ಭಾವ ಭೈರಾಗಿ
ಕವಿತೆ | ಇತಿ ನಿನ್ನ ಬೆಂಗಳೂರು
- ದುನಿಯಾ ಸೂರಿ, ಚಿತ್ರ ನಿರ್ದೇಶಕ
ತರಕಾರಿ ಗಾಡಿಯ ಮೇಲೆ
6 1/2 ವರ್ಷದ ಕೂಸು, ಬೆಳಗಿನ ಜಾವ
ಕತ್ತಲೆಯನ್ನು ನುಂಗುವಾಗ,
ಎಷ್ಟು ಮುಷ್ಟಿ ಬಿಗಿ ಹಿಡಿದರೂ ಮೈಯೆಲ್ಲಾ ಚಳಿ.
ಬೆಳಗಿನ ಮೂರುವರೆ ಸಮಯ
ಎದ್ದು ಕೂತಾಗ, ಕಿವಿಗೆ ನುಗ್ಗಿದ ಗಾಳಿಗೆ
ದೂರದಲ್ಲಿ ಬರುವ ದೀಪಗಳು ಮಬ್ಬು ಮಬ್ಬು
ಇದು ಕನಸೋ ಎಚ್ಚರವೋ ಗೊತ್ತಿಲ್ಲ.
ಅಪ್ಪಗಾಡಿ ತಳ್ಳುವಾಗ ನಾನು ಪ್ರಯತ್ನ ಪಡದೇ
ಮುನ್ನಡೆದಂತೆ ಏನೋ ಹಗುರ
ಇವತ್ತಿಗೂ ಆ ಅನುಭವಕ್ಕೆ ಹೆಸರಿಟ್ಟು
ಹೀಗೆ ಎಂದು ವಿವರಿಸಲು ಇನ್ನೊಂದು
ಅದೇ ರೀತಿಯ ಅನುಭವ ಇಲ್ಲ
ಹಾಗೇ ಈ ನಗರವನ್ನು ನನ್ನ ದೃಷ್ಟಿಕೋನದಿಂದ
ನೋಡುತ್ತಿದ್ದೇನೆ… ನಿರಂತರವಾಗಿ
ಅದೇ ಅದೇ ರಸ್ತೆಗಳು ಸೋತು ಕೂತು
ಗೆದ್ದು ಕಾರಿನಲ್ಲಿ ಅಲೆಯುವಾಗ
ಮತ್ತೆ ಮತ್ತೆ ನೆನಪಾಗುವ ನನ್ನೊಳಗಿನ
ನೆನಪುಗಳು, ಆ ನೆನಪುಗಳನ್ನೇ
ಮತ್ತೆ ಮತ್ತೆ ಸಿನೆಮಾ ಮಾಡುತ್ತೇನೆ
ಇದು ಮಾತ್ರ ಕ್ಷಣ ಕ್ಷಣದ ಮಧ್ಯೆ ಇರುವ
ಖಾಲಿತನ, ಇನ್ನೊಂದು ಶುರುವಾಗುವ
ಮೊದಲು ಇದ್ದ ಸೈಲೆನ್ಸ್,
ನಗರ ಎಂದರೆ ನನ್ನ ದೇಹ ಎಚ್ಚರವಾಗಿ
ಆಕಾಶ ನೋಡಿ ಭೂಮಿಯ ಮೇಲೆ ಕಾಲಿಟ್ಟು
ಸಂಜೆ ಕತ್ತಲಿಗೆ ಬೆಂಕಿ ಬೆಳಕಾಗಿ ಮಲಗಿ,
ಮತ್ತೆ ಎಚ್ಚರ ಬೇರೊಂದು ನಗರ
ನೆನಪುಗಳು ಪೋಟೋ ರೀತಿ
ವಿಡಿಯೋ ರೀತಿ ನೆನಪಾಗುವುದು.
ಅಲ್ಲೆಲ್ಲಾ ಭೂಮಿ-ಭಾನು ಇದ್ದಲ್ಲೆಲ್ಲಾನಗರ-ರಸ್ತೆ.
ನಮ್ಮ ಯೋಚನೆಯಲ್ಲಿ ಬರುವ ಎಲ್ಲಾ
ನೆನಪಿನಲ್ಲೂ ನಗರ ರಸ್ತೆ, ಊರು,
ನಿನಗೊಂದು ಹೆಸರಿಟ್ಟರೆ ಅದು ನೀನು ಬೆಂಗಳೂರು.
ನೀನು ನಿನ್ನ ನಗು ಇರೋ ಕಡೆ,
ಸಾವು ಬರಲ್ಲ ಅಕಸ್ಮಾತ್ ಸಾವು
ಬಂದರೂ, ಒಂದು ಕ್ಷಣ ನಿನ್ನ ನೋಡುತಾ…
ಬಂದ ಕೆಲಸ ಮರೆಯುವಂತೆ,
ಸದಾ ನಗು ಜೀವಂತವಾಗಿ ರಾಕ್ಷಸಿ.
ಸದಾ ನಿರಂತರವಾಗಿ,
ಇತಿ ನಿನ್ನ ಬೆಂಗಳೂರು
-ಸೂರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243