ಭಾವ ಭೈರಾಗಿ

ಕವಿತೆ | ರಾಮ‌ ಅರ್ಜಿ ಹಾಕಿದ್ದಾನೆ

Published

on

  • ಬಿ.ಟಿ.ಲಲಿತಾ ನಾಯಕ್

ರಾಮ ಅರ್ಜಿ ಹಾಕಿದ್ದಾನೆ
ನೆಲ ಇಲ್ಲ ಆತನಿಗೆ
ವಾಸಕ್ಕೆ ಮನೆ ಇಲ್ಲ ಕೊಡುವಿರಾ ಬಡ ಜನರೆ ಒಂದು ಇಟ್ಟಿಗೆಯನ್ನು
ದಯವಾ ತೋರುವಿರಾ?
ಬೀದಿ ರಾಮನಿಗೊಂದು ಸೂರು ಕಟ್ಟಲೇಬೇಕು
ಸಹಿಯ ಹಾಕುವಿರಾ?

ಪರರ ಮನೆಯ ಮುರಿಯುತ್ತಾನೆ ಶ್ರೀರಾಮ
ತನಗಾಗಿ ಗುಡಿಯ ಕಟ್ಟುತ್ತಾನೆ
ಊರೂರು ವಲಸೆ ಹೊರಡುತ್ತಾನೆ
ಭಾರಿ ಸುದ್ಧಿಯ ನಡುವೆ ಈ ರಾಜಾರಾಮಾ
ಕಾಣಿಕೆಗೆ ಕೈ ಚಾಚುತ್ತಾನೆ
ಬೆಂಕಿ ಹಚ್ಚುತ್ತಾನೆ ‘ ಸೀತೆಯ’ ಸೆರಗಿಗೆ
ಧರಣಿ ಧಗಧಗಿಸಿದಾಗ ಗಹಗಹಿಸುತ್ತಾನೆ
ಎಳೆಯ ಲವಕುಶರ ತಬ್ಬಲಿಗಳಾಗಿಸಿ
ವೃದ್ಧ ಕೌಸಲೈಯರ ಬೀದಿ ಪಾಲಾಗಿಸುತ್ತಾನೆ

ನೆನಪಿರಹುದು ನಿಮಗೆ ರಾಮಾಯಣ
ಹಿಂದೆ ವಾನರ ಸೇನೆ ಸ್ನೇಹ ಸೇತುವೆ ಕಟ್ಟಿ
ನೊಂದವರ ಒಂದುಗೂಡಿಸಿತ್ತು
ಇಂದು- ರಾಮಭಂಟರ ರುದ್ರಕುಣಿತಕ್ಕೆ
ಈ ನೆಲದ ಮಣ್ಣು ನೆತ್ತರಾಯಿತು

ಸಾಧು ವೇಷವ ನಂಬಿ ಸೀತೆ ಕೆಟ್ಟಳು ಅಂದು
ದೇಶವನೇ ಸುಡುತಲಿದೆ ಆ’ ವೇಶ’ ಇಂದು

ರಾಮನಾಮದ ಹಿಂದೆ
ರಾಜಭೋಗದ ಬಯಕೆ
ಜೊಲ್ಲು ತೊಟ್ಟಿಕ್ಕುತ್ತಿದೆ
ಕಣ್ತೆರೆದು ನೋಡಿ
ನಕಲಿ ಧರ್ಮದ ಅಮಲು
ಬಲಿಪೀಠ ನಿರ್ಮಿಸಿದೆ
ಎಷ್ಟು ಕೊರಳುಗಳು ಗುರಿಯೋ ಎಣಿಸಿಕೊಳ್ಳಿ

ಮುಕ್ತಾಯ ಕಾಂಡವಿದು
ಎಂದು ಭ್ರಮಿಸದಿರಿ
ರಾಮ-ರಾವಣರ ಕದನ ಮುಗಿದಿಲ್ಲ
ಕುಂಭಕರ್ಣರು ನಾವಾಗುವೆವಾದರೆ
ಕಥೆಯು ಇಂದೇ ಆರಂಭ

(ಬಿ.ಟಿ.ಲಲಿತಾನಾಯಕ್ ಅವರ ‘ಒಡಲ ಬೇಗೆ‘ ಕವನ ಸಂಕಲನ ದಿಂದ ಈ ಕವಿತೆಯನ್ನು ಆಯ್ದು ಕೊಳ್ಳಲಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version