವ ಬಗೆಯಲ್ಲಿ ಮೆದುಳು ನುಡಿಯೊಂದಿಗೆ ನಂಟಸ್ತಿಕೆಉನ್ನು ಬೆಳೆಸಿಕೊಂಡಿರುತ್ತದೆ? ಹಾಗೂ ಈಗಾಗಲೇ ಈ ಹಿಂದೆ ಚರ್ಚಿಸಿದಂತೆ, ನುಡಿ ಮಾನವರಿಗೆ ಒದಗಿರುವ ಒಂದು ಅಂತಸ್ಥ ಸಾಮರ್ಥ್ಯ.

ಈ ಸಾಮರ್ಥ್ಯ ಅವರ ಮೆದುಳಿನಲ್ಲಿ ಯಾವ ಜಾಗದಲ್ಲಿ ಅಂತರ್ಗತವಾಗಿರುತ್ತದೆ. ಮಾನವರ ಮೆದುಳಿನ ರಚನೆಯ ಮೂಲಸ್ವರೂಪವನ್ನು ಅರಿಯುವುದರ ಜೊತೆಗೆ ನುಡಿಯ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿಯಬಹುದು. ಮಾನವರಲ್ಲಿ ಜನ್ಮಜಾತವಾಗಿ ನುಡಿಯನ್ನು ಗಳಿಸಿಕೊಳ್ಳುವ ಅಂತಸ್ಥ ಸಾಮರ್ಥ್ಯ ಅವರ ಮೆದುಳಿನಲ್ಲಿ ಅಂತರ್ಗತವಾಗಿರುತ್ತದೆ. ಚಾಮ್‌ಸ್ಕಿಯ ಈ ನಿಲುವನ್ನು ಎರಿಕ್ ಲೆನ್‌ಬರ್ಗ್ ಒಪ್ಪಿಕೊಳ್ಳುತ್ತಾನೆ ದಿಟ.

ಆದರೆ ನುಡಿ ಗಳಿಕೆಯ ಪ್ರಕ್ರಿಯೆಯ ಬಗೆಗೆ ಕೆಲವು ಮಹತ್ವದ ಹೊಳವುಗಳನ್ನು ಅವನು ಕೊಡುತ್ತಾನೆ. ನುಡಿ ಗಳಿಕೆಗೆ ಒಂದು ನಿಶ್ಚಿತ ಗಡುವು (ಕ್ರಿಟಿಕಲ್ ಪಿರಿಯೇಡ್) ಇರುತ್ತದೆ. ಆ ನಿಗದಿತ ಗಡುವಿನೊಳಗೆ ಪ್ರತಿ ಮಗು ತನಗೆ ಸಿಗುವ ನುಡಿಯ ಹೂಡುವಳಿಗಳ (ಇನ್‌ಪುಟ್ಸ್) ಮೂಲಕ, ತನ್ನಲ್ಲಿರುವ ಅಂತಸ್ಥ ಸಾಮರ್ಥ್ಯವನ್ನು ಬಳಸಿಕೊಂಡು ನುಡಿಯನ್ನು ಗಳಸಿಕೊಳ್ಳದೇ ಹೋದರೆ, ಆ ಮಗುವಿಗೆ ಮುಂದೆಂದೂ ನುಡಿಯನ್ನು ಕಲಿಯಲು/ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಲೆನ್‌ಬರ್ಗ್ ತನ್ನ ಈ ಚಿಂತನೆಯನ್ನು ವಿವರಿಸುವುದಕ್ಕೆ ಪ್ರೌಢಿಮೆ (ಮ್ಯಾಚ್ಯುರೇಶನ್) ಎಂಬ ಒಂದು ಅರಿಮೆ ಪದವನ್ನು ಹುಟ್ಟುಹಾಕುತ್ತಾನೆ. ಈ ಪ್ರೌಢಿಮೆಯ ಅವಧಿ ಹದಿನೆಂಟು ತಿಂಗಳಿಂದ ಹನ್ನೆರಡು ಇಲ್ಲವೇ ಹದಿನಾಲ್ಕು (ಪಬರ್ಟಿಯ ಕಾಲದವರಗೆ) ವರುಷಗಳವರೆಗೆ ಗುರುತಿಸುತ್ತಾನೆ. ಈ ಪ್ರೌಢಿಮೆ ಪ್ರಕ್ರಿಯೆಯಲ್ಲಿಯೇ ನುಡಿಗಳಿಕೆಯ ನೆಲೆಗಳು ಅಡಕಗೊಂಡಿರುತ್ತವೆ. ಇವನ ಈ ತರ್ಕಕ್ಕೆ ಮುಖ್ಯ ಕಾರಣವೇ ಮಗ್ಗಲಾಗುವಿಕೆ (ಲ್ಯಾಟರಲೈಜೇಶನ್). ಈ ಅರಿಮೆಯ ಪದದ ಕಣ್ನೋಟದಿಂದ ನುಡಿ ಗಳಿಕೆಯ ನೆಲೆಗಳನ್ನು ಇನ್ನಷ್ಟು ವಿವರವಾಗಿ ನೋಡಬಹುದು.

ಪ್ರತಿಯೊಂದು ಸಾಮನ್ಯ ಮಗು ಕೂಡ ಈ ಮಗ್ಗಲಾಗುವಿಕೆಯ ಪ್ರಕ್ರಿಯೆಯಲ್ಲಿಯೆ ತನ್ನ ಎಲ್ಲ ಗ್ರಹಿಕಾ ಸಾಮರ್ಥ್ಯಗಳನ್ನು ಮೆದುಳಿನ ಬೇರೆ ಬೇರೆ ಭಾಗಗಳಲ್ಲಿ ನೆಲೆಗೊಳಿಸುವಲ್ಲಿ ನಿರತವಾಗಿರುತ್ತದೆ. ನುಡಿ ಗಳಿಕೆಯ ಪ್ರಕ್ರಿಯೆಯೂ ಈ ಮಗ್ಗಲಾಗುವಿಕೆಯ ಭಾಗವೇ ಆಗಿರುತ್ತದೆ. ಮಕ್ಕಳು ತಮ್ಮ ಮೆದುಳಿನ ನಿಶ್ಚಿತ ಭಾಗಗಳಲ್ಲಿ, ಈ ಮಗ್ಗಲಾಗುವಿಕೆಯ ಕಾಲದಲ್ಲಿಯೇ, ತಮ್ಮಲ್ಲಿರುವ ಅಂತಸ್ಥ ಸಾಮರ್ಥ್ಯದ ಮೂಲಕ ನುಡಿಯ ಬಹುತೇಕ ನೆಲೆಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಈ ಪ್ರಕ್ರಿಯೆ ಮಕ್ಕಳಿಗೆ ಸಿಗುವ ನುಡಿಯ ಹೂಡುವಳಿ (ಇನ್‌ಪುಟ್ಸ್) ಗಳನ್ನೂ ನಂಬಿಕೊಂಡಿರುತ್ತದೆ ಎಂಬುದನ್ನೂ ಗಮನಿಸಬೇಕಾಗುತ್ತದೆ.

ಒಂದು ಸಲ ಈ ಮಗ್ಗಲಾಗುವಿಕೆಯ ಕೆಲಸ ಮುಗಿದ ಮೇಲೆ ನುಡಿಯನ್ನು ಗಳಿಸಿಕೊಳ್ಳುವ ಕಸುವು ಸ್ಥಗಿತವಾಗುತ್ತದೆ. ಆದರೆ ಎಂದಿನಂತೆ, ಈ ಮಗ್ಗಲಾಗುವಿಕೆ ಮಗುವಿಗೆ ಆಯಾ ನುಡಿಯ ಸೊಲ್ಲರಿಮೆಯ/ವ್ಯಾಕರಣ ತಿಳಿವನ್ನು ಗಳಿಸಿಕೊಳ್ಳಲು ಅಗತ್ಯಕ್ಕಿಂತ ಹೆಚ್ಚು ಅವಕಾಶವನ್ನು ಕೊಡುತ್ತದೆ. ಹೆಚ್ಚಿನ ಮಂದಿಗೆ ಈ ನುಡಿ ಗಳಿಕೆಯ ನೆಲೆ ಅವರ ಎಡಮೆದುಳಿನಲ್ಲಿಯೇ ಕೊನೆಗೊಳ್ಳುತ್ತದೆ.

ನಿರ್ಣಾಯಕ ಕಾಲ (ಕ್ರಿಟಿಕಲ್ ಪಿರಿಯೆಡ್) ಮೀರಿದ ಮೇಲೆ, ನುಡಿ ಬೆಳವಣಿಗೆ/ಗಳಿಕೆಯ ಸಹಜ ಸ್ಥಿತಿ ನಿಂತ ಮೇಲೆ, ಒಂದುವೇಳೆ ಎಡಮೆದುಳಿಗೆ ಏನಾದರೂ ಎರವು [ಡ್ಯಾಮೇಜ್] ಉಂಟಾದರೆ, ಅಂತಹ ಎರವು ಖಾಯಂ ಆಗಿಯೇ ಉಳಿಯುತ್ತದೆ. ಕೇವಲ ಕಿರಿಯ ವಯಸ್ಸಿನ ಮಕ್ಕಳು ಮಾತ್ರ ತಮ್ಮ ಬಲಮೆದುಳನ್ನು ಬಳಸಿಕೊಂಡು ನುಡಿಯನ್ನು ಗಳಸಿಕೊಳ್ಳುವ ಸಾಮರ್ಥ್ಯವನ್ನು ತೋರಿಸುತ್ತಾರೆ.

ಆದರೆ ಈ ನಿರ್ಣಾಯಕ ಕಾಲದಲ್ಲಿ ಸಾಮನ್ಯ ಮಗು ಅತ್ಯಂತ ಸುಲಭವಾಗಿ ನುಡಿಯನ್ನು ಗಳಿಸಿಕೊಳ್ಳುತ್ತದೆ ಎಂಬುದು ಮಾತ್ರ ದಿಟ. ಈ ನಿರ್ಣಾಯಕ ಕಾಲ ಎಂಬ ನೆಲೆಯೂ ಜೈವಿಕವಾಗಿ ನಿರ್ಧರಿಸಲ್ಪಟ್ಟಿರುತ್ತದೆ. ಹಾಗಾಗಿ ನುಡಿ ಗಳಿಕೆಗೆ ಯಾವ ಕಾಲ ಸುಳುವಾಗಿರುತ್ತೆ ಮತ್ತು ಯಾವುದು ಕಷ್ಟಕರವಾಗಿರುತ್ತೆ ಎಂಬ ಸಂಗತಿಗಳೂ ಮೊದಲೇ ನಿರ್ಧಾರವಾಗಿರುತ್ತವೆ.

ಲೆನ್‌ಬರ್ಗ್ನ ಪ್ರಕಾರ ನುಡಿ ಗಳಿಕೆಯ ಪ್ರಕ್ರಿಯೆ ಅಂಬೆಗಾಲಿಡುವ ಮಗುವಿಂದ ಶುರುವಾಗಿ ಹದಿಹರೆಯದಲ್ಲಿ ಕೊನೆಗೊಳ್ಳುತ್ತದೆ. ಮತ್ತು ಇದರ ಜೊತೆಗೇನೆ ಮಗ್ಗಲಾಗುವಿಕೆ ಪ್ರಕ್ರಿಯೆಯೂ ಕೊನೆಗೊಳ್ಳುತ್ತದೆ. ಈ ವೇಳೆಯಲ್ಲಿ ಯಾವುದೇ ಔಪಚಾರಿಕ ತರಬೇತಿಯಿಲ್ಲದೇ ಮಗು ತನ್ನ ತಾಯ್ನುಡಿ ಇಲ್ಲವೇ ಮೊದಲ ನುಡಿಯನ್ನು ಅತ್ಯಂತ ಸುಳುವಾಗಿ ಕಲಿಯಬಲ್ಲದು. ಹದಿಹರಯ ಇಲ್ಲವೇ ಪಬರ್ಟಿಯ ನಂತರ ನುಡಿ ಗಳಿಕೆಯ ಕಸುವು ತನ್ನಷ್ಟಕ್ಕೆ ಸ್ಥಗಿತಗೊಳ್ಳುತ್ತದೆ.

ಎಡಮೆದುಳು ಮತ್ತು ಬಲಮೆದುಳು
ಮೆದುಳು ಮೋಟರ್, ಸೆನ್ಸರಿ ಚಟುವಟಿಕೆ ಹಾಗೂ ಚಿಂತನೆಯ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಬೌದ್ಧಿಕ (ಸೆರೆಬ್ರಲ್) ಮೆದುಳನ್ನು ಎಡ ಮತ್ತು ಬಲ ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ. ಈ ಎರಡೂ ಭಾಗಗಳು ಕೆಲವು ವಿಶೇಷ ರಚನೆ ಹಾಗೂ ಕ್ರಿಯೆಗಳನ್ನು ನೆರವೇರಿಸುವಂತೆ ಕಾಣುತ್ತವೆ. ಇವುಗಳಲ್ಲಿ ಕೆಲವಷ್ಟು ಕ್ರಿಯೆಗಳು ಎಡಮೆದುಳಿನಲ್ಲಿ ಉಂಟಾದರೆ, ಮತ್ತೆ ಕಲವು ಕ್ರಿಯೆಗಳು ಬಲಮೆದುಳಿನಲ್ಲಿ ಉಂಟಾಗುತ್ತವೆ. ಲೆನ್‌ಬರ್ಗ್ನ ಪ್ರಕಾರ ಮೆದುಳು ಹೀಗೆ ಇಬ್ಭಾಗವಾಗುವ ಬಗೆಯನ್ನು ಮಗ್ಗಲಾಗುವಿಕೆ (ಲ್ಯಾಟರಲೈಜೇಶನ್) ಎಂದು ಕರೆಯಲಾಗುತ್ತದೆ.

ಇವುಗಳು ಒಂದಕ್ಕೊಂದು ಕನ್ನಡಿ ಬಿಂಬದಂತೆ ಕೆಲಸ ಮಾಡುತ್ತವೆ. ಎಡಮೆದುಳು ದೇಹದ ಬಲಗಡೆಯನ್ನು ನಿಯಂತ್ರಿಸಿದರೆ, ಬಲಮೆದುಳು ದೇಹದ ಎಡಗಡೆಯನ್ನು ನಿಯಂತ್ರಿಸುತ್ತದೆ. ಮತ್ತಿತರ ತಜ್ಞ ಕ್ರಿಯೆಗಳನ್ನು ಮೆದುಳಿನ ಎರಡೂ ಭಾಗಗಳು ನಿಭಾಯಿಸುತ್ತವೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆಯಾದರೂ, ಈ ನಿಲುವುಗಳನ್ನು ಸಮರ್ಥಿಸುವಷ್ಟು ಆಧಾರಗಳು ಇನ್ನೂ ಸಿಕ್ಕಿಲ್ಲ. ಆದರೆ ಈ ಎರಡೂ ಭಾಗಗಳಲ್ಲಿ ಎಡಮೆದುಳಿನ ಭಾಗವೇ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ.

ನುಡಿ ಸಂಬಂಧಿ ಚಟುವಟಿಕೆಗಳಿಗೆ ಈ ಭಾಗವೇ ಹೊಣೆಯಾಗಿರುವ ಕಾರಣ ಸಹಜವಾಗಿಯೇ ಎಡಮೆದುಳಿನ ಭಾಗ ಪ್ರಾಬಲ್ಯವನ್ನು ಹೊಂದಿದೆ. ಏಕೆಂದರೆ, ನುಡಿಗೆ ಸಂಬಂಧಿಸಿದ ಬ್ರೊಕಾ ಮತ್ತು ವರ್ನಿಕ್ ಏರಿಯಾಗಳು, ಆರ್ಕ್ಯುವೇಟ್ ಫ್ಯಾಸಿಕುಲಸ್, ಆಂಗ್ಯುಲರ್ ಗಯ್ರಸ್ ಈ ಎಲ್ಲ ಜಾಗಗಳೂ ಎಡಮೆದುಳಿನಲ್ಲಿ ನೆಲೆನಿಂತುರಿವುದು ಕೂಡ ಇಂತಹ ಪ್ರಾಬಲ್ಯಕ್ಕೆ ಒತ್ತಾಸೆಯಾಗಿರಬಹುದು.

ಅಫೇಶಿಯಾ (ಮಾತಿನ ಕಸುವನ್ನು ಕಳೆದುಕೊಳ್ಳುವ ಬಗೆ. ಇದು ಬೇರೆ ಬೇರೆ ನೆಲೆಗಳಲ್ಲಿ ಇಲ್ಲವೇ ಸ್ವರೂಪಗಳಲ್ಲಿ ಉಂಟಾಗುತ್ತದೆ. ಇದು ಕೂಡ ಒಂದು ಕಾಯಿಲೆ?) ಬಗೆಗಿನ ಅಧ್ಯಯನಗಳು ಹೇಳುವಂತೆ ನುಡಿ ಕುರಿತ ಚಟುವಟಿಕೆಗಳು ಮೊದಲಾಗುವುದೇ ಎಡಮೆದುಳಿನಲ್ಲಿ. ಮೆದುಳಿನಲ್ಲಿ ಮಗ್ಗಲಾಗುವಿಕೆ ಕೆಲಸ ನಡೆಯುತ್ತದೆ ಎಂಬ ಸಂಗತಿಯನ್ನು ತಿಳಿಯಲು ಕೂಡ ಈ ಅಧ್ಯಯನಗಳೇ ಆಧಾರವಾಗಿವೆ. ಸ್ಟೇನ್‌ಬರ್ಗ್ನ ಪ್ರಕಾರ ಸೀಳು ಮೆದುಳಿನ (ಸ್ಪ್ಲಿಟ್‌ಬ್ರೇನ್) ರೋಗಿಗಳು, ಮೆದುಳು ಮಗ್ಗಲಾಗುವಿಕೆಗೆ ಬೇಕಾಗುವ ಇನ್ನೂ ಹೆಚ್ಚಿನ ಆಧಾರಗಳನ್ನು ಒದಗಿಸುತ್ತಾರೆ.

ಆದರೆ ಈ ಸೀಳು ಮೆದುಳಿನ ರೋಗಿಗಳಲ್ಲಿ ಎಡ ಮತ್ತು ಬಲ ಎರಡೂ ಮೆದುಳುಗಳು ಪ್ರತ್ಯೇಕವಾಗಿ ಕೆಲಸ ಮಾಡುತ್ತವೆ. ಆರೋಗ್ಯವಂತರ ಮೆದುಳಿನಂತೆ ಇವು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುವುದಿಲ್ಲ. ಹಾಗೂ ಇವುಗಳ ನಡುವೆ ಯಾವ ಬಗೆಯ ಹೊಂದಾಣಿಕೆಯೂ ಇರುವುದಿಲ್ಲ. ಅಂದರೆ ಒಂದು ಮೆದುಳಿನಲ್ಲಿ ಇರುವ ಮಾಹಿತಿ ಮತ್ತೊಂದಕ್ಕೆ ರವಾನೆಯಾಗುವುದಿಲ್ಲ. ಆದರೆ ಆರೋಗ್ಯವಂತರ ಮೆದುಳಿನ ಈ ಎರಡೂ ಭಾಗಗಳು ಎಷ್ಟೊಂದು ವಿಷಯಗಳಲ್ಲಿ ಒಂದಕ್ಕೊಂದು ನೆರವಾಗುತ್ತವೆ ಎನ್ನುವುದು ವಿಶೇಷ.

ಡಾ.ಮೇಟಿ ಮಲ್ಲಿಕಾರ್ಜುನ್, ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಮೆದುಳಿನ ಯಾವ ಜಾಗದಲ್ಲಿ ಏನಿರುತ್ತದೆ?
ನುಡಿ, ತರ್ಕ, ವಿಶ್ಲೇಷಣಾತ್ಮಕ ಚಟುವಟಿಕೆ, ಗಣಿತಶಾಸ್ತ್ರದಲ್ಲಿ ವಿಶೇಷ ತಜ್ಞತೆ ಇವುಗಳನ್ನೆಲ್ಲ ಒಳಗೊಂಡಿರುವ ಜಾಗವೇ ಎಡಮೆದುಳು. ಹಲವಾರು ಅಧ್ಯಯನಗಳ ಮೂಲಕ ಈ ಸಂಗತಿ ಸಾಬೀತಾಗಿದೆ. ಬ್ರೊಕಾ ಮತ್ತು ವರ್ನಿಕ್ ಏರಿಯಾಗಳು, ಆರ್ಕ್ಯುವೇಟ್ ಫ್ಯಾಸಿಕುಲಸ್, ಆಂಗ್ಯುಲರ್ ಗಯ್ರಸ್ ಈ ಎಲ್ಲ ಜಾಗಗಳು ನುಡಿಯ ತಿಳುವಳಿಕೆ ಮತ್ತು ಉತ್ಪಾದನೆಯನ್ನು ನಿಯಂತ್ರಿಸುವ ಜಾಗಗಳೇ ಆಗಿವೆ ಎಂಬುದು ಗಮನಾರ್ಹ.

ಭಾವನೆಗಳನ್ನು ಹುಟ್ಟಿಸುವ ಹಾಗೂ ಅವುಗಳನ್ನು ಗುರುತಿಸುವ ನೆಲೆಗಳು, ಮುಖ ಚಹರೆಗಳನ್ನು ಗುರುತಿಸುವ, ವಸ್ತುಗಳ ರಾಚನಿಕ ಸ್ವರೂಪವನ್ನು ಸಾರ್ವತ್ರಿಕವಾಗಿ ಗ್ರಹಿಸುವ ನೆಲೆಗಳನ್ನು ಬಲಮೆದುಳೇ ಒಳಗೊಂಡಿರುತ್ತದೆ. ಮತ್ತು ಸಂಗೀತ, ಅತ್ಯಂತ ತೊಡಕಿನ ಕಣ್ನೋಟದ ಬಗೆಗಳು ಕೂಡ ಬಲಮೆದುಳಿನಲ್ಲಯೇ ಕ್ರಿಯಾಶೀಲವಾಗಿರುತ್ತವೆ. ನುಡಿಗೆ ಹೊರತಾದ ಉಲಿಗಳು ಅಂದರೆ, ಸಪ್ಪಳ ಹಾಗೂ ಪ್ರಾಣಿಗಳ ಕೂಗಾಟದ ಉಲಿಗಳನ್ನೂ ಬಲಮೆದುಳು ಒಳಗೊಂಡಿರುತ್ತದೆ. ಎಡಮೆದುಳನ್ನು ಯಾವುದೇ ಅಪಾಯ ಇಲ್ಲವೇ ಕಾಯಿಲೆಯ ಕಾರಣ ತೆಗೆದು ಹಾಕಿದರೆ, ನುಡಿಗೆ ಸಂಬಂಧಿಸಿದ ಕೆಲಸವನ್ನು ಇದು ವಹಿಸಿಕೊಳ್ಳುತ್ತದೆ.

ಪೌಲ್ ಬ್ರೋಕಾ ಮತ್ತು ಕರ‍್ಲ್ ವರ್ನಿಕ್

ಯಾರಿವರು? ಪೌಲ್ ಬ್ರೋಕಾ ಇವನೊಬ್ಬ ಫ್ರೆಂಚ್ ಸರ್ಜನ್/ನರತಜ್ಞ (ನ್ಯೂರೋಅನಾಟಮಿಸ್ಟ್). ಇವನು ಯುದ್ಧದ ಗಾಯಾಳುಗಳ ಜೀವವನ್ನು ಉಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದನು. ಈ ಗಾಯಾಳುಗಳಿಗೆ ಚಿಕಿತ್ಸಿಸುವಾಗ ಅವನು ತೀರಾ ನಿಗಾವಹಿಸಿ ಎಲ್ಲರನ್ನು ಗಮನಿಸುತ್ತಿದ್ದನು. ಹಾಗೂ ಆ ಎಲ್ಲ ಗಾಯಾಳುಗಳನ್ನು ತುಂಬಾ ಕಾಳಜಿಯಿಂದಲೂ ನೋಡಿಕೊಳ್ಳುತ್ತಿದ್ದನು. ಅಸಾಧಾರಣವಾದದ್ದನ್ನು ಕಂಡುಹಿಡಿಯಲು ಕಾರಣವೇ ಅವನ ಈ ಬದ್ಧತೆ ಎಂದು ಹೇಳಬಹುದು.

ಇವನ ಚಿಕಿತ್ಸೆಯಿಂದ ಚೇತರಿಸಿಕೊಂಡ ಒಂದಿಷ್ಟು ಗಾಯಾಳುಗಳು ಎಲ್ಲ ರೀತಿಯಿಂದಲೂ ಸಹಜವಾಗಿಯೇ ಕಾಣುತ್ತಿದ್ದರು. ಆದರೆ ಇವರೆಲ್ಲರೂ ಮಾತಿನ ಕೊರತೆಯಿಂದ ಬಳಲುತ್ತಿದ್ದರು. ಈ ರೋಗಿಗಳ ಎಡಮೆದುಳಿನ ಸೀಮಿತ ಜಾಗದಲ್ಲಿ ಗಾಯವಾಗಿರುವುದೇ ಕಾರಣವಾಗಿರುತ್ತಿತ್ತು. ಮೆದುಳಿನಲ್ಲಿಯ ಈ ಜಾಗವನ್ನು ಇವನು ತನ್ನ ಸಂಶೋಧನೆಯಲ್ಲಿ ಕಂಡುಹಿಡಿದನು. ಇದನ್ನೇ ಬ್ರೋಕಾ ಏರಿಯಾ ಎಂದು ಕರೆಯಲಾಗುತ್ತದೆ.

ಮೆದುಳಿನ ಈ ಜಾಗಕ್ಕೆ ಯಾವುದೇ ಗಾಯ ಇಲ್ಲವೇ ಹೊಡೆತದ ಪರಿಣಾಮದಿಂದ ಮಾತಿನ ಕೊರತೆ ಉಂಟಾದರೆ, ಆ ಜಾಗವನ್ನು ಬ್ರೋಕಾ ಅಫೇಸಿಯಾ ಎಂದು ಗುರುತಿಸಲಾಗಿದೆ. ಅಫೇಸಿಯಾ ಎಂಬುದು ಗ್ರೀಕ್ ಪದ, ಮಾತಿನ ಕಸುವನ್ನು (ಸ್ಪೀಚ್‌ಲೆಸ್) ಕಳೆದುಕೊಂಡ ನೆಲೆಯನ್ನು ಇದು ಸೂಚಿಸುತ್ತದೆ. ಸಾವಿರದ ಎಂಟನೂರು ಎಂಬತ್ತೊಂದರಲ್ಲಿ ಮಾತಿನ ಬೇನೆಗೆ (ಅಫೇಸಿಯಾ) ಒಳಗಾಗಿದ್ದ ಒಬ್ಬ ವ್ಯಕ್ತಿಗೆ ಬ್ರೋಕಾ ಚಿಕಿತ್ಸೆಯ (ಸಲಹೆಗಳ)ನ್ನು ನೀಡುತ್ತಿದ್ದನು. ಆ ವ್ಯಕ್ತಿಯನ್ನು ಬ್ರೋಕಾ ‘ತಾನ್’ ಎಂದು ಕರೆದನು.

ಈ ತಾನ್ ತೀರಿಕೊಂಡ ಮೇಲೆ ಬ್ರೋಕಾ ಅವನ ಶವಪರೀಕ್ಷೆ ಮಾಡುತ್ತಾನೆ. ಆವಾಗ ಆ ವ್ಯಕ್ತಿಯ ಎಡಮೆದುಳಿನ ಒಂದು ಜಾಗದಲ್ಲಿ ಗಾಯವಿರುವುದು ಕಂಡುಬರುತ್ತದೆ. ಎಡ ಕಿವಿಯ ಹಾಲೆಯ ಮುಂಭಾಗದ (ಫ್ರಂಟಲ್ ಲೋಬ್) ಮೇಲಿನ ಜಾಗವೇ ಈ ಗಾಯವಿರುವ ಜಾಗವಾಗಿತ್ತು. ಅಂದರೆ ಎಡಮೆದುಳು ನೆಲೆಗೊಂಡಿರುವ ಜಾಗವೆಂದೇ ಹೇಳಬೇಕು.

ಈ ಜಾಗದಲ್ಲಿ ಉಂಟಾಗಿರುವ ಗಾಯವನ್ನು ಬ್ರೋಕಾ ಗುರುತಿಸಿದ್ದಕ್ಕಾಗಿ ಆ ಜಾಗವನ್ನೇ ಬ್ರೋಕಾ (ಜಾಗ) ಏರಿಯಾ ಎಂದು ಕರೆಯುತ್ತಾರೆ. ‘ನುಡಿಯ ಸಾಮರ್ಥ್ಯ ಮಾನವರ ದೇಹದ ಯಾವ ಭಾಗದಲ್ಲಿ ನೆಲೆಗೊಂಡಿರುತ್ತೆ?’ ಮೆದುಳಿನಲ್ಲಿಯೋ? ಇಲ್ಲವೇ ಮನಸ್ಸಿನಲ್ಲೋ? ಎಂಬ ಆವತ್ತಿನ ಕಾಲದ ನುಡಿ ಬಗೆಗಿನ ಚರ್ಚೆಗೆ ಬ್ರೋಕಾನ ಈ ನಿಲುವು, ನುಡಿ ಮೆದುಳಿನಲ್ಲಿಯೇ ನೆಲೆ ನಿಂತಿರುತ್ತದೆ ಎಂಬುದಕ್ಕೆ ಇದೊಂದು ಸಮರ್ಥನೆಯೂ ಆಗಿದೆ ಎಂಬುದನ್ನು ಮನಗಾಣುವುದಕ್ಕೆ ಈ ಸಂಗತಿಯು ಒತ್ತಾಸೆಯಾಗಿದೆ.

ಬ್ರೋಕಾ ಜಾಗದಲ್ಲಿ ಉಂಟಾಗುವ ಬೇನೆಯಿಂದ ಬಳಲುವ ವ್ಯಕ್ತಿ, ನುಡಿಗೆ ಸಂಬಂಧಿಸಿದ ಯಾವ ಬಗೆಯ ತೊಡಕುಗಳನ್ನು ಎದುರಿಸುತ್ತಾನೆ ಎಂಬುದನ್ನು ಬ್ರೋಕಾ ಕಂಡುಹಿಡಿದನು. ನುಡಿಗೆ ಸಂಬಂಧಿಸಿದ ಆ ತೊಂದರೆ ಯಾವುದೆಂದರೆ, ಮಾತನ್ನು ಹೊರಡಿಸುವುದೇ ಆಗಿರುತ್ತದೆ. ಏಕೆಂದರೆ, ಮಾತನ್ನು ಹೊರಡಿಸುವ ಜಾಗವಿರುವುದೇ ಬ್ರೋಕಾ ಏರಿಯಾ. ಇಂತವರಿಗೆ ಸರಾಗವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಈ ನೆಲೆಯ ವ್ಯಕ್ತಿಗಳು ಬಹುತೇಕ ಸನ್ನಿವೇಶದಲ್ಲಿ ಮಾತನಾಡುವ ಕಸುವನ್ನೇ ಕಳೆದುಕೊಳ್ಳುತ್ತಾರೆ. ಇದನ್ನು ವರ್ಬಲ್ ಅಪ್ರಾಕ್ಸಿಯಾ [ಮಾತನಾಡದ ನೆಲೆ] ಎಂದು ಕರೆಯುತ್ತಾರೆ.

ಆದರೆ ಬೇರೆಯವರು ಮಾತಾಡುವುದನ್ನು ಇವರು ಅರ್ಥ ಮಾಡಿಕೊಳ್ಳುತ್ತಾರೆ. ಹಾಗೂ ವರ್ಬಲ್ ಅಪ್ರಾಕ್ಸಿಯಾದಿಂದ ಬಳಲುವ ಈ ವ್ಯಕ್ತಿಗಳಿಗೆ ಉಚ್ಚಾರಣೆಯಲ್ಲಿ ತೊಂದರೆಯಾಗುತ್ತದೆ. ಅಂದರೆ ಇವರಿಗೆ ಗಂಟಲು, ಉಲಿಪೆಟ್ಟಿಗೆ, ತುಟಿ, ದವಡೆ ಇವುಗಳ ಮೂಲಕ ಉಚ್ಚರಿಸುವಲ್ಲಿ ಕಷ್ಟವಾಗುತ್ತದೆ. ಸರಿಯಾಗಿ ಪದಗಳನ್ನು ಜೋಡಿಸಿ ಉಚ್ಚರಿಸಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಇನ್ನೊಬ್ಬರಿಗೆ ಪ್ರತಿಕ್ರಿಯಿಸುವಾಗ, ಸ್ವಂಪ್ರೇರಿತವಾಗಿ ಏನನ್ನಾದರೂ ಉಚ್ಚರಿಸಬೇಕೆಂದರೆ ಇವರು ತಡಕಾಡುತ್ತಾರೆ.

ಪ್ರತಿಸಲವೂ ಅವರ ಹೊರಡಿಸುವ ಉಲಿಗಳ ವಿಧಾನವೇ ಬೇರೆ ಬೇರೆಯಾಗಿರುತ್ತದೆ. ಇನ್ನೊಬ್ಬರು ಉಚ್ಚರಿಸುವುದನ್ನು ನೋಡಿ ಇವರು ಅನುಕರಿಸಬಹುದಾದರೂ, ಅದು ಯಾವಾಗಲೂ ನಡೆಯುವ ಕೆಲಸವಲ್ಲ. ಇವರಿಗೆ ಗ್ರಹಿಕೆಯಲ್ಲಿ ಸುಮಾರು 50% ರಿಂದ 90% ರಷ್ಟು ನಿಖರತೆ ಇರುತ್ತದೆ. ಆದರೆ ಇದೇ ನಿಖರತೆಯನ್ನು ಪರಸ್ಪರ ಮಾತುಕತೆಗಳಲ್ಲಿ ಎದರು ನೋಡಲು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ಇವರ ಗ್ರಹಿಕೆಯ ಕಸುವು ಸುಮಾರು 50% ಕ್ಕಿಂತ ಕಡಿಮೆಯಾಗಬಹುದು.

ಹಾಗೂ ಇವರು ಕೇವಲ ನಾಮಪದಗಳನ್ನು ಮಾತ್ರ ಹೊರಡಿಸಬಲ್ಲರು, ಬೇರೆ ಬಗೆಯ ಪದಗಳನ್ನು ಹೊರಡಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ನಾಮಪದಗಳೊಂದಿಗೆ ಬರುವ ಒಟ್ಟು (ಪ್ರತ್ಯಯ)ಗಳನ್ನೂ ಇವರು ಹೊರಡಿಸಲಾರರು. ಹಾಗೂ ಸೊಲ್ಲರಿಮೆ/ವ್ಯಾಕರಣದ ಅಪೂರ್ಣತೆ (ಅಗ್ರಾöಮ್ಯಾಟಿಕ್) ಮತ್ತು ಟೆಲಿಗ್ರಾಫಿಕ್ ಮಾದರಿಯ ಮಾತುಗಳನ್ನು ಮಾತ್ರ ಆಡುತ್ತಾರೆ. (ಉದಾ.ಗೆಗಾಗಿ, ನಾನು ಮನೆಗೆ ಹೋಗಿ ಊಟ ಮಾಡಿಕೊಂಡು ಬರುತ್ತೇನೆ) ಎಂಬುದನ್ನು ನಾ….ಮನೆ…..ಊಟ…. ಮುಂತಾಗಿ ಹೇಳಬಹುದು. ಬರವಣಿಗೆ ಮತ್ತು ಓದುವ ಚಳಕಗಳನ್ನೂ ಈ ಅಪ್ರಾಕ್ಸಿಯಾ ಬಾಧಿಸುತ್ತದೆ.

ನುಡಿಯ ಉತ್ಪಾದಕತೆಯಲ್ಲಿ ಕೊರತೆಯನ್ನು ಅನುಭವಿಸುವುದೇ ಬ್ರೋಕಾ ಅಫೇಸಿಯಾ. ಈ ಕೊರತೆಗಳು ನುಡಿ ಉತ್ಪಾದಕತೆಯ ಬೇರೆ ಬೇರೆ ನೆಲೆಯಲ್ಲಿಯೂ ಎದುರಾಗುತ್ತವೆ. ಬ್ರೋಕಾ ಏರಿಯಾ ಕುರಿತ ಎಲ್ಲ ವಿವರಗಳನ್ನು ಇಲ್ಲಿ ಚರ್ಚಿಸುವುದು ಸಾಧ್ಯವಿಲ್ಲ. ಸದ್ಯಕ್ಕೆ ಆ ಎಲ್ಲ ವಿವರಗಳನ್ನು ಚರ್ಚಿಸುವ ಅಗತ್ಯವೂ ಇಲ್ಲಿ ಎದ್ದು ಕಾಣುವುದಿಲ್ಲ. ಹಾಗಾಗಿ ಈಗ ಇಲ್ಲಿ ನುಡಿ ನೆಲೆಗೊಳ್ಳುವ ಮೆದುಳಿನ ಇನ್ನೊಂದು ಪ್ರಮುಖ ಭಾಗವಾಗಿರುವ ವರ್ನಿಕ್ ಏರಿಯಾ ಕುರಿತು ಚರ್ಚಿಸೋಣ.

ಕಾರ್ಲ್ ವೆರ್ನಿಕೆ

ಕಾರ್ಲ್ ವೆರ್ನಿಕೆ ಜರ್ಮನಿಯ ನರತಜ್ಞ-ನುಡಿಯರಿಗ. ಇವನು ನುಡಿ ಮತ್ತು ಮೆದುಳಿನ ನಂಟಸ್ತಿಕೆಯನ್ನು ಕುರಿತು ಪೌಲ್ ಬ್ರೋಕಾ ನಂತರ ಚಿಂತಿಸಿದವರಲ್ಲಿ ಮತ್ತೊಬ್ಬ ಬಹುದೊಡ್ಡ ಚಿಂತಕ. ಇವನು ಬ್ರೋಕಾ ಏರಿಯಾ ಹಾಗೂ ಮಾತಿನ ಕೊರತೆಯನ್ನು ಕುರಿತು ತನ್ನ ಸಂಶೋಧನಾ ತೀರ್ಮಾನಗಳನ್ನು ಪುಸ್ತಕೆ ರೂಪದಲ್ಲಿ ಪ್ರಕಟಿಸಿದನು. ಇದರಿಂದ ಇವನು ಲೋಕದಾದ್ಯಂತ ಹೆಸರುವಾಸಿಯಾದನು.

ತನ್ನ ಈ ಸಂಶೋಧನೆಯನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿಯೇ ವೆರ್ನಿಕೆ ಒಂದು ಮುಖ್ಯವಾದ ಸಂಗತಿಯನ್ನು ಕಂಡುಕೊಂಡನು. ಅದೇನೆಂದರೆ, ಕೇವಲ ಬ್ರೋಕಾ ಏರಿಯಾಗೆ ಒದಗುವ ತೊಂದರೆಯ ಪರಿಣಾಮದಿಂದ ಮಾತ್ರ ಎಲ್ಲ ಬಗೆಯ ನುಡಿ ಕೊರತೆಗಳು ಉಂಟಾಗುವುದಿಲ್ಲ, ಮೆದುಳಿನ ಮತ್ತೊಂದು ಜಾಗದಲ್ಲಿ ಆಗುವ ತೊಂದರೆಯಿಂದಲೂ, ಮಾನವರು ಮಾತಿನ ಕೊರತೆಯನ್ನು ಎದುರಿಸುತ್ತಾರೆ ಎಂಬ ಸಂಗತಿಯನ್ನು ಕಂಡುಹಿಡಿದನು.

ಹಾಗಾದರೆ ವೆರ್ನಿಕೆ ಕಂಡುಕೊಂಡ ನುಡಿ ಕುರಿತ ಕೊರತೆಗಳು ಎಂತಹವು? ಕಾರ್ಲ್ ವೆರ್ನಿಕೆ ಕಂಡುಹಿಡಿದ ಆ ಜಾಗವು ಬ್ರೋಕಾ ಏರಿಯಾಕ್ಕಿಂತ ಕೊಂಚ ಹಿಂದುಗಡೆ ಇರುತ್ತದೆ. ಅಂದರೆ ಆಡಿಟರಿ ಕರ‍್ಟೆಕ್ಸ್ಗೆ ಹೊಂದಿಕೊಂಡಿರುತ್ತದೆ. ಇದನ್ನು ಮೆದುಳಿನ ಎಡ ಹಿಂಭಾಗವೆಂದು (ಟೆಂಪರಾಲ್ ಲೋಬ್) ಹೇಳಬಹುದು. ಮಾನಸಿಕ ನ್ಯೂನತೆಯ ಕಾರಣದಿಂದ ಮೆದುಳಿನ ಬೇರೆ ಬೇರೆ ಜಾಗಗಳಲ್ಲಿ ಯಾವ ಬಗೆಯ ಮಾತಿನ ಕೊರತ (ಅಫೇಸಿಯಾ)ಗಳು ಉಂಟಾಗುತ್ತವೆ ಎಂಬುದನ್ನು ತನ್ನ ಶೋಧಗಳಿಂದ ವೆರ್ನಿಕೆ ತೋರ್ಪಡಿಸಿದ್ದಾನೆ.

ಆ ಶೋಧಗಳಿಂದ ಮಾತಿನ ಬೇರೆ ಬಗೆಯ ತೊಂದರೆಗಳು ಯಾವವು ಎಂಬುದನ್ನು ವೆರ್ನಿಕೆ ಗುರುತಿಸಿದ್ದಾನೆ. ಈ ವೆರ್ನಿಕೆ ಅಫೇಸಿಯಾದಿಂದ ಬಳಲುವವರ ಉಚ್ಚಾರಣೆಗಳು ಸರಿಯಾಗಿದ್ದು, ಸೊಲ್ಲರಿಮೆಗೆ ಒಪ್ಪಿತವಾದ ಸೊಲ್ಲುಗಳನ್ನೇ ಉತ್ಪಾದಿಸುತ್ತಿದ್ದರೂ, ಅರ್ಥಗಳನ್ನು ಒದಗಿಸು ನೆಲೆಗಳು ಮಾತ್ರ ಸರಿಯಾಗಿರುವುದಿಲ್ಲ. ಹಾಗೂ ಬೇರೆಯವರು ಮಾತಾಡಿದ್ದನ್ನು ಇವರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಾತನ್ನು ಉತ್ಪಾದಿಸುವ ನೆಲೆ ಇವರಿಗೆ ಸರಿಯಾಗಿದ್ದರೂ, ಅರ್ಥಗಳನ್ನು ಒದಗಿಸುವ ಹಾಗೂ ಅರ್ಥಗಳನ್ನು ಪಡೆಯುವ ನೆಲೆಯಲ್ಲಿ ಇವರು ತೊಂದರೆಗಳನ್ನು ಎದುರಿಸುತ್ತಾರೆ.

ನಮ್ಮ ಮೆದುಳಿನಲ್ಲಿ ಉಲಿ ಮತ್ತು ಆರ್ಥಗಳನ್ನು ಕೊಡಿಟ್ಟುಕೊಂಡು ಮತ್ತೆ ಅವುಗಳನ್ನು ನಮ್ಮ ಬಳಕೆಗೆ ಒದಗಿಸುವ ಜಾಗಗಳು ಬೇರೆ ಬೇರೆ ಎಂಬುದನ್ನು ಮೇಲಿನ ಚರ್ಚೆಗಳಿಂದ ನಿಚ್ಚಳವಾಗಿ ಕಾಣುತ್ತದೆ. ಅವುಗಳನ್ನು ಬ್ರಾಕಾ ಜಾಗ (ಏರಿಯಾ) ಮತ್ತು ವೆರ್ನಿಕೆ ಜಾಗವೆಂದು ಗುರುತಿಸಲಾಗಿದೆ. ಈ ಎರಡು ಜಾಗಗಳಲ್ಲಿ ಯಾವುದೇ ಒಂದಕ್ಕೆ ತೊಂದರೆಯಾದರೂ ನುಡಿಯನ್ನು ಸರಾಗವಾಗಿ ಸಂವಹಿಸಲು ಸಾಧ್ಯವಿಲ್ಲ. ಹಾಗಾಗಿ ಈ ಎರಡೂ ಜಾಗಗಳು ನುಡಿ ಗಳಿಕೆ ಹಾಗೂ ಬಳಕೆಯ ನೆಲೆಯಿಂದ ತುಂಬಾ ಮುಖ್ಯವಾಗಿವೆ.

  • ಉಲಿ ಪೆಟ್ಟಿಗೆಗೆ (ಪದಗಳನ್ನು ಹೇಳುತ್ತೇವೆ)
  • ಮೋಟಾರ್‌ಕೋರಟೆಕ್ಸ್ (ಕ್ರಿಯೆಗಾಗಿ)
  • ಬ್ರೋಕಾನ ಜಾಗಕ್ಕೆ (ಉಲಿಗಳಿಗಾಗಿ)
  • ವೆರ್ನಿಕ್‌ನ ಜಾಗಕ್ಕೆ (ಅರ್ಥಗಳನ್ನು ಒದಗಿಸುವ/ಗಳಿಸುವ)
  • ಪ್ರೈಮರಿ ವಿಸ್ಯುಯಲ್ ಕೊರಟೆಕ್ಸ್ ಟು ಪ್ರೈಮರಿ ಆಡಿಟರಿ ಏರಿಯಾ (ನಾವು ನೋಡುವ ಪದ) (ನಾವು ಕೇಳುವ ಪದ)
  • ನೋಡುವ ಪಠ್ಯ (ಕಣ್ಣಿನ ನುಡಿ)
  • ಕೇಳು ಉಲಿಗಳು (ಕಿವಿಯ ನುಡಿ)

ನಾವು ಜೋರಾಗಿ ಓದುವಾಗ ಕೇಳಿದ ಪದವನ್ನು ಮರುಬಳಿಸುವ

ಚಿತ್ರ – 01 : ವೆರ್ನಿಕೆ-ನರ‍್ಮನ್ ಗೇಶ್ಚ್ವಿಂಡ್ ಅವರ ಸರಳೀಕರಿಸಿದ ಮಾದರಿ
ಈ ಮೇಲಿನ ಚಿತ್ರ ನುಡಿಯನ್ನು ನಾವು ಹೇಗೆ ಗ್ರಹಿಸುತ್ತೇವೆ, ಓದುತ್ತೇವೆ ಹಾಗೂ ಹೇಳುತ್ತೇವೆ ಹಾಗೂ ಈ ಕೆಲಸ ಮೆದುಳಿನ ಮೂಲಕ ಹೇಗೆ ನಡೆಯುತ್ತದೆ ಎಂಬುದನ್ನು ತೋರಿಸುತ್ತದೆ. ಈ ಮಾದರಿ ನುಡಿ ಮತ್ತು ಮೆದುಳುಗಳ ನಡುವಣ ನಂಟಸ್ತಿಕೆಯ ಹೊಸ ಆಯಾಮಗಳನ್ನು ತೋರಿಸುತ್ತದೆ. ನುಡಿ ಮೆದುಳಿನಲ್ಲಿ ಯುಕ್ತತೆಯಿಂದ ನೆಲೆಗೊಂಡಿರುತ್ತದೆ.

ಬ್ರಾಕಾ ಜಾಗವು ಆಡಿಟರಿ ಮತ್ತು ಮೋಟಾರ್ ಕರ‍್ಟೆಕ್ಸ್ಗಳಗೆ ಹೊಂದಿಕೊಂಡಿರುತ್ತದೆ. ಈ ಆಡಿಟರಿ ಕರ‍್ಟೆಕ್ಸ್ ಕಿವಿಯ ಮೂಲಕ ಬರುವ ಸಂಕೇತಗಳನ್ನು ಪಡೆಯುತ್ತದೆ. ಹಾಗೂ ಮೋಟಾರ್ ಕರ‍್ಟೆಕ್ಸ್ನಿಂದ ಸಂಕೇತಗಳು ಮೆದುಳಿನ ಗ್ರಂಥಿಗಳಿಗೆ ಹೋಗುತ್ತವೆ. ಅಲ್ಲಿಂದ ನಮ್ಮ ಎಲ್ಲ ನುಡಿಗೆ ಸಂಬಂಧಿಸಿದ ಚಟುವಟಿಕೆಗಳು ಶುರುವಾಗುತ್ತವೆ. ಉಲಿ ಸಂಕೇತಗಳು ಉಲಿಪೆಟ್ಟಿಗೆಗೆ ಕೂಡ ಇದೇ ಜಾಗದಿಂದ ಹೊರಹೊಮ್ಮುತ್ತವೆ. ಈ ಕೇಳಗಿನ ಎರಡೂ ಚಿತ್ರಗಳು ಇನ್ನಷ್ಟೂ ವಿವರವಾಗಿ ನುಡಿ ಹಾಗೂ ಮೆದುಳಿನ ನಡುವಣ ನಂಟಸ್ತಿಕೆಯನ್ನು ತಿಳಿಸುತ್ತವೆ.

ಈ ಮೇಲಿನ ಎಲ್ಲ ಚರ್ಚೆಗಳು ಕೇವಲ ನುಡಿ ಎಂದರೇನು ಎಂಬ ಕೇಳ್ವಿಗೆ ಬದಲುಗಳನ್ನು ಕೊಡುವುದಕ್ಕೆ ಮಾತ್ರ ಸೀಮಿತಗೊಳ್ಳದೇ, ನುಡಿ ಸ್ವರೂಪದ ಬೇರೆ ಬೇರೆ ನೆಲೆಗಳನ್ನು ತಿಳಿಯುವ ಯತ್ನವನ್ನು ಮಾಡಲಾಗಿದೆ. ಆ ಮೂಲಕ ಇಲ್ಲಿಯ ಚರ್ಚೆಗಳು ನುಡಿಯ ಬೇರೆ ಬೇರೆ ಆಯಾಮಗಳನ್ನು ಚರ್ಚಿಸುವುದಷ್ಟೆ ಅಲ್ಲ, ಬದಲಾಗಿ ನುಡಿ ಕುರಿತ ಭಿನ್ನ ಕಣ್ನೋಟಗಳನ್ನು ತೋರ್ಪಡಿಸುತ್ತವೆ. ನುಡಿಯರಿಮೆಗೆ ನುಡಿಯ ಯಾವ ನೆಲೆಗಳು ಅತ್ಯಂತ ಮಹತ್ವ ಸಂಗತಿಗಳು ಅನ್ನುವ ನಿಲುವುಗಳನ್ನೂ ಈ ಟಿಪ್ಪಣಿಯಲ್ಲಿ ಗಮನಿಸಲು ಸಾಧ್ಯವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version