ಅಂತರಂಗ

ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್‍ ಆಫ್‍ ದಿ ನೇಷನ್‍ ಅಂತಾರೆ..!

Published

on

  • ಚೇತನ್ ನಾಡಿಗೇರ್

‘ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಜಾಸ್ತಿ ಆಗ್ತಿಲ್ಲ, ಆ ಬಗ್ಗೆ ಮಾತಾಡೋಣ. ಆಟೋ ಚಾಲಕರಿಗೆ ಬೈಕ್‍ ಸವಾರರಿಂದ ತೊಂದರೆ ಆಗುತ್ತಿದೆ ಆ ಬಗ್ಗೆ ಮಾತಾಡೋಣ. ಸರ್ಕಾರಿ ಶಾಲೆಗಳಲ್ಲಿ ಬಿಸಿಊಟ ಅಡುಗೆ ಮಾಡುವವರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಬಳ. ಅದರ ಬಗ್ಗೆ ಮಾತಾಡೋಣ. ಮಿಕ್ಕವರೆಲ್ಲಾ ಬಹಳ ಬ್ಯುಸಿಯಾಗಿರುವುದರಿಂದ ನಾವು ಇದರ ಬಗ್ಗೆ ಮಾತಾಡೋಣ್ವಾ?’

ಮಾರ್ಮಿಕವಾಗಿ ಕೇಳಿದರು ಪ್ರಕಾಶ್‍ ರೈ. ಅವರಿಗೆ ಆ ವಿಷಯದ ಬಗ್ಗೆ ಮಾತಾಡುವುದಕ್ಕೆ ಇಷ್ಟವಿರಲಿಲ್ಲ. ಆದರೂ ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ತಿಂಗಳಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂಬ ಪ್ರಶ್ನೆ ಬಂತು. ಅದನ್ನು ಬಹಳ ಜಾಣ್ಮೆಯಿಂದ ತಳ್ಳಿಹಾಕಿದರು ರೈ. ಅದೊಂದು ಬಿಟ್ಟು ಹಲವು ವಿಷಯಗಳ ಬಗ್ಗೆ ಮಾತನಾಡಿದರು. ತಮ್ಮ ಇಷ್ಟದ ಚಿತ್ರದ ಬಗ್ಗೆ, ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ, ಸೋಷಿಯಲ್ ಮೀಡಿಯಾವನ್ನು ಕೆಲವರು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ, ತಂದೆ-ಮಗನ ಸಂಬಂಧದ ಬಗ್ಗೆ, STARDOM ಸಂಭಾಳಿಸುವ ಬಗ್ಗೆ, ಕಲಿಕೆಯ ಬಗ್ಗೆ … ಹೀಗೆ ಹಲವು ವಿಷಯಗಳನ್ನು ಅವರು ಮಾತನಾಡಿದರು. ಅದಕ್ಕೆ ವೇದಿಕೆಯಾಗಿದ್ದು, ಆರ್. ಚಂದ್ರು ನಿರ್ಮಾಣದ, ‘ಡಾರ್ಲಿಂಗ್‍’ ಕೃಷ್ಣ ಅಭಿನಯದ ‘ಫಾದರ್‍’ ಚಿತ್ರದ ಪತ್ರಿಕಾಗೋಷ್ಠಿ. ಈ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತ ತಂದೆಯ ವ್ಯಾಖ್ಯಾನವನ್ನು ರೈ ಎಷ್ಟು ಚೆನ್ನಾಗಿ ಮಾಡಿದರು ಗೊತ್ತಾ? ನೀವೇ ಓದಿ …

ನಾನು ನನ್ನ ಮೂರು ದಶಕಗಳ ವೃತ್ತಿಜೀವನದಲ್ಲಿ ಯಶಸ್ಸಿನಿಂದ ಹಾಳಾದ ಬಹಳಷ್ಟು ಜನರನ್ನು ನೋಡಿದ್ದೇನೆ. ಸೋಲಿನಿಂದ ಹಾಳಾದವರನ್ನು ನೋಡಿದ್ದು ಕಡಿಮೆ. ಯಶಸ್ಸು ಎನ್ನುವುದು ಒಂದು ನಶೆ. ಯಶಸ್ವಿಯಾಗುವುದು ದೊಡ್ಡ ವಿಷಯವಲ್ಲ. ಅದನ್ನು ದಕ್ಕಿಸಿಕೊಳ್ಳೋದು, ಉಳಿಸಿಕೊಳ್ಳೋದು ಬಹಳ ಮುಖ್ಯ. ಹಾಗಾಗಿ, ಡಾ. ರಾಜಕುಮಾರ್, ರಜನಿಕಾಂತ್‍, ಕಮಲ್ ಹಾಸನ್‍ ಮುಂತಾದವರು ಆರು ದಶಕ, ಐದು ದಶಕಗಳ ಕಾಲ ಕೆಲಸ ಮಾಡಿದವರನ್ನು ನಾವು ನೋಡಬಹುದು. ಈಗ ಅಂಥವರು ಸಿಗುವುದೇ ಇಲ್ಲ ನಮಗೆ. ಬಹಳಷ್ಟು ಯುವಕರು stardomಗೆ ತಯಾರಾಗಿರುವುದಿಲ್ಲ. ಎಷ್ಟು ನಾವು ಅದನ್ನು ಇಳಿಸಿಕೊಂಡು ಹೊರಗೆ ಬರುತ್ತೀವೋ, ಅಷ್ಟು ಒಳ್ಳೆಯದು. ಇಲ್ಲದಿದ್ದರೆ ಅದು ನಮ್ಮನ್ನು ಸುಟ್ಟುಹಾಕುತ್ತದೆ. ಕೆಲವರು ಕಲಿಯುತ್ತಿದ್ದಾರೆ, ಕೆಲವರು ಕಲಿಯುವುದಿಲ್ಲ.

ಪ್ರತಿಯೊಬ್ಬರಿಗೂ ಇಗೋ ಇರಬೇಕು. ಅದು ಸ್ವಾಭಿಮಾನವಾಗಿರುವವರೆಗೂ ಇರಬೇಕು. ಅದು ಅಹಂಕಾರವಾದರೆ ಇಬ್ಬರಿಗೂ ಒಳ್ಳೆಯದಲ್ಲ. ಒಂದು ಇಗೋ ನನ್ನನ್ನು ಬೆಳೆಸುವುದಕ್ಕೆ ಸಾಧ್ಯವಾದರೆ, ಇನ್ನೊಂದನ್ನು ರೂಪಿಸುವುದಕ್ಕೆ ಸಾಧ್ಯವಾದರೆ, ಒಂದು ಧಾರ್ಮಿಕ ಕೋಪವಾದರೆ ಒಳ್ಳೆಯದಲ್ವಾ? ಅದು ಆಯಾ ಪರಿಸ್ಥಿತಿಗೆ ಬದಲಾಗುತ್ತಿರುತ್ತದೆ. ಒಂದು ಪದದ ಅರ್ಥ ಪದಕೋಶದಲ್ಲಿ ಸಿಗುವುದಿಲ್ಲ, ಆ ಸಂದರ್ಭದಲ್ಲಿ ಸಿಗುತ್ತದೆ. ಯಾವ ಸಂದರ್ಭದಲ್ಲಿ ಆ ಪದವನ್ನು ಉಪಯೋಗಿಸುತ್ತೀವೋ, ಆ ಪದಕ್ಕೆ ಅರ್ಥ ಇರುತ್ತದೆಯೇ ಹೊರತು, ಇಗೋ ಎಂದರೆ ಒಂದು definite ಅರ್ಥವಿರುವುದಿಲ್ಲ.

ಕೆಲವು ನಟರು ಸಹ ತಾವು ಜಿಮ್‍ಗೆ ಹೋಗಿಯೇ ನಟ ಆಗುತ್ತೀನಿ ಎಂದರೆ ಆಗುವುದಿಲ್ಲ. ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ತಿಳಿದುಕೊಳ್ಳೋದು, ಕಲೆಯ ಪ್ರಕಾರಗಳನ್ನು ಅರಿತುಕೊಳ್ಳೋದು, ಅದರಿಂದ ನನಗೆ ಹೆಸರಾಗಬೇಕೆಂದು ಬಯಸೋದು ಸಹ ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿಯೊಬ್ಬರು ಗೆಲ್ಲಬೇಕೆಂಬ ಒತ್ತಡ ಯಾಕೆ? ಸೋಲು ಸಂತೋಷ ಯಾಕೆ ನಾವು ಕೊಟ್ಟಿಲ್ಲ? ಕ್ಷಮಿಸುವ ಸಂತೋಷವನ್ನು ನಾವು ಯಾಕೆ ಕೊಟ್ಟಿಲ್ಲ? ನಮಗೂ ಅವನೇನು ಹೇಳುತ್ತೇನೆ ಎನ್ನುವ ತಾಳ್ಮೆಯೇ ಇಲ್ಲ. ನಾನು ಅಂದುಕೊಂಡಿರುವ ಸಿನಿಮಾ ತೆಗೆದಿದ್ದೀಯಾ? ಅಂತಲೇ ಎಲ್ಲರೂ ಕೇಳೋದು. ಏನು ಹೇಳುತ್ತಾನೆ ಎನ್ನುವ ತಾಳ್ಮೆಯೇ ಯಾರಿಗೂ ಇಲ್ಲ.

ನಾನೇ ಈಗ ಮತ್ತೆ ಕಲಿಯಬೇಕಾದ ಪರಿಸ್ಥಿತಿಯಲ್ಲಿದ್ದೀನಿ. ಇಷ್ಟು ಸಿನಿಮಾಗಳನ್ನು ಮಾಡಿದ್ದೇನೆ, ಹೊಸಹೊಸ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಇವತ್ತು ಹೊಸಬರ ಜೊತೆಗೆ ಮಾಡುವಾಗ, ಅವರು ಬೇರೇನೋ ಕೇಳುತ್ತಿದ್ದಾರೆ ಅಂತನಿಸುತ್ತಿದೆ. ಹಾಗಾಗಿ, ಇದುವರೆಗೂ ಕಲಿತಿದ್ದನ್ನು ಮರೆತು, ಹೊಸದಾಗಿ ಕಲಿಯಬೇಕು. ಇದೊಂದು ಸವಾಲು. ಖುಷಿಯಾಗುತ್ತಿದೆ. ಇತ್ತೀಚೆಗೆ ‘ರಾಯನ್‍’ ಸಿನಿಮಾದ ಸಮಾರಂಭದಲ್ಲಿದ್ದೆ. ಆ ಚಿತ್ರಕ್ಕೆ ರೆಹಮಾನ್‍ ಸಂಗೀತ ಸಂಯೋಜಿಸುತ್ತಿದ್ದು, ರೆಹಮಾನ್‍ ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. ನನ್ನ ಮೊದಲ ತಮಿಳು ಚಿತ್ರಕ್ಕೆ ಅವರೇ ಸಂಗೀತ ನಿರ್ದೇಶಕರು.

30 ವರ್ಷಗಳ ನಂತರವೂ ನಾವಿನ್ನೂ ಇದ್ದೀವಲ್ಲ ಎನ್ನುವುದೇ ಬಹಳ ಸಂತೋಷದ ವಿಷಯ. ಒಬ್ಬ ಕಲಾವಿದ ಬೆಳೆಯೋದು ಬರೀ ಅವನ ಪ್ರತಿಭೆಯಿಂದ ಮಾತ್ರವಲ್ಲ. ಜನರ ಪ್ರೀತಿಯಿಂದ ಮತ್ತು ಅದಕ್ಕಿಂತ ಜನರು ಅವನ ಮೇಲಿಟ್ಟಿರುವ ನಂಬಿಕೆಯಿಂದ. ಆ ನಂಬಿಕೆಯನ್ನು 30 ವರ್ಷಗಳ ಕಾಲ ಉಳಿಸಿಕೊಂಡಿದ್ದೇವೆ ಎನ್ನುವುದೇ ನಮ್ಮ ಹೆಮ್ಮೆ ಆಗುತ್ತದೆ. ಏಕೆಂದರೆ, ಅವರು ನಮ್ಮನ್ನು ನಂಬಿ ಒಂದು ವೇದಿಕೆ ಕೊಟ್ಟಿದ್ದಾರೆ. ಅವರಿಗೆ ಇಷ್ಟ ಆದರಂತೂ, ನಿಮ್ಮನ್ನು ಪ್ರೀತಿಸೋಕೆ ಕಾರಣಗಳನ್ನು ಹುಡುಕುತ್ತಾನೆ. ಒಬ್ಬ ವ್ಯಕ್ತಿಯ ಬೆಳವಣಿಗೆ ಬರೀ ಅವನು ಬೆಳೆದ ಎತ್ತರ ನೋಡಿ ಲೆಕ್ಕ ಹಾಕುವುದಲ್ಲ, ಅವನು ಎತ್ತರವಾಗಿ ಬೆಳೆದ ಮೇಲೆ ಎಷ್ಟು ಜನರನ್ನ ಬೆಳೆಸಿದ ಎನ್ನುವುದು ಬಹಳ ಮುಖ್ಯ.

‘ನಾನು ನನ್ನ ಕನಸು’ ಇರಬಹುದು, ‘ಒಗ್ಗರಣೆ’ ಅಥವಾ ‘ಇದೆಂಥಾ ರಾಮಾಯಣ’ ಚಿತ್ರಗಳು ನನ್ನ ಅಭಿರುಚಿ. ತಂದೆ-ಮಗನ ಸಂಬಂಧದ ಕುರಿತು ಸಾಕಷ್ಟು ಚಿತ್ರೆಗಳು ಬಂದಿವೆ. ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್‍ ಆಫ್‍ ದಿ ನೇಷನ್‍ ಅಂತಾರೆ. ಏಕೆಂದರೆ, ಅಷ್ಟೊಂದು ತಂದೆಯ ಪಾತ್ರಗಳನ್ನು ನಾನು ಇದುವರೆಗೂ ಮಾಡಿಬಿಟ್ಟಿದ್ದೀನಿ. ಇದು ತೀವ್ರವಾಗಿ ಕಾಡುವ ಸಿನಿಮಾ. ತಂದೆ-ಮಗನ ಬಾಂಧವ್ಯಕ್ಕಿಂತ, ಇಲ್ಲಿ ಮಗನನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಹಿರಿಯರನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಸೂಕ್ಷ್ಮವಾಗಿ ಹೇಳಲಾಗಿದೆ. ಪರಿಸ್ಥಿತಿಯ ವಿಕೋಪಗಳಿಗೆ ಅಥವಾ ಕೆಲವು ಒತ್ತಡಗಳಿಗೆ ಆ ಸಂಬಂಧ ಪ್ರಶ್ನಿಸಲ್ಪಡುತ್ತದೆ. ಜೀವನದಲ್ಲಿ ಕೆಲವು ಸಂಘರ್ಷಗಳು ಬಂದಾಗ ನಮಗೊಂದು ಲಿಬರೇಶನ್ ‍ಸಿಗುತ್ತದೆ. ಒಂದು ಪರಿಸ್ಥಿತಿ ಎದುರಾದಾಗ ನಮ್ಮಳೊಗಿರುವ ಇನ್ನೊಂದು ಶಕ್ತಿ ನಮಗೆ ಅರ್ಥವಾಗೋದು ಅಥವಾ ನಾವು ಇನ್ನಷ್ಟು ಬೆಳೆಯೋದಕ್ಕೆ ಸಾಧ್ಯ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಇದೊಂದು ಜನ ಸಾಮಾನ್ಯರ ಸಿನಿಮಾ. ನಿಜವಾಗಲೂ ಕಾಡುವ ಸಿನಿಮಾ.

ಒಬ್ಬ ಗಂಡಸು ಮಕ್ಕಳು ಹುಟ್ಟುವ ತನಕ ಬರೀ ಒಬ್ಬ ಗಂಡ ಆಗಿರುತ್ತಾನೆ. ಮಕ್ಕಳು ಹುಟ್ಟಿದ ನಂತರ ಅಪ್ಪ ಎನ್ನುವ ಸ್ಥಿತಿ. ಅಪ್ಪನಿಗೂ, ಮಕ್ಕಳಿಗೂ ಒಂದೇ ವಯಸ್ಸು. ಅದರಲ್ಲೂ ಒಂದು ಹೆಣ್ಣು ಮಗಳ ಜೊತೆಗಿನ ಸಂಬಂಧ ಎಂದರೆ, ಅವನ ಜೀವನದಲ್ಲಿ ಬರುವ ಎಲ್ಲಾ ಸಂಬಂಧಗಳು, ಅಂದರೆ ತಾಯಿ ಇರಬಹುದು, ಹೆಂಡತಿ ಇರಬಹುದು, ತಂಗಿ ಇರಬಹುದು, ಸ್ನೇಹಿತೆ ಇರಬಹುದು. ಆದರೆ, ಮಗಳ ಜೊತೆಗೆ ಬೇರೆ ಸಂಬಂಧ ಇರುತ್ತದೆ. ಚೆನ್ನಾಗಿ ಬೆಳಸಿ ಯಾವುದನ್ನೂ ಎದುರು ನೋಡದೆ ಬಿಟ್ಟು ಕೊಡುವುದು. ತಂದೆ-ಮಗನ ಸಂಬಂಧ ಹಾಗಿರುವುದಿಲ್ಲ. ನನ್ನ ನಂತರ ನೀನು, ನನ್ನ ಇನ್ನೊಂದು ಛಾಯೆ ನೀನು ಎನ್ನುವ ಸಂಬಂಧ ಅದು. ಅದೊಂಥರಾ Love-Hate relationship. ತಂದೆ ತನ್ನ ಮಗನಿಗೆ ಕಲಿಸೋದಕ್ಕಿಂತ, ಅವನ behaviourನಿಂದ ಮಕ್ಕಳು ಕಲಿಯೋದು ತುಂಬಾ ಇರುತ್ತದೆ.

ನನಗೆ ನನ್ನ ಮಗಳ ಜೊತೆಗೆ ಇರುವ relationship ಬೇರೆ, ಮಗನ ಜೊತೆಗೆ ಇರುವ ಸಂಬಂಧ ಬೇರೆ. ಇವತ್ತಿನ ಪ್ರಪಂಚದಲ್ಲಿ ಹೊರಗೆ ಹೋಗಬೇಕು. ಸಾಕಷ್ಟು ಸಮಸ್ಯೆಗಳು ಇರುತ್ತವೆ. ಅದನ್ನು ಹೇಳಿಕೊಳ್ಳುವುದಕ್ಕೆ ಆಗಲ್ಲ. ಅದನ್ನು ಅವರೇ ನಿಭಾಯಿಸಬೇಕು. ಮಗ ಎಷ್ಟೇ ದೊಡ್ಡವನಾದರೂ, ತಂದೆಗೆ ಇನ್ನೂ ಚಿಕ್ಕವನು ಎಂದನಿಸುತ್ತದೆ. ಅದರ ಜೊತೆಗ ಮಗನಿಗೆ ತನ್ನದೇ ಆದ ನಿರ್ಧಾರಗಳೂ ಇರುತ್ತವೆ. ಅದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ನಿನಗೆ ಇಷ್ಟು ಮಾಡಿದೆ, ನೀನೇನು ವಾಪಸ್ಸು ಕೊಡುತ್ತೀಯ ಎನ್ನುವುದಕ್ಕಿಂತ ಅವನನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಒಬ್ಬ ನಟನಾಗಿ ನನಗೆ ‘ನಾನು ನನ್ನ ಕನಸು’ ಬಹಳ ಇಷ್ಟವಾದ ಮತ್ತು ಕಾಡುವ ಸಿನಿಮಾ. ಏಕೆಂದರೆ, ನನ್ನ ಹೆಂಡತಿ ನನ್ನ ಹೆಂಡತಿಯಾಗಿಯೇ ಇರುತ್ತಾಳೆ. ಮಗಳು ಮದುವೆಯಾದಾಗ, ಮಾವ ಆಗ ನನಗೆ ಅರ್ಥಾವಾಗುತ್ತಾನೆ. ಅಲ್ಲಿಯವರೆಗೂ ಹೆಂಡತಿ ಅಪ್ಪ ಅಂತ ಜಗಳ ಆಡುತ್ತಿರುತ್ತೀವಿ. ನನ್ನ ಮಗಳಿಗೆ ಮಾವ ಸಿಗುತ್ತಾನೆ ಎಂದಾಗ, ನನಗೆ ಹೆಂಡತಿ ಅರ್ಥವಾಗುತ್ತಾ ಹೋಗುತ್ತಾಳೆ. ಅವಳು ಇನ್ನೊಬ್ಬಳ ಮಗಳಾಗಿದ್ದಳು, ನಾನು ಅವಳನ್ನು ಇನ್ನೊಬ್ಬರ ಮಗಳು ಅಂತ ನೋಡಿರಲೇ ಇಲ್ಲ. ನನ್ನ ಮಗಳನ್ನು ನಾನು ನೋಡುತ್ತಿದ್ದ ಹಾಗೆ, ಅವಳ ಅಪ್ಪ ಸಹ ಅವಳನ್ನು ಹಾಗೆಯೇ ನೋಡುತ್ತಿದ್ದ. ಮಗಳು ಮತ್ತು ತಂದೆಯ ಸಂಬಂಧದಲ್ಲಿ ಆ ಚಿತ್ರ ನನಗೆ ಬಹಳಷ್ಟು ವಿಷಯಗಳನ್ನು ಕಲಿಸಿತು. ಆ ಚಿತ್ರವನ್ನು ಬರೆಯುತ್ತಾ, ನಿರ್ದೇಶನ ಮಾಡುತ್ತಾ ತುಂಬಾ ಕಲಿತೆ. ಹಾಗಾಗಿ, ನನಗೆ ಅದು ಬಹಳ ಇಷ್ಟವಾದ ಚಿತ್ರ.

ಮಾಣಿಕ್ಯ ಒಳ್ಳೆಯದೇ? ಅದು ಕೋತಿ ಕೈಗೆ ಸಿಕ್ಕಿದರೆ? ಅದರ ಬಗ್ಗೆ ನಾವು ಯೋಚಿಸಬೇಕು. ಪ್ಲಸ್‍, ಮೈನಸ್‍ ಇದ್ದೇ ಇರುತ್ತದೆ. ಒಳಗಿನ ಅಸಹ್ಯವೂ ಹೊರಗೆ ಬರುತ್ತದೆ, ವಿಕಾರಗಳೂ ಹೊರಗ ಬರುತ್ತಿವೆ. ಅವೆರಡೂ ಬರಬೇಕು. ಸೋಷಿಯಲ್‍ ಮೀಡಿಯಾಗಳು ಬಹಳ ಮುಖ್ಯವಾದ ವಿಷಯಗಳನ್ನು ತಲುಪಿಸೋಕೆ ಮಹತ್ವದ ಪಾತ್ರ ವಹಿಸುತ್ತಿದೆ. ಇದರಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಅವೆರಡರಲ್ಲಿ ನಾವು ಯಾವುದನ್ನು ತೆಗೆದುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಅನಂತ್‍ ನಾಗ್‍ ಒಂದು ಸಂಭಾಷಣೆ ಹೇಳ್ತಾರೆ. ‘ನಮ್ಮೆಲ್ಲರಲ್ಲೂ ಕಪ್ಪು ನಾಯಿ, ಬಿಳಿ ನಾಯಿ ಇರತ್ತೆ. ಕಪ್ಪು ನಾಯಿ ಕೆಟ್ಟದ್ದು, ಬಿಳಿ ನಾಯಿ ಒಳ್ಳೇದು.

ಅವೆರಡರಲ್ಲಿ ನಾವು ಯಾವುದಕ್ಕೆ ಊಟ ಜಾಸ್ತಿ ಹಾಕುತ್ತೇವೆ ಅನ್ನೋದು ಮುಖ್ಯ’ ಅಂತಾರೆ. ನಾವು ಎರಡನ್ನೂ ನೋಡಬೇಕು. ಅಣು ಬಾಂಬ್‍ ಕಂಡುಹಿಡಿದಿದ್ದು ಎನರ್ಜಿಗೆ, ಇನ್ನೊಬ್ಬರನ್ನು ಕೊಲ್ಲುವುದಕ್ಕೆ ಅಲ್ಲ. ಇಲ್ಲಿ ನಮ್ಮ ಮನಸ್ಸಾಕ್ಷಿ, ಆತ್ಮಾವಲೋಕನ ಬಹಳ ಮುಖ್ಯ. ಇದನ್ನು ಯಾರೋ ಒಬ್ಬರು ನೋಡುವುದಿಲ್ಲ. ಹೆಣ್ಮಕ್ಕಳು ನೋಡುತ್ತಿರುತ್ತಾರೆ. ಸಮಾಜದ ಒಂದು ಸ್ವಾಸ್ತ್ಯ ನೋಡುತ್ತಿರುತ್ತದೆ. ಅವರಿಗೆ ನಾವೇನು ತಲುಪಿಸಬೇಕು, ಯಾವುದು ಮುಖ್ಯ ಆಗಬೇಕು ಎಂಬುದು ನಮ್ಮ ಕೈಯಲ್ಲಿರೋದು. ಇವತ್ತಿನ ಯುವ ಜನಾಂಗದ ತಪ್ಪೇನು ಇಲ್ಲ. ಒಬ್ಬಿಬ್ಬರು ತಪ್ಪು ಮಾಡಿದರೆ, ಎಲ್ಲರೂ ತಪ್ಪು ಮಾಡುತ್ತಾರೆ ಎನ್ನುವುದು ತಪ್ಪು. Let’s be responsible ಅಷ್ಟೇ. (ಬರಹ : ಚೇತನ್ ನಾಡಿಗೇರ್, ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version