ದಿನದ ಸುದ್ದಿ
ಕವಿತೆ | ಕಾರಣಿಕ
- ಪ್ರಕಾಶ ಕೋನಾಪುರ
ಊರ ನಡು ಮಧ್ಯೆ
ನಗರದ ನಾಗರೀಕರು ಓಡಾಡುವ
ವರ್ತುಲದ ಕೇಂದ್ರ ಬಿಂದುವಿನಲ್ಲಿ
ಯಾವುದೋ ಮಹಾನುಭಾವರ ಮೂರ್ತಿ
ಪ್ರತಿಷ್ಟಾಪಿಸಲು ಕಟ್ಟಿದ ಕಟ್ಟೆಯ ಮೇಲೆ ನಿಂತು
ಎಲ್ಲರಿಗೂ ಕೇಳುವಂತೆ ಜೋರು ದನಿಯಲ್ಲಿ
ಕಾರಣಿಕ ನುಡಿದಿತ್ತು ತಾನೆ
‘ಎಲ್ಲಾ ಮಾರತಾನಲೇ ಪರಾಕ್ ‘
‘ ದಾರದ ಮಹಿಮೆ ನಂಬಬ್ಯಾಡ್ರಲೇ ಪರಾಕ್ ‘
ಎಲ್ಲಾ ಕೇಳಿಯೂ ಕೇಳದಂತೆ
ಮುಖ ತಿರುವಿಕೊಂಡು ಹೋದವರು ನೀವೇ ತಾನೇ
ವೇಷಗಾರನ ನಕಲೀ ಮಾತಿನ ಮೋಡಿಗೆ
ಮರುಳಾದವರು ನೀವೇ ಅಲ್ಲವೇ?
ತಿಂಗಳಿಗೊಮ್ಮೆ ಬಂದು ಮನದ ಮಾತು
ಮಾತಾಡುವವನ ಕಿಸೆಯ
ಬೆಂಡು ಬತ್ತಾಸು ಖಾಲಿಯಾಗಿದೆ
ಜಾತ್ರೆಯಲ್ಲಿ ಸಿಕ್ಕಷ್ಟು ಸೀರಿ ಹಿರಿದಷ್ಟು ಹೀರಿ
ಎಲ್ಲ ಮಾರಿಯಾದ ಮೇಲೆ
ಜಾಗರಗೊಂಡ ಜನವೇ ಈಗ ಬನ್ನೀ
ಪುರವಂತನ ಅಟ್ಟಣಗೆಯಿಂದ ಕೆಳಗಿಳಿಸೋಣ
ತೆರೆಯ ಹಿಂದಿರುವ ದಾರ ಕಿತ್ತೊಗೆದು
ದೇಶದ ಸಿರಿ ಹಿರಿಮೆ ಉಳಿಸೋಣ
ಕಳ್ಳರ ಜಾತ್ರೆಯಲ್ಲಿ
ಬಡವನ ಕಾರಣಿಕ
‘ನಕಲಿ ಸಂತ ಮೋಡಿ ಆಟಗಾರನ
ಒದ್ದೋಡಿಸಲಿಕ್ಕರ ದೇಶ ಮಾಯಕ್ಕಾತ್ರಲೇ ಪರಾಕ್’.
ಸುದ್ದಿದಿನ.ಕಾಂ|ವಾಟ್ಸಾಪ್|9980346243