ಬಹಿರಂಗ
ಜ್ಯೋತಿರಾವ್ ಫುಲೆ : ವಸಾಹತು ಮತ್ತು ಮೇಲ್ವರ್ಗಗಳ ಪ್ರಾಬಲ್ಯವನ್ನು ಪ್ರಶ್ನಿಸಿಸುವ ನೆಲೆಗಳು
- ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಶಿವಮೊಗ್ಗ
ಜ್ಯೋತಿರಾವ್ ಫುಲೆಯವರ ಚಿಂತನೆಗಳನ್ನು ಸಬಾಲ್ಟರ್ನ್ ಓದು ಕಣ್ನೋಟದಲ್ಲಿಟ್ಟು ನೋಡುವ ಕೆಲವು ಅಧ್ಯಯನಗಳು ಈಗಾಗಲೇ ಬಂದಿರುತ್ತವೆ. ಆದರೆ ಫುಲೆಯವರ ಚಿಂತನೆಯ ಸಾಧ್ಯತೆಗಳನ್ನು ಗುರುತಿಸುವುದಕ್ಕಿಂತ, ಅವುಗಳಲ್ಲಿ ಅಡಗಿರುವ ಎಪಿಸ್ಟಮಾಲಜಿಕಲ್ ಬಿಕ್ಕಟ್ಟುಗಳನ್ನು ಹಾಗೂ ತಾತ್ವಿಕ ಸಮಸ್ಯೆಗಳನ್ನು ಬಿಡಿಸಿ ನೋಡುವ ಪ್ರಯತ್ನವನ್ನು ಈ ಅಧ್ಯಯನಗಳಲ್ಲಿ ಮಾಡಲಾಗಿದೆ.
ಹಾಗೂ ವಸಾಹತು ಪ್ರಭುತ್ವಕ್ಕೆ ಫುಲೆಯವರು ನಿಷ್ಠರಾಗಿದ್ದರು ಎಂಬ ಆರೋಪವನ್ನು ಇವರ ಮೇಲೆ ಹೇರಲಾಗಿದೆ. ಅದೇನೆಯಿರಲಿ, ‘ಬ್ರಾಹ್ಮಣಾಚ ಕಸಬ್ (1869), ‘ಗುಲಾಮಗಿರಿ (1873) ಮೊದಲಾದ ತಮ್ಮ ಬರಹಗಳಲ್ಲಿ ಫುಲೆಯವರು, ‘ಶೂದ್ರ-ಅತಿಶೂದ್ರ’ ಪ್ರಜ್ಞೆಯನ್ನು ಎಚ್ಚರಗೊಳಿಸುವ ಅತ್ಯಂತ ಮಹತ್ವದ ಕೆಲಸವನ್ನು ಇವರು ಮಾಡಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಸಬಾಲ್ಟರ್ನ್ ಓದಿನ ಪ್ರಾಥಮಿಕ ಕಣ್ನೋಟವೇ ಸಮೂಹ ಮತ್ತು ವ್ಯಕ್ತಿಪ್ರಜ್ಞೆಯನ್ನು ಜಾಗ್ರತಗೊಳಿಸುವುದು ಮತ್ತು ಆ ಮೂಲಕ ಅವರಲ್ಲಿ ಅವರವರ ಅಸ್ಮಿತೆ, ಅಸ್ತಿತ್ವ ಹಾಗೂ ರಾಜಕೀಯ ನಿಲುವುಗಳನ್ನು ಗುರುತಿಸುವ ಬಗೆಯಾಗಿರುತ್ತದೆ. ಏಕೆಂದರೆ, ಸಬಾಲ್ಟರ್ನ್ ಸಮೂಹಗಳೆಂದು ಇವತ್ತು ನಾವು ಗುರುತಿಸುವ ಬಹುತೇಕ ಸಮೂಹಗಳು ಪ್ರೀ-ಪೊಲಿಟಿಕಲ್ ನೆಲೆಯಲ್ಲಿರುತ್ತವೆ.
ಇಂತಹ ನಿಲುವುಗಳನ್ನು ಪಲ್ಲಟಗೊಳಿಸುವ ಅತ್ಯಂತ ಮಹತ್ವದ ಕೆಲಸವು ಈ ಸಬಾಲ್ಟರ್ನ್ ಪ್ರಜ್ಞೆಯನ್ನು ಎಚ್ಚರಗೊಳಿಸುವ ಮೂಲಕ ನೆರವೇರುತ್ತವೆ ಎಂಬುದು ಗಮನಾರ್ಹ. ಇಂತಹವೊಂದು ಮಹತ್ವದ ಕೆಲಸವನ್ನು ಫುಲೆಯವರು ಮಾಡಿರುತ್ತಾರೆ ಅನ್ನುವುದು ವಿಶೇಷ. 19ನೇ ಶತಮಾನದ ಕಾಲ ಮತ್ತು ಚಾರಿತ್ರಿಕ ನಿಲುವುಗಳು ಕೇವಲ ‘ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತದಲ್ಲಿದ್ದವು. ಈ ನಿಲುವು ಇವತ್ತಿಗೂ ಬದಲಾಗಿರುವುದಿಲ್ಲ.
ಇದೊಂದು ತಪ್ಪು ನಡೆಯೆಂದು ನಾನು ವಾದಿಸಲಾರೆ, ಆದರೆ ರಾಷ್ಟ್ರೀಯತೆಯ ಕಲ್ಪನೆಯು ಈ ದೇಶದ ಎಲ್ಲ ಸಮೂಹಗಳನ್ನು ಒಳ್ಗೊಂಡಿರುವ ಬಗೆಯಾಗಿ ಇವತ್ತಿಗೂ ಮುಂದೆ ಬರಲಿಲ್ಲ. ಹೊರತಾಗಿ ತಾರತಮ್ಯ ಮತ್ತು ಅಸಮಾನ ರಚನೆಗಳನ್ನೇ ನಿರಂತರಗೊಳಿಸುವ ಬಗೆಯಾಗಿ, ಇವತ್ತಿಗೂ ಇದು ಮುಂದುವರೆದಿದೆ. ಹಾಗಾಗಿ ಫುಲೆಯವರ ಚಿಂತನೆಗಳು ಸಬಾಲ್ಟರ್ನ್ ಅಧ್ಯಯನ ಸನ್ನಿವೇಶದಲ್ಲಿ ಮಹತ್ವವನ್ನು ಪಡೆಯುತ್ತವೆ.
ಪರಿಣಾಮವಾಗಿ, ಫುಲೆಯವರ ತಿಳುವಳಿಕೆಗಳಲ್ಲಿ, ಈಗಾಗಲೇ ಚರಿತ್ರೆ, ಸಂಸ್ಕೃತಿ ಚಿಂತನೆಗಳಲ್ಲಿ ನೆಲೆನಿಂತಿರುವ ಏಕಾಕೃತಿಯ ನಿಲುವುಗಳಿಗೆ ಬದಲಾಗಿ, ಈ ದೇಶದ ಬಹುತ್ವದ ಸಾಮಾಜಿಕ, ಸಾಂಸ್ಕೃತಿಕ ವಿನ್ಯಾಸಗಳನ್ನು ಗುರುತಿಸುವ ಇರಾದೆಯನ್ನು ಕಾಣುತ್ತೇವೆ. ಅಂದರೆ ಶೂದ್ರ, ಅತಿಶೂದ್ರ ಪ್ರಜ್ಞೆಯ ಮೂಲಕ ಚರಿತ್ರೆಯೊಳಗೆ ಹುದುಗಿರುವ ಹಿಂಸೆ ಮತ್ತು ಯಜಮಾನಿಕೆಯ ವಿನ್ಯಾಸಗಳನ್ನು ಇವರು ಗುರುತಿಸಿರುತ್ತಾರೆ.
ದಿಟ, ಫುಲೆಯವರು ತಳ/ದಲಿತ/ಶೂದ್ರ ಸಮೂಹಗಳಲ್ಲಿ ಸಬಾಲ್ಟರ್ನ್ ಪ್ರಜ್ಞೆಯನ್ನು ಬೆಳೆಸುವಲ್ಲಿ ಸಫಲವಾಗಲಿಲ್ಲ ಎಂಬ ಆರೋಪಗಳನ್ನು ಮಾಡಲಾಗುತ್ತದೆ. ವಸಾಹತು ಪ್ರಭುತ್ವದ ಪ್ರಾಬಲ್ಯ ಮತ್ತು ಅಧಿಕಾರದ ಹಂಗಿನಲ್ಲಿದ್ದ ಸನ್ನಿವೇಶದಲ್ಲಿ ಫುಲೆಯವರು ರೂಪಿಸಿದ ಈ ಚಿಂತನೆಗಳಿಗೆ ಬಹದೊಡ್ಡ ವ್ಯಾಪ್ತಿಯಿದೆ. ಏಕೆಂದರೆ ಚಾರಿತ್ರಿಕ ವಾಸ್ತವಗಳು ಕೇವಲ ರಾಜಕೀಯವಾಗಿ ಮಾತ್ರ ಒಗ್ಗೂಡಿರುತ್ತವೆ ಹಾಗೂ ಪಳಗಿರುತ್ತವೆ ಎಂಬ ದಿಟವನ್ನು ನಾವು ಗಮನಿಸಬೇಕು.
‘ಸತ್ಯಶೋಧಕ ಸಮಾಜ’ದ ಮೂಲಕ ನಮ್ಮ ಬಹು ಸಮೂಹಗಳ ಸಾಮಾಜಿಕ ವಿನ್ಯಾಸಗಳಲ್ಲಿ ಹುದುಗಿರುವ ಪ್ರಾಬಲ್ಯ ಮತ್ತು ಅಧೀನತೆಯ ಸಂಬಂಧಗಳ ಮೂಲಗಳನ್ನು ಹುಡುಕುವ ಮಹತ್ವದ ಕೆಲಸವನ್ನೂ ಇವರು ಕೈಗೊಂಡಿದ್ದರು. ಎರಡು ಬಗೆಯಲ್ಲಿ ಸಮೂಹಗಳ ಪ್ರಜ್ಞೆಯನ್ನು ಎಚ್ಚರಗೊಳಿಸುವ ನಿಲುವುಗಳನ್ನು ಸತ್ಯಶೋಧಕ ಸಮಾಜದ ಮೂಲಕ ನೆರವೇರಿಸಲಾಗುತಿತ್ತು.
ಒಂದು ಶಿಕ್ಷಣ ಮತ್ತೊಂದು ಸಾಮಾಜಿಕ-ರಾಜಕೀಯ ಪ್ರಜ್ಞೆ ಎಂದು ಈ ನಿಲುವುಗಳನ್ನು ಗುರುತಿಸಬಹುದು. ಈ ಎರಡೂ ನಿಲುವುಗಳು ಸಮೂಹಗಳ ಪ್ರತಿನಿಧೀಕರಣದ ಅಯಾಮಗಳನ್ನು ಖಚಿತಗೊಳಿಸುವುದಕ್ಕೇ ಅತ್ಯಂತ ಒತ್ತಾಸೆಯಾಗಿದ್ದವು. ರಾಜಕೀಯ-ಸಾಮಾಜಿಕ ಹಾಗೂ ನಮ್ಮ ಚರಿತ್ರೆಯನ್ನು ಕಟ್ಟಿಕೊಳ್ಳುವುದಕ್ಕೆ ಅಗತ್ಯವಾದ ಬಂಡಾಯದ ಮಾದರಿಗಳು ಫುಲೆಯವರ ಚಿಂತನೆಗಳಲ್ಲಿ ನಿಚ್ಚಳವಾಗಿ ಮೂಡಿಬಂದಿರುತ್ತವೆ.
ಅಂಬೇಡ್ಕರ್ ಅವರ ಪ್ರಭಾವ ಹಾಗೂ ಆಲೋಚನೆಗಳ ಪರಿಣಾಮವಾಗಿ, ಭಾರತ/ಕರ್ನಾಟಕದಲ್ಲಿ ಪ್ರತಿರೋಧದ ಮಾದರಿಗಳನ್ನು ಮರು ವಿನ್ಯಾಸಗೊಳಿಸುವ ನಡೆಗಳು ಅತ್ಯಂತ ತೀವ್ರವಾಗಿ ನಡೆದಿರುವುದನ್ನು ನಾವು ಕಾಣುತ್ತೇವೆ. ದಿಟ, ಕರ್ನಾಟಕದ ಸಾಹಿತ್ಯ ಚರಿತ್ರೆಗಳನ್ನು ಗಮನಿಸಿದರೆ, ಹಲವು ಬಗೆಯ ಪ್ರತಿರೋಧದ ಮಾದರಿಗಳನ್ನು ನಾವು ಗುರುತಿಸುತ್ತೇವೆ.
ಆದರೆ ಪ್ರಜಾಪ್ರಭುತ್ವದ ಸನ್ನಿವೇಶದಲ್ಲಿಯೂ ತಳ-ದಲಿತ-ಶೂದ್ರ ಸಮೂಹಗಳು ಯಾವ ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತವೆ ಎಂಬುದನ್ನು ಮನಗಂಡಾಗ, ಅಂಬೇಡ್ಕರ್ ಮತ್ತು ಫುಲೆಯವರಂತವರು ರೂಪಿಸಿದ ಚಿಂತನೆಯ ಮಾದರಿಗಳು, ನಮ್ಮ ಸದ್ಯದ ಚರಿತ್ರೆ, ರಾಜಕಾರಣಗಳು ರೂಪಿಸುವ ಏಕಾಕೃತಿಯ ಮಾದರಿಗಳಿಗೆ ಪ್ರತಿರೋಧವನ್ನು ಒಡ್ಡುವಲ್ಲಿ ಸಂಘಟನೆಗಳು ಹೇಗೆ ಬೆಳೆದುಬಂದವು ಎಂಬುದನ್ನು ಕುರಿತು ಯೋಚಿಸುವ ಜರೂರಿದೆ.
ಇಲ್ಲಿ ಇವತ್ತು ನಾವು ಚರ್ಚಿಸುತ್ತಿರುವ ಪ್ರತಿರೋಧದ ಈ ಮಾದರಿಗಳು ಸಾಮಾಜಿಕ ಮತ್ತು ರಾಜಕೀಯ ನೆಲೆಯಿಂದ ಪ್ರೇರಣೆಗಳನ್ನು ಪಡೆದಿರುತ್ತವೆ. ಸಾಮಾಜಿಕ ಪ್ರೇರಣೆಗಳು ರಾಜಕೀಯ ನೆಲೆಯಿಂದ ಪ್ರತಿರೋಧದ ಮಾದರಿಗಳನ್ನು ರೂಪಿಸುವುದಕ್ಕೆ ಕಾರಣವಾಗಿರುವಂತೆ, ಹಾಗೇನೇ ರಾಜಕೀಯ ಪ್ರೇರಣೆಗಳು ಸಾಮಾಜಿಕವಾಗಿ ಸಂಘಟನೆಗೊಳ್ಳಲೂ ಕಾರಣವಾಗಿರುತ್ತವೆ.
ಅಂದರೆ, ಇವುಗಳ ನಡುವೆ ಅದಲು-ಬದಲು ಮಾಡಿಯೂ ನೋಡುವ ಸಾಧ್ಯತೆ ಇದೆ ಎಂಬಂಶವನ್ನು ನಾವಿಲ್ಲಿ ಮನಗಾಣಬೇಕಿದೆ. ಈ ದೆಸೆಯಲ್ಲಿ ಪ್ರತಿರೋಧದ ಮಾದರಿಗಳನ್ನು ಚರ್ಚಿಸುವುದಾದರೆ, 1970ರ ದಶಕದಲ್ಲಿ, ಕರ್ನಾಟಕದಲ್ಲಿ ಮುಂಚೂಣಿಗೆ ಬಂದಂತಹ ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ (ಬಿ, ಕೃಷ್ಣಪ್ಪ,) ಹಾಗೂ ‘ಬೂಸಾ ಚಳುವಳಿ’ಗಳ (ಬಿ.ಬಸವಲಿಂಗಪ್ಪನವರು) ಪರಿಣಾಮಗಳನ್ನು ಕುರಿತು ಇವತ್ತು ಯೋಚಿಸಿಬೇಕಿದೆ.
ಆದರೆ ಇವುಗಳ ಬಗೆಗೆ ಇವತ್ತು ನಾವು ಹಲವು ರೀತಿಯ ಫಲಿತಗಳನ್ನು ಕಾಣುತ್ತೇವೆ. ಆದರೆ ಈ ಸಂಘಟನೆಗಳು ಹುಟ್ಟು ಹಾಕಿರುವ ವೈಚಾರಿಕ ವಿನ್ಯಾಸಗಳು ಮಾತ್ರ ಹಲವು ಸಾಮಾಜಿಕ-ರಾಜಕೀಯ ಪಲ್ಲಟಗಳಿಗೆ ಕಾರಣವಾಗಿರುತ್ತವೆ. ಅಂದ ತಕ್ಷಣವೇ, ಇವತ್ತು ಈ ಸಂಘಟನೆಯೊಳಗೆ ಏರ್ಪಟ್ಟಿರುವ ಬಿರುಕುಗಳನ್ನು ಮಾತ್ರ ದೊಡ್ಡದಾಗಿ ಬೆಟ್ಟುಮಾಡಿ ತೋರಿಸುವ ಧೋರಣೆಗಳನ್ನು ನೋಡುತ್ತೇವೆ.
ಆದರೆ ಈ ಸಂಘಟನೆಗಳು ಉಂಟುಮಾಡಿರುವ ಪರಿಣಾಮಗಳು ನಗಣ್ಯವಾಗುತ್ತವೆ ಮತ್ತು ಚಾರಿತ್ರಿಕವಾಗಿ ಸೋಲೊಪ್ಪುವ ನೆಲೆಗಳಿಗೆ ಇವುಗಳನ್ನು ಗುರಿಮಾಡುತ್ತೇವೆ. ಇದಕ್ಕೆ ಎರಡು ಬಗೆಯ ಕಾರಣಗಳನ್ನು ಇಲ್ಲಿ ಕಂಡುಕೊಳ್ಳಬಹುದು. ಇಂತಹ ಸಂಘಟನೆಗಳ ತಾತ್ವಿಕತೆ ಮತ್ತು ಪರಿಕರಗಳ ವಿನ್ಯಾಸದಲ್ಲಿಯೇ ಲೋಪಗಳಿವೆ ಎಂಬುದು ಒಂದು ಕಾರಣವಾದರೆ, ಮತ್ತೊಂದು ಕಾರಣವು, ಈ ಸಂಘಟನೆಯೊಳಗೆ ಸೇರಿರುವ ಜಾತಿ ಮತ್ತು ಒಳಪಂಗಡಗಳ ನಡುವಣ ಅಧಿಕಾರ ಸಂಬಂಧದ ನೆಲೆಗಳು ಎಂದೇ ಹೇಳಬಹುದಾಗಿದೆ.
ಏಕೆಂದರೆ, ರಾಜಕೀಯ ಅಧಿಕಾರದ ಮೇಲಾಟದಲ್ಲಿ ಎದುರಾಗುವ ಪರಿಣಾಮಗಳು ಎಂತಹವು ಎಂಬುದನ್ನು ಇವತ್ತು ಊಹಿಸುವುದಕ್ಕೂ ಕಷ್ಟ. ಇವತ್ತು ಇಡೀ ಭಾರತದುದ್ದಕ್ಕೂ ಕಾಣುವ ರಾಜಕೀಯ ಧೃವೀಕರಣದ ಮಾದರಿಗಳನ್ನು ನೋಡಿದರೆ, ಈ ಕಷ್ಟದ ಹಿಂದಿನ ನೆಲೆಗಳು ನಮಗೆ ನಿಚ್ಚಳವಾಗಿ ತೋರುತ್ತವೆ. ಯಾವ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ನಿಲುವುಗಳನ್ನು ವಿರೋಧಿಸಲೆಂದು ಈ ಸಂಘಟನೆಗಳು ಹುಟ್ಟಿಕೊಂಡಿದ್ದವೋ ಅದನ್ನೆಲ್ಲ ಮರೆತು ಅಧಿಕಾರದ ಅಧೀನತೆಗೆ ಒಳಗಾಗುತ್ತಿವೆ.
ಅಂದರೆ ಇದು ದಲಿತ ಮತ್ತು ಹಿಂದುಳಿದ ಸಮೂಹಗಳಿಗೆ ಅಧಿಕಾರವನ್ನು ನಿರಾಕರಿಸುವುದಲ್ಲ. ಬದಲಾಗಿ, ಯಾರು ಇದುವರೆಗೂ ಅಧಿಕಾರ ಕೇಂದ್ರಗಳಲ್ಲಿ ನೆಲೆಗೊಂಡು, ತಳ-ದಲಿತ-ಶೂದ್ರ ಸಮೂಹಗಳನ್ನು ಶೋಷಣೆಗೆ ಈಡು ಮಾಡಿದ್ದವೋ, ಅಂತಹ ಸಮೂಹಗಳು ರೂಪಿಸುವ ರಾಜಕೀಯ ಅಧಿಕಾರಕ್ಕೆ ಈ ಎಲ್ಲ ತಳ-ದಲಿತ-ಶೂದ್ರ ಸಮೂಹಗಳು ಅಸ್ತ್ರಗಳಾಗಿ ಬಳಕೆಯಾಗುತ್ತವೆ.
ಇವರಿಗೆ ಅಧಿಕಾರವೆಂಬುದು ಮಾಧ್ಯಮವಾಗಬೇಕು ಮತ್ತು ಸಾಮಾಜಿಕ ಸ್ವಾಯತ್ತತೆಯನ್ನು ತಂದುಕೊಡುವ ಸಾಮಾಜಿಕ ವಿನ್ಯಾಸವಾಗಬೇಕು. ಈ ಕಾರಣದಿಂದ ಈ ಎಲ್ಲ ಸಬಾಲ್ಟರ್ನ್ ಸಮೂಹಗಳಿಗೆ ಇವತ್ತು ಬೇಕಾಗಿರುವುದು ಹೊಸ ಸಾಮಾಜಿಕ ವ್ಯವಸ್ಥೆಯೇ ಹೊರತು, ಕೇವಲ ಅಧಿಕಾರವಲ್ಲ.
ಅಂದರೆ, ಸಾಮಾಜಿಕ ರಚನೆಯಲ್ಲಿಯೇ ಶೋಷಣೆಯ ಮಾದರಿಗಳನ್ನು ಅಡಕಗೊಳಿಸುವಂತೆ, ಈ ಹೊಸ ಸಾಮಾಜಿಕ ವ್ಯವಸ್ಥೆಯಲ್ಲಿಯೇ, ಎಲ್ಲ ತಳ-ದಲಿತ-ಶೂದ್ರ ಸಮೂಹಗಳು ಹಸನಾಗಿ ಬದುಕುವುದಕ್ಕೆ ಬೇಕಾದ ಅಧಿಕಾರ ಮತ್ತು ಜ್ಞಾನಶಿಸ್ತುಗಳನ್ನು ನೆಲೆಗೊಳಿಸುವ ಅಗತ್ಯವಿದೆ. ಈಗಾಗಲೇ ಹೇಳಿದಂತೆ, ಚರಿತ್ರೆ, ಮೀಮಾಂಸೆಗಳಂತಹ ಜ್ಞಾನಶಿಸ್ತುಗಳನ್ನು ರೂಪಿಸುವ ನಿಟ್ಟಿನಲ್ಲಿ ಹೋರಾಟಗಳು ಇಲ್ಲವೇ ಚಳವಳಿಗಳು ತಲೆಯೆತ್ತಬೇಕಿದೆ.
ಇವುಗಳು ಕೇವಲ ರಾಜಕೀಯ ಸರಿತನ ಇಲ್ಲವೇ ಕಾನೂನುಗಳನ್ನು ಜಾರಿಗೊಳಿಸುವುದಷ್ಟಕ್ಕೆ ಮಾತ್ರ ಸೀಮಿತಗೊಳ್ಳುವುದು ಸರಿಯಾದ ನಿಲುವಲ್ಲ.
ಅದೇನೇ ಇರಲಿ, ದಲಿತ ಸಂಘರ್ಷ ಸಮಿತಿ ಮತ್ತು ಬೂಸಾ ಚಳುವಳಿಗಳು ಸಾಂಸ್ಕೃತಿಕ ಮೀಮಾಂಸೆ, ಚರಿತ್ರೆ, ರಾಜಕೀಯ ತತ್ವಗಳ ಮೂಲಭೂತವಾದವನ್ನು ಪಲ್ಲಟಗೊಳಿಸುವ ಕೆಲಸವನ್ನು ಮಾಡಿರುವುದನ್ನು ಮರೆಯುವಂತಿಲ್ಲ.
ಆದರೆ ಇವುಗಳು ಬೌದ್ಧಿಕ ಸ್ವಾಯತ್ತತೆಯನ್ನು ರೂಪಿಸುವಷ್ಟು ಬಲವಾಗಿ ಬೆಳೆದಿಲ್ಲವೆಂಬುದು ಕೂಡ ಅಷ್ಟೇ ದಿಟವಾದ ಸಂಗತಿಯಾಗಿದೆ. ಈಚೆಗೆ ನಡೆದ ಚಲೋ-ಉಡುಪಿಯಂತಹ ಹೋರಾಟಗಳೂ ಒಂದು ರಾಜಕೀಯ ಪರಿಣಾಮವನ್ನು ಬೀರಿರುತ್ತವೆ. ಆದರೆ ಈ ಪರಿಣಾಮವು ಕೇವಲ ಒಂದು ಚಾರಿತ್ರಕ ಬೆಳವಣಿಗೆಯಾಗಿ ಇರುತ್ತದೆಯೇ ಹೊರತು ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಬಗೆಯ ಚಾರಿತ್ರಿಕ ತಿಳಿವು ಮತ್ತು ನಂಬಿಕೆಗಳನ್ನು ಪಲ್ಲಟಗೊಳಿಸುವಲ್ಲಿ ಅತ್ಯಂತ ಪ್ರಬಲವಾದ ವಿದ್ಯಮಾನವಾಗುವುದಿಲ್ಲ.
ಏಕೆಂದರೆ ತಳ-ದಲಿತ-ಶೂದ್ರ-ಅಲ್ಪಸಂಖ್ಯಾತ ಸಮೂಹಗಳನ್ನು ಒಟ್ಟಾಗಿ ರಾಜಕೀಯ ಮತ್ತು ಸಾಮಾಜಿಕ ಶಕ್ತಿಯನ್ನಾಗಿ ಪ್ರದರ್ಶಿಸುವುದಕ್ಕೆ ಬೇಕಾದ ಸಿದ್ಧತೆಗಳು ನಮ್ಮಲ್ಲಿ ಇನ್ನೂ ಸಜ್ಜುಗೊಂಡಿಲ್ಲ. ಇಂತಹ ವ್ಯವಸ್ಥೆಯು ಎರಡು ಬಗೆಯಲ್ಲಿ ನೆರವೇರುತ್ತದೆ. ಒಂದು ಬೌದ್ಧಿಕ ನೆಲೆಯಿಂದ ಮತ್ತೊಂದು ಸಾಮಾಜಿಕ-ರಾಜಕೀಯ ನೆಲೆಯಿಂದ ಎಂದು ಹೇಳಬಹುದು. ಇವೆರಡೂ ಪೂರಕವಾಗಿ ನಡೆಯುವ ಅವಶ್ಯಕತೆ ಇರುತ್ತದೆ.
ಕೇವಲ ಬೌದ್ಧಿಕ ಇಲ್ಲವೇ ರಾಜಕೀಯ ಹೋರಾಟಗಳಿಂದ ನಮ್ಮ ಸಾಮಾಜಿಕ-ರಾಜಕೀಯ ವ್ಯವಸ್ಥೆಗಳನ್ನು ರೂಪಾಂತರಿಸುವ ಕೆಲಸವು ನಡೆಯಲಾರದು. ಬೌದ್ಧಿಕತೆ ಎಂಬುದು ಪರಮಸತ್ಯವಲ್ಲ ದಿಟ. ಆದರೆ ಬೌದ್ಧಿಕ ಕ್ರಿಯಾಶೀಲತೆಯು ನಮ್ಮ ಪ್ರಜ್ಞೆಯನ್ನು ಎಚ್ಚರಿಸಬಲ್ಲದು ಅನ್ನುವುದು ಮಾತ್ರ ದಿಟ. ಆದರೆ ಕರ್ನಾಟಕ ಇಲ್ಲವೇ ಒಟ್ಟಾರೆ ಭಾರತದಲ್ಲಿ ‘ನಿನ್ನೆಗಳ ಮರುರಚನೆ’ಯಲ್ಲಿ ಹುದುಗಿರುವ ತಾತ್ವಿಕ ಲೋಪಗಳಿಂದ, ಈ ಬೌದ್ಧಿಕತೆ ಎಂಬುದು ಕೇವಲ ಶೈಕ್ಷಣಿಕ ಕಸರತ್ತಾಗಿ ಕಂಡುಬಂದಿದೆ. ಹಾಗಾಗಿ ಕರ್ನಾಟಕದ ನಿನ್ನೆಗಳ ಮರುರಚನೆಯ ವಿನ್ಯಾಸಗಳನ್ನು ಕುರಿತು ಇಂದು ವಿಶ್ಲೇಷಿಸುವ ಜರೂರಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



