ಭಾವ ಭೈರಾಗಿ
ಯುದ್ಧ ಬೇಕಾ ಯುದ್ದ ?
ಈಗ ಎಲ್ಲೆಲ್ಲೂ ಯುದ್ಧದ ಕುರಿತೇ ಮಾತು. ನಮ್ಮ ಸಾಮಾಜಿಕ ಜಾಲತಾಣಗಳಂತೂ ಈಗ ಶುದ್ಧ ಕಸದ ತೊಟ್ಟಿಗಳಾಗಿವೆ. ಫೇಸ್‍ಬುಕ್ಕು ವಾಟ್ಸಾಪ್‍ಗಳು ನಮಗೆ ಬೇಕಿರುವುದು, ಬೇಡದಿರುವುದು, ನಮ್ಮ ಕೋಪ, ಅಸಹನೆ, ತಂತ್ರ, ಕುತಂತ್ರಗಳನ್ನು ಭಿತ್ತುವ ಮಹಾ ವೇಧಿಕೆಗಳಾಗಿವೆ. ಇನ್ನೂ ದುರಂತವೆಂದರೆ ಯುದ್ಧವನ್ನು ಬಯಸುತ್ತೇವೋ ಇಲ್ಲವೊ ಎಂಬುದು ನಮ್ಮ ದೇಶ ಭಕ್ತಿಯನ್ನಳೆಯುವ ಅಳತೆಗೋಲಾಗಿಬಿಟ್ಟಿದೆ. ಯುದ್ಧ ಬೇಕು ಪಾಕಿಸ್ತಾನದ ರಕ್ತ ಕುಡಿಯಬೇಕು ಎನ್ನುವವರನ್ನು ದೇಶಭಕ್ತರೆಂದೂ, ಯುದ್ಧ ಬೇಡ ಎಂದವರನ್ನು ದೇಶ ದ್ರೋಹಿಗಳೆಂದೂ ಪರಿಗಣಿಸುವ ಅಪಾಯಕಾರಿ ಬೆಳವಣಿಗೆಗಳಾಗುತ್ತಿವೆ, ಶಾಂತಿಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವ ಮಾತನಾಡಿದವರನ್ನು ಪಾಕಿಸ್ತಾನಕ್ಕೆ ಕಳಿಸಬೇಕೆಂದೂ ಕೆಲವರು ಬೊಬ್ಬೆಹೊಡೆಯುತ್ತಿದ್ದಾರೆ.
ಹಿಂದುಸ್ಥಾನ್ ಜಿಂದಾಬಾದ್ ಎನ್ನುವುದಕ್ಕಿಂತಲೂ ಮುರ್ದಾಬಾದ್ ಎನ್ನುವುದೇ ನಮ್ಮ ದೇಶಭಕ್ತಿಯ ಸರ್ಟಿಫಿಕೇಟ್ ಆದಂತಿದೆ. ಖಂಡಿತವಾಗಿಯೂ ಇದೊಂದು ಸಮೂಹ ಸನ್ನಿಯಲ್ಲದೇ ಮತ್ತೇನು? ದೇಶಭಕ್ತಿ, ದೇಶಾಭಿಮಾನ ಎಂಬ ಪ್ಲೇ ಕಾರ್ಡ್ ಹಿಡಿದವರಿಗಂತೂ ತಾವು ಹೇಳಿದ್ದೇ ಸತ್ಯ ಎಂಬ ಅದಾವುದೋ ಭಾವ ನೆತ್ತಿಗೇರಿದೆ. ಅವರಿಗೆ ಸಂಯಮ ತಂದುಕೊಳ್ಳುವಂತೆ ಹೇಳಹೊರಟರೆ ಅಂಥವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತದೆ. ಮೊದಲೇಹೇಳಿಬಿಡುತ್ತೇನೆ ನಾನಿದನ್ನು ಬಿಜೆಪಿ, ಕಾಂಗ್ರೆಸ್ ಎಂಬ ಪಕ್ಷಗಳನ್ನಾಗಲೀ ಅಥವಾ ಎಡ,ಬಲ ಪಂಥಗಳನ್ನಾಗಲೀ ಮನಸಿನಲ್ಲಿಟ್ಟುಕೊಂಡು ಬರೆದಿಲ್ಲ. ಕೇವಲ ಯುದ್ಧದ ಕುರಿತು ಮಾತ್ರ ಮಾತನಾಡುತ್ತಿದ್ದೇನೆ.
ಸ್ವಲ್ಪ ಯೋಚಿಸಿ ನೋಡಿ. ಯುದ್ಧ ಯಾರಿಗೆ ಬೇಕು? ಯುದ್ಧದಿಂದ ನಾವು ಪಡೆದುಕೊಳ್ಳುವುದೇನಿದೆ? ಖಂಡಿತ ಏನೂ ಇಲ್ಲ ಆದರೆ ನಾವು ಕಳೆದುಕೊಳ್ಳುತ್ತೇವೆ, ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾವಿರಾರು ಸೈನಿಕರನ್ನು ನಾವು ಕಳೆದುಕೊಳ್ಳುತ್ತೇವೆ. ನಮ್ಮ ನಮ್ಮ ಮಾನಸಿಕ ಗೀಳುಗಳಿಗಾಗಿ ನಮ್ಮ ಹೆಮ್ಮೆಯ ಸೈನಿಕರನ್ನು ಬಲಿಕೊಡಲು ಯಾಕೋ ಮನಸ್ಸು ಒಪ್ಪುತ್ತಿಲ್ಲ . ಹಿಂದಿನ ಯುದ್ಧಗಳ ಇತಿಹಾಸವನ್ನೊಮ್ಮೆ ನೆನಪಿಸಿಕೊಳ್ಳಿ ಯಾವ ಯುದ್ಧಗಳೂ ಸೈನಿಕರ ಸಾವಿಲ್ಲದೇ ಮುಕ್ತಾಯವಾಗಿಲ್ಲ. ಯಾವ ಯುದ್ಧದಿಂದಲೂ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ. ಅದು 1962 ಭಾರತ ಆಗತಾನೆ ಗಟ್ಟಿಗೊಳ್ಳುತ್ತಿದ್ದ ಸಮಯ, ನೆರೆಯ ಚೀನಾದಂತ ಚೀನಾ ಮೇಲೆ ಯುದ್ಧ ಮಾಡಬೇಕಾಯ್ತು ಆ ಇಂಡೋ ಚೀನಾ ಯುದ್ಧದಲ್ಲಿ ನಾವು ಹಸಿಹಸಿ ಕನಸೊತ್ತ 1385 ಸೈನಿಕರನ್ನು ಕಳೆದುಕೊಳ್ಳಬೇಕಾಯ್ತು. ಮತ್ತೆ 1965ರಲ್ಲಿ ಪಾಕಿಸ್ತಾನ ನಮ್ಮ ವಿರುದ್ಧ ಕಾಲ್ಕೆರೆಯಿತು, ಆಗ ನಡೆದ ಯುದ್ಧದಲ್ಲಿ 3000 ಕುಟುಂಬಗಳು ತಮ್ಮ ಆಧಾರ ಸ್ಥಂಬಗಳನ್ನು ಕಳೆದುಕೊಂಡು ಕಂಗಾಲಾಗಬೇಕಾಯ್ತು. ಪಾಕಿಸ್ತಾನದ ಸೊಂಟ ಮುರಿದು ಇಬ್ಬಾಗ ಮಾಡಿದ ಸಮಯ 1971.
ಅದು ಸುಲಭಕ್ಕೆ ನಡೆದ ಕೆಲಸವಲ್ಲ, ನಾನು ಮತ್ತೆ ಯುಗಾದಿಗೆ ಬರ್ತೇನೆ, ಮುಂದಿನಬಾರಿ ಅಮ್ಮನಿಗೆ ಸೀರೆ ತರ್ತೇನೆ, ಇನ್ನೇನು ಎರಡೇ ತಿಂಗಳ ಡ್ಯೂಟಿ ಮುಗಿಸಿ ಊರಿಗೆ ಬಂದು ಅಮ್ಮನ ಸೇವೆ ಮಾಡಿಕೊಂಡಿರ್ತೇನೆ, ಹೀಗೆ ಎದೆಷ್ಟೋ ಭರವಸೆಯ ಮಾತುಗಳನ್ನು ಕುಟುಂಭದವರಿಗೆ ನೀಡಿ ಬಂದಿದ್ದ 3843ಜನ ಸೈನಿಕರು ನೋಡನೋಡುತ್ತಿದ್ದಂತೆಯೇ ಶತೃಗಳ ಗುಂಡಿಗೆ ಎದೆಕೊಡಬೇಕಾಯ್ತು. ಇನ್ನು 1999ರ ಕಾರ್ಗಿಲ್ ಕದನ. ಹಿಂದಿನ ದಿನವಷ್ಟೇ ಅಮ್ಮನಿಗೆ ಪತ್ರಬರೆದವರು, ಎರಡು ತಿಂಗಳ ಹಿಂದಷ್ಟೇ ಮದುವೆಯಾದವರ, ಇನ್ನೂ ನೋಡಿರದ ತನ್ನ ಕಂದಮ್ಮನ ಸುತ್ತ ಕನಸು ಹೆಣೆದವರೂ ಸೇರಿ ಸತ್ತ ಸೈನಿಕರ ಸಂಖ್ಯೆ 528. ಇಂದೋ ನಾಳೆಯೋ ಯುದ್ಧವಾದರೆ ಮತ್ತೆ ನಾವು ಕಳೆದುಕೊಳ್ಳುವ ಸಂಖ್ಯೆ ದೊಡ್ಡದಾಗುತ್ತದೆಯೇ ಹೊರತು ಚಿಕ್ಕದಾಗುವುದಿಲ್ಲ.
ನೆನಪಿರಲಿ ಗೆಳೆಯರೇ ಈಗ ಯುದ್ಧವಾದರೆ ಸಾಯುವವರು ದೇಶ ಕಾಯುವ ಸೈನಿಕರೇ ಹೊರತು, ಫೇಸ್ ಬುಕ್ಕಿನಲ್ಲಿ ಪೋಸ್ಟ್ ಹಾಕುವ ನಾವು ನೀವಲ್ಲ, ಒಂದು ಹನಿರಕ್ತಕ್ಕೆ ಹತ್ತು ಹೆಣ ಕೆಡವುತ್ತೇನೆಂದು ಪ್ರತಿಜ್ಞೆ ಮಾಡುವ ರಾಜಕಾರಣಿಗಳೂ ಅಲ್ಲ. ಗೊತ್ತಿರಲಿ ಯುದ್ಧದ ನಂತರ ನಾವು ಮತ್ತೆ ಫೇಸ್ ಬುಕ್ಕಿನಲ್ಲಿ ಸತ್ತವರ ಲೆಕ್ಕ ಹೇಳುತ್ತೇವೆ, ಅವರಿಗೆ ಶ್ರದ್ಧಾಂಜಲಿ ಕೋರಿ ಪೋಸ್ಟ್ ಹಾಕುತ್ತೇವೆ ಮತ್ತು ನಮ್ಮ ಜನನಾಯಕರು ಅವರ ಸಾವಿನ ಸೇಡುತೀರಿಸಿಕೊಳ್ಲಲು ಮತ್ತೊಂದು ಅವಕಾಶ ಕೊಡಿ ಎಂದು ಓಟು ಕೇಳಲು ಬರುತ್ತಾರೆ. ಯುದ್ಧದ ಕುರಿತಂತೆ ರೂಸ್ ವೆಲ್ಟ್ ಹೇಳಿದ ಮಾತೊಂದು ಈಗ ನೆನಪಾಗುತ್ತಿದೆ . “ಯುದ್ದವೆಂದರೆ ಯುವಕರು ಸಾಯುವುದು ಮತ್ತು ಹಿರಿಯರು ಭಾಷಣಮಾಡುವುದೆ ಹೊರತು ಮತ್ತೇನು ಅಲ್ಲ.”
ನಾನೊಬ್ಬ ಪತ್ರಕರ್ತನಾಗಿ ಸಾಕಷ್ಟುಜನ ಸೈನಿಕರನ್ನೂ, ಮತ್ತು ಸೈನಿಕರ ಕುಟುಂಬಗಳನ್ನೂ ಹತ್ತಿರದಿಂದ ಬಲ್ಲೆ, ಅವರಲ್ಲಿ ರಕ್ತದಾಹಿಗಳಿಲ್ಲ, ಸಾವಿಗಾಗಿ ಹಪಹಪಿಸಿದವರಿಲ್ಲ, ಕೊಂದು ಸೇಡುತೀರಿಸಿಕೊಳ್ಳಿ ಎಂದು ಯಾರೂ ಕೇಳಲಿಲ್ಲ. ಹಾಗಾದರೆ ಪಾಕಿಸ್ತಾನವನ್ನು ಸುಮ್ಮನೇ ಬಿಡಬೇಕಾ? ಖಂಡಿತಾ ಇಲ್ಲ. ಪಾಕಿಸ್ತಾನವಷ್ಟೇ ಅಲ್ಲ ಜಗತ್ತಿನ ಯಾವುದೇ ರಾಷ್ಟ್ರವಾಗಿರಲಿ ಭಾರತದ ಆತ್ಮಗೌರವವನ್ನು ಕೆಣಕಿದರೆ ಸುಮ್ಮನೇ ಬಿಡಬೇಕಿಲ್ಲ, ಮತ್ತು ನಾವು ಹಾಗೆ ಕೆಣಕಿದವರನ್ನು ಸುಮ್ಮನೇ ಬಿಟ್ಟ ಉದಾಹರಣೆಗಳೂ ಇಲ್ಲ. ಆದರೆ ನೆನಪಿರಲಿ ಈಗ ನಾವು ಕಾದಾಡಬೇಕಿರುವುದು ಪಾಕಿಸ್ತಾನದ ವಿರುದ್ಧವಲ್ಲ ಬದಲಾಗಿ ಭಯೋತ್ಪಾದನೆಯ ವಿರುದ್ಧ. ಪುಲ್ವಾಮಾದಲ್ಲಿ ಸೈನಿಕರ ರಕ್ತಹರಿಸಿದವರು ಭಯೋತ್ಪಾದಕರೇ ಹೊರತು ಪಾಕಿಸ್ತಾನದ ಸೈನಿಕರಲ್ಲ, ನಿಮಗೆ ಗೊತ್ತಿರಲಿ, ಪುಲ್ವಾಮಾ ಘಟನೆಯನ್ನು ಭಾರತದಂತೆಯೇ ಪಾಕಿಸ್ತಾನವೂ ಕೂಡ ಸಂಸತ್ ನಲ್ಲಿ ಖಂಡಿಸಿದೆ.
ಹಾಗಂತ ನಾವು ಪಾಕಿಸ್ತಾನವನ್ನು ಅಪ್ಪಿ ಮುದ್ದಾಡಬೇಕಿಲ್ಲ. ನಮ್ಮ ತಂಟೆಗೆ ಬಂದಾಗ ಕೈಕಟ್ಟಿ ಕೂರಬೇಕಿಲ್ಲ. ಬದಲಿಗೆಅದರ ರಕ್ತಕುಡಿಯಲು ಹಾತೊರೆಯುವುದರಲ್ಲೂ ಅರ್ಥವಿಲ್ಲ. ಹಾಗಾದರೆ ಮಾಡಬೇಕಿರುವುದೇನು? ದೇಶದ ಮೂಲೆ ಮೂಲೆಯಲ್ಲಡಗಿರುವ ಭಯೋತ್ಪಾದಕರನ್ನು ಮಟ್ಟಹಾಕವುದು ನಮ್ಮ ಗುರಿಯಾಗಬೇಕು. ಆನಿಟ್ಟಿನಲ್ಲಿ ನಾವು ನಮ್ಮ ಸರ್ಕಾರಗಳಿಗೆ ಒತ್ತಡಹೇರಬೇಕೇ ವಿನಃ ಯುದ್ಧ ಮಾಡಲಲ್ಲ. ಭಾರತ ಶಾಂತಿಪ್ರಿಯ ರಾಷ್ಟ್ರ. ಈ ದೇಶಕ್ಕೆ ತನ್ನದೇ ಆದ ಇತಿಹಾಸವಿದೆ, ಭಾರತ ಯಾರ ಮೇಲೂ ಕಾಲ್ಕೆರೆದು ಯುದ್ಧ ಮಾಡಿದ ಉದಾಹರಣೆಗಳಿಲ್ಲ, ಯಾವುದೋ ಉನ್ಮಾದದಲ್ಲಿ ಭಾರತ ಯುದ್ಧ ಘೋಷಣೆ ಮಾಡುವುದಿಲ್ಲ. ನಾವು ಗಾಂಧಿಯನ್ನು ನೆನಪಿಟ್ಟುಕೊಂಡಿದ್ದೇವೋ ಇಲ್ಲವೋ ಗೊತ್ತಿಲ್ಲ ಆದರೆ ಅಂತ ಗಾಂಧಿಯಂತ ಗಾಂಧಿ ಹುಟ್ಟಿದ ನೆಲದವರು ನಾವು. ನಮ್ಮ ರಾಷ್ಟ್ರಧ್ವಜದ ಬಿಳಿಯ ಬಣ್ಣ ಶಾಂತಿ ಸಂಕೇತ ಎಂದು ನಾವು ಹೇಳಿಕೊಳ್ಳುತ್ತೇವೆ ಆದರೆ ಈಗ ನಾವು ನಡೆದುಕೊಳ್ಳುತ್ತಿರುವ ರೀತಿ ಯಾವುದು? ತಾನಾಗೆ ಬಂದ ಯಾರನ್ನೂ ಸುಮ್ಮನೇ ಉಳಿಸಿದ ಉದಾಹರಣೆಗಳೂ ಇತಿಹಾಸದ ಯಾವ ಮೂಲೆಯಲ್ಲೂ ಸಿಗುವುದಿಲ್ಲ. ನಮ್ಮ ಸೈನಿಕರಿರುವುದು ಕಾಯುವುದಕ್ಕೇ ಹೊರತು ಯಾರನ್ನೋ ಕೊಲ್ಲುವುದಕ್ಕಲ್ಲ. ರಕ್ಷಿಸುವ ಕೈಗಳನ್ನು ರಕ್ತ ಕುಡಿಯುವಂತೆ ಒತ್ತಾಯಿಸಬೇಕಿಲ್ಲ. ಕೊನೆಯದಾಗಿ ಯುದ್ಧದ ಕುರಿತು ಧೀರ ಯೋಧ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಕೆ. ಉನ್ನಿಕೃಷ್ಣನ್ ಹೇಳಿರುವ ಮಾತುಗಳನ್ನು ಯಥಾವತ್ತಾಗಿ ಹೇಳುತ್ತೇನೆ ಕೇಳಿ,
ನಾವೀಗ ಒಂದು ಸುಧೀರ್ಘದಾರಿಯ ದೊಡ್ಡ ತಿರುವಿನಲ್ಲಿದ್ದೇವೆ. ನಾವು ಪಾಕಿಸ್ತಾನದೊಂದಿಗೆ ಗುದ್ದಾಟದಲ್ಲಿಲ್ಲ, ಭಯೋತ್ಪಾದಕರೊಂದಿಗಿನ ಗುದ್ದಾಟದಲ್ಲಿದ್ದೇವೆ ಎಂದು ಹಲವರು ಹೇಳುತ್ತಾರೆ ಅದೇನೇ ಇರಲಿ, ದೇಶದಲ್ಲಿ ಏನಾಗುತ್ತಿದೆ ಎಂದು ನಾನು ಸುಮ್ಮನೇ ಗಮನಿಸುತ್ತಿದ್ದೇನೆ. ಈಗಾಗುತ್ತಿರುವ ಬೆಳವಣಿಗೆಗಳಿಂದ ಪಾಕಿಸ್ತಾನ ಏನನ್ನೂ ಕಳೆದುಕೊಳ್ಲುತ್ತಿಲ್ಲ, ಅವರು ಕಳೆದುಕೊಳ್ಳುತ್ತಿರುವುದು ಸಾಯಲು ಸಿದ್ದವಾಗಿರುವ ಭಯೋತ್ಪಾದಕರನ್ನು ಮಾತ್ರ. ಆದರೆ ನಾವು? ನಾವು ನಮ್ಮ ಭಾರತದ ಹೆಮ್ಮೆಯ ಸೈನಿಕರನ್ನು ಕಳೆದುಕೊಳ್ಲುತ್ತಿದ್ದೇವೆ. ಆ ಭಯೋತ್ಪಾದಕರಿಗೂ ನಮ್ಮ ಸೈನಿಕರಿಗೂ ಎಲ್ಲಿಂದೆಲ್ಲಿಯ ಹೋಲಿಕೆ? ನಾವು ನಮ್ಮ ಶತೃಗಳ ಸಾವನ್ನೂ ಸಂಭ್ರಮಿಸಲಾಗುವುದಿಲ್ಲ, ಅದು ನಮ್ಮ ಭಾರತದ ಸಂಸ್ಕತಿಯೂ ಅಲ್ಲ. ನಾವೀಗ ಬಹಲ ಜಾಗೃತವಾಗಿರಬೇಕು, ನಾವು ಯಾರ ಸಾವನ್ನೂ ಸಂಭ್ರಮಿಸಬಾರದು, ಅದು ನಮ್ಮ ಶತೃವಿನ ಸಾವಾಗಿದ್ದರೂ ಕೂಡ. ಯಾಕೆಂದರೆ ಯಾರ ಮನೆಯಲ್ಲಾದರೂ ಸಾವು ಸಾವೇ.
ಇದು ನನ್ನ ವೈಯಕ್ತಿಕ ಅನಿಸಿಕೆ. ಅನಿವಾರ್ಯತೆ ಬಂದಾಗ ಮಾತ್ರವೇ ನಾವು ಕೊಲ್ಲಬೇಕಾಗುತ್ತದೆ. ನಾವು ತಿಳಿದುಕೊಂಡಿರುವಂತೆ ನಮ್ಮ ಸೈನ್ಯ ಇರುವುದು ಯಾರನ್ನೋ ಕೊಲ್ಲುವುದಕ್ಕಲ್ಲ, ಅವರ ಕರ್ತವ್ಯವೇ ನಮ್ಮನ್ನು ಕಾಯುವುದು. “ನಮ್ಮನ್ನು ಕೊಲ್ಲುವವರಂತೆ ನೋಡಬೇಡಿ, ನಾವು ದೇಶಕ್ಕಾಗಿ ಕೆಲವೊಮ್ಮೆ ಕೊಲ್ಲಬಹುದು ಆದರೆ ನಮ್ಮ ಕೆಲಸ ಕೊಲ್ಲುವುದಲ್ಲ ಬದಲಾಗಿ ದೇಶ ಕಾಯುವುದು, ನಾವು ಅಲ್ಲಿರುವುದು ಯಾರನ್ನಾದರೂ ಕೊಲ್ಲುವುದಕ್ಕಲ್ಲ. ಕೊಲ್ಲುವವರನ್ನು ತಡೆಯುವುದಕ್ಕೆ ಎಂದು ಸಂದೀಪ್ ಉನ್ನಿಕೃಷ್ಣನ್ ಸದಾ ಹೇಳುತ್ತಿದ್ದರು.” ನೆನಪಿರಲಿ ಭಾರತ ತಾನಾಗಿಯೇ ಹೋಗಿ ಯಾರನ್ನೂ ಕೊಂದ ಇತಿಹಾಸವಿಲ್ಲ. ಇದು ಕೆ. ಉನ್ನಿಕೃಷ್ಣನ್ ಅವರ ಮಾತು, ದಯಮಾಡಿ ಸ್ವಲ್ಪ ಯೋಚಿಸಿ.
ಭಾರತ ಬೌದ್ಧಿಕವಾಗಿ ಹಿಂದೆಂದೂ ಕಾಣದಷ್ಟು ಇಬ್ಬಾಗವಾಗುತ್ತಿದೆ. ಅದಕ್ಕೆ ಕಾರಣ ನಮ್ಮ ಸಿದ್ಧಾಂತಗಳು, ಧರ್ಮ, ರಾಜಕೀಯ ಮತ್ತೇನೇನೋ,,, ಈದೇಶದಲ್ಲಿದ್ದುಕೊಂಡು ದೇಶದ್ರೋಹದ ಕೆಲಸ ಮಾಡುವವರಾರನ್ನೂ ಸುಮ್ಮನೆ ಬಿಡಬೇಕಿಲ್ಲ, ಹಾಗೆಂದು ಯಾರದೋ ತಪ್ಪಿಗೆ ಮತ್ತಾರನ್ನೋ ಶಿಕ್ಷಿಸುವುದೂ ತರವಲ್ಲ. ದೇಶದ ಭದ್ರತೆ, ಸೇನೆ, ಸೈನಿಕರ ತ್ಯಾಗ, ದೇಶಭಕ್ತಿಯ ವಿಚಾರಬಂದಾಗ ಎಲ್ಲರೂ ಒಗ್ಗಟ್ಟಾಗಿ ನಿಲ್ಲುತ್ತಾರೆ ಅದು ನಮ್ಮ ದೇಶಧ ಸೌಂದರ್ಯ. ಹಿಂದೆ ಪಾಕಿಸ್ತಾನದ ವಿರುದ್ದ ನಡೆದ ಮೂರೂ ಯುದ್ಧಗಳಲ್ಲೂ ನಾವು ಗೆದ್ದಿದ್ದೇವೆ. ಮತ್ತು ನಾಳೆ ಯುದ್ಧ ನಡೆದರೂ ನಾವು ಗೆಲ್ಲುತ್ತೇವೆ ಅದು ಭಾರತದ ತಾಕತ್ತು. ಮುಂದೆಯು ಅಷ್ಟೆ ಅಧಿಕಾರದಲ್ಲಿ ಕಾಂಗ್ರೆಸ್ ಇರಲಿ ಅಥವಾ ಬಿಜೆಪಿಯಿರಲಿ ನಾವು ದೇಶದ ಪರವಾಗಿರೋಣ. ನೆನಪಿರಲಿ ದೇಶ ಎಂದರೆ ದೇಶದ ಜನರೇ ಹೊರತು ಆಳುವವರು ಮತ್ತು ಪಕ್ಷಗಳಲ್ಲ.
–ದರ್ಶನ್ ಆರಾಧ್ಯ
ಪತ್ರಕರ್ತ
ಸುದ್ದಿದಿನ.ಕಾಂ|ವಾಟ್ಸಾಪ್|9986715401