ಅಂತರಂಗ

ಮೋಹನಸ್ವಾಮಿ ರಂಗಪ್ರಯೋಗ

Published

on

ಅಲ್ಲಾ, ಈ ಹುಡುಗ- ಹುಡುಗ ಸಂಬಂಧ, ಹುಡುಗಿ- ಹುಡುಗಿ ಸಂಬಂಧ ಆಥವಾ ಇಂಗ್ಲಿಷಿನಲ್ಲಿ ಅಂತೀವಲ್ಲ ಗೇ- ಲೆಸ್ಬಿಯನ್ ಸಂಬಂಧ ನಿಜಕ್ಕೂ ಹೇಗಿರತ್ತೆ? ಅದು ಬರೀ ಕಾಮವಾ? ಪ್ರೇಮವೂ ಹೌದ? ಈ ಎಲ್ಲಾ ಪ್ರಶ್ನೆಗಳು ಆಗಾಗ ನನ್ನ ಮನಸಿನಲ್ಲಿಯೂ ಕೊರೀತಿದ್ದುದು ನಿಜ. ಈ ಬಗ್ಗೆ ಕೆಲವು ಲೇಖನ ಓದಿ ಯೋಚಿಸಿದ್ದರೂ ಮನಸನ್ನು ತಾಕಿರಲಿಲ್ಲ. ಹಿಜಡಾಗಳ ಬದುಕಿನ ಬಗ್ಗೆಯಾದರೂ ಇತ್ತೀಚಿನ ದಿನಗಳಲ್ಲಿ ಬಂದ ಕೆಲವು ಆತ್ಮಕತೆಗಳು, ಸಿನಿಮಾ ನೋಡಿ ತಿಳಿದಿತ್ತು. ಗೇ- ಲೆಸ್ಬಿಯನ್ ಕುರಿತ ಸಿನಿಮಾಗಳನ್ನ ಇದುವರೆಗೆ ನೋಡುವ ಅವಕಾಶವೂ ಆಗಿರಲಿಲ್ಲ.

ಇವತ್ತು “ಮೋಹನಸ್ವಾಮಿ” ಎಂಬ ರಂಗಪ್ರಯೋಗ ನೋಡಿದ ಮೇಲೆ ನನ್ನ ಪ್ರಶ್ನೆಗೆ ಕೆಲ ಉತ್ತರ ಸಿಕ್ಕಿದರೆ ಮತ್ತಷ್ಟು ಪ್ರಶ್ನೆಗಳು‌ ಹುಟ್ಟಿಕೊಂಡು ಈಗ ವಸುಧೇಂದ್ರ ಅವರ “ಮೋಹನಸ್ವಾಮಿ” ಕೈಲಿಡಿದುಕೊಂಡಿದ್ದೇನೆ. ಮಣಿಪಾಲದ ‘ಮಿಲ್ಪ” ಸಾಹಿತ್ಯ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೆಳೆಯ ಮಹದೇವ ಹಡಪದ ಅವರ ಆಟ-ಮಾಟ ರಂಗ ತಂಡದ ‘ಮೋಹನಸ್ವಾಮಿ’ ನನ್ನಂತೆಯೇ ಇನ್ನೂ ಹಲವರ ಮನಸ್ಸು ಕದಲಿಸಿತು.

ಮೋಹನಸ್ವಾಮಿ ಒಬ್ಬ ಗೇ. ತನ್ನ ಸಂಗಾತಿ ಕಾರ್ತಿಕನೊಂದಿಗಿನ ಅವನ ಸಂಬಂಧ ಹೊರ ಪ್ರಪಂಚದ ಬಹುತೇಕರ ಸಂಬಂಧಗಳ ವ್ಯಾಕರಣಕ್ಕೆ ಭಿನ್ನವಾದುದು. ಆ ಸಂಬಂಧದಲ್ಲಿ ಇರುವ ಅವರಿಗೆ ಅದು ತೀರಾ ಸಹಜವಾದುದು. ಒಬ್ಬ ಹುಡುಗ ಹುಡುಗಿಯ ನಡುವಿನ ಒಂದು ಸಂಬಂಧ ಯಾವೆಲ್ಲಾ ಮಜಲುಗಳನ್ನು ಹೊಂದಿರಲು ಸಾಧ್ಯವೋ ಆ ಎಲ್ಲವೂ ಇದೆ. ಅಲ್ಲಿ ಕಾಮ ಇದೆ. ಆದರೆ ಅದು ಮಾತ್ರವಲ್ಲ. ಕಾರ್ತಿಕ “ನನ್ನವನು” ಎಂಬ ಗಾಢ ಪೊಸೆಸಿವ್ ತುಡಿತವಿದೆ, ಕಾರ್ತಿಕನ ಮತ್ತು ತನ್ನ ನಡುವಿನ ಈ ಪ್ರೇಮಸಂಬಂಧವನ್ನು ಶ್ರೀ ಕೃಷ್ಣನೇ ಕಾಪಾಡುತ್ತಾನೆ, ಕಾಪಾಡಬೇಕು ಎಂಬ ಆಶೆಯಿದೆ. ಕಾರ್ತಿಕನ ಇಷ್ಟ ಕಷ್ಟ, ಬೇಕು ಬೇಡಗಳನ್ನು ಅರಿತು ಆತನನ್ನು “ಸಂತೋಷಪಡಿಸಿ” ತಾನೂ ಸಂತೋಷಪಡಬೇಕು ಎಂಬ ಸೇವಾ ಭಾವನೆಯಿದೆ.

ಕೊನೆಗೆ ಕಾರ್ತಿಕ ಸ್ಪರ್ಶಕ್ಕೆ ತೀವ್ರವಾಗಿ ತುಡಿಯುವ, ಅದರಿಂದ ಅಷ್ಟೇ ಪುಳಕಗೊಳ್ಳುವ “ಗೇ ಮನಸು” ಕೂಡಾ ಇದೆ. ಅಲ್ಲಿ ಶೃಂಗಾರವಿದೆ, ವಿರಹವಿದೆ, ಕೋಪ ತಾಪ, ಗಂಡಿನ ಪ್ರತಾಪವೂ ಇದೆ, ಹೆಣ್ಣಿನದೇ ಎನಿಸಿ ಬಿಡುವ ಸಂಕಟವೂ ಇದೆ… ಯಾಕೆ ಅದು ನಮಗೆ ಹೆಣ್ಣಿನದೇ ಎನಿಸುತ್ತದೆ ಎಂದರೆ ಇದುವರೆಗೆ ನಮ್ಮ ಪ್ರಜ್ಞೆಯಲ್ಲಿರುವ ತಿಳಿವಿನ ಮಿತಿಯೇ ಇರಬೇಕು!
ಇಂತಹ ಒಂದು ಕಥಾವಸ್ತುವನ್ನು ರಂಗಕ್ಕೆ ಮಹದೇವನ ಪ್ರಯತ್ನಕ್ಕೆ ಮೆಚ್ಚುಗೆ ಹೇಳಲೇಬೇಕು. ಗೇ ಒಬ್ಬನ ತುಮುಲಗಳನ್ನು ಕಥೆ ಹೇಳುವ ಶೈಲಿಯಲ್ಲಿ ರಂಗರೂಪಕ್ಕೆ ತರುವುದು ಸವಾಲಿನ ಕೆಲಸವೇ ಸರಿ.

ಈಗಾಗಲೇ ಹಲವಾರು ವರ್ಷಗಳಿಂದ ಈ ಕಥೆ ಹೇಳುವ ರಂಗಶೈಲಿಯಲ್ಲಿ ಸಾಕಷ್ಟು ಪಳಗಿರುವ ಮಹದೇವ ಮೋಹನಸ್ವಾಮಿಯನ್ನು ಪ್ರೇಕ್ಷಕರ ಹೃದಯಕ್ಕೇ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಹಂತದಲ್ಲಿ ಅಂತೂ ಮೋಹನ ಸ್ವಾಮಿ ತನ್ನ ಇನಿಯನಿಂದ ದೂರ ಆಗುವಾಗ ಉಂಟಾಗುವ ಆತಂಕ, ದುಃಖಗಳ ಭಾವ ತೀವ್ರತೆಯಂತೂ ತಲ್ಲಣ ಉಂಟು ಮಾಡುತ್ತದೆ. ಅವರ ಅಭಿನಯದ ಜೊತೆಯಲ್ಲಿ ರಂಗದ ಮೇಲೆ ಕಾಣಿಸುವ ಮತ್ತೊಂದು ಪಾತ್ರ ಅದು ಮೋಹನಸ್ವಾಮಿಯ alter ego. (ಸಂಗಮೇಶ ಸೊರಗಾಂವಿ) ಈ ಪಾತ್ರ ಮುಖ್ಯ ಪಾತ್ರಕ್ಕೆ ಪೂರಕವಾಗಿ ಪರಿಣಾಮಕಾರಿಯಾಗಿ ಮೂಡಿಬಂದಿದೆ. ರಂಗದ ಮೇಲಿನ ಒಂದು ಪೇಂಟಿಂಗ್ ಸಹ ಇಡೀ ಕಥೆಯ ಹಂದರವನ್ನು ಪರಿಣಾಮಕಾರಿಯಾಗಿ ಧ್ವನಿಸುತ್ತದೆ. ಕೃಷ್ಣನ ಕೊಳಲು, ನವಿಲುಗರಿಗಳೂ ಅಷ್ಟೇ…. ಒಂದು ಹಂತದಲ್ಲಿ ಮೋಹನಸ್ವಾಮಿ ಕೃಷ್ಣನಿಗೇ ಶಾಪ ನೀಡುತ್ತಾನೆ.

ನಿನ್ನ ಹನ್ನೊಂದನೆಯ ಅವತಾರವಾಗಿ ನೀನೂ ಗೇಯಾಗಿ ಅವತಾರ ತಾಳು, ಆಗ ನಿನಗೆ ನನ್ನ ನೋವು ಅರ್ಥವಾಗುತ್ತದೆ, ಹದಿನಾರು ಸಾವಿರ ಹೆಂಗಳೆಯರ ಸಹವಾಸ ಮಾಡಿದ ನಿನಗೆ ಒಬ್ಬ ಹೆಣ್ಣಿನ ಸಹವಾಸ ಮಾಡಲಾಗದ ನನ್ನ ನೋವೇನೆಂದು ತಿಳಿಯುತ್ತದೆ…” ಎಂಬ ಮೋಹನಸ್ವಾಮಿಯ ಮಾತು ಕೇಳುತ್ತಾ, ನನಗೆ ರೇವತಿಯವರ “ಬದುಕು ಬಯಲು” ಆತ್ಮಕಥೆಯಲ್ಲಿ ಸಹ ದೊರೈಸ್ವಾಮಿ (ರೇವತಿ) ಸಮಯಾಪುರ ದೇವಸ್ಥಾನದಲ್ಲಿ ತನ್ನ ತಲೆ ಬೋಳಿಸುವಾಗ, “ಅಮ್ಮಾ ನನಗ್ಯಾಕೆ ಈ ಸಂಕಟ? ಯಾಕೆ ಇಂತ ಪರೀಕ್ಷೆಗೆ ನನ್ನ ಒಳಪಡಿಸ್ತಿದೀಯ? ನಿನ್ನ ನಂಬಿದವರಿಗೆ ಎಲ್ಲವನ್ನೂ ನೀನು ಕೊಡ್ತೀಯ ಅಂತಾರೆ. ಆದರೆ ನನಗೆ ನೀನು ಕೊಟ್ಟಿರೋದು ನೀನು ಬರೀ ನೋವನ್ನಷ್ಟೆ. ನಾನು ಮಾಡಿರೋ ತಪ್ಪಾದರೂ ಏನು? ಗಂಡಸಿನ ರೂಪದಲ್ಲಿ ಹೆಣ್ಣಿನ್ ಭಾವನೆ ತುಂಬಿ ಸೃಷ್ಟಿ ಮಾಡಿರೋಳು ನೀನೇ. ನಿನ್ನ ತಪ್ಪಿಗೆ ನಿನ್ನದೇ ದೇವಸ್ಥಾನದಲ್ಲಿ ನನಗೆ ಶಿಕ್ಷೆಯಾಗುತ್ತಿದೆ. ನೀನು ಹೆಣ್ಣಲ್ವ? ಇನ್ನೊಂದು ಹೆಣ್ಣಿನ ಭಾವನೆ ನಿನಗೆ ಅರ್ಥ ಆಗಲ್ವ? ನಿನಗೆ ಕನಿಕರ ಇಲ್ವಾ? ಮುಂದಿನ ವರ್ಷ ಇದೇ ದಿನದ ಹೊತ್ತಿಗೆ ನಿನ್ನ ಹಾಗೆ ನನ್ನನ್ನೂ ಹೆಣ್ಣಾಗಿ ಮಾಡ್ಬೇಕು. ಆಗಲಿಲ್ಲ ಆಂದ್ರೆ ಪೂರ‍್ತಿ ಗಂಡಸಾಗಿಯಾದ್ರೂ ಮಾಡೇ…..” ಎಂದು ದೇವಿಗೆ ಇಷ್ಟೇ ಹತಾಶೆ, ನೋವಿನಿಂದ ತನ್ನ ಸಂಕಟವನ್ನು ತೋಡಿಕೊಳ್ಳುವ ದೃಶ್ಯ ತಟಕ್ಕನೆ ನೆನಪಾಯಿತು.

ಮೋಹನಸ್ವಾಮಿಯ ಶಾಪ ಕೃಷ್ಣನಿಗೆ ತಟ್ಟದೇ ಇದ್ದರೂ ಪ್ರೇಕ್ಷಕರನ್ನಂತೂ ಕಲಕದೇ ಇರದು.
ಸಲಿಂಗ ಪ್ರೇಮಿಗಳ ಸಂಬಂಧಗಳ ಆಳ, ಅಗಲಗಳ ಊಹೆಯೂ ಇಲ್ಲದವರಿಗೆ ‘ಮೋಹನ ಸ್ವಾಮಿ’ ಒಂದು ಬಗೆಯ ಶಾಕ್ ನೀಡುತ್ತದಾದರೆ ಇಂತಹ ಒಂದು ಪ್ರಜ್ಞಾಸ್ಥಿತಿಯನ್ನು ಹಂಚಿಕೊಳ್ಳುವವರಿಗೆ ತಮ್ಮದೇ ಅಭಿವ್ಯಕ್ತಿಯೆನಿಸಿ ಇಂತಹ ಒಂದು ಅಭಿವ್ಯಕ್ತಿಗಾದದರೂ ಸಮಾಜದಲ್ಲಿ ಅವಕಾಶವಿದೆಯಲ್ಲಾ ಎನಿಸದಿರದು. ನೆನ್ನೆಯಷ್ಟೇ ಸುಪ್ರೀ ಕೋರ್ಟಿನ ತೀರ್ಪು ಇಂತಹ ಸೊ ಕಾಲ್ಡ್ ಅಸಹಜವಾದ ಆದರೆ ಈ ಬಗೆಯ ಸಂಬಂಧಗಳಲ್ಲಿರುವ ಆಯಾ ಜನರಿಗೆ ಸಹಜವಾಗಿಯೇ ಇರುವ ಸಂಬಂಧಗಳನ್ನು ಮಾನ್ಯ ಮಾಡಿದೆ. ಸಲಿಂಗ ಪ್ರೇಮ ಸಹ ಸಂವಿಧಾನ ಬದ್ಧವೇ ಹೊರತು ಅದನ್ನು ಕಾನೂನು ಬಾಹಿರ ಎಂದು ನೋಡುವ ಅಮಾನವೀಯತೆಯನ್ನು ಸಮಾಜ ಬಿಡಬೇಕು ಎಂಬ ಸಂದೇಶವನ್ನು ಅದು ಸ್ಪಷ್ಟವಾಗಿ ನೀಡಿದೆ. ಇದಕ್ಕೆ ನಿರೀಕ್ಷಿತವಾಗಿಯೇ ಧರ್ಮಗಳ ಗುತ್ತಿಗೆದಾರರು ಏಕಪ್ರಕಾರವಾಗಿ ತಮ್ಮ ಅಸಹನೆ ಹೊರಹಾಕಿರುವುದೂ ವರದಿಯಾಗಿದೆ. ಆದರೆ ಇಂತಹ ವಿಷಯಗಳ ಬಗ್ಗೆ’ ಮೋಹನಸ್ವಾಮಿ’ಯಂತ ಕೃತಿ, ರಂಗಪ್ರಯೋಗಗಳು ಸಮಾಜಕ್ಕೆ ಅತ್ಯಗತ್ಯ ತಿಳಿವು ನೀಡಬಲ್ಲವು, ಸಮಾಜದ ಸಹನಾಬಲವನ್ನು ಹೆಚ್ಚಿಸಬಲ್ಲವು. ನಾಡಿನ ಪ್ರತಿಭಾವಂತ ರಂಗ ನಿರ್ದೇಶಕ ಮತ್ತು ನಟ
ಮಹದೇವ ಹಡಪದ ಮತ್ತು ತಂಡದ ಈ ಪ್ರಯೋಗ ನಾಡಿನಾದ್ಯಂತ ಹೆಚ್ಚು ಪ್ರಯೋಗ ಕಾಣುವಂತಾಗಬೇಕು.

  • ಹರ್ಷಕುಮಾರ್ ಕುಗ್ವೆ, ಪತ್ರಕರ್ತರು, ಉಡುಪಿ

Leave a Reply

Your email address will not be published. Required fields are marked *

Trending

Exit mobile version