ಭಾವ ಭೈರಾಗಿ

ಕವಿತೆ | ಮತ್ತೆ ಬಂದವಳು ಅವಳೇನಾ….?

Published

on

 

ಅದೇ ಭರವಸೆಯ ಮುತ್ತು
ಅದೇ ಚಂದದ ನತ್ತು
ಅದೇ ಅಂದದ ಮೊಗವ ಹೊತ್ತು
ಮತ್ತೆ ಬಂದವಳು ಅವಳೇನಾ……?

ಅಪ್ಪನ ಪ್ರತಿರೂಪ ಎಂದರು
ಅಮ್ಮನ ಪಾದಗಳು ಮಿಕ್ಕವರು
ಬಂಧುಗಳು ಸುಳಿದು ವರ್ಣಿಸಿದ
ಭುವಿಗಿಳಿದ ಬೆಳದಿಂಗಳು ಅವಳೇನಾ….?

ಅಷ್ಟ ಸಂವತ್ಸರದ ತರುವಾಯ
ತಾಯ ಮಡಿಲ ತುಂಬಿಸಿ
ತಾಯ್ತನದ ಭಿಕ್ಷೆಯ ಕೊಟ್ಟ
ಯಶೊಧ ಮಗಳು ಅವಳೇನಾ……….?

ಪುಟ್ಟ ತುಟಿಯ ಕಿರುನಗು
ರಕ್ತಚಂದನ ವರ್ಣದ ವಸಡು
ದಂತವಿಲ್ಲದ ಬೊಜ್ಜು ಬಾಯಿಯ
ಹಾಲುಗೆನ್ನೆಯ ಮಗಳು ಅವಳೇನಾ…..?

ಎವೆಯಿಕ್ಕದೆ ನೋಡುವ ನೋಟ
ನಿರ್ಮಲ ಬಟ್ಟಲ ಕಂಗಳಲಿ
ಸೆಳೆದಿ ಮೋಡಿ ಮಾಡುವ
ಅಪ್ಪನ ರಾಜಕುಮಾರಿ ಅವಳೇನಾ…..?

ಹಸಿವ ವ್ಯಕ್ತಪಡಿಸಲು ಕಂದ
ಹಂಬಲಿಸುವ ಪರಿಗೆ
ಕೋಪದಿ ಕೆಂಪಾದ ಕೆನ್ನೆಗಳ
ಹೊಳಪಿನ ಪುಟ್ಟ ಪೋರಿ ಅವಳೇನಾ…..?

ನಿದಿರಿಯಲ್ಲೂ ನಗುವ ದೇವತೆ
ನಕ್ಕಾಗ ಬೀಳುವ ಗುಳಿಕೆನ್ನೆಗಳು
ಅರೆಬಿರಿದ ರೆಪ್ಪೆಗಳ ತೆರೆವ
ರೆಕ್ಕ ಬಿರಿದ ನವಿಲ ಮರಿ ಅವಳೇನಾ….?

ಆಲಸ್ಯದಿ ಮೈಮುರಿವ ಸೊಬಗು
ಆಕಳಿಸಿ ಬಿಕ್ಕಳಿಸುವ ಬೆಡಗು
ನಿರುತ್ಸಾಹದಿ ಹುಬ್ಬು ಗಂಟಿಕ್ಕುವ
ಮುದ್ದುಮರಿ ಗೊಂಬೆ ಅವಳೇನಾ…….?

ತಾಯಿಯ ನೊರೆಹಾಲ ಪಚಪಚ ಹೀರಿ
ಗಲ್ಲದ ತುಂಬೆಲ್ಲ ಚಿಮ್ಮಿಸುತ
ಹಸಿವು ನೀಗಿದ ಮೇಲೆ, ಶುಭ್ರ
ಮೌನದಿ ಮಲಗುವವಳು ಅವಳೇನಾ…?

ಜಗದ ಗೊಂದಲಗಳೇ ಅರಿಯದ
ಮುದ್ದಾದ ಪಾದಗಳಿಂದ
ಮುಖದ ಮೇಲೆ ಜಾಡಿಸಿ ಒದೆಯುತ
ಕಿಲಕಿಲನೆ ನಗುವವಳು ಅವಳೇನಾ…..?

ಮಲಗುವ ವೇಳೆ ಎದ್ದು
ಏಳುವ ವೇಳೆ ಮಲಗಿ
ಅಪ್ಪ ಅಮ್ಮನ ನಿದ್ದೆಗೆಡಿಸುವ
ಮುದ್ದಿನ ಮಗಳು ಅವಳೇನಾ…..?

ನಿರ್ಜೀವ ಬೊಂಬೆಯ ಕನಸಿಗೆ
ಜೀವಂತ ಬಂಗಾರದ ಗೊಂಬೆ ಬಂದಾಯ್ತು
ಕಲ್ಪನೆಯ ಹುಚ್ಚು ಹೆಚ್ಚಾಯ್ತು
ಮನೆ ಮನಸ್ಸ ತುಂಬಿ ಹೋಯ್ತು
ಇದಕ್ಕೆಲ್ಲಾ ಕಾರಣ ಅವಳೇನಾ……?

ಮಹದೇವ್ ಬಿಳುಗಲಿ
9611339024

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version