Connect with us

ನೆಲದನಿ

ಜ್ಯೋತಿರಾವ್ ಫುಲೆ | ವಸಾಹತು ಮತ್ತು ಮೇಲ್ವರ್ಗಗಳ ಪ್ರಾಬಲ್ಯವನ್ನು ಪ್ರಶ್ನಿಸಿಸುವ ನೆಲೆಗಳು

Published

on

  • ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಜ್ಯೋತಿರಾವ್ ಫುಲೆಯವರ ಚಿಂತನೆಗಳನ್ನು ಸಬಾಲ್ಟರ್ನ್ ಓದು ಕಣ್ನೋಟದಲ್ಲಿಟ್ಟು ನೋಡುವ ಕೆಲವು ಅಧ್ಯಯನಗಳು ಈಗಾಗಲೇ ಬಂದಿರುತ್ತವೆ. ಆದರೆ ಫುಲೆಯವರ ಚಿಂತನೆಯ ಸಾಧ್ಯತೆಗಳನ್ನು ಗುರುತಿಸುವುದಕ್ಕಿಂತ, ಅವುಗಳಲ್ಲಿ ಅಡಗಿರುವ ಎಪಿಸ್ಟಮಾಲಜಿಕಲ್ ಬಿಕ್ಕಟ್ಟುಗಳನ್ನು ಹಾಗೂ ತಾತ್ವಿಕ ಸಮಸ್ಯೆಗಳನ್ನು ಬಿಡಿಸಿ ನೋಡುವ ಪ್ರಯತ್ನವನ್ನು ಈ ಅಧ್ಯಯನಗಳಲ್ಲಿ ಮಾಡಲಾಗಿದೆ. ಹಾಗೂ ವಸಾಹತು ಪ್ರಭುತ್ವಕ್ಕೆ ಫುಲೆಯವರು ನಿಷ್ಠರಾಗಿದ್ದರು ಎಂಬ ಆರೋಪವನ್ನು ಇವರ ಮೇಲೆ ಹೇರಲಾಗಿದೆ.

ಅದೇನೆಯಿರಲಿ, ‘ಬ್ರಾಹ್ಮಣಾಚ ಕಸಬ್ (1869), ‘ಗುಲಾಮಗಿರಿ (1873) ಮೊದಲಾದ ತಮ್ಮ ಬರಹಗಳಲ್ಲಿ ಫುಲೆಯವರು, ‘ಶೂದ್ರ-ಅತಿಶೂದ್ರ’ ಪ್ರಜ್ಞೆಯನ್ನು ಎಚ್ಚರಗೊಳಿಸುವ ಅತ್ಯಂತ ಮಹತ್ವದ ಕೆಲಸವನ್ನು ಇವರು ಮಾಡಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸಬಾಲ್ಟರ್ನ್ ಓದಿನ ಪ್ರಾಥಮಿಕ ಕಣ್ನೋಟವೇ ಸಮೂಹ ಮತ್ತು ವ್ಯಕ್ತಿಪ್ರಜ್ಞೆಯನ್ನು ಜಾಗ್ರತಗೊಳಿಸುವುದು ಮತ್ತು ಆ ಮೂಲಕ ಅವರಲ್ಲಿ ಅವರವರ ಅಸ್ಮಿತೆ, ಅಸ್ತಿತ್ವ ಹಾಗೂ ರಾಜಕೀಯ ನಿಲುವುಗಳನ್ನು ಗುರುತಿಸುವ ಬಗೆಯಾಗಿರುತ್ತದೆ.

ಏಕೆಂದರೆ, ಸಬಾಲ್ಟರ್ನ್ ಸಮೂಹಗಳೆಂದು ಇವತ್ತು ನಾವು ಗುರುತಿಸುವ ಬಹುತೇಕ ಸಮೂಹಗಳು ಪ್ರೀ-ಪೊಲಿಟಿಕಲ್ ನೆಲೆಯಲ್ಲಿರುತ್ತವೆ. ಇಂತಹ ನಿಲುವುಗಳನ್ನು ಪಲ್ಲಟಗೊಳಿಸುವ ಅತ್ಯಂತ ಮಹತ್ವದ ಕೆಲಸವು ಈ ಸಬಾಲ್ಟರ್ನ್ ಪ್ರಜ್ಞೆಯನ್ನು ಎಚ್ಚರಗೊಳಿಸುವ ಮೂಲಕ ನೆರವೇರುತ್ತವೆ ಎಂಬುದು ಗಮನಾರ್ಹ. ಇಂತಹವೊಂದು ಮಹತ್ವದ ಕೆಲಸವನ್ನು ಫುಲೆಯವರು ಮಾಡಿರುತ್ತಾರೆ ಅನ್ನುವುದು ವಿಶೇಷ. 19ನೇ ಶತಮಾನದ ಕಾಲ ಮತ್ತು ಚಾರಿತ್ರಿಕ ನಿಲುವುಗಳು ಕೇವಲ ‘ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತದಲ್ಲಿದ್ದವು. ಈ ನಿಲುವು ಇವತ್ತಿಗೂ ಬದಲಾಗಿರುವುದಿಲ್ಲ.

ಇದೊಂದು ತಪ್ಪು ನಡೆಯೆಂದು ನಾನು ವಾದಿಸಲಾರೆ, ಆದರೆ ರಾಷ್ಟ್ರೀಯತೆಯ ಕಲ್ಪನೆಯು ಈ ದೇಶದ ಎಲ್ಲ ಸಮೂಹಗಳನ್ನು ಒಳ್ಗೊಂಡಿರುವ ಬಗೆಯಾಗಿ ಇವತ್ತಿಗೂ ಮುಂದೆ ಬರಲಿಲ್ಲ. ಹೊರತಾಗಿ ತಾರತಮ್ಯ ಮತ್ತು ಅಸಮಾನ ರಚನೆಗಳನ್ನೇ ನಿರಂತರಗೊಳಿಸುವ ಬಗೆಯಾಗಿ, ಇವತ್ತಿಗೂ ಇದು ಮುಂದುವರೆದಿದೆ. ಹಾಗಾಗಿ ಫುಲೆಯವರ ಚಿಂತನೆಗಳು ಸಬಾಲ್ಟರ್ನ್ ಅಧ್ಯಯನ ಸನ್ನಿವೇಶದಲ್ಲಿ ಮಹತ್ವವನ್ನು ಪಡೆಯುತ್ತವೆ. ಪರಿಣಾಮವಾಗಿ, ಫುಲೆಯವರ ತಿಳುವಳಿಕೆಗಳಲ್ಲಿ, ಈಗಾಗಲೇ ಚರಿತ್ರೆ, ಸಂಸ್ಕೃತಿ ಚಿಂತನೆಗಳಲ್ಲಿ ನೆಲೆನಿಂತಿರುವ ಏಕಾಕೃತಿಯ ನಿಲುವುಗಳಿಗೆ ಬದಲಾಗಿ, ಈ ದೇಶದ ಬಹುತ್ವದ ಸಾಮಾಜಿಕ, ಸಾಂಸ್ಕೃತಿಕ ವಿನ್ಯಾಸಗಳನ್ನು ಗುರುತಿಸುವ ಇರಾದೆಯನ್ನು ಕಾಣುತ್ತೇವೆ.

ಅಂದರೆ ಶೂದ್ರ, ಅತಿಶೂದ್ರ ಪ್ರಜ್ಞೆಯ ಮೂಲಕ ಚರಿತ್ರೆಯೊಳಗೆ ಹುದುಗಿರುವ ಹಿಂಸೆ ಮತ್ತು ಯಜಮಾನಿಕೆಯ ವಿನ್ಯಾಸಗಳನ್ನು ಇವರು ಗುರುತಿಸಿರುತ್ತಾರೆ. ದಿಟ, ಫುಲೆಯವರು ತಳ/ದಲಿತ/ಶೂದ್ರ ಸಮೂಹಗಳಲ್ಲಿ ಸಬಾಲ್ಟರ್ನ್ ಪ್ರಜ್ಞೆಯನ್ನು ಬೆಳೆಸುವಲ್ಲಿ ಸಫಲವಾಗಲಿಲ್ಲ ಎಂಬ ಆರೋಪಗಳನ್ನು ಮಾಡಲಾಗುತ್ತದೆ. ವಸಾಹತು ಪ್ರಭುತ್ವದ ಪ್ರಾಬಲ್ಯ ಮತ್ತು ಅಧಿಕಾರದ ಹಂಗಿನಲ್ಲಿದ್ದ ಸನ್ನಿವೇಶದಲ್ಲಿ ಫುಲೆಯವರು ರೂಪಿಸಿದ ಈ ಚಿಂತನೆಗಳಿಗೆ ಬಹದೊಡ್ಡ ವ್ಯಾಪ್ತಿಯಿದೆ.

ಏಕೆಂದರೆ ಚಾರಿತ್ರಿಕ ವಾಸ್ತವಗಳು ಕೇವಲ ರಾಜಕೀಯವಾಗಿ ಮಾತ್ರ ಒಗ್ಗೂಡಿರುತ್ತವೆ ಹಾಗೂ ಪಳಗಿರುತ್ತವೆ ಎಂಬ ದಿಟವನ್ನು ನಾವು ಗಮನಿಸಬೇಕು. ‘ಸತ್ಯಶೋಧಕ ಸಮಾಜ’ದ ಮೂಲಕ ನಮ್ಮ ಬಹು ಸಮೂಹಗಳ ಸಾಮಾಜಿಕ ವಿನ್ಯಾಸಗಳಲ್ಲಿ ಹುದುಗಿರುವ ಪ್ರಾಬಲ್ಯ ಮತ್ತು ಅಧೀನತೆಯ ಸಂಬಂಧಗಳ ಮೂಲಗಳನ್ನು ಹುಡುಕುವ ಮಹತ್ವದ ಕೆಲಸವನ್ನೂ ಇವರು ಕೈಗೊಂಡಿದ್ದರು.

ಎರಡು ಬಗೆಯಲ್ಲಿ ಸಮೂಹಗಳ ಪ್ರಜ್ಞೆಯನ್ನು ಎಚ್ಚರಗೊಳಿಸುವ ನಿಲುವುಗಳನ್ನು ಸತ್ಯಶೋಧಕ ಸಮಾಜದ ಮೂಲಕ ನೆರವೇರಿಸಲಾಗುತಿತ್ತು. ಒಂದು ಶಿಕ್ಷಣ ಮತ್ತೊಂದು ಸಾಮಾಜಿಕ-ರಾಜಕೀಯ ಪ್ರಜ್ಞೆ ಎಂದು ಈ ನಿಲುವುಗಳನ್ನು ಗುರುತಿಸಬಹುದು. ಈ ಎರಡೂ ನಿಲುವುಗಳು ಸಮೂಹಗಳ ಪ್ರತಿನಿಧೀಕರಣದ ಅಯಾಮಗಳನ್ನು ಖಚಿತಗೊಳಿಸುವುದಕ್ಕೇ ಅತ್ಯಂತ ಒತ್ತಾಸೆಯಾಗಿದ್ದವು. ರಾಜಕೀಯ-ಸಾಮಾಜಿಕ ಹಾಗೂ ನಮ್ಮ ಚರಿತ್ರೆಯನ್ನು ಕಟ್ಟಿಕೊಳ್ಳುವುದಕ್ಕೆ ಅಗತ್ಯವಾದ ಬಂಡಾಯದ ಮಾದರಿಗಳು ಫುಲೆಯವರ ಚಿಂತನೆಗಳಲ್ಲಿ ನಿಚ್ಚಳವಾಗಿ ಮೂಡಿಬಂದಿರುತ್ತವೆ.

ಅಂಬೇಡ್ಕರ್ ಅವರ ಪ್ರಭಾವ ಹಾಗೂ ಆಲೋಚನೆಗಳ ಪರಿಣಾಮವಾಗಿ, ಭಾರತ/ಕರ್ನಾಟಕದಲ್ಲಿ ಪ್ರತಿರೋಧದ ಮಾದರಿಗಳನ್ನು ಮರು ವಿನ್ಯಾಸಗೊಳಿಸುವ ನಡೆಗಳು ಅತ್ಯಂತ ತೀವ್ರವಾಗಿ ನಡೆದಿರುವುದನ್ನು ನಾವು ಕಾಣುತ್ತೇವೆ. ದಿಟ, ಕರ್ನಾಟಕದ ಸಾಹಿತ್ಯ ಚರಿತ್ರೆಗಳನ್ನು ಗಮನಿಸಿದರೆ, ಹಲವು ಬಗೆಯ ಪ್ರತಿರೋಧದ ಮಾದರಿಗಳನ್ನು ನಾವು ಗುರುತಿಸುತ್ತೇವೆ.

ಆದರೆ ಪ್ರಜಾಪ್ರಭುತ್ವದ ಸನ್ನಿವೇಶದಲ್ಲಿಯೂ ತಳ-ದಲಿತ-ಶೂದ್ರ ಸಮೂಹಗಳು ಯಾವ ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತವೆ ಎಂಬುದನ್ನು ಮನಗಂಡಾಗ, ಅಂಬೇಡ್ಕರ್ ಮತ್ತು ಫುಲೆಯವರಂತವರು ರೂಪಿಸಿದ ಚಿಂತನೆಯ ಮಾದರಿಗಳು, ನಮ್ಮ ಸದ್ಯದ ಚರಿತ್ರೆ, ರಾಜಕಾರಣಗಳು ರೂಪಿಸುವ ಏಕಾಕೃತಿಯ ಮಾದರಿಗಳಿಗೆ ಪ್ರತಿರೋಧವನ್ನು ಒಡ್ಡುವಲ್ಲಿ ಸಂಘಟನೆಗಳು ಹೇಗೆ ಬೆಳೆದುಬಂದವು ಎಂಬುದನ್ನು ಕುರಿತು ಯೋಚಿಸುವ ಜರೂರಿದೆ. ಇಲ್ಲಿ ಇವತ್ತು ನಾವು ಚರ್ಚಿಸುತ್ತಿರುವ ಪ್ರತಿರೋಧದ ಈ ಮಾದರಿಗಳು ಸಾಮಾಜಿಕ ಮತ್ತು ರಾಜಕೀಯ ನೆಲೆಯಿಂದ ಪ್ರೇರಣೆಗಳನ್ನು ಪಡೆದಿರುತ್ತವೆ.

ಸಾಮಾಜಿಕ ಪ್ರೇರಣೆಗಳು ರಾಜಕೀಯ ನೆಲೆಯಿಂದ ಪ್ರತಿರೋಧದ ಮಾದರಿಗಳನ್ನು ರೂಪಿಸುವುದಕ್ಕೆ ಕಾರಣವಾಗಿರುವಂತೆ, ಹಾಗೇನೇ ರಾಜಕೀಯ ಪ್ರೇರಣೆಗಳು ಸಾಮಾಜಿಕವಾಗಿ ಸಂಘಟನೆಗೊಳ್ಳಲೂ ಕಾರಣವಾಗಿರುತ್ತವೆ. ಅಂದರೆ, ಇವುಗಳ ನಡುವೆ ಅದಲು-ಬದಲು ಮಾಡಿಯೂ ನೋಡುವ ಸಾಧ್ಯತೆ ಇದೆ ಎಂಬಂಶವನ್ನು ನಾವಿಲ್ಲಿ ಮನಗಾಣಬೇಕಿದೆ.

ಈ ದೆಸೆಯಲ್ಲಿ ಪ್ರತಿರೋಧದ ಮಾದರಿಗಳನ್ನು ಚರ್ಚಿಸುವುದಾದರೆ, 1970ರ ದಶಕದಲ್ಲಿ, ಕರ್ನಾಟಕದಲ್ಲಿ ಮುಂಚೂಣಿಗೆ ಬಂದಂತಹ ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ (ಬಿ, ಕೃಷ್ಣಪ್ಪ,) ಹಾಗೂ ‘ಬೂಸಾ ಚಳುವಳಿ’ಗಳ (ಬಿ.ಬಸವಲಿಂಗಪ್ಪನವರು) ಪರಿಣಾಮಗಳನ್ನು ಕುರಿತು ಇವತ್ತು ಯೋಚಿಸಿಬೇಕಿದೆ. ಆದರೆ ಇವುಗಳ ಬಗೆಗೆ ಇವತ್ತು ನಾವು ಹಲವು ರೀತಿಯ ಫಲಿತಗಳನ್ನು ಕಾಣುತ್ತೇವೆ.

ಆದರೆ ಈ ಸಂಘಟನೆಗಳು ಹುಟ್ಟು ಹಾಕಿರುವ ವೈಚಾರಿಕ ವಿನ್ಯಾಸಗಳು ಮಾತ್ರ ಹಲವು ಸಾಮಾಜಿಕ-ರಾಜಕೀಯ ಪಲ್ಲಟಗಳಿಗೆ ಕಾರಣವಾಗಿರುತ್ತವೆ. ಅಂದ ತಕ್ಷಣವೇ, ಇವತ್ತು ಈ ಸಂಘಟನೆಯೊಳಗೆ ಏರ್ಪಟ್ಟಿರುವ ಬಿರುಕುಗಳನ್ನು ಮಾತ್ರ ದೊಡ್ಡದಾಗಿ ಬೆಟ್ಟುಮಾಡಿ ತೋರಿಸುವ ಧೋರಣೆಗಳನ್ನು ನೋಡುತ್ತೇವೆ. ಆದರೆ ಈ ಸಂಘಟನೆಗಳು ಉಂಟುಮಾಡಿರುವ ಪರಿಣಾಮಗಳು ನಗಣ್ಯವಾಗುತ್ತವೆ ಮತ್ತು ಚಾರಿತ್ರಿಕವಾಗಿ ಸೋಲೊಪ್ಪುವ ನೆಲೆಗಳಿಗೆ ಇವುಗಳನ್ನು ಗುರಿಮಾಡುತ್ತೇವೆ.

ಇದಕ್ಕೆ ಎರಡು ಬಗೆಯ ಕಾರಣಗಳನ್ನು ಇಲ್ಲಿ ಕಂಡುಕೊಳ್ಳಬಹುದು. ಇಂತಹ ಸಂಘಟನೆಗಳ ತಾತ್ವಿಕತೆ ಮತ್ತು ಪರಿಕರಗಳ ವಿನ್ಯಾಸದಲ್ಲಿಯೇ ಲೋಪಗಳಿವೆ ಎಂಬುದು ಒಂದು ಕಾರಣವಾದರೆ, ಮತ್ತೊಂದು ಕಾರಣವು, ಈ ಸಂಘಟನೆಯೊಳಗೆ ಸೇರಿರುವ ಜಾತಿ ಮತ್ತು ಒಳಪಂಗಡಗಳ ನಡುವಣ ಅಧಿಕಾರ ಸಂಬಂಧದ ನೆಲೆಗಳು ಎಂದೇ ಹೇಳಬಹುದಾಗಿದೆ. ಏಕೆಂದರೆ, ರಾಜಕೀಯ ಅಧಿಕಾರದ ಮೇಲಾಟದಲ್ಲಿ ಎದುರಾಗುವ ಪರಿಣಾಮಗಳು ಎಂತಹವು ಎಂಬುದನ್ನು ಇವತ್ತು ಊಹಿಸುವುದಕ್ಕೂ ಕಷ್ಟ. ಇವತ್ತು ಇಡೀ ಭಾರತದುದ್ದಕ್ಕೂ ಕಾಣುವ ರಾಜಕೀಯ ಧೃವೀಕರಣದ ಮಾದರಿಗಳನ್ನು ನೋಡಿದರೆ, ಈ ಕಷ್ಟದ ಹಿಂದಿನ ನೆಲೆಗಳು ನಮಗೆ ನಿಚ್ಚಳವಾಗಿ ತೋರುತ್ತವೆ.

ಯಾವ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ನಿಲುವುಗಳನ್ನು ವಿರೋಧಿಸಲೆಂದು ಈ ಸಂಘಟನೆಗಳು ಹುಟ್ಟಿಕೊಂಡಿದ್ದವೋ ಅದನ್ನೆಲ್ಲ ಮರೆತು ಅಧಿಕಾರದ ಅಧೀನತೆಗೆ ಒಳಗಾಗುತ್ತಿವೆ. ಅಂದರೆ ಇದು ದಲಿತ ಮತ್ತು ಹಿಂದುಳಿದ ಸಮೂಹಗಳಿಗೆ ಅಧಿಕಾರವನ್ನು ನಿರಾಕರಿಸುವುದಲ್ಲ. ಬದಲಾಗಿ, ಯಾರು ಇದುವರೆಗೂ ಅಧಿಕಾರ ಕೇಂದ್ರಗಳಲ್ಲಿ ನೆಲೆಗೊಂಡು, ತಳ-ದಲಿತ-ಶೂದ್ರ ಸಮೂಹಗಳನ್ನು ಶೋಷಣೆಗೆ ಈಡು ಮಾಡಿದ್ದವೋ, ಅಂತಹ ಸಮೂಹಗಳು ರೂಪಿಸುವ ರಾಜಕೀಯ ಅಧಿಕಾರಕ್ಕೆ ಈ ಎಲ್ಲ ತಳ-ದಲಿತ-ಶೂದ್ರ ಸಮೂಹಗಳು ಅಸ್ತ್ರಗಳಾಗಿ ಬಳಕೆಯಾಗುತ್ತವೆ.

ಇವರಿಗೆ ಅಧಿಕಾರವೆಂಬುದು ಮಾಧ್ಯಮವಾಗಬೇಕು ಮತ್ತು ಸಾಮಾಜಿಕ ಸ್ವಾಯತ್ತತೆಯನ್ನು ತಂದುಕೊಡುವ ಸಾಮಾಜಿಕ ವಿನ್ಯಾಸವಾಗಬೇಕು. ಈ ಕಾರಣದಿಂದ ಈ ಎಲ್ಲ ಸಬಾಲ್ಟರ್ನ್ ಸಮೂಹಗಳಿಗೆ ಇವತ್ತು ಬೇಕಾಗಿರುವುದು ಹೊಸ ಸಾಮಾಜಿಕ ವ್ಯವಸ್ಥೆಯೇ ಹೊರತು, ಕೇವಲ ಅಧಿಕಾರವಲ್ಲ. ಅಂದರೆ, ಸಾಮಾಜಿಕ ರಚನೆಯಲ್ಲಿಯೇ ಶೋಷಣೆಯ ಮಾದರಿಗಳನ್ನು ಅಡಕಗೊಳಿಸುವಂತೆ, ಈ ಹೊಸ ಸಾಮಾಜಿಕ ವ್ಯವಸ್ಥೆಯಲ್ಲಿಯೇ, ಎಲ್ಲ ತಳ-ದಲಿತ-ಶೂದ್ರ ಸಮೂಹಗಳು ಹಸನಾಗಿ ಬದುಕುವುದಕ್ಕೆ ಬೇಕಾದ ಅಧಿಕಾರ ಮತ್ತು ಜ್ಞಾನಶಿಸ್ತುಗಳನ್ನು ನೆಲೆಗೊಳಿಸುವ ಅಗತ್ಯವಿದೆ.

ಈಗಾಗಲೇ ಹೇಳಿದಂತೆ, ಚರಿತ್ರೆ, ಮೀಮಾಂಸೆಗಳಂತಹ ಜ್ಞಾನಶಿಸ್ತುಗಳನ್ನು ರೂಪಿಸುವ ನಿಟ್ಟಿನಲ್ಲಿ ಹೋರಾಟಗಳು ಇಲ್ಲವೇ ಚಳವಳಿಗಳು ತಲೆಯೆತ್ತಬೇಕಿದೆ. ಇವುಗಳು ಕೇವಲ ರಾಜಕೀಯ ಸರಿತನ ಇಲ್ಲವೇ ಕಾನೂನುಗಳನ್ನು ಜಾರಿಗೊಳಿಸುವುದಷ್ಟಕ್ಕೆ ಮಾತ್ರ ಸೀಮಿತಗೊಳ್ಳುವುದು ಸರಿಯಾದ ನಿಲುವಲ್ಲ.

ಅದೇನೇ ಇರಲಿ, ದಲಿತ ಸಂಘರ್ಷ ಸಮಿತಿ ಮತ್ತು ಬೂಸಾ ಚಳುವಳಿಗಳು ಸಾಂಸ್ಕೃತಿಕ ಮೀಮಾಂಸೆ, ಚರಿತ್ರೆ, ರಾಜಕೀಯ ತತ್ವಗಳ ಮೂಲಭೂತವಾದವನ್ನು ಪಲ್ಲಟಗೊಳಿಸುವ ಕೆಲಸವನ್ನು ಮಾಡಿರುವುದನ್ನು ಮರೆಯುವಂತಿಲ್ಲ. ಆದರೆ ಇವುಗಳು ಬೌದ್ಧಿಕ ಸ್ವಾಯತ್ತತೆಯನ್ನು ರೂಪಿಸುವಷ್ಟು ಬಲವಾಗಿ ಬೆಳೆದಿಲ್ಲವೆಂಬುದು ಕೂಡ ಅಷ್ಟೇ ದಿಟವಾದ ಸಂಗತಿಯಾಗಿದೆ. ಈಚೆಗೆ ನಡೆದ ಚಲೋ-ಉಡುಪಿಯಂತಹ ಹೋರಾಟಗಳೂ ಒಂದು ರಾಜಕೀಯ ಪರಿಣಾಮವನ್ನು ಬೀರಿರುತ್ತವೆ.

ಆದರೆ ಈ ಪರಿಣಾಮವು ಕೇವಲ ಒಂದು ಚಾರಿತ್ರಕ ಬೆಳವಣಿಗೆಯಾಗಿ ಇರುತ್ತದೆಯೇ ಹೊರತು ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಬಗೆಯ ಚಾರಿತ್ರಿಕ ತಿಳಿವು ಮತ್ತು ನಂಬಿಕೆಗಳನ್ನು ಪಲ್ಲಟಗೊಳಿಸುವಲ್ಲಿ ಅತ್ಯಂತ ಪ್ರಬಲವಾದ ವಿದ್ಯಮಾನವಾಗುವುದಿಲ್ಲ. ಏಕೆಂದರೆ ತಳ-ದಲಿತ-ಶೂದ್ರ-ಅಲ್ಪಸಂಖ್ಯಾತ ಸಮೂಹಗಳನ್ನು ಒಟ್ಟಾಗಿ ರಾಜಕೀಯ ಮತ್ತು ಸಾಮಾಜಿಕ ಶಕ್ತಿಯನ್ನಾಗಿ ಪ್ರದರ್ಶಿಸುವುದಕ್ಕೆ ಬೇಕಾದ ಸಿದ್ಧತೆಗಳು ನಮ್ಮಲ್ಲಿ ಇನ್ನೂ ಸಜ್ಜುಗೊಂಡಿಲ್ಲ.

ಇಂತಹ ವ್ಯವಸ್ಥೆಯು ಎರಡು ಬಗೆಯಲ್ಲಿ ನೆರವೇರುತ್ತದೆ. ಒಂದು ಬೌದ್ಧಿಕ ನೆಲೆಯಿಂದ ಮತ್ತೊಂದು ಸಾಮಾಜಿಕ-ರಾಜಕೀಯ ನೆಲೆಯಿಂದ ಎಂದು ಹೇಳಬಹುದು. ಇವೆರಡೂ ಪೂರಕವಾಗಿ ನಡೆಯುವ ಅವಶ್ಯಕತೆ ಇರುತ್ತದೆ. ಕೇವಲ ಬೌದ್ಧಿಕ ಇಲ್ಲವೇ ರಾಜಕೀಯ ಹೋರಾಟಗಳಿಂದ ನಮ್ಮ ಸಾಮಾಜಿಕ-ರಾಜಕೀಯ ವ್ಯವಸ್ಥೆಗಳನ್ನು ರೂಪಾಂತರಿಸುವ ಕೆಲಸವು ನಡೆಯಲಾರದು.

ಬೌದ್ಧಿಕತೆ ಎಂಬುದು ಪರಮಸತ್ಯವಲ್ಲ ದಿಟ. ಆದರೆ ಬೌದ್ಧಿಕ ಕ್ರಿಯಾಶೀಲತೆಯು ನಮ್ಮ ಪ್ರಜ್ಞೆಯನ್ನು ಎಚ್ಚರಿಸಬಲ್ಲದು ಅನ್ನುವುದು ಮಾತ್ರ ದಿಟ. ಆದರೆ ಕರ್ನಾಟಕ ಇಲ್ಲವೇ ಒಟ್ಟಾರೆ ಭಾರತದಲ್ಲಿ ‘ನಿನ್ನೆಗಳ ಮರುರಚನೆ’ಯಲ್ಲಿ ಹುದುಗಿರುವ ತಾತ್ವಿಕ ಲೋಪಗಳಿಂದ, ಈ ಬೌದ್ಧಿಕತೆ ಎಂಬುದು ಕೇವಲ ಶೈಕ್ಷಣಿಕ ಕಸರತ್ತಾಗಿ ಕಂಡುಬಂದಿದೆ. ಹಾಗಾಗಿ ಕರ್ನಾಟಕದ ನಿನ್ನೆಗಳ ಮರುರಚನೆಯ ವಿನ್ಯಾಸಗಳನ್ನು ಕುರಿತು ಇಂದು ವಿಶ್ಲೇಷಿಸುವ ಜರೂರಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

Trending