ಭಾವ ಭೈರಾಗಿ
ಬ್ಯುಸಿ ಅನ್ನೋ ಭ್ರಮೆ ಜೀವನವನ್ನೇ ತಿಂದುಬಿಡುತ್ತೆ !
ನಾವಂತೂ ತುಂಬಾ ಬ್ಯುಸಿನಪ್ಪಾ ಯಾರಿಗೂ ಫೋನ್ ಮಾಡೋಕಾಗಲ್ಲ, ಊರಿಗೆ ಹೋಗೋಕಂತೂ ಟೈಮೇ ಇಲ್ಲ, ಮೊದಲೆಲ್ಲಾ ಗೆಳೆಯರೊಂದಿಗೆ ಗಂಟೆಗಟ್ಟಲೆ ಮಾತಾಡ್ತಿದ್ವಿ ಈಗ ಅದು ಸಾಧ್ಯವೇ ಇಲ್ಲ, ಪುಸ್ತಕ ಓದುವುದು ದೂರದ ಮಾತು, ಹವ್ಯಾಸಗಳೇನಾದ್ರೂ ಉಳಿದುಕೊಂಡಿದ್ಯಾ ಅಂತ ನೋಡಿದ್ರೆ ಹುಡುಕಿದರೂ ಒಂದೂ ಉಳಿದಿಲ್ಲ. ವಾಕ್ ಹೋಗಲ್ಲ, ವ್ಯಾಯಾಮ ಮಾಡಲ್ಲ, ಜಾತ್ರೆ ನೋಡಲ್ಲ, ಪಕ್ಕದ ಮನೆಯಲ್ಲಿ ಯಾರಾದ್ರೂ ಸತ್ತರೆ ಹೋಗಿ ಒಂದರ್ಧ ಗಂಟೆ ನೋಡಿಕೊಂಡು ಬರೋಕಾಗಲ್ಲ, ಹಳೇ ಗೆಳೆಯ ಗೆಳತಿಯರ ಮದುವೆಗೂ ಹೋಗುವಷ್ಟು ಟೈಮಿಲ್ಲ, ಮಕ್ಕಳ ಜೊತೆಯಂತೂ ಆಟವಾಡೋದು ದೂರದ ಮಾತು, ಹೀಗೆ ಏನು ಮಾಡೋಕು ಟೈಮಿಲ್ಲ. ಅಸಲಿಗೆ ಊಟ ತಿಂಡಿ ಮಾಡೋಕು ಆಗ್ತಿಲ್ಲ, ಎಷ್ಟೋ ಜನ ಅವರವರ ಹೆಂಡತಿ ಮಕ್ಕಳ ಮುಖ ನೋಡಿ ಕಣ್ಣಲ್ಲಿ ಕಣ ್ಣಟ್ಟು ಮಾತಾಡಿ ಅದೆಷ್ಟೋ ದಿನವಾಗಿದೆ. ಯಾಕಂದ್ರೆ ನಾವು ತುಂಬಾ ಬ್ಯುಸಿ.
ಹಾಗಂತ ನಾವು ಮಾಡೋ ಕೆಲಸದ ಉದ್ದೇಶ ಕೇವಲ ಹಣಗಳಿಕೆ ಅತಲ್ಲ. ಸಾಕಷ್ಟು ಮಂದಿ ಹಣ ಇದ್ದರೂ ಪ್ಯಾಷನ್ ಗಾಗಿ ಕೆಲಸ ಮಾಡುವವರಿದ್ದಾರೆ. ಹಾಗೇ ಸಾಧಿಸುವ ಛಲಕ್ಕಾಗಿ ಏನಾದರೂ ಮಾಡುವವರಿದ್ದಾರೆ. ಅದೆಲ್ಲವೂ ಸರಿ ಆದರೆ ಅದರ ಜೊತೆಗೆ ಈ ಮೇಲೆ ಹೇಳಿದ ಅಷ್ಟೂ ವಿಚಾರಗಳೂ ಮುಖ್ಯ ಅನ್ನೋದನ್ನ ನಾವು ಮರೆತೇ ಬಿಟ್ಟಿದ್ದೇವೆ. ಅದೆಷ್ಟೋ ಜನ ಉದ್ಯಮಿಗಳಿಗೆ ಮನೆ ಯಾವುದು ಆಫೀಸು ಯಾವುದು ಎಂದೇ ಸರಿಯಾಗಿ ನೆನಪಿರುವುದಿಲ್ಲ ಮನೆಯಲ್ಲೂ ವ್ಯವಹಾರದ್ದೇ ಚಿಂತೆ, ಇನ್ನು ಆಫೀಸಿನ ತಲೆನೋವನ್ನು ಮನೆವರೆಗೂ ತಂದು ಮನೆಯವರಿಗೂ ಹಂಚುವ ಮಂದಿಗೇನೂ ಕಡಿಮೆ ಇಲ್ಲ. ಇನ್ನು ಎಲ್ಲವೂ ಸರಿಯಿದ್ದರೂ ಸುಮ್ಮನೇ ಟಿವಿ ನೋಡಿ ಟೈಂ ವೇಸ್ಟ್ ಮಾಡುವ ಮಂದಿಗೂ ಮೇಲಿನ ಎಲ್ಲಾ ವಿಚಾರಗಳೂ ಅನ್ವಯಿಸುತ್ತವೆ.
ಹೌದು ಮಾಡುವ ಕೆಲಸವನ್ನ ಅದೆಷ್ಟು ಶ್ರದ್ಧೆಯಿಂದ ಮಾಡಲು ಸಾಧ್ಯವೋ ಅಷ್ಟು ಶ್ರದ್ದೆಯಿಂದ ಅಷ್ಟು ಅಚ್ಚುಕಟ್ಟಾಗಿ ಮಾಡುವುದರಿಂದ ಏನಾದರೂ ಮಾಡಲು ಸಾಧ್ಯವಿದೆ. ತಪಸ್ಸಿನಂತೆ ಕೆಲಸ ಮಾಡದೆ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಆದರೆ ಬದುಕನ್ನು ಕಂಪಾರ್ಟ್‍ಮೆಂಟ್ ಆಗಿ ವಿಂಗಡಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತೆ. ನಾವು ಮಾಡುವ ಅಷ್ಟೂ ಕೆಲಸವನ್ನೂ ಅಷ್ಟೇ ಶ್ರದ್ದೆಯಿಂದ ಮಾಡಬೇಕಲ್ಲವೇ, ನಾವು ಗಾಡಿ ಓಡಿಸುವಾಗ ಶುಧ್ಧ ಡ್ರೈವರ್ ಆಗಿ ಕಾರ್ಯ ನಿರ್ವಹಿಸಬೇಕಿದೆ, ಮನೆಯಲ್ಲಿದ್ದಾಗ ಒಬ್ಬ ಯಶಸ್ವೀ ಮಗನಾಗಿ, ತಾಯಿಯೊಂದಿಗಿದ್ದಾಗ ಒಬ್ಬ ಒಳ್ಳೆಯ ಮಗನಾಗಿ, ಮಗಳೊಂದಿಗಿದ್ದಾಗ ಒಬ್ಬ ಸಕ್ಸಸ್ ಫುಲ್ ತಂದೆಯಾಗಿ, ಗೆಳೆಯರೊಂದಿಗಿದ್ದಾಗ ಗೆಳೆಯನಾಗಿ, ಆಫೀಸಿನಲ್ಲಿದ್ದಾಗ ಉತ್ತಮ ಉದ್ಯೋಗಿಯಾಗಿ ಹೀಗೆ ಪ್ರತಿ ಹಂತದಲ್ಲೂ ಅದೇ ಆಗಿ ಕಾರ್ಯ ನಿರ್ವಹಿಸಬೇಕಿದೆ ಇದೆಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದರಲ್ಲೇ ನಮ್ಮ ಶಕ್ತಿ ಅಡಗಿರುತ್ತೆ. ಆಫೀಸಿನಲ್ಲಿ ಟೆನ್ಷನ್ ಅಂತ ಮನೆಯಲ್ಲಿ ಹೆಂಡತಿ ಮೇಲೆ ಕೂಗಾಡಿದರೆ ಏನಾದರೂ ಬಗೆಹರಿಯಲು ಸಾಧ್ಯವಾ,,, ಈ ಪಾತ್ರ ನಿರ್ವಹಣೆಯಲ್ಲಿ ಪಾಸಾದವರು ಜೀವನದಲ್ಲು ಪಾಸಾಗಬಹುದು, ಇಲ್ಲಿ ವಿಫಲರಾದವರು ಜೀವನದಲ್ಲೂ ವಿಫ¯ರಾಗುವ ಅಪಾಯವಿದೆ.
ನಾವು ಹೇಳ್ತೀವಿ ನಮಗೆ ಸಮಯವಿಲ್ಲ ಅಂತ. ಆದರೆ ನಾವೆಲ್ಲರೂ ನೆನಪಿನಲ್ಲಿಡಬೇಕಾದ್ದು ಎಲ್ಲ ದೊಡ್ಡ ದೊಡ್ಡ ಸಾಧಕರಿಗೂ ಇದ್ದದ್ದು ನಮ್ಮಷ್ಟೆ ಸಮಯ. ಒಂದು ಸಣ್ಣ ಉದಾಹರಣೆ ಹೇಳಬೇಕೆಂದರೆ ನಮ್ಮೆಲ್ಲರ ಸ್ಪೂರ್ತಿ ಪೂರ್ಣ ಚಂದ್ರ ತೇಜಸ್ವಿ. ಅವರು ಎಂದಿಗೂ ಒಂದಕ್ಕೊಂದು ಬೆರೆಸಿ ಬ್ಯುಸಿ ಲೈಫ್ ಎಂದವರಲ್ಲ. ಆದರೆ ಈ ಮೇಲೆ ಹೇಳಿದ ಕಂಪಾರ್ಟ್‍ಮೆಂಟ್ ಮಾಡಿಕೊಳ್ಳುವುದನ್ನು ಚೆನ್ನಾಗಿ ರೂಢಿಸಿಕೊಂಡಿದ್ದರು. ಅವರು ಬರೆಯಲು ಕುಳಿತರೆಂದರೆ ಯಾರೂ ಅವರನ್ನು ಡಿಸ್ಟರ್ಬ್ ಮಾಡುತ್ತಿರಲಿಲ್ಲ. ಕಂಪ್ಯೂಟರ್ ರಿಪೇರಿ ಮಾಡುವಾಗಲೂ ಅವರಿಗೆ ಅಷ್ಟೆ ತಲ್ಲೀನತೆ. ಒಮ್ಮೆ ಮನಸು ಮಾಡಿ ಮೀನು ಹಿಡಿಯಲು ಕುಳಿತರೆಂದರೆ ಮನೆಯಲ್ಲಿ ಏನಾಯ್ತು ಯಾಕಾಯ್ತು ಎಂಬ ಚಿಂತೆ ಮಾಡುತ್ತಿರಲಿಲ್ಲ, ಯಾವುದೋ ಹಕ್ಕಿಯ ಜಾಡು ಹಿಡಿದು ಫೋಟೋ ತೆಗೆಯಲು ನಿರ್ಧರಿಸಿದರೆಂದರೆ ಇತ್ತ ಸರ್ಕಾರವೇ ಉರುಳಿಹೋಗುತ್ತಿದೆ ಎಂದರೂ ತಲೆಕೆಡಿಸಿಕೊಂಡವರಲ್ಲ. ಹೀಗೆ ಯಾವುದನ್ನು ಮಾಡಿದರು ಅಷ್ಟೇ ತಲ್ಲೀನತೆ ಅವರಿಗಿತ್ತು. ಒಮ್ಮೆ ಉದಯ ಟಿವಿಯವರು ಸಂದರ್ಶನವೊಂದಕ್ಕಾಗಿ ಕಷ್ಟಪಟ್ಟು ಒಪ್ಪಿಸಿದ್ದರು. ಶೂಟಿಂಗ್ ಗಾಗಿ ಒಂದು ಗಂಟೆ ಕಾಲಾವಕಾಶವನ್ನೂ ಪಡೆದರು. ಅದಕ್ಕೂ ಮೊದಲೆ ಅಲ್ಲಿ ಹೋಗಿ ತೇಜಸ್ವಿ ದಂಪತಿಯವರನ್ನು ಕಂಡು ಮಾತನಾಡಿಸಿ ಕೆಲಸ ಆರಂಭಿಸಿದರು. ಇವರು ಲೈಟ್ ಸೆಟ್ ಮಾಡಿಕೊಂಡು ಹಾಗೆ ಹೀಗೆ ಮಾಡುವುದರೊಳಗೆ ಇವರು ಪಡೆದಿದ್ದ ಸಮಯ ಮುಗಿದೇ ಹೋಗಿತ್ತು. ತೇಜಸ್ವಿಯವರು ತಮ್ಮಪಾಡಿಗೆ ತಾವು ಏನೂ ಹೇಳದೆ ಪಕ್ಕದ ಕೋಣೆಗೆ ಹೋಗಿ ಬರೆಯಲಾರಂಭಿಸಿದರು. ಎಲ್ಲ ಸಿದ್ಧತೆ ಮುಗಿದ ನಂತರ ಎಸ್,ಎಲ್,ಎನ್ ಸ್ವಾಮಿಯವರು ತೇಜಸ್ವಿಯವರನ್ನು ಕರೆಯಲು ಹೋದರು. ಅತ್ತಕಡೆಯಿಂದ ಬಂದ ಉತ್ತರ ಯಾರು ನೀವು?,,,,, ಅಷ್ಟೇ ಸ್ವಾಮಿಯವರು ಬೆವೆತು ಹೋಗಿದ್ದರು. ಮತ್ತೆ ಪರಿಚಯ ಹೇಳಿಕೊಂಡು ಕರೆದಾಗ ನಿಮಗೆ ಕೊಟ್ಟ ಸಮಯ ಮುಗಿದಿದೆ, ನನಗೀಗ ಬೇರೆ ಕೆಲಸವಿದೆ ಎಂದರು ಆನಂತರ ಶೂಟಿಂಗ್ ಗಾಗಿ ಗೋಗರೆಯಬೇಕಾಯ್ತು.
ಇಲ್ಲಿ ನಾವು ಗಮನಿಸಬೇಕಿರುವುದು, ತೇಜಸ್ವಿಯವರು ಬರೆಯಲು ಕುಳಿತ ನಂತರ ಈ ಗುಂಪು ಅಲ್ಲಿ ಏನು ಮಾಡುತ್ತಿದೆ ಎಂಬುದೇ ಅವರ ಗಮನಕ್ಕಿರಲಿಲ್ಲ. ಸ್ವಾಮಿಯವರನ್ನು ಸ್ವಾಭಾವಿಕವಾಗಿಯೇ ನೀವ್ಯಾರು ಎಂದು ಕೇಳಿದ್ದರು. ಅಷ್ಟರಮಟ್ಟಿಗೆ ಅವರು ಸಮಯವನ್ನು ವಿಭಾಗಿಸಿಕೊಳ್ಳುತ್ತಿದ್ದರು. ಅವರು ಸಕ್ಸಸ್‍ಫುಲ್ ತಂದೆ, ಒಳ್ಳೆಯ ಗಂಡ ಉತ್ತಮ ಪ್ರಜೆ , ಸಾಧಕ ಎಲ್ಲವೂ ಆಗಿದ್ದೂ ಅವರಿಗೆ ಗುದ್ದಲಿ ಹಿಡಿದು ತೋಟದಲ್ಲಿ ಕೆಲಸ ಮಾಡುವಷ್ಟು ಸಮಯವಿತ್ತು. ಪಂಚರ್ ಅಂಗಡಿಯ ಹುಡುಗನೊಂದಿಗೆ ಹರಟೆಹೊಡೆದು ಇಂಟ್ರೆಸ್ಟಿಂಗ್ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವಿತ್ತು. ಈಗ ಯೋಚಿಸಿ ನಮಗೆ ಯಾಕೆ ಸಮಯವಿಲ್ಲ.
ಬದುಕೇ ಹಾಗೆ ಇಲ್ಲಿ ಯಾವುದು ಮುಖ್ಯ ಎಂಬ ಪ್ರಶ್ನೆಯ ಮೇಲೆ ನಾವು ಮಾಡುವ ಕೆಲಸ ನಿರ್ಧರಿತವಾಗುತ್ತದೆ. ಹೀಗೆ ಬ್ಯುಸಿಲೈಫ್ ಲೀಡ್ ಮಾಡ್ತಾ ಹೋದವರು ಯಾವತ್ತೋ ಒಂದುದಿನ ಹಿಂದೆ ತಿರುಗಿ ನೋಡಿದರೆ ಎಲ್ಲವೂ ಖಾಲಿ ಖಾಲಿ ಅನ್ನಿಸಬಹುದು, ಯಾತಕ್ಕಾಗಿ ಇದೆಲ್ಲವನ್ನೂ ಮಾಡುತ್ತೇವೆಯೋ ಅದನ್ನೇ ಕಳೆದುಕೊಂಡಿರುತ್ತೇವೆ. ಯಾವುದೋ ಕಂಪಡನಿಗಾಗಿ ಹಗಲು ರಾತ್ರಿ ದುಡಿದವನು ಕಂಪನಿಯಿಂದ ಹೊರಬಂದಾಗ ಕಂಪನಿಗೆ ಆತ ಯಾರೆಂದು ನೋಡುವಷ್ಟೂ ಸಮಯವಿರಲ್ಲ, ಶ್ರಧ್ದೆಯಿಂದ ಸರ್ಕಾರಿ ಕೆಲಸಮಾಡಿದವರು ನಿವೃತ್ತರಾದ ನಂತರ ಅವರಿಗೊಂದು ಥ್ಯಾಂಕ್ಸ್ ಹೇಳುವವರೂ ಇರುವುದಿಲ್ಲ ಹಾಗಾದರೆ ಇದೆಲ್ಲವನ್ನೂ ಯಾರಿಗಾಗಿ ಮಾಡಿದೆಎನಿಸದೇ ಇರಲಾರದು. ಕಳೆದುಕೊಂಡ ಸಮಯಕ್ಕಾಗಿ ಎಂದೋ ಪರಿತಪಿಸುವುದಕ್ಕಿಂತ ಇಂದೇ ಎಚ್ಚೆತ್ತುಕೊಂಡ್ರೆ ಒಳ್ಳೇದಲ್ವಾ, ಎಷ್ಟೋ ಬಾರಿ ನಾವು ತಲುಪುವ ಗುರಿಗಿಂತ ನಾವು ಕ್ರಮಿಸುವ ದಾರಿಯೂ ಮುಖ್ಯವಾಗುತ್ತೆ, ನಾನು ಹೇಳಬೇಕಾದುದು ಇಷ್ಟೆ ಮುಂದಿನದು ನಿಮಗೆ ಬಿಟ್ಟದ್ದು . ಇದು ನನ್ನನ್ನೂ ಸೇರಿದಂತೆ ಹಲವರ ಆತ್ಮವಿಮರ್ಶೆಯಾಗಿರಬಹುದು.
( ಲೇಖಕರು : ದರ್ಶನ್ ಆರಾಧ್ಯ-8495980857)