ಭಾವ ಭೈರಾಗಿ
ಕವಿತೆ | ಒಂದು ಕವಿತೆ ಬರೆದು ಕೊಡಿ
- ಮಾನಸ ಗಂಗೆ
ಹಸಿವನ್ನ ನೀಗಿಸುವ
ಒಂದು ಕವಿತೆ ಬರೆದು ಕೊಡಿ,
ಎರಡ್ಹೊತ್ತು ತಿಂದು
ನಾಳೆಗೊಂದಿಷ್ಟು ಉಳಿಸಿಕೊಳ್ಳುವೆ
ಸಸ್ಯದ್ದೊ ,ಮಾಂಸದ್ದೊ
ಬೆಂದದ್ದೊ ,ಹಸಿ ಹಸಿಯೋ
ಯಾವುದೋ ಒಂದು
ನಾಲ್ಕು ಸಾಲು ಗೀಚಿ ಬಿಡಿ
ನನಗೀಗ ತುಂಬಾ ಹಸಿವಿದೆ
ನೀವು ಬರೆದು ಕೊಟ್ಟ
ಕವಿತೆಗಳ ಕೊನೆಯಲ್ಲಿ
ನಿಮ್ಮ ಹೆಸರನ್ನು ದಯವಿಟ್ಟೂ
ಬರೆಯಬೇಡಿ,
ಹಸಿವಿಗೆ ಋಣಭಾರವನ್ನ
ಹೊರುವ ಶಕ್ತಿ ಇಲ್ಲ
ಇನ್ನೊಂದು ಮನವಿ
ಹಸಿವಿನ ಬಗ್ಗೆ
ಕವಿತೆ ಬರೆಯುವಾಗ
ನೀವು ಸ್ವಲ್ಪ ಹಸಿವನ್ನಿಟ್ಟುಕೊಳ್ಳಿ
ಹೊಟ್ಟೆ ತುಂಬಿದ ಪದಗಳಿಗೆ
ನಿದ್ದೆ ಜಾಸ್ತಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243