ಅಂಕಣ
ಕವಿತೆ | ಸಂಭವಿಸು
~ ಜರೀನಾ ನವಿಲೇಹಾಳ್
ಭರತ ಭೂಮಿಯಲ್ಲಿ
ಜಾತಿ ಬೀಜಗಳ ಬಿತ್ತಿದಾಗಿನಿಂದ
ವರ್ಷಧಾರೆಗೆ ಬರವೇ ಇಲ್ಲ
ಜಾತಿ ಬೇರು ಚಿಗುರೊಡೆದು
ಹೆಚ್ಚುತ್ತಲೇ ಇದೆ ಸಂತತಿ.
ಬರ ಬಂದಂತೆ,ಬೆಳೆ ನಾಶವಾದಂತೆ
ಮಳೆ ಸುರಿದಂತೆ ಹೊಳೆ ಕೊಚ್ಚಿ
ಹೋದಂತೆ ಮೊಳೆವ ಜಾತಿಗಳು
ಸಾಯಬಾರದೇಕೆ,
ಬೇರಿನಿಂದ ಟಿಸಿಲೊಡೆವ
ಕುಲದ ನೆಲೆಯನ್ನು ಕೀಳಬಾರದೇಕೆ
ಆಯ ತಪ್ಪಿದಂತೆ ಗಾಡಿಗಳು
ತೇಲಿಬಂದಂತೆ ದೇಹಗಳು
ಕೊಚ್ಚಿ ಹೋದಂತೆ ಮಹಡಿಗಳು
ಜಲಪ್ರಳಯದಲ್ಲಿ.
ತೇಲಬೇಕಾಗಿದೆ ಜಾತಿ ಸತ್ತ ದೇಹಗಳು
ಕೊಚ್ಚಿ ಹೋಗಬೇಕಾಗಿದೆ
ಜಾತಿ ಕಟ್ಟೋ ಇಟ್ಟಿಗೆಗಳು
ರಕ್ಷಣೆಯ ಛಾವಡಿಗಳು
ಜನಪ್ರಳಯದಲ್ಲಿ.
ಜಾತಿ ಇಲ್ಲದ ನಾಡಿಗೆ
ಸಾಗಬೇಕಿದೆ ನಡಿಗೆ
ಒಂದೊಮ್ಮೆ ಸಂಭವಿಸು ಕಂಪಿಸು
ಭರತ ಭೂಮಿಯೇ
ಜಾತಿಗೋಡೆಯನೆ ಉರುಳಿಸು.
ಸುದ್ದಿದಿನ.ಕಾಂ|ವಾಟ್ಸಾಪ್|9980346243