ಅಂತರಂಗ
ಭಾರತದ ಜಾತಿ ತಾರತಮ್ಯವನ್ನ ಪ್ರಶ್ನಿಸುತ್ತಿರುವ ಚಲನಚಿತ್ರ ನಿರ್ದೇಶಕ ಪಾ.ರಂಜಿತ್..!
- ಮೂಲ : ನಿಹಾ ಮಸಿಹ, ಅನುವಾದ : ಹರೀಶ್ ಗಂಗಾಧರ್
ರಂಜಿತ್ ಚಿತ್ರರಂಗಕ್ಕೆ ಕಾಲಿಟ್ಟು ಹತ್ತು ವರುಷಗಳು!
ಪಾ ರಂಜಿತ್ ನಿಗೆ ಅವನವ್ವ “ನಿನ್ ಜಾತಿ ಬಗ್ಗೆ ಎಲ್ಲು ಹೇಳಿಕೊಳ್ಬೇಡ” ಅಂತ ಆಗಾಗ ನೆನಪಿಸುತ್ತಿದ್ದರಂತೆ. ತಾಯಿಯ ಈ ಕಿವಿಮಾತುಗಳ ಹೊರತಾಗಿಯೂ ಇಲ್ಲಿಯವರೆಗೆ ಇಡಿಯ ಚಿತ್ರರಂಗದಲ್ಲಿ ತೀರಾ ವಿರಳವೆನ್ನಬಹುದಾದ ಧೈರ್ಯವನ್ನೇ ತೋರಿದ. ತನ್ನ ಅಸ್ಮಿತೆಯನ್ನೇ ತನ್ನ ಚಿತ್ರಗಳಲ್ಲಿ ಕೇಂದ್ರವಾಗಿಸಿಕೊಂಡು. ರಂಜಿತ್ ಭಾರತದ ಮೊದಲ ಕಮರ್ಶಿಯಲಿ ಯಶಸ್ವಿ ಚಿತ್ರ ನಿರ್ದೇಶಕ/ನಿರ್ಮಾಪಕ. ದಶಕಗಳ ಸಕಾರಾತ್ಮಕ ಕಾನೂನು ಕ್ರಮ ಹಾಗು ತಾರತಮ್ಯ ನಿಷೇಧ ಕಾಯ್ದೆಗಳಿದ್ದರು ದೇಶದಲ್ಲಿ ಆಳವಾಗಿ ಬೇರೂರಿರುವ ಜಾತಿ ಆಧಾರಿತ ದಬ್ಬಾಳಿಗೆ ಕನ್ನಡಿ ಹಿಡಿಯುವ ರಂಜಿತ್ ಚಿತ್ರಗಳಲ್ಲಿ ದಲಿತರೇ ಮುಖ್ಯ ಪಾತ್ರಧಾರಿಗಳು.
ಅಮೇರಿಕಾದ ನಾಗರೀಕ ಹಕ್ಕು ಚಳುವಳಿ ಕಾಲದ ಕಪ್ಪು ಕಲಾವಿದರಿಂದ ಪ್ರೇರಿತರಾದ ರಂಜಿತ್ ತಮಿಳುನಾಡಿನಲ್ಲಿ ಈ ಹಿಂದೆ “ಅಸ್ಪೃಶ್ಯರೆಂದು” ಕರೆಸಿಕೊಳ್ಳುತ್ತಿದ್ದ ದಲಿತ ಸಮುದಾಯದ ಸಬಲೀಕರಣಕ್ಕೆ ಪಣ ತೊಟ್ಟು ವೇಗವಾಗಿ ಜನಪ್ರಿಯವಾಗುತ್ತಿರುವ ಸಾಂಸ್ಕೃತಿಕ ಕೇಂದ್ರವೊಂದನ್ನು ಸೃಷ್ಟಿಸಿದ್ದಾರೆ. ಇಲ್ಲಿಯವರೆಗೆ ಕೆಳ ಜಾತಿಯವರನ್ನ ಕಡೆಗಣಿಸಿದ ಅಥವಾ ಟೈಪ್ ಕಾಸ್ಟ್ ಮಾಡಿದ ಜನಪ್ರಿಯ ಸಂಸ್ಕೃತಿಯನ್ನ ಸಂಪೂರ್ಣವಾಗಿ ಬದಲಾಯಿಸುವುದೇ ಇದರ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಂಜಿತ್ ಹಲವು ದಿಟ್ಟ ಹೆಜ್ಜೆಗಳನಿಟ್ಟಿದ್ದಾರೆ- ದಲಿತ ಲೇಖಕ ಹಾಗು ಕವಿಗಳಿಗೆ ಮುದ್ರಣಾಲಯ, ಜಾತಿ ವಿರೋಧಿ ಮ್ಯೂಸಿಕ್ ಬ್ಯಾಂಡ್, ದಲಿತ ಬದುಕು ಹಾಗು ಆಹಾರವನ್ನ ತೋರಿಸುವ ಯುಟ್ಯೂಬ್ ಚಾನೆಲ್.
“ನನ್ನ ಆಹಾರಾಭ್ಯಾಸಗಳು, ಸಂಗೀತ, ಕಲೆಯೆಲ್ಲವೂ ಜನಪ್ರಿಯ ಸಂಸ್ಕೃತಿಯಲ್ಲಿ ಬಿಂಬಿತವಾಗುವುದಕ್ಕಿಂತ ವಿಭಿನ್ನವಾಗಿವೆ. ಇದು ಜಾತಿಯತೇ ಕುರಿತು ಮಾತನಾಡುವುದಲ್ಲ. ಇದು ನನ್ನ ಸಂಸ್ಕೃತಿಯ ಮೇಲೆ ಚೆಲ್ಲುವ ಬೆಳಕು” ಎಂದು ತಮ್ಮ ಚೆನ್ನೈ ಆಫೀಸ್ ನಲ್ಲಿ ಕುಳಿತು ಅಭಿಮಾನದ ಮಾತುಗಳನ್ನಾಡುತ್ತಾರೆ ರಂಜಿತ್
ದಲಿತರು ಹಿಂದೂ ಧರ್ಮದ ತಾರತಮ್ಯ ಶ್ರೇಣಿ ವ್ಯವಸ್ಥೆಯ ಕೆಳ ಮೆಟ್ಟಿಲುಗಳ ಮೇಲೆ ಜಾಗ ಪಡೆಯುತ್ತಾರೆ . ವ್ಯಕ್ತಿಯ ಸ್ಥಾನ ಮಾನಗಳು ಆತನ ಹುಟ್ಟಿನಿಂದ ನಿರ್ಧಾರಿತವಾಗುತ್ತವೆ. ಮೀಸೆ ಬೆಳಿಸಿಕೊಂಡ ಅಥವಾ ಮದುವೆಯಲ್ಲಿ ಕುದುರೆ ಏರಿದನೆಂಬ ತೀರಾ ಕ್ಷುಲ್ಲಕ ಎನ್ನಬಹುದಾದ ಕಾರಣಗಳಿಗಾಗಿ ಮೇಲ್ಜಾತಿಯಿಂದ ಕೊಲ್ಲಲ್ಪಟ್ಟಿದ್ದಾರೆ ಅಥವಾ ನಾನಾ ರೀತಿಯ ಹಿಂಸೆಗೆ ಒಳಗಾಗಿದ್ದಾರೆ. ಇರಲು ನೆಲೆ, ಮೂಲಭೂತ ಸೌಕರ್ಯ ಅಥವಾ ಅಂತರ ಜಾತಿ ವಿವಾಹಗಳಿಗಾಗಿ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಬೇಕಾಗುತ್ತದೆ.
ಈ ದೇಶದಲ್ಲಿ ಜಲಗಾರರಾಗಿ, ಜಾಡಮಾಲಿಗಳಾಗಿ, ಹೊಲಸು ಗುಂಡಿಗಳನ್ನ ತನ್ನ ಕೈಗಳಿಂದ ತೊಳೆದು ಬದುಕಬೇಕಾದಂತಹ ಒತ್ತಡ ಸಮಾಜ ಅವರ ಮೇಲಿ ಹೇರಿದೆ. ಜಾತಿಪದ್ಧತಿ ಅನ್ನೋದು ಬರಿಯ ಭಾರತದಲ್ಲಿ ಮಾತ್ರ ಬಲಿಷ್ಠವಾಗಿರದೆ ಅಮೇರಿಕದಲ್ಲಿ ನೆಲೆಸಿರುವ ಭಾರತೀಯರಲ್ಲೂ ಆಳವಾಗಿ ಬೇರೂರಿದೆ. ಜಾತಿ ಎಂಬ ಪಿಡುಗನ್ನ ಪ್ರಪಂಚಾದ್ಯಂತ ನೆಲೆಸಿರುವ ಇಂಡಿಯನ್ ಡಯಾಸ್ಪೋರಗಳಲ್ಲಿ ಕಾಣಬಹುದು.
“ಹೋರಾಟವೆಂಬುದು ದಲಿತನ ಪ್ರತಿ ದಿನದ ಅನುಭವ. ಅದೇ ಅವನ ಬದುಕು. ನನ್ನ ಬದುಕು ಕೂಡ ಒಂದು ಪ್ರಬಲ ಪ್ರತಿರೋಧ. ನಾನಷ್ಟೇ ಅಲ್ಲ ನನ್ನವರೆಲ್ಲಾ ಶೋಷಣೆ, ದಬ್ಬಾಳಿಕೆ, ಹಾಗು ತಾರತಮ್ಯ ಕುರಿತಾದ ಕಥೆಗಳ ಉಗ್ರಾಣ ಎನ್ನುತ್ತಾರೆ” ಪಾ. ರಂಚಿತ್.
ಈ ವರ್ಷ ಚಿತ್ರೋದ್ಯಮಕ್ಕೆ ರಂಜಿತ್ ಕಾಲಿಟ್ಟು ದಶಕ ಕಳೆದಿವೆ. ಅಮೇರಿಕಾದ ಕಪ್ಪು ಇತಿಹಾಸ ಮಾಸದಿಂದ ಪ್ರೇರಿತರಾಗಿ ಏಪ್ರಿಲ್ ತಿಂಗಳಲ್ಲಿ ರಂಜಿತ್ ಆಯೋಜಿಸಿದ್ದ ದಲಿತ ಇತಿಹಾಸ ಮಾಸದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಅದೊಂದು ಕಲಾ ಹಬ್ಬ, ಸಂಭ್ರಮ ಮತ್ತು ಅದ್ದೂರಿ ಉತ್ಸವ. ಕಳೆದ ತಿಂಗಳು ರಂಜಿತ್ ಕಾನ್ಸ್ ಸಿನಿ ಉತ್ಸವದಲ್ಲಿ ಮೊದಲ ಬಾರಿ ಕಾಣಿಸಿಕೊಂಡರು ಕೂಡ. ಮುಂಬರುವ ದಿನಗಳಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ನಾಯಕನ ಕತೆ ಆಧಾರಿತ ಚಿತ್ರದ ಮೂಲಕ ಬಾಲಿವುಡ್ಡಿಗೂ ಪಾದಾರ್ಪಣೆ ಮಾಡಲಿದ್ದಾರೆ.
ನಾನಾ ವೇದಿಕೆಗಳಲ್ಲಿ ತಮ್ಮ ಕತೆಗಳನ್ನ ಹಂಚಿಕೊಳ್ಳಲು ಹಲವರಿಗೆ ರಂಜಿತ್ ಉತ್ತೇಜಿಸಿ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ರಂಜಿತ್ ಸೃಷ್ಟಿಸಿದ ಅಧಿಕೃತ ಯೌಟ್ಯೂಬ್ ಚಾನೆಲ್- “ನೀಲಂ ಸೋಶಿಯಲ್” ಕಛೇರಿಯಲ್ಲಿ, ಇಪ್ಪತ್ತೊಂದು ವರ್ಷದ ಹುಡುಗಿ ಅಭೀಷ ತನ್ನ ಜನರ ಬಗ್ಗೆ Rap ಸಾಂಗ್ ಒಂದನ್ನು ಹಾಡುತ್ತಿದ್ದಾಳೆ
” ಅವರ ಕಣ್ನೋಟದಿಂದ ದೂರಾಗಿ
ನೆಲೆಸಿದವು ಊರ ಹೊರಗೆ ಯಾರಿಗೂ ಬೇಡವಾಗಿ
ನಮ್ಮ ನಾಡಿನಲ್ಲೇ ಬದುಕಿಬೇಕಾಯಿತು ನಿರಾಶ್ರಿತರಾಗಿ
ಹಕ್ಕುಗಳನ ಕಿತ್ತು ಕೊಂಡಿರಿ ಎಂದು ಬಾಳಲಿಲ್ಲ ನಾವು ನಿಮ್ಮಲ್ಲಿ ಒಂದಾಗಿ”
ದಲಿತರು ಪ್ರತಿಭಟನೆಗಳಲ್ಲಿ ಬಳಸುವ ವಾದ್ಯಗಳ ಕುರಿತು ಸಾಕ್ಸ್ಯಚಿತ್ರ ಮಾಡಿದ್ದಾಳೆ ಅಭೀಷ. ಚೆನ್ನೈ ನಗರದ ಸ್ಲಂವಾಸಿಗಳನ್ನ ಏಕಾಏಕಿ ಹೊರಹಾಕಿದರ ಬಗ್ಗೆ ಕತೆಗಳನ್ನ ಬರೆದಿದ್ದಾಳೆ. ಮೇಲಿನ Rap ಸಾಂಗಿಗೆ ಈ ಕತೆಗಳಿಗೆ ಸ್ಪೂರ್ತಿಯಾದವು.
“ನಾ ಹಾಡಿದ ಹಾಡು, ಬರೆದ ಕತೆಗಳು ಕೆಲ ಜನರಿಗಷ್ಟೇ ತಲಪಬಹುದು. ಸಣ್ಣ ಅಲೆಗಳನ್ನಾದರೂ ಸೃಷ್ಟಿಸಲು ನಾನು ಇವುಗಳನ್ನ ಮಾಡಲೆಬೇಕು… ನನ್ನ ದನಿ ಮುಖ್ಯ. ನನ್ನ ದನಿ ಮುಖ್ಯ. ನನ್ನ ಕೆಲಸ ಮುಖ್ಯ. ನಾನು ಈ ಕೆಲಸ ಮಾಡದಿದ್ದರೆ ಬೇರಾರು ಮಾಡರು.” ಎನ್ನುತ್ತಾಳೆ ಅಭೀಷ
ರಂಜಿತ್ ಆರಂಭಿಸಿದ ಚಾನೆಲ್ನಲ್ಲಿ ತುಂಬಾ ಜನಪ್ರಿಯವಾದ ಕಾರ್ಯಕ್ರಮ ದಲಿತರ ಆಹಾರದ್ದು. ಇತ್ತೀಚಿನ ಎಪಿಸೋಡ್ ದನದ ಮಾಂಸದಿಂದ ಮಾಡಿದ ಭಕ್ಷ್ಯದ ಬಗ್ಗೆ ಇತ್ತು. ಶತಶತಮಾನಗಳಿಂದ ಬೇರೆಲ್ಲರಿಂದ ಬೇರ್ಪಟ್ಟು ಬಾಳಿದ ದಲಿತ ಸಮುದಾಯಕ್ಕೆ ದನದ ಮಾಂಸ ಮಹತ್ವದ ಆಹಾರ. ದನದ ಮಾಂಸದ ಮೇಲೀಗ ನಿಷೇದ ಹೇರಲಾಗಿದೆ. ಗೋವು ಹಿಂದೂಗಳಿಗೆ ಪವಿತ್ರವಾದುದು. ಸಾಕಾಷ್ಟು ದಲಿತರು ಗೋವಿನ ಹೆಸರಲ್ಲಿ ಹಿಂಸೆ ಅನುಭವಿಸಿದ್ದಾರೆ. ಮತ್ತೊಂದೆಡೆ ದಲಿತರನ್ನ ಹೊರತುಪಡಿಸಿ ವರರು ಕುದುರೆ ಏರಿ ಮೆರವಣಿಗೆ ಹೋಗುವುದು ಭಾರತದಲ್ಲಿ ಸಂಪ್ರದಾಯ. ದಲಿತರು ಕುದುರೆ ಏರಿದಾಗ ಅಹಿತಕರ ಘಟನೆಗಳು ನೆಡೆದುಹೋಗಿದೆ.
ಹಲವಾರು ಸ್ಟುಡಿಯೋಗಳಿಗೆ ತವರಾಗಿರುವ ಚೆನ್ನೈನ ಮತ್ತೊಂದು ಮೂಲೆಯಲ್ಲಿ ರಂಜಿತ್ “ಕೂಗೈ” ಎಂಬ ಗ್ರಂಥಾಲಯ ಕಟ್ಟಿದ್ದಾರೆ. ಕೂಗೈ ಎಂದರೆ ತಮಿಳಿನಲ್ಲಿ ಗೂಬೆ ಎಂದರ್ಥವಾದರೂ ಜಾತಿ ದೌರ್ಜನ್ಯವನ್ನ ಉಗ್ರವಾಗಿ ವಿರೋಧಿಸಿದ ಜನಪ್ರಿಯ ತಮಿಳು ಕಾದಂಬರಿ “ಕೂಗೈ” ಶೀರ್ಷಿಕೆಯನ್ನೇ ಗ್ರಂಥಾಲಯಕ್ಕಿಡಲಾಗಿದೆ.
“ಸಣ್ಣ ಸಣ್ಣ ಪಟ್ಟಣ ಹಾಗು ಹಳ್ಳಿಗಳಿಂದ ಕನಸುಗಳನೊತ್ತು ತಮಿಳು ಚಿತ್ರೋದ್ಯಮದಲ್ಲಿ ಕೆಲಸ ಮಾಡಲು ಬಹಳ ಮಂದಿ ಬರುತ್ತಾರೆ. ಅವರು ಇಲ್ಲಿಗೆ ಬಂದ ಮೇಲೆ ದಾರಿ ಕಾಣದಾಗುತ್ತದೆ.” ಎನ್ನುತ್ತಾರೆ ಮೂವತ್ತು ಮೂರೂ ವಯಸ್ಸಿನ ಮೂರ್ತಿ. ಮೂರ್ತಿ ಗ್ರಂಥಾಲಯದ ಮೇಲ್ವಿಚಾರಕ. ಸಿನೆಮಾ ಸಂಬಂಧಿತ ನೂರಾರು ಪುಸ್ತಕಗಳಿವೆ ಕೂಗೈನಲ್ಲಿ. ಅಲ್ಲಿ ಕಾರ್ಯಾಗಾರ ನೆಡೆಯುತ್ತವೆ. ಉತ್ತಮ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ.
ಹಳ್ಳಿಯಲ್ಲಿ ಬರಿಯ ತಾಯಿಯ ಆರೈಕೆಯಲ್ಲಿ ಬೆಳೆದಿದ್ದ ಮೂರ್ತಿ ಹಲವು ಕನಸುಗಳನ್ನ ಹೊತ್ತುಕೊಂಡು ಚಿತ್ರೋದ್ಯಮಕ್ಕೆ ಬಂದರು ಆದರೆ ಏನನ್ನೂ ಸಾಧಿಸಲಾಗದೆ ಹೀನಾಯವಾಗಿ ಸೋತರು. ವರುಷಗಳ ನಂತರ ಚೆನ್ನೈ ನಗರಕ್ಕೆ ಮರಳಿ ಬಂದಾಗ ಗ್ರಂಥಾಲಯ ನಿರ್ಮಾಣ ಹಂತದಲ್ಲಿತ್ತು. ಹೊಸದಾಗಿ ಕಲಿತು, ಬೆಳೆಯಲು ನೆಲೆಯೊಂದು ಸಿಕ್ಕಿತು. ಹೋದ ವರುಷ ಸಹಾಯಕ ನಿರ್ದೇಶಕನಾಗಿ ಚಿತ್ರವೊಂದಕ್ಕೆ ಕೆಲಸ ಮಾಡುವ ಅವಕಾಶ ಮೂರ್ತಿಗೆ ಸಿಕ್ಕಿದೆ. ” ರಂಜಿತ್ ನಮಗೆಲ್ಲ ದಾರಿ ತೋರಿ ಬೆಳೆಸಿದರು. ಮುಂದಿನ ದಶಕದಲ್ಲಿ ಚಿತ್ರೋದ್ಯಮದ ಶ್ರೇಷ್ಠ ನಿರ್ದೇಶಕರು ಕೂಗೈ ನಿಂದ ಬರಲಿದ್ದಾರೆ” ಎಂದು ವಿಶ್ವಾಸದಿಂದ ಹೇಳುತ್ತಾರೆ ಮೂರ್ತಿ.
ಇಷ್ಟೊಂದು ಮಹತ್ವಾಕಾಂಕ್ಷೆಯುಳ್ಳ ಮೂವತ್ತೊಬ್ಬತ್ತು ವರ್ಷದ ರಂಜಿತ್ ನಿರಂಹಕಾರಿ. ಬಿಳಿಯ ಕಾಟನ್ ಶರ್ಟ್ ಮತ್ತು ನೀಲಿ ಷರಾಯಿ ತೊಟ್ಟು ತನ್ನ ಸಾಧಾರಣವಾಗಿ ಸಜ್ಜುಗೊಳಿಸಿದ, ಚಲನಚಿತ್ರ ಸಂಬಂಧಿ ಯಾವುದೇ ಪರಿಕರ ಉಪಕರಣಗಳಿಲ್ಲದ ಆಫೀಸ್ಗೆ ಬರೋದು ಸಾಮಾನ್ಯ. ಆಫೀಸ್ನಲ್ಲೋ ಎಲ್ಲೆಲ್ಲೂ ಪುಸ್ತಕಗಳು! ಸಂವಿಧಾನ ಶಿಲ್ಪಿ, ದಲಿತರ ಮಹಾನಾಯಕ ಗೌರವಾನ್ವಿತ ಭೀಮ್ ರಾವ್ ಅಂಬೇಡ್ಕರವರ ಚಿತ್ರಗಳು, ಪ್ರತಿಮೆಗಳು.
ರಂಜಿತ್ ವೃತ್ತಿ ಜೀವನ ಆತನ ಮೊದಲೆರಡು ಚಿತ್ರಗಳ ಭಾರಿ ಯಶಸ್ಸಿನಿಂದ ಆರಂಭಗೊಂಡಿತು. ತಮಿಳು ಚಿತ್ರಗಳಲ್ಲಿ ಜಾತಿ ಪ್ರಾತಿನಿಧಿತ್ವದ ಬದಲಾಯಿಸಿದ ಶ್ರೇಯಸ್ಸು ರಂಜಿತ್ಗೆ ಸಲ್ಲಬೇಕು. “ಆತನೊಬ್ಬ ಅತ್ಯುತ್ತಮ ನಿರ್ದೇಶಕ. ಯಾವುದೇ ಅಳುಕಿಲ್ಲದೆ, ಭಯವಿಲ್ಲದೆ ತಮ್ಮ ಐಡೆಂಟಿಟಿಯ ಕುರಿತು ಮಾತನಾಡುವ ಧೈರ್ಯ ತುಂಬಿ ಹೊಸಬರಿಗೆ ಹೊಸ ಹಾದಿ ಸೃಷ್ಟಿಸಿದ್ದಾನೆ ರಂಜಿತ್” ಅನ್ನೋದು ಪ್ರಖ್ಯಾತ ಸಿನಿ ವಿಮರ್ಶಕ ಭಾರದ್ವಾಜ್ ರಂಗನ್ ರವರ ಅಭಿಪ್ರಾಯ.
ರಂಜಿತ್ ಅವರಿಗೆ ಬಹುದೊಡ್ಡ ಬ್ರೇಕ್ ಸಿಕ್ಕಿದ್ದು ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದ ರಜನಿಕಾಂತ್ ಅವರನ್ನ ಭೇಟಿಯಾದಾಗ. ಇವರಿಬ್ಬರ ಜೋಡಿ ಎರಡು ಮೆಗಾ ಹಿಟ್ಗಳನ್ನ ನೀಡಿತು. ಕಾಲ (ಕಪ್ಪು) ಚಿತ್ರದಲ್ಲಿ ರಜನಿಕಾಂತರದು ದಲಿತನ ಪಾತ್ರ. ಮುಂಬೈ ಸ್ಲಾಮ್ ಒಂದರಲ್ಲಿ ಬದುಕುವ ಈತ ಭ್ರಷ್ಟ ರಾಜಕಾರಣಿಯೊಬ್ಬನನ್ನ ಎದುರಿ ಹಾಕಿಕೊಳ್ಳುತ್ತಾನೆ. ಕಬಾಲಿ ಈ ಜೋಡಿಯ ಮತ್ತೊಂದು ಚಿತ್ರ. ಎರಡು ಚಿತ್ರಗಳು ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಬಾರಿ ಸದ್ದುಮಾಡಿದವು.
“ಮೊದಲೆಲ್ಲಾ ನಿರ್ಮಾಪಕರು ಇಂತಹ ಚಿತ್ರದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದರು. ಹೂಡಿದ ದುಡ್ಡು ವಾಪಸ್ ಬರಲ್ಲ ಅಂತ ಸಬೂಬು ಹೇಳುತ್ತಿದ್ದರು. ನನ್ ಐಡಿಯಾ ತುಂಬಾ ಸಿಂಪಲ್. ಮುಖ್ಯ ವಾಹಿನಿ ಚಲನ ಚಿತ್ರಗಳ ವೀಕ್ಷಕರು ಕೂಡ ನಮ್ಮ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವಂತಹ ಎಂಟರ್ಟೈನಿಂಗ್ ಚಿತ್ರ ಮಾಡಬೇಕು” ಎನ್ನುತ್ತಾರೆ ರಂಜಿತ್.
ಜಾತಿ ದಬ್ಬಾಳಿಕೆ ಹಾಗು ತಾರತಮ್ಯ ಕುರಿತಾದ ತೀಕ್ಷ್ಣ ನಿಷ್ಪಕ್ಷಪಾತ ವಿಮರ್ಶೆಗಳನ್ನ ಹಿಂದೂ ಧರ್ಮದ ಟೀಕೆಯೆಂದೇ ಗ್ರಹಿಸುವ ಹಿಂದೂ ರಾಷ್ಟ್ರವಾದಿಗಳ ತೀವ್ರ ವಿರೋಧ ರಂಜಿತನನ್ನ ವಿಚಲಿತಗೊಳಿಸಿಲ್ಲ. ಹಿಂದೂ ಫೋಬಿಯ ಎಲ್ಲರ ಮನಸಲ್ಲಿ ಮೂಡಿಸಿದ ಆರೋಪವೂ ರಂಜಿತ್ ಮೇಲಿದೆ. ಪುರಾತನ ಹಿಂದೂ ರಾಜನ ಬಗ್ಗೆ ನೀಡಿದ ಹೇಳಿಕೆಯಿಂದ ರಂಜಿತ್ ವಿರುದ್ಧ ದೂರು ದಾಖಲಾಗಿದೆ. ಈ ದೂರುಗಳು, ನಿಂದನೆಗಳಾವುದರ ಬಗ್ಗೆಯು ರಂಜಿತ್ ತಲೆ ಕೆಡಿಸಿಕೊಂಡಿಲ್ಲ. “ಜನ ನನ್ನನ್ನ ಮುಂಗೋಪಿ ಅಂತ ಅಂದುಕೊಂಡಿದ್ದಾರೆ ಆದರೆ ನಾನು ಮುಂಗೋಪಿಯಲ್ಲ. ನನ್ನ ದೈವ ಅಂಬೇಡ್ಕರ್ ರಂತೆ ನಾನು ಕೂಡ ಹಠಮಾರಿ ಮತ್ತು ನನ್ನ ಗುರಿಗಳಿಗೆ ಸದಾ ಬದ್ಧನಷ್ಟೇ. ಸಮಾನತೆಯೊಂದೇ ನಾನು ಮುಂದಿನ ಪೀಳಿಗೆ ಬಿಟ್ಟು ಹೋಗ ಬಯಸುವ ಸ್ವತ್ತು.” ಎನ್ನುತ್ತಾರೆ ರಂಜಿತ್.
(ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾದ ನಿಹಾ ಮಸಿಹ ಅವರ ಲೇಖನ) ಅನುವಾದ: ಹರೀಶ್ ಗಂಗಾಧರ್
ಸುದ್ದಿದಿನ.ಕಾಂ|ವಾಟ್ಸಾಪ್|9980346243