ಭಾವ ಭೈರಾಗಿ
ಕವಿತೆ | ಬೆವರು ಸುರಿಸುವುದರಿಂದ ಮಾತ್ರ ಚರಿತ್ರೆ
‘ನಡೆದಾಡುವ ದೇವರು’ ಎಂದು ಹೆಸರಾದ ಸಿದ್ದಗಂಗ ಶ್ರೀಗಳು ಬರೆದಿದ್ದಾರೆ ಎಂದು ವೈರಲ್ ಆದ ತೆಲುಗು ಕ್ರಾಂತಿಕಾರಿ ಕವಿ ಶ್ರೀಶ್ರೀ ಅವರ ಒಂದು ಪ್ರಸಿದ್ಧ ಕವಿತೆ.ಶ್ರೀಗಳು ಶಿವೈಕ್ಯರಾದರು ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶ್ರೀಗಳ ಹಿರಿಮೆಯನ್ನು ಸಾರುವ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡತೊಡಗಿವೆ. ಇದೇ ಸಂದರ್ಭದಲ್ಲಿ ಶ್ರೀ ಸಿದ್ದಗಂಗಾ ಶ್ರೀಗಳು ಬರೆದಿರುವ ಕವಿತೆ ಎಂಬ ಶೀರ್ಷಿಕೆಯಲ್ಲಿ ಕವಿತೆಯೊಂದು ವೈರಲ್ ಆಯಿತು. ಆದರೆ ಆ ಕವಿತೆಯು ಆಂಧ್ರದ ಕ್ರಾಂತಿಕಾರಿ ದಿಗಂಬರ ಕವಿಗಳಲ್ಲಿ ಒಬ್ಬರಾದ ಶ್ರೀ ಶ್ರೀ ಅವರು ಬರೆದಿರುವ ಕವಿತೆ ಎಂದು ತಿಳಿದು ಬಂದಿದೆ. ಈ ಕವಿತೆಯನ್ನು ಸಾಮಾಜಿಕ ಕಾರ್ಯಕರ್ತರಾದ ಪದ್ಮಾ ಕೆ ರಾಜ್ ಎಂಬುವವರು ಕೆಲವು ತಿಂಗಳುಗಳ ಹಿಂದೆ ಕನ್ನಡಕ್ಕೆ ಅನುವಾದಿಸಿದ್ದರು.
ಸಾಧ್ಯವಾದರೆ ಓಡು
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿ ಕೊಂಡು ಹೋಗು ಅಷ್ಟೇ!
ಆದರೆ ಕದಲದೇ
ಬಿದ್ದಿರಬೇಡ ಒಂದೇ ಕಡೆ
ಕೆಲಸ ಸಿಗಲಿಲ್ಲವೆಂದು,
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು
ಕೈಬಿಟ್ಟಳೆಂದು!!
ಹಾಗೆ ಇದ್ದರೆ ಹೇಗೆ..?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತವೆ ನೋಡು!
ಮನಸು ಮಾಡಿದರೇ…
ನಿನ್ನ ಹಣೆಬರಹ ಇಷ್ಟೇ
ಅಂದವರೂ ಸಹ…
ನಿನ್ನ ಮುಂದೆ ತಲೆ ತಗ್ಗಿಸುವ
ತಾಕತ್ತು ನಿನ್ನಲ್ಲಿದೆ
ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?
ಸೃಷ್ಟಿ ಚಲನಶೀಲ
ಯಾವುದೂ ನಿಲ್ಲಬಾರದು
ಹರಿಯುವ ನದಿ
ಬೀಸುವ ಗಾಳಿ
ತೂಗುವ ಮರ
ಹುಟ್ಟೋ ಸೂರ್ಯ
ಅಂದುಕೊಂಡಿದ್ದನ್ನು ಸಾಧಿಸಬೇಕೆಂದು
ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ
ಯಾವುದೂ ನಿಲ್ಲಬಾರದು.
ಏಳು… ಎದ್ದೇಳು
ಹೊರಡು…
ನಿನ್ನನ್ನು ಅಲಗಾಡದಂತೆ
ಮಾಡಿದ ಆ ಮಾನಸಿಕ ಸಂಕೋಲೆಗಳನ್ನು ಬೇಧಿಸು,
ಬಿದ್ದ ಜಾಗದಿಂದಲೇ
ಓಟ ಶುರು ಮಾಡು
ನೀನು ಮಲಗಿದ ಹಾಸಿಗೆ
ನಿನ್ನನ್ನು ಅಹಸ್ಯಪಡುವ ಮುನ್ನ
ಅಲಸ್ಯವನ್ನು ಬಿಡು
ಕನ್ನಡಿ ನಿನ್ನನ್ನು ಪ್ರಶ್ನಿಸುವ
ಮುನ್ನ ಉತ್ತರ ಹುಡುಕು
ನೆರಳು ನಿನ್ನನ್ನು ಬಿಡುವ
ಮುನ್ನ ಬೆಳಕಿಗೆ ಬಾ
ಮತ್ತೆ ಹೇಳುತ್ತಿದ್ದೇನೆ…
ಕಣ್ಣೀರು ಸುರಿಸುವುದರಿಂದ
ಅದು ಸಾಧ್ಯವಿಲ್ಲ!
ಬೆವರು ಸುರಿಸುವುದರಿಂದ
ಮಾತ್ರ ಚರಿತ್ರೆ
ಸೃಷ್ಟಿಸಬಹುದೆಂದು
ತಿಳಿದುಕೋ…
ಓದಿದರೆ ಇವು ಪದಗಳಷ್ಟೇ…
ಆದರೆ ಆಚರಿಸಿದಾಗ
ಅಸ್ತ್ರಗಳು..!!!!!
ಮಹಾ ಶಸ್ತ್ರಗಳು!!!!!!!
-ತೆಲುಗು ಮೂಲ: ಶ್ರೀಶ್ರೀ
-ಕನ್ನಡಕ್ಕೆ : ಪದ್ಮಾ ಕೆ ರಾಜ್
ಸುದ್ದಿದಿನ.ಕಾಂ|ವಾಟ್ಸಾಪ್|9986715401