ದಿನದ ಸುದ್ದಿ

ಜಪಾನ್‌ನ ಟೋಕಿಯೊದಲ್ಲಿ ವಾಣಿಜ್ಯ ನಾಯಕರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹತ್ವದ ಸಮಾಲೋಚನೆ

Published

on

ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟೋಕಿಯೊದಲ್ಲಿ ನಿನ್ನೆ ಜಪಾನಿನ ವಾಣಿಜ್ಯ ನಾಯಕರೊಂದಿಗೆ ನಡೆದ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಜಪಾನಿನ 34 ಕಂಪನಿಗಳ ಉನ್ನತ ಕಾರ್ಯನಿರ್ವಾಹಕರು ಮತ್ತು ಸಿಇಓಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಂಪನಿಗಳಲ್ಲಿ ಹೆಚ್ಚಿನವು ಭಾರತದಲ್ಲಿ ಹೂಡಿಕೆ ಮತ್ತು ಕಾರ್ಯಾಚರಣೆಗಳನ್ನು ಹೊಂದಿವೆ.

ಆಟೋಮೊಬೈಲ್, ವಿನ್ಯಾಸ, ಸೆಮಿಕಂಡಕ್ಟರ್, ಉಕ್ಕು, ತಂತ್ರಜ್ಞಾನ, ವ್ಯಾಪಾರ ಹಾಗೂ ಬ್ಯಾಂಕಿಂಗ್ ಮತ್ತು ಹಣಕಾಸು ಸೇರಿದಂತೆ ವಿವಿಧ ವಲಯಗಳ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕೀಡಾನ್‌ರೆನ್, ಜಪಾನ್ ಬಾಹ್ಯ ವ್ಯಾಪಾರ ಸಂಸ್ಥೆ, ಜಪಾನ್ ಇಂಟರ್‌ನ್ಯಾಶನಲ್ ಸಹಕಾರ ಸಂಸ್ಥೆ, ಜಪಾನ್ ಬ್ಯಾಂಕ್ ಫಾರ್ ಇಂಟರ್‌ನ್ಯಾಷನಲ್ ಕೋಪರೇಶನ್, ಜಪಾನ್-ಇಂಡಿಯಾ ಬಿಸಿನೆಸ್ ಕನ್ಸಲ್ಟೇಟಿವ್ ಸಮಿತಿ ಮತ್ತು ಇನ್‌ವೆಸ್ಟ್ ಇಂಡಿಯಾದಂತಹ ಪ್ರಮುಖ ವಾಣಿಜ್ಯ ಸಂಸ್ಥೆಗಳು ಭಾಗವಹಿಸಿದ್ದವು.

ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತ ಮತ್ತು ಜಪಾನ್ ಸ್ವಾಭಾವಿಕ ಪಾಲುದಾರರು. ಭಾರತ-ಜಪಾನ್ ಬಾಂಧವ್ಯದ ಅಗಾಧ ಸಾಮರ್ಥ್ಯದ ರಾಯಭಾರಿಗಳು ಎಂದು ವಾಣಿಜ್ಯ ಸಮುದಾಯವನ್ನು ಶ್ಲಾಘಿಸಿದರು.

ಈ ವರ್ಷದ ಮಾರ್ಚ್‌ನಲ್ಲಿ ಜಪಾನ್ ಪ್ರಧಾನಿ ಕಿಶಿಡಾ ಅವರು ಭಾರತಕ್ಕೆ ಭೇಟಿ ನೀಡಿದಾಗ, ಮುಂದಿನ 5 ವರ್ಷಗಳಲ್ಲಿ ಎರಡು ದೇಶಗಳ ಹೂಡಿಕೆಯ ಮಹತ್ವಾಕಾಂಕ್ಷೆಯ ಗುರಿಯನ್ನು ಜಪಾನಿನ 5 ಟ್ರಿಲಿಯನ್ ಯೆನ್‌ಗೆ ನಿಗದಿಪಡಿಸಲಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತ-ಜಪಾನ್ ಕೈಗಾರಿಕಾ ಸ್ಪರ್ಧಾತ್ಮಕತೆ ಪಾಲುದಾರಿಕೆ ಮತ್ತು ಇಂಧನ ಪಾಲುದಾರಿಕೆಯಂತಹ ಆರ್ಥಿಕ ಸಂಬಂಧಗಳ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರಧಾನಮಂತ್ರಿ ಬೆಳಕು ಚೆಲ್ಲಿದರು. ರಾಷ್ಟ್ರೀಯ ಮೂಲಸೌಕರ್ಯ ಕೊಳವೆ ಮಾರ್ಗ, ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ ಮತ್ತು ಅರೆವಾಹಕ ನೀತಿಯಂತಹ ಉಪಕ್ರಮಗಳು, ಭಾರತದ ದೃಢವಾದ ನವೋದ್ಯಮ ಪರಿಸರ ವ್ಯವಸ್ಥೆಯ ಬೆಳವಣಿಗೆ ಕುರಿತು ಅವರು ಮಾಹಿತಿ ನೀಡಿದರು.

ಜಾಗತಿಕ ವಿದೇಶಿ ನೇರ ಬಮಡವಾಳ ಹೂಡಿಕೆ ಮಂದಗತಿಯಲ್ಲಿದ್ದರೂ ಹಿಂದಿನ ಹಣಕಾಸು ವರ್ಷದ ದಾಖಲೆಯ 84 ಶತಕೋಟಿ ಡಾಲರ್ ಹೂಡಿಕೆಯನ್ನು ಭಾರತ ಆಕರ್ಷಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಇದು ಭಾರತದ ಆರ್ಥಿಕ ಸಾಮರ್ಥ್ಯದ ವಿಶ್ವಾಸಮತ ಎಂದು ಅವರು ಬಣ್ಣಿಸಿದರು. ಭಾರತದಲ್ಲಿ ಜಪಾನಿನ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಆಹ್ವಾನಿಸಿದರು ಮತ್ತು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ನ ಕೊಡುಗೆಯನ್ನು ‘ಜಪಾನ್ ಸಪ್ತಾಹ’ದ ರೂಪದಲ್ಲಿ ಆಚರಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version