ಭಾವ ಭೈರಾಗಿ

ಕವಿತೆ | ಮಾತುಗಳು..!

Published

on

  • ತೆಲುಗು : ವರವರರಾವ್,ಕನ್ನಡಕ್ಕೆ : ಎಸ್ ಡಿ ಕುಮಾರ್

ಮನದಾಳದ ಪದರಗಳಲ್ಲಿ
ತುಳಿದಿಡಲಾದ ಮಾತುಗಳ ತಟ್ಟಿ
ಎಬ್ಬಿಸಿ..ನಡೆಸಿ ನೋಡಬೇಕು
ರಚ್ಚು ಹಿಡಿದ ಕಾಲುಗಳೆಬ್ಬಿಸಿ
ರೆಕ್ಕೆಗಳು ಆಗಸದತ್ತ ಹಾರುವುದೇನೋ
ನೋಡಬೇಕು

ಒಣಗಿದ ಕಿವಿಗಳಿಗೆ ಯಾರದ್ದೋ ಮಾತಲ್ಲ
ನನ್ನ ಮಾತು..
‘ಬರ’ಬಡಿದು ಹೋದ ತರುವಾಯ
ಬಂದ ಎಲ್ಲ ಮಳೆಹನಿಗಳೂ ಇರುತ್ತವೆ
ನವನವೀನವಾಗಿಯೇ

ಮರೆತೇಹೋದ ಮಳೆಗಾಲವನ್ನು
ಆಕಾಶ ಪುನಃ ಓದಿಕೊಂಡಲ್ಲಿ ಎಷ್ಟು
ಚೆನ್ನ ?
ನನಗೂ ಹಾಗೇ – ಈ ಶಬ್ದಮಯ ಜಗದಲಿ
ನೆಲದ ಮೇಲೆ ಮೊಳಕೆ ಹೊಡೆವ ಆಸೆ

ಮತ್ತೆ ಮಾತು ಕಲಿಯುವ ಉಮೇದು
ನನಗೆ
ಶಾಲೆಯಲ್ಲಿ ಸಭೆಯಲ್ಲಿ ಮಕ್ಕಳಿಂದ
ಜನರಿಂದ… ಚರಿತ್ರೆಯ ಪ್ರತಿಯೊಂದೂ
ಮಗ್ಗುಲಿಂದ
ಮಾತು ಆಯ್ದುಕೊಳ್ಳೋಣವೆಂದಿದೆ ನನಗೆ

ಶಬ್ದವೇ ಇಲ್ಲವೆಂದ ಮೇಲೆ
ಇಷ್ಟು ದಿನ ಮನದೊಳಗೆ ದಟ್ಟೈಸಿದ ಈ
ಮೌನ ಸ್ಫೋಟಿಸಬೇಕು ಹೇಗೆ
ಇಷ್ಟೂ ದಿನ ಕಂಗಳಲ್ಲಿ ಅಡಗಿಸಿಕೊಂಡ ಈ
ದೃಶ್ಯ ಬೆಳಗಬೇಕು.. ಹೇಗೆ

ನಮ್ಮವರ ಜೊತೆ
ಮಾತಾಡಿ ಆಲಿಸಿ ಮತ್ತೆ ಮತ್ತೆ ಕಲಿಯಬೇಕು
ಮಾತು ನಾನು
ಮಾತಿನ ಮೇಲೆ ನಿಲ್ಲಬೇಕು
ಮಾತಿಗೆ ಕಟ್ಟುಬಿದ್ದಿರಬೇಕು
ಮಾತಿಗೆ ಬೆಲೆ ಇಲ್ಲವೆಂದಲ್ಲಿ ಏನು ಉಳಿ
ದಿರುತ್ತೆ ಮನುಷ್ಯಗೆ ?

ಮಾಸಿಹೋಗಲಿ ಮಾತು
ಕಾಲದ ಕುಲುಮೆಯ ಬೆಂಕಿಯಲ್ಲಿ
ಗಜಸುತ್ತಿಗೆಯ ಹೊಡೆತವ
ಕೆಳಗಿಟ್ಟು
ಇದೇ… ಸುದಿನ ಅಂತ
ಮಾತು ರೂಪಿಸಿಕೊಳ್ತೇನೆ
ನನಗೆ ಬೇಕಾದ ರೀತಿಯಲ್ಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version