ಅಂತರಂಗ
ನುಡಿಯ ಒಡಲು -09 | ನುಡಿ ಮತ್ತು ಮೆದುಳು
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು,ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ನುಡಿ ಮತ್ತು ಮೆದುಳುಗಳ ನಡುವಣ ನಂಟಸ್ತಿಕೆ ಎಂತಹದು? ನುಡಿಗೂ ಹಾಗೂ ಮೆದುಳಿಗೂ ನೇರವಾದ ನಂಟಸ್ತಿಕೆ ಇರುವುದರಿಂದ, ಈ ಎರಡೂ ಸಂಗತಿಗಳನ್ನು ಇಲ್ಲಿ ಚರ್ಚಿಸುವ ಅಗತ್ಯವಿದೆ. ಮೆದುಳು ಹಾಗೂ ನುಡಿಯ ನಡುವಣ ನಂಟಸ್ತಿಕೆ ಎಂತಹದು? ಯಾವ ಬಗೆಯಲ್ಲಿ ಮೆದುಳು ನುಡಿಯೊಂದಿಗೆ ನಂಟಸ್ತಿಕೆಉನ್ನು ಬೆಳೆಸಿಕೊಂಡಿರುತ್ತದೆ? ಹಾಗೂ ಈಗಾಗಲೇ ಈ ಹಿಂದೆ ಚರ್ಚಿಸಿದಂತೆ, ನುಡಿ ಮಾನವರಿಗೆ ಒದಗಿರುವ ಒಂದು ಅಂತಸ್ಥ ಸಾಮರ್ಥ್ಯ.
ಈ ಸಾಮರ್ಥ್ಯ ಅವರ ಮೆದುಳಿನಲ್ಲಿ ಯಾವ ಜಾಗದಲ್ಲಿ ಅಂತರ್ಗತವಾಗಿರುತ್ತದೆ. ಮಾನವರ ಮೆದುಳಿನ ರಚನೆಯ ಮೂಲಸ್ವರೂಪವನ್ನು ಅರಿಯುವುದರ ಜೊತೆಗೆ ನುಡಿಯ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿಯಬಹುದು. ಮಾನವರಲ್ಲಿ ಜನ್ಮಜಾತವಾಗಿ ನುಡಿಯನ್ನು ಗಳಿಸಿಕೊಳ್ಳುವ ಅಂತಸ್ಥ ಸಾಮರ್ಥ್ಯ ಅವರ ಮೆದುಳಿನಲ್ಲಿ ಅಂತರ್ಗತವಾಗಿರುತ್ತದೆ. ಚಾಮ್‌ಸ್ಕಿಯ ಈ ನಿಲುವನ್ನು ಎರಿಕ್ ಲೆನ್‌ಬರ್ಗ್ ಒಪ್ಪಿಕೊಳ್ಳುತ್ತಾನೆ ದಿಟ.
ಆದರೆ ನುಡಿ ಗಳಿಕೆಯ ಪ್ರಕ್ರಿಯೆಯ ಬಗೆಗೆ ಕೆಲವು ಮಹತ್ವದ ಹೊಳವುಗಳನ್ನು ಅವನು ಕೊಡುತ್ತಾನೆ. ನುಡಿ ಗಳಿಕೆಗೆ ಒಂದು ನಿಶ್ಚಿತ ಗಡುವು (ಕ್ರಿಟಿಕಲ್ ಪಿರಿಯೇಡ್) ಇರುತ್ತದೆ. ಆ ನಿಗದಿತ ಗಡುವಿನೊಳಗೆ ಪ್ರತಿ ಮಗು ತನಗೆ ಸಿಗುವ ನುಡಿಯ ಹೂಡುವಳಿಗಳ (ಇನ್‌ಪುಟ್ಸ್) ಮೂಲಕ, ತನ್ನಲ್ಲಿರುವ ಅಂತಸ್ಥ ಸಾಮರ್ಥ್ಯವನ್ನು ಬಳಸಿಕೊಂಡು ನುಡಿಯನ್ನು ಗಳಸಿಕೊಳ್ಳದೇ ಹೋದರೆ, ಆ ಮಗುವಿಗೆ ಮುಂದೆಂದೂ ನುಡಿಯನ್ನು ಕಲಿಯಲು/ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಲೆನ್‌ಬರ್ಗ್ ತನ್ನ ಈ ಚಿಂತನೆಯನ್ನು ವಿವರಿಸುವುದಕ್ಕೆ ಪ್ರೌಢಿಮೆ (ಮ್ಯಾಚ್ಯುರೇಶನ್) ಎಂಬ ಒಂದು ಅರಿಮೆ ಪದವನ್ನು ಹುಟ್ಟುಹಾಕುತ್ತಾನೆ. ಈ ಪ್ರೌಢಿಮೆಯ ಅವಧಿ ಹದಿನೆಂಟು ತಿಂಗಳಿಂದ ಹನ್ನೆರಡು ಇಲ್ಲವೇ ಹದಿನಾಲ್ಕು (ಪಬರ್ಟಿಯ ಕಾಲದವರಗೆ) ವರುಷಗಳವರೆಗೆ ಗುರುತಿಸುತ್ತಾನೆ. ಈ ಪ್ರೌಢಿಮೆ ಪ್ರಕ್ರಿಯೆಯಲ್ಲಿಯೇ ನುಡಿಗಳಿಕೆಯ ನೆಲೆಗಳು ಅಡಕಗೊಂಡಿರುತ್ತವೆ. ಇವನ ಈ ತರ್ಕಕ್ಕೆ ಮುಖ್ಯ ಕಾರಣವೇ ಮಗ್ಗಲಾಗುವಿಕೆ (ಲ್ಯಾಟರಲೈಜೇಶನ್). ಈ ಅರಿಮೆಯ ಪದದ ಕಣ್ನೋಟದಿಂದ ನುಡಿ ಗಳಿಕೆಯ ನೆಲೆಗಳನ್ನು ಇನ್ನಷ್ಟು ವಿವರವಾಗಿ ನೋಡಬಹುದು.
ಪ್ರತಿಯೊಂದು ಸಾಮನ್ಯ ಮಗು ಕೂಡ ಈ ಮಗ್ಗಲಾಗುವಿಕೆಯ ಪ್ರಕ್ರಿಯೆಯಲ್ಲಿಯೆ ತನ್ನ ಎಲ್ಲ ಗ್ರಹಿಕಾ ಸಾಮರ್ಥ್ಯಗಳನ್ನು ಮೆದುಳಿನ ಬೇರೆ ಬೇರೆ ಭಾಗಗಳಲ್ಲಿ ನೆಲೆಗೊಳಿಸುವಲ್ಲಿ ನಿರತವಾಗಿರುತ್ತದೆ. ನುಡಿ ಗಳಿಕೆಯ ಪ್ರಕ್ರಿಯೆಯೂ ಈ ಮಗ್ಗಲಾಗುವಿಕೆಯ ಭಾಗವೇ ಆಗಿರುತ್ತದೆ. ಮಕ್ಕಳು ತಮ್ಮ ಮೆದುಳಿನ ನಿಶ್ಚಿತ ಭಾಗಗಳಲ್ಲಿ, ಈ ಮಗ್ಗಲಾಗುವಿಕೆಯ ಕಾಲದಲ್ಲಿಯೇ, ತಮ್ಮಲ್ಲಿರುವ ಅಂತಸ್ಥ ಸಾಮರ್ಥ್ಯದ ಮೂಲಕ ನುಡಿಯ ಬಹುತೇಕ ನೆಲೆಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಈ ಪ್ರಕ್ರಿಯೆ ಮಕ್ಕಳಿಗೆ ಸಿಗುವ ನುಡಿಯ ಹೂಡುವಳಿ (ಇನ್‌ಪುಟ್ಸ್) ಗಳನ್ನೂ ನಂಬಿಕೊಂಡಿರುತ್ತದೆ ಎಂಬುದನ್ನೂ ಗಮನಿಸಬೇಕಾಗುತ್ತದೆ.
ಒಂದು ಸಲ ಈ ಮಗ್ಗಲಾಗುವಿಕೆಯ ಕೆಲಸ ಮುಗಿದ ಮೇಲೆ ನುಡಿಯನ್ನು ಗಳಿಸಿಕೊಳ್ಳುವ ಕಸುವು ಸ್ಥಗಿತವಾಗುತ್ತದೆ. ಆದರೆ ಎಂದಿನಂತೆ, ಈ ಮಗ್ಗಲಾಗುವಿಕೆ ಮಗುವಿಗೆ ಆಯಾ ನುಡಿಯ ಸೊಲ್ಲರಿಮೆಯ/ವ್ಯಾಕರಣ ತಿಳಿವನ್ನು ಗಳಿಸಿಕೊಳ್ಳಲು ಅಗತ್ಯಕ್ಕಿಂತ ಹೆಚ್ಚು ಅವಕಾಶವನ್ನು ಕೊಡುತ್ತದೆ. ಹೆಚ್ಚಿನ ಮಂದಿಗೆ ಈ ನುಡಿ ಗಳಿಕೆಯ ನೆಲೆ ಅವರ ಎಡಮೆದುಳಿನಲ್ಲಿಯೇ ಕೊನೆಗೊಳ್ಳುತ್ತದೆ.
ನಿರ್ಣಾಯಕ ಕಾಲ (ಕ್ರಿಟಿಕಲ್ ಪಿರಿಯೆಡ್) ಮೀರಿದ ಮೇಲೆ, ನುಡಿ ಬೆಳವಣಿಗೆ/ಗಳಿಕೆಯ ಸಹಜ ಸ್ಥಿತಿ ನಿಂತ ಮೇಲೆ, ಒಂದುವೇಳೆ ಎಡಮೆದುಳಿಗೆ ಏನಾದರೂ ಎರವು [ಡ್ಯಾಮೇಜ್] ಉಂಟಾದರೆ, ಅಂತಹ ಎರವು ಖಾಯಂ ಆಗಿಯೇ ಉಳಿಯುತ್ತದೆ. ಕೇವಲ ಕಿರಿಯ ವಯಸ್ಸಿನ ಮಕ್ಕಳು ಮಾತ್ರ ತಮ್ಮ ಬಲಮೆದುಳನ್ನು ಬಳಸಿಕೊಂಡು ನುಡಿಯನ್ನು ಗಳಸಿಕೊಳ್ಳುವ ಸಾಮರ್ಥ್ಯವನ್ನು ತೋರಿಸುತ್ತಾರೆ.
ಆದರೆ ಈ ನಿರ್ಣಾಯಕ ಕಾಲದಲ್ಲಿ ಸಾಮನ್ಯ ಮಗು ಅತ್ಯಂತ ಸುಲಭವಾಗಿ ನುಡಿಯನ್ನು ಗಳಿಸಿಕೊಳ್ಳುತ್ತದೆ ಎಂಬುದು ಮಾತ್ರ ದಿಟ. ಈ ನಿರ್ಣಾಯಕ ಕಾಲ ಎಂಬ ನೆಲೆಯೂ ಜೈವಿಕವಾಗಿ ನಿರ್ಧರಿಸಲ್ಪಟ್ಟಿರುತ್ತದೆ. ಹಾಗಾಗಿ ನುಡಿ ಗಳಿಕೆಗೆ ಯಾವ ಕಾಲ ಸುಳುವಾಗಿರುತ್ತೆ ಮತ್ತು ಯಾವುದು ಕಷ್ಟಕರವಾಗಿರುತ್ತೆ ಎಂಬ ಸಂಗತಿಗಳೂ ಮೊದಲೇ ನಿರ್ಧಾರವಾಗಿರುತ್ತವೆ.
ಲೆನ್‌ಬರ್ಗ್ನ ಪ್ರಕಾರ ನುಡಿ ಗಳಿಕೆಯ ಪ್ರಕ್ರಿಯೆ ಅಂಬೆಗಾಲಿಡುವ ಮಗುವಿಂದ ಶುರುವಾಗಿ ಹದಿಹರೆಯದಲ್ಲಿ ಕೊನೆಗೊಳ್ಳುತ್ತದೆ. ಮತ್ತು ಇದರ ಜೊತೆಗೇನೆ ಮಗ್ಗಲಾಗುವಿಕೆ ಪ್ರಕ್ರಿಯೆಯೂ ಕೊನೆಗೊಳ್ಳುತ್ತದೆ. ಈ ವೇಳೆಯಲ್ಲಿ ಯಾವುದೇ ಔಪಚಾರಿಕ ತರಬೇತಿಯಿಲ್ಲದೇ ಮಗು ತನ್ನ ತಾಯ್ನುಡಿ ಇಲ್ಲವೇ ಮೊದಲ ನುಡಿಯನ್ನು ಅತ್ಯಂತ ಸುಳುವಾಗಿ ಕಲಿಯಬಲ್ಲದು. ಹದಿಹರಯ ಇಲ್ಲವೇ ಪಬರ್ಟಿಯ ನಂತರ ನುಡಿ ಗಳಿಕೆಯ ಕಸುವು ತನ್ನಷ್ಟಕ್ಕೆ ಸ್ಥಗಿತಗೊಳ್ಳುತ್ತದೆ.
ಎಡಮೆದುಳು ಮತ್ತು ಬಲಮೆದುಳು
ಮೆದುಳು ಮೋಟರ್, ಸೆನ್ಸರಿ ಚಟುವಟಿಕೆ ಹಾಗೂ ಚಿಂತನೆಯ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಬೌದ್ಧಿಕ (ಸೆರೆಬ್ರಲ್) ಮೆದುಳನ್ನು ಎಡ ಮತ್ತು ಬಲ ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ. ಈ ಎರಡೂ ಭಾಗಗಳು ಕೆಲವು ವಿಶೇಷ ರಚನೆ ಹಾಗೂ ಕ್ರಿಯೆಗಳನ್ನು ನೆರವೇರಿಸುವಂತೆ ಕಾಣುತ್ತವೆ. ಇವುಗಳಲ್ಲಿ ಕೆಲವಷ್ಟು ಕ್ರಿಯೆಗಳು ಎಡಮೆದುಳಿನಲ್ಲಿ ಉಂಟಾದರೆ, ಮತ್ತೆ ಕಲವು ಕ್ರಿಯೆಗಳು ಬಲಮೆದುಳಿನಲ್ಲಿ ಉಂಟಾಗುತ್ತವೆ. ಲೆನ್‌ಬರ್ಗ್ನ ಪ್ರಕಾರ ಮೆದುಳು ಹೀಗೆ ಇಬ್ಭಾಗವಾಗುವ ಬಗೆಯನ್ನು ಮಗ್ಗಲಾಗುವಿಕೆ (ಲ್ಯಾಟರಲೈಜೇಶನ್) ಎಂದು ಕರೆಯಲಾಗುತ್ತದೆ.
ಇವುಗಳು ಒಂದಕ್ಕೊಂದು ಕನ್ನಡಿ ಬಿಂಬದಂತೆ ಕೆಲಸ ಮಾಡುತ್ತವೆ. ಎಡಮೆದುಳು ದೇಹದ ಬಲಗಡೆಯನ್ನು ನಿಯಂತ್ರಿಸಿದರೆ, ಬಲಮೆದುಳು ದೇಹದ ಎಡಗಡೆಯನ್ನು ನಿಯಂತ್ರಿಸುತ್ತದೆ. ಮತ್ತಿತರ ತಜ್ಞ ಕ್ರಿಯೆಗಳನ್ನು ಮೆದುಳಿನ ಎರಡೂ ಭಾಗಗಳು ನಿಭಾಯಿಸುತ್ತವೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆಯಾದರೂ, ಈ ನಿಲುವುಗಳನ್ನು ಸಮರ್ಥಿಸುವಷ್ಟು ಆಧಾರಗಳು ಇನ್ನೂ ಸಿಕ್ಕಿಲ್ಲ. ಆದರೆ ಈ ಎರಡೂ ಭಾಗಗಳಲ್ಲಿ ಎಡಮೆದುಳಿನ ಭಾಗವೇ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ.
ನುಡಿ ಸಂಬಂಧಿ ಚಟುವಟಿಕೆಗಳಿಗೆ ಈ ಭಾಗವೇ ಹೊಣೆಯಾಗಿರುವ ಕಾರಣ ಸಹಜವಾಗಿಯೇ ಎಡಮೆದುಳಿನ ಭಾಗ ಪ್ರಾಬಲ್ಯವನ್ನು ಹೊಂದಿದೆ. ಏಕೆಂದರೆ, ನುಡಿಗೆ ಸಂಬಂಧಿಸಿದ ಬ್ರೊಕಾ ಮತ್ತು ವರ್ನಿಕ್ ಏರಿಯಾಗಳು, ಆರ್ಕ್ಯುವೇಟ್ ಫ್ಯಾಸಿಕುಲಸ್, ಆಂಗ್ಯುಲರ್ ಗಯ್ರಸ್ ಈ ಎಲ್ಲ ಜಾಗಗಳೂ ಎಡಮೆದುಳಿನಲ್ಲಿ ನೆಲೆನಿಂತುರಿವುದು ಕೂಡ ಇಂತಹ ಪ್ರಾಬಲ್ಯಕ್ಕೆ ಒತ್ತಾಸೆಯಾಗಿರಬಹುದು.
ಅಫೇಶಿಯಾ (ಮಾತಿನ ಕಸುವನ್ನು ಕಳೆದುಕೊಳ್ಳುವ ಬಗೆ. ಇದು ಬೇರೆ ಬೇರೆ ನೆಲೆಗಳಲ್ಲಿ ಇಲ್ಲವೇ ಸ್ವರೂಪಗಳಲ್ಲಿ ಉಂಟಾಗುತ್ತದೆ. ಇದು ಕೂಡ ಒಂದು ಕಾಯಿಲೆ?) ಬಗೆಗಿನ ಅಧ್ಯಯನಗಳು ಹೇಳುವಂತೆ ನುಡಿ ಕುರಿತ ಚಟುವಟಿಕೆಗಳು ಮೊದಲಾಗುವುದೇ ಎಡಮೆದುಳಿನಲ್ಲಿ. ಮೆದುಳಿನಲ್ಲಿ ಮಗ್ಗಲಾಗುವಿಕೆ ಕೆಲಸ ನಡೆಯುತ್ತದೆ ಎಂಬ ಸಂಗತಿಯನ್ನು ತಿಳಿಯಲು ಕೂಡ ಈ ಅಧ್ಯಯನಗಳೇ ಆಧಾರವಾಗಿವೆ. ಸ್ಟೇನ್‌ಬರ್ಗ್ನ ಪ್ರಕಾರ ಸೀಳು ಮೆದುಳಿನ (ಸ್ಪ್ಲಿಟ್‌ಬ್ರೇನ್) ರೋಗಿಗಳು, ಮೆದುಳು ಮಗ್ಗಲಾಗುವಿಕೆಗೆ ಬೇಕಾಗುವ ಇನ್ನೂ ಹೆಚ್ಚಿನ ಆಧಾರಗಳನ್ನು ಒದಗಿಸುತ್ತಾರೆ.
ಆದರೆ ಈ ಸೀಳು ಮೆದುಳಿನ ರೋಗಿಗಳಲ್ಲಿ ಎಡ ಮತ್ತು ಬಲ ಎರಡೂ ಮೆದುಳುಗಳು ಪ್ರತ್ಯೇಕವಾಗಿ ಕೆಲಸ ಮಾಡುತ್ತವೆ. ಆರೋಗ್ಯವಂತರ ಮೆದುಳಿನಂತೆ ಇವು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುವುದಿಲ್ಲ. ಹಾಗೂ ಇವುಗಳ ನಡುವೆ ಯಾವ ಬಗೆಯ ಹೊಂದಾಣಿಕೆಯೂ ಇರುವುದಿಲ್ಲ. ಅಂದರೆ ಒಂದು ಮೆದುಳಿನಲ್ಲಿ ಇರುವ ಮಾಹಿತಿ ಮತ್ತೊಂದಕ್ಕೆ ರವಾನೆಯಾಗುವುದಿಲ್ಲ. ಆದರೆ ಆರೋಗ್ಯವಂತರ ಮೆದುಳಿನ ಈ ಎರಡೂ ಭಾಗಗಳು ಎಷ್ಟೊಂದು ವಿಷಯಗಳಲ್ಲಿ ಒಂದಕ್ಕೊಂದು ನೆರವಾಗುತ್ತವೆ ಎನ್ನುವುದು ವಿಶೇಷ.
ಮೆದುಳಿನ ಯಾವ ಜಾಗದಲ್ಲಿ ಏನಿರುತ್ತದೆ?
ನುಡಿ, ತರ್ಕ, ವಿಶ್ಲೇಷಣಾತ್ಮಕ ಚಟುವಟಿಕೆ, ಗಣಿತಶಾಸ್ತ್ರದಲ್ಲಿ ವಿಶೇಷ ತಜ್ಞತೆ ಇವುಗಳನ್ನೆಲ್ಲ ಒಳಗೊಂಡಿರುವ ಜಾಗವೇ ಎಡಮೆದುಳು. ಹಲವಾರು ಅಧ್ಯಯನಗಳ ಮೂಲಕ ಈ ಸಂಗತಿ ಸಾಬೀತಾಗಿದೆ. ಬ್ರೊಕಾ ಮತ್ತು ವರ್ನಿಕ್ ಏರಿಯಾಗಳು, ಆರ್ಕ್ಯುವೇಟ್ ಫ್ಯಾಸಿಕುಲಸ್, ಆಂಗ್ಯುಲರ್ ಗಯ್ರಸ್ ಈ ಎಲ್ಲ ಜಾಗಗಳು ನುಡಿಯ ತಿಳುವಳಿಕೆ ಮತ್ತು ಉತ್ಪಾದನೆಯನ್ನು ನಿಯಂತ್ರಿಸುವ ಜಾಗಗಳೇ ಆಗಿವೆ ಎಂಬುದು ಗಮನಾರ್ಹ.
ಭಾವನೆಗಳನ್ನು ಹುಟ್ಟಿಸುವ ಹಾಗೂ ಅವುಗಳನ್ನು ಗುರುತಿಸುವ ನೆಲೆಗಳು, ಮುಖ ಚಹರೆಗಳನ್ನು ಗುರುತಿಸುವ, ವಸ್ತುಗಳ ರಾಚನಿಕ ಸ್ವರೂಪವನ್ನು ಸಾರ್ವತ್ರಿಕವಾಗಿ ಗ್ರಹಿಸುವ ನೆಲೆಗಳನ್ನು ಬಲಮೆದುಳೇ ಒಳಗೊಂಡಿರುತ್ತದೆ. ಮತ್ತು ಸಂಗೀತ, ಅತ್ಯಂತ ತೊಡಕಿನ ಕಣ್ನೋಟದ ಬಗೆಗಳು ಕೂಡ ಬಲಮೆದುಳಿನಲ್ಲಯೇ ಕ್ರಿಯಾಶೀಲವಾಗಿರುತ್ತವೆ. ನುಡಿಗೆ ಹೊರತಾದ ಉಲಿಗಳು ಅಂದರೆ, ಸಪ್ಪಳ ಹಾಗೂ ಪ್ರಾಣಿಗಳ ಕೂಗಾಟದ ಉಲಿಗಳನ್ನೂ ಬಲಮೆದುಳು ಒಳಗೊಂಡಿರುತ್ತದೆ. ಎಡಮೆದುಳನ್ನು ಯಾವುದೇ ಅಪಾಯ ಇಲ್ಲವೇ ಕಾಯಿಲೆಯ ಕಾರಣ ತೆಗೆದು ಹಾಕಿದರೆ, ನುಡಿಗೆ ಸಂಬಂಧಿಸಿದ ಕೆಲಸವನ್ನು ಇದು ವಹಿಸಿಕೊಳ್ಳುತ್ತದೆ.
ಪೌಲ್ ಬ್ರೋಕಾ ಮತ್ತು ಕರ‍್ಲ್ ವರ್ನಿಕ್
ಯಾರಿವರು? ಪೌಲ್ ಬ್ರೋಕಾ ಇವನೊಬ್ಬ ಫ್ರೆಂಚ್ ಸರ್ಜನ್/ನರತಜ್ಞ (ನ್ಯೂರೋಅನಾಟಮಿಸ್ಟ್). ಇವನು ಯುದ್ಧದ ಗಾಯಾಳುಗಳ ಜೀವವನ್ನು ಉಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದನು. ಈ ಗಾಯಾಳುಗಳಿಗೆ ಚಿಕಿತ್ಸಿಸುವಾಗ ಅವನು ತೀರಾ ನಿಗಾವಹಿಸಿ ಎಲ್ಲರನ್ನು ಗಮನಿಸುತ್ತಿದ್ದನು. ಹಾಗೂ ಆ ಎಲ್ಲ ಗಾಯಾಳುಗಳನ್ನು ತುಂಬಾ ಕಾಳಜಿಯಿಂದಲೂ ನೋಡಿಕೊಳ್ಳುತ್ತಿದ್ದನು. ಅಸಾಧಾರಣವಾದದ್ದನ್ನು ಕಂಡುಹಿಡಿಯಲು ಕಾರಣವೇ ಅವನ ಈ ಬದ್ಧತೆ ಎಂದು ಹೇಳಬಹುದು.
ಇವನ ಚಿಕಿತ್ಸೆಯಿಂದ ಚೇತರಿಸಿಕೊಂಡ ಒಂದಿಷ್ಟು ಗಾಯಾಳುಗಳು ಎಲ್ಲ ರೀತಿಯಿಂದಲೂ ಸಹಜವಾಗಿಯೇ ಕಾಣುತ್ತಿದ್ದರು. ಆದರೆ ಇವರೆಲ್ಲರೂ ಮಾತಿನ ಕೊರತೆಯಿಂದ ಬಳಲುತ್ತಿದ್ದರು. ಈ ರೋಗಿಗಳ ಎಡಮೆದುಳಿನ ಸೀಮಿತ ಜಾಗದಲ್ಲಿ ಗಾಯವಾಗಿರುವುದೇ ಕಾರಣವಾಗಿರುತ್ತಿತ್ತು. ಮೆದುಳಿನಲ್ಲಿಯ ಈ ಜಾಗವನ್ನು ಇವನು ತನ್ನ ಸಂಶೋಧನೆಯಲ್ಲಿ ಕಂಡುಹಿಡಿದನು. ಇದನ್ನೇ ಬ್ರೋಕಾ ಏರಿಯಾ ಎಂದು ಕರೆಯಲಾಗುತ್ತದೆ.
ಮೆದುಳಿನ ಈ ಜಾಗಕ್ಕೆ ಯಾವುದೇ ಗಾಯ ಇಲ್ಲವೇ ಹೊಡೆತದ ಪರಿಣಾಮದಿಂದ ಮಾತಿನ ಕೊರತೆ ಉಂಟಾದರೆ, ಆ ಜಾಗವನ್ನು ಬ್ರೋಕಾ ಅಫೇಸಿಯಾ ಎಂದು ಗುರುತಿಸಲಾಗಿದೆ. ಅಫೇಸಿಯಾ ಎಂಬುದು ಗ್ರೀಕ್ ಪದ, ಮಾತಿನ ಕಸುವನ್ನು (ಸ್ಪೀಚ್‌ಲೆಸ್) ಕಳೆದುಕೊಂಡ ನೆಲೆಯನ್ನು ಇದು ಸೂಚಿಸುತ್ತದೆ. ಸಾವಿರದ ಎಂಟನೂರು ಎಂಬತ್ತೊಂದರಲ್ಲಿ ಮಾತಿನ ಬೇನೆಗೆ (ಅಫೇಸಿಯಾ) ಒಳಗಾಗಿದ್ದ ಒಬ್ಬ ವ್ಯಕ್ತಿಗೆ ಬ್ರೋಕಾ ಚಿಕಿತ್ಸೆಯ (ಸಲಹೆಗಳ)ನ್ನು ನೀಡುತ್ತಿದ್ದನು. ಆ ವ್ಯಕ್ತಿಯನ್ನು ಬ್ರೋಕಾ ‘ತಾನ್’ ಎಂದು ಕರೆದನು.
ಈ ತಾನ್ ತೀರಿಕೊಂಡ ಮೇಲೆ ಬ್ರೋಕಾ ಅವನ ಶವಪರೀಕ್ಷೆ ಮಾಡುತ್ತಾನೆ. ಆವಾಗ ಆ ವ್ಯಕ್ತಿಯ ಎಡಮೆದುಳಿನ ಒಂದು ಜಾಗದಲ್ಲಿ ಗಾಯವಿರುವುದು ಕಂಡುಬರುತ್ತದೆ. ಎಡ ಕಿವಿಯ ಹಾಲೆಯ ಮುಂಭಾಗದ (ಫ್ರಂಟಲ್ ಲೋಬ್) ಮೇಲಿನ ಜಾಗವೇ ಈ ಗಾಯವಿರುವ ಜಾಗವಾಗಿತ್ತು. ಅಂದರೆ ಎಡಮೆದುಳು ನೆಲೆಗೊಂಡಿರುವ ಜಾಗವೆಂದೇ ಹೇಳಬೇಕು.
ಈ ಜಾಗದಲ್ಲಿ ಉಂಟಾಗಿರುವ ಗಾಯವನ್ನು ಬ್ರೋಕಾ ಗುರುತಿಸಿದ್ದಕ್ಕಾಗಿ ಆ ಜಾಗವನ್ನೇ ಬ್ರೋಕಾ (ಜಾಗ) ಏರಿಯಾ ಎಂದು ಕರೆಯುತ್ತಾರೆ. ‘ನುಡಿಯ ಸಾಮರ್ಥ್ಯ ಮಾನವರ ದೇಹದ ಯಾವ ಭಾಗದಲ್ಲಿ ನೆಲೆಗೊಂಡಿರುತ್ತೆ?’ ಮೆದುಳಿನಲ್ಲಿಯೋ? ಇಲ್ಲವೇ ಮನಸ್ಸಿನಲ್ಲೋ? ಎಂಬ ಆವತ್ತಿನ ಕಾಲದ ನುಡಿ ಬಗೆಗಿನ ಚರ್ಚೆಗೆ ಬ್ರೋಕಾನ ಈ ನಿಲುವು, ನುಡಿ ಮೆದುಳಿನಲ್ಲಿಯೇ ನೆಲೆ ನಿಂತಿರುತ್ತದೆ ಎಂಬುದಕ್ಕೆ ಇದೊಂದು ಸಮರ್ಥನೆಯೂ ಆಗಿದೆ ಎಂಬುದನ್ನು ಮನಗಾಣುವುದಕ್ಕೆ ಈ ಸಂಗತಿಯು ಒತ್ತಾಸೆಯಾಗಿದೆ.
ಬ್ರೋಕಾ ಜಾಗದಲ್ಲಿ ಉಂಟಾಗುವ ಬೇನೆಯಿಂದ ಬಳಲುವ ವ್ಯಕ್ತಿ, ನುಡಿಗೆ ಸಂಬಂಧಿಸಿದ ಯಾವ ಬಗೆಯ ತೊಡಕುಗಳನ್ನು ಎದುರಿಸುತ್ತಾನೆ ಎಂಬುದನ್ನು ಬ್ರೋಕಾ ಕಂಡುಹಿಡಿದನು. ನುಡಿಗೆ ಸಂಬಂಧಿಸಿದ ಆ ತೊಂದರೆ ಯಾವುದೆಂದರೆ, ಮಾತನ್ನು ಹೊರಡಿಸುವುದೇ ಆಗಿರುತ್ತದೆ. ಏಕೆಂದರೆ, ಮಾತನ್ನು ಹೊರಡಿಸುವ ಜಾಗವಿರುವುದೇ ಬ್ರೋಕಾ ಏರಿಯಾ. ಇಂತವರಿಗೆ ಸರಾಗವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಈ ನೆಲೆಯ ವ್ಯಕ್ತಿಗಳು ಬಹುತೇಕ ಸನ್ನಿವೇಶದಲ್ಲಿ ಮಾತನಾಡುವ ಕಸುವನ್ನೇ ಕಳೆದುಕೊಳ್ಳುತ್ತಾರೆ. ಇದನ್ನು ವರ್ಬಲ್ ಅಪ್ರಾಕ್ಸಿಯಾ [ಮಾತನಾಡದ ನೆಲೆ] ಎಂದು ಕರೆಯುತ್ತಾರೆ.
ಆದರೆ ಬೇರೆಯವರು ಮಾತಾಡುವುದನ್ನು ಇವರು ಅರ್ಥ ಮಾಡಿಕೊಳ್ಳುತ್ತಾರೆ. ಹಾಗೂ ವರ್ಬಲ್ ಅಪ್ರಾಕ್ಸಿಯಾದಿಂದ ಬಳಲುವ ಈ ವ್ಯಕ್ತಿಗಳಿಗೆ ಉಚ್ಚಾರಣೆಯಲ್ಲಿ ತೊಂದರೆಯಾಗುತ್ತದೆ. ಅಂದರೆ ಇವರಿಗೆ ಗಂಟಲು, ಉಲಿಪೆಟ್ಟಿಗೆ, ತುಟಿ, ದವಡೆ ಇವುಗಳ ಮೂಲಕ ಉಚ್ಚರಿಸುವಲ್ಲಿ ಕಷ್ಟವಾಗುತ್ತದೆ. ಸರಿಯಾಗಿ ಪದಗಳನ್ನು ಜೋಡಿಸಿ ಉಚ್ಚರಿಸಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಇನ್ನೊಬ್ಬರಿಗೆ ಪ್ರತಿಕ್ರಿಯಿಸುವಾಗ, ಸ್ವಂಪ್ರೇರಿತವಾಗಿ ಏನನ್ನಾದರೂ ಉಚ್ಚರಿಸಬೇಕೆಂದರೆ ಇವರು ತಡಕಾಡುತ್ತಾರೆ.
ಪ್ರತಿಸಲವೂ ಅವರ ಹೊರಡಿಸುವ ಉಲಿಗಳ ವಿಧಾನವೇ ಬೇರೆ ಬೇರೆಯಾಗಿರುತ್ತದೆ. ಇನ್ನೊಬ್ಬರು ಉಚ್ಚರಿಸುವುದನ್ನು ನೋಡಿ ಇವರು ಅನುಕರಿಸಬಹುದಾದರೂ, ಅದು ಯಾವಾಗಲೂ ನಡೆಯುವ ಕೆಲಸವಲ್ಲ. ಇವರಿಗೆ ಗ್ರಹಿಕೆಯಲ್ಲಿ ಸುಮಾರು 50% ರಿಂದ 90% ರಷ್ಟು ನಿಖರತೆ ಇರುತ್ತದೆ. ಆದರೆ ಇದೇ ನಿಖರತೆಯನ್ನು ಪರಸ್ಪರ ಮಾತುಕತೆಗಳಲ್ಲಿ ಎದರು ನೋಡಲು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ಇವರ ಗ್ರಹಿಕೆಯ ಕಸುವು ಸುಮಾರು 50% ಕ್ಕಿಂತ ಕಡಿಮೆಯಾಗಬಹುದು.
ಹಾಗೂ ಇವರು ಕೇವಲ ನಾಮಪದಗಳನ್ನು ಮಾತ್ರ ಹೊರಡಿಸಬಲ್ಲರು, ಬೇರೆ ಬಗೆಯ ಪದಗಳನ್ನು ಹೊರಡಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ನಾಮಪದಗಳೊಂದಿಗೆ ಬರುವ ಒಟ್ಟು (ಪ್ರತ್ಯಯ)ಗಳನ್ನೂ ಇವರು ಹೊರಡಿಸಲಾರರು. ಹಾಗೂ ಸೊಲ್ಲರಿಮೆ/ವ್ಯಾಕರಣದ ಅಪೂರ್ಣತೆ (ಅಗ್ರಾöಮ್ಯಾಟಿಕ್) ಮತ್ತು ಟೆಲಿಗ್ರಾಫಿಕ್ ಮಾದರಿಯ ಮಾತುಗಳನ್ನು ಮಾತ್ರ ಆಡುತ್ತಾರೆ. (ಉದಾ.ಗೆಗಾಗಿ, ನಾನು ಮನೆಗೆ ಹೋಗಿ ಊಟ ಮಾಡಿಕೊಂಡು ಬರುತ್ತೇನೆ) ಎಂಬುದನ್ನು ನಾ….ಮನೆ…..ಊಟ…. ಮುಂತಾಗಿ ಹೇಳಬಹುದು. ಬರವಣಿಗೆ ಮತ್ತು ಓದುವ ಚಳಕಗಳನ್ನೂ ಈ ಅಪ್ರಾಕ್ಸಿಯಾ ಬಾಧಿಸುತ್ತದೆ.
ನುಡಿಯ ಉತ್ಪಾದಕತೆಯಲ್ಲಿ ಕೊರತೆಯನ್ನು ಅನುಭವಿಸುವುದೇ ಬ್ರೋಕಾ ಅಫೇಸಿಯಾ. ಈ ಕೊರತೆಗಳು ನುಡಿ ಉತ್ಪಾದಕತೆಯ ಬೇರೆ ಬೇರೆ ನೆಲೆಯಲ್ಲಿಯೂ ಎದುರಾಗುತ್ತವೆ. ಬ್ರೋಕಾ ಏರಿಯಾ ಕುರಿತ ಎಲ್ಲ ವಿವರಗಳನ್ನು ಇಲ್ಲಿ ಚರ್ಚಿಸುವುದು ಸಾಧ್ಯವಿಲ್ಲ. ಸದ್ಯಕ್ಕೆ ಆ ಎಲ್ಲ ವಿವರಗಳನ್ನು ಚರ್ಚಿಸುವ ಅಗತ್ಯವೂ ಇಲ್ಲಿ ಎದ್ದು ಕಾಣುವುದಿಲ್ಲ. ಹಾಗಾಗಿ ಈಗ ಇಲ್ಲಿ ನುಡಿ ನೆಲೆಗೊಳ್ಳುವ ಮೆದುಳಿನ ಇನ್ನೊಂದು ಪ್ರಮುಖ ಭಾಗವಾಗಿರುವ ವರ್ನಿಕ್ ಏರಿಯಾ ಕುರಿತು ಚರ್ಚಿಸೋಣ.
ಕಾರ್ಲ್ ವೆರ್ನಿಕೆ
ಕಾರ್ಲ್ ವೆರ್ನಿಕೆ ಜರ್ಮನಿಯ ನರತಜ್ಞ-ನುಡಿಯರಿಗ. ಇವನು ನುಡಿ ಮತ್ತು ಮೆದುಳಿನ ನಂಟಸ್ತಿಕೆಯನ್ನು ಕುರಿತು ಪೌಲ್ ಬ್ರೋಕಾ ನಂತರ ಚಿಂತಿಸಿದವರಲ್ಲಿ ಮತ್ತೊಬ್ಬ ಬಹುದೊಡ್ಡ ಚಿಂತಕ. ಇವನು ಬ್ರೋಕಾ ಏರಿಯಾ ಹಾಗೂ ಮಾತಿನ ಕೊರತೆಯನ್ನು ಕುರಿತು ತನ್ನ ಸಂಶೋಧನಾ ತೀರ್ಮಾನಗಳನ್ನು ಪುಸ್ತಕೆ ರೂಪದಲ್ಲಿ ಪ್ರಕಟಿಸಿದನು. ಇದರಿಂದ ಇವನು ಲೋಕದಾದ್ಯಂತ ಹೆಸರುವಾಸಿಯಾದನು.
ತನ್ನ ಈ ಸಂಶೋಧನೆಯನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿಯೇ ವೆರ್ನಿಕೆ ಒಂದು ಮುಖ್ಯವಾದ ಸಂಗತಿಯನ್ನು ಕಂಡುಕೊಂಡನು. ಅದೇನೆಂದರೆ, ಕೇವಲ ಬ್ರೋಕಾ ಏರಿಯಾಗೆ ಒದಗುವ ತೊಂದರೆಯ ಪರಿಣಾಮದಿಂದ ಮಾತ್ರ ಎಲ್ಲ ಬಗೆಯ ನುಡಿ ಕೊರತೆಗಳು ಉಂಟಾಗುವುದಿಲ್ಲ, ಮೆದುಳಿನ ಮತ್ತೊಂದು ಜಾಗದಲ್ಲಿ ಆಗುವ ತೊಂದರೆಯಿಂದಲೂ, ಮಾನವರು ಮಾತಿನ ಕೊರತೆಯನ್ನು ಎದುರಿಸುತ್ತಾರೆ ಎಂಬ ಸಂಗತಿಯನ್ನು ಕಂಡುಹಿಡಿದನು.
ಹಾಗಾದರೆ ವೆರ್ನಿಕೆ ಕಂಡುಕೊಂಡ ನುಡಿ ಕುರಿತ ಕೊರತೆಗಳು ಎಂತಹವು? ಕಾರ್ಲ್ ವೆರ್ನಿಕೆ ಕಂಡುಹಿಡಿದ ಆ ಜಾಗವು ಬ್ರೋಕಾ ಏರಿಯಾಕ್ಕಿಂತ ಕೊಂಚ ಹಿಂದುಗಡೆ ಇರುತ್ತದೆ. ಅಂದರೆ ಆಡಿಟರಿ ಕರ‍್ಟೆಕ್ಸ್ಗೆ ಹೊಂದಿಕೊಂಡಿರುತ್ತದೆ. ಇದನ್ನು ಮೆದುಳಿನ ಎಡ ಹಿಂಭಾಗವೆಂದು (ಟೆಂಪರಾಲ್ ಲೋಬ್) ಹೇಳಬಹುದು. ಮಾನಸಿಕ ನ್ಯೂನತೆಯ ಕಾರಣದಿಂದ ಮೆದುಳಿನ ಬೇರೆ ಬೇರೆ ಜಾಗಗಳಲ್ಲಿ ಯಾವ ಬಗೆಯ ಮಾತಿನ ಕೊರತ (ಅಫೇಸಿಯಾ)ಗಳು ಉಂಟಾಗುತ್ತವೆ ಎಂಬುದನ್ನು ತನ್ನ ಶೋಧಗಳಿಂದ ವೆರ್ನಿಕೆ ತೋರ್ಪಡಿಸಿದ್ದಾನೆ.
ಆ ಶೋಧಗಳಿಂದ ಮಾತಿನ ಬೇರೆ ಬಗೆಯ ತೊಂದರೆಗಳು ಯಾವವು ಎಂಬುದನ್ನು ವೆರ್ನಿಕೆ ಗುರುತಿಸಿದ್ದಾನೆ. ಈ ವೆರ್ನಿಕೆ ಅಫೇಸಿಯಾದಿಂದ ಬಳಲುವವರ ಉಚ್ಚಾರಣೆಗಳು ಸರಿಯಾಗಿದ್ದು, ಸೊಲ್ಲರಿಮೆಗೆ ಒಪ್ಪಿತವಾದ ಸೊಲ್ಲುಗಳನ್ನೇ ಉತ್ಪಾದಿಸುತ್ತಿದ್ದರೂ, ಅರ್ಥಗಳನ್ನು ಒದಗಿಸು ನೆಲೆಗಳು ಮಾತ್ರ ಸರಿಯಾಗಿರುವುದಿಲ್ಲ. ಹಾಗೂ ಬೇರೆಯವರು ಮಾತಾಡಿದ್ದನ್ನು ಇವರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಾತನ್ನು ಉತ್ಪಾದಿಸುವ ನೆಲೆ ಇವರಿಗೆ ಸರಿಯಾಗಿದ್ದರೂ, ಅರ್ಥಗಳನ್ನು ಒದಗಿಸುವ ಹಾಗೂ ಅರ್ಥಗಳನ್ನು ಪಡೆಯುವ ನೆಲೆಯಲ್ಲಿ ಇವರು ತೊಂದರೆಗಳನ್ನು ಎದುರಿಸುತ್ತಾರೆ.
ನಮ್ಮ ಮೆದುಳಿನಲ್ಲಿ ಉಲಿ ಮತ್ತು ಆರ್ಥಗಳನ್ನು ಕೊಡಿಟ್ಟುಕೊಂಡು ಮತ್ತೆ ಅವುಗಳನ್ನು ನಮ್ಮ ಬಳಕೆಗೆ ಒದಗಿಸುವ ಜಾಗಗಳು ಬೇರೆ ಬೇರೆ ಎಂಬುದನ್ನು ಮೇಲಿನ ಚರ್ಚೆಗಳಿಂದ ನಿಚ್ಚಳವಾಗಿ ಕಾಣುತ್ತದೆ. ಅವುಗಳನ್ನು ಬ್ರಾಕಾ ಜಾಗ (ಏರಿಯಾ) ಮತ್ತು ವೆರ್ನಿಕೆ ಜಾಗವೆಂದು ಗುರುತಿಸಲಾಗಿದೆ. ಈ ಎರಡು ಜಾಗಗಳಲ್ಲಿ ಯಾವುದೇ ಒಂದಕ್ಕೆ ತೊಂದರೆಯಾದರೂ ನುಡಿಯನ್ನು ಸರಾಗವಾಗಿ ಸಂವಹಿಸಲು ಸಾಧ್ಯವಿಲ್ಲ. ಹಾಗಾಗಿ ಈ ಎರಡೂ ಜಾಗಗಳು ನುಡಿ ಗಳಿಕೆ ಹಾಗೂ ಬಳಕೆಯ ನೆಲೆಯಿಂದ ತುಂಬಾ ಮುಖ್ಯವಾಗಿವೆ.
- ಉಲಿ ಪೆಟ್ಟಿಗೆಗೆ (ಪದಗಳನ್ನು ಹೇಳುತ್ತೇವೆ)
- ಮೋಟಾರ್‌ಕೋರಟೆಕ್ಸ್ (ಕ್ರಿಯೆಗಾಗಿ)
- ಬ್ರೋಕಾನ ಜಾಗಕ್ಕೆ (ಉಲಿಗಳಿಗಾಗಿ)
- ವೆರ್ನಿಕ್‌ನ ಜಾಗಕ್ಕೆ (ಅರ್ಥಗಳನ್ನು ಒದಗಿಸುವ/ಗಳಿಸುವ)
- ಪ್ರೈಮರಿ ವಿಸ್ಯುಯಲ್ ಕೊರಟೆಕ್ಸ್ ಟು ಪ್ರೈಮರಿ ಆಡಿಟರಿ ಏರಿಯಾ (ನಾವು ನೋಡುವ ಪದ) (ನಾವು ಕೇಳುವ ಪದ)
- ನೋಡುವ ಪಠ್ಯ (ಕಣ್ಣಿನ ನುಡಿ)
- ಕೇಳು ಉಲಿಗಳು (ಕಿವಿಯ ನುಡಿ)
ನಾವು ಜೋರಾಗಿ ಓದುವಾಗ ಕೇಳಿದ ಪದವನ್ನು ಮರುಬಳಿಸುವ
ಚಿತ್ರ – 01 : ವೆರ್ನಿಕೆ-ನರ‍್ಮನ್ ಗೇಶ್ಚ್ವಿಂಡ್ ಅವರ ಸರಳೀಕರಿಸಿದ ಮಾದರಿ
ಈ ಮೇಲಿನ ಚಿತ್ರ ನುಡಿಯನ್ನು ನಾವು ಹೇಗೆ ಗ್ರಹಿಸುತ್ತೇವೆ, ಓದುತ್ತೇವೆ ಹಾಗೂ ಹೇಳುತ್ತೇವೆ ಹಾಗೂ ಈ ಕೆಲಸ ಮೆದುಳಿನ ಮೂಲಕ ಹೇಗೆ ನಡೆಯುತ್ತದೆ ಎಂಬುದನ್ನು ತೋರಿಸುತ್ತದೆ. ಈ ಮಾದರಿ ನುಡಿ ಮತ್ತು ಮೆದುಳುಗಳ ನಡುವಣ ನಂಟಸ್ತಿಕೆಯ ಹೊಸ ಆಯಾಮಗಳನ್ನು ತೋರಿಸುತ್ತದೆ. ನುಡಿ ಮೆದುಳಿನಲ್ಲಿ ಯುಕ್ತತೆಯಿಂದ ನೆಲೆಗೊಂಡಿರುತ್ತದೆ.
ಬ್ರಾಕಾ ಜಾಗವು ಆಡಿಟರಿ ಮತ್ತು ಮೋಟಾರ್ ಕರ‍್ಟೆಕ್ಸ್ಗಳಗೆ ಹೊಂದಿಕೊಂಡಿರುತ್ತದೆ. ಈ ಆಡಿಟರಿ ಕರ‍್ಟೆಕ್ಸ್ ಕಿವಿಯ ಮೂಲಕ ಬರುವ ಸಂಕೇತಗಳನ್ನು ಪಡೆಯುತ್ತದೆ. ಹಾಗೂ ಮೋಟಾರ್ ಕರ‍್ಟೆಕ್ಸ್ನಿಂದ ಸಂಕೇತಗಳು ಮೆದುಳಿನ ಗ್ರಂಥಿಗಳಿಗೆ ಹೋಗುತ್ತವೆ. ಅಲ್ಲಿಂದ ನಮ್ಮ ಎಲ್ಲ ನುಡಿಗೆ ಸಂಬಂಧಿಸಿದ ಚಟುವಟಿಕೆಗಳು ಶುರುವಾಗುತ್ತವೆ. ಉಲಿ ಸಂಕೇತಗಳು ಉಲಿಪೆಟ್ಟಿಗೆಗೆ ಕೂಡ ಇದೇ ಜಾಗದಿಂದ ಹೊರಹೊಮ್ಮುತ್ತವೆ. ಈ ಕೇಳಗಿನ ಎರಡೂ ಚಿತ್ರಗಳು ಇನ್ನಷ್ಟೂ ವಿವರವಾಗಿ ನುಡಿ ಹಾಗೂ ಮೆದುಳಿನ ನಡುವಣ ನಂಟಸ್ತಿಕೆಯನ್ನು ತಿಳಿಸುತ್ತವೆ.
ಈ ಮೇಲಿನ ಎಲ್ಲ ಚರ್ಚೆಗಳು ಕೇವಲ ನುಡಿ ಎಂದರೇನು ಎಂಬ ಕೇಳ್ವಿಗೆ ಬದಲುಗಳನ್ನು ಕೊಡುವುದಕ್ಕೆ ಮಾತ್ರ ಸೀಮಿತಗೊಳ್ಳದೇ, ನುಡಿ ಸ್ವರೂಪದ ಬೇರೆ ಬೇರೆ ನೆಲೆಗಳನ್ನು ತಿಳಿಯುವ ಯತ್ನವನ್ನು ಮಾಡಲಾಗಿದೆ. ಆ ಮೂಲಕ ಇಲ್ಲಿಯ ಚರ್ಚೆಗಳು ನುಡಿಯ ಬೇರೆ ಬೇರೆ ಆಯಾಮಗಳನ್ನು ಚರ್ಚಿಸುವುದಷ್ಟೆ ಅಲ್ಲ, ಬದಲಾಗಿ ನುಡಿ ಕುರಿತ ಭಿನ್ನ ಕಣ್ನೋಟಗಳನ್ನು ತೋರ್ಪಡಿಸುತ್ತವೆ. ನುಡಿಯರಿಮೆಗೆ ನುಡಿಯ ಯಾವ ನೆಲೆಗಳು ಅತ್ಯಂತ ಮಹತ್ವ ಸಂಗತಿಗಳು ಅನ್ನುವ ನಿಲುವುಗಳನ್ನೂ ಈ ಟಿಪ್ಪಣಿಯಲ್ಲಿ ಗಮನಿಸಲು ಸಾಧ್ಯವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
-
ದಿನದ ಸುದ್ದಿ6 days agoನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
-
ದಿನದ ಸುದ್ದಿ5 days agoಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ



