ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು
- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243