ಅಂತರಂಗ

ಹಳದಿ ಕನ್ನಡಕ ತೆಗೆದು ನೋಡೋಣವೇ..?

Published

on

  • ಹಿರಿಯೂರು ಪ್ರಕಾಶ್

ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದಂತೆಲ್ಲಾ ಜನರಲ್ಲಿ ಪ್ರಜ್ಞಾವಂತಿಕೆ ಕೂಡಾ ಹೆಚ್ಚಾಗುತ್ತಿದೆ. ಜಗತ್ತಿನ ಸುದ್ದಿಗಳು ಅಂಗೈಯಲ್ಲೇ ಅರೆಕ್ಷಣದಲ್ಲಿ ನರ್ತಿಸುವುದರಿಂದ ಅವುಗಳ ಬಗೆಗಿನ ಕುತೂಹಲ, ಆಕರ್ಷಣೆ, ಸರಿ ತಪ್ಪುಗಳ ವಿಮರ್ಶೆ ಎಲ್ಲವೂ ಸಹಜವೆಂಬಂತೆ ಜರುಗುತ್ತಿವೆ.

ಹೀಗಾಗಿ ಫೇಸ್ ಬುಕ್, ವಾಟ್ಸಪ್, ಟ್ವೀಟ್, ಇನ್ಸ್ಟಾ ಗ್ರಾಂ… ಮುಂತಾದೆಲ್ಲೆಡೆ ಪರಸ್ಪರ ಪರಿಚಯ, ಚರ್ಚೆ, ವಾದ -ವಿವಾದ , ವಿಚಾರ -ವಿಮರ್ಶೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದನ್ನು ಕಾಣಬಹುದು. ಹೀಗಾಗಿ ಫೇಸ್ ಬುಕ್ ನಲ್ಲಿ ಅನೇಕ ವಿಚಾರಗಳ ಬಗೆಗೆ ಬರೆಯುವವರ ಸಂಖ್ಯೆ ಹೆಚ್ಚಾದಂತೆ, ಬರೆದದ್ದನ್ನು ವಿಮರ್ಶಿಸುವವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ . ಅನೇಕ ವಿಷಯಗಳ ಮೇಲೆ ಸಾವಿರಾರು ಜನರ ಅಭಿರುಚಿ ಅಭಿಪ್ರಾಯಗಳು ಕ್ರೋಢೀಕರಣಗೊಂಡು ಒಂದು ಆರೋಗ್ಯಕರ ಚರ್ಚೆಗೆ ವೇದಿಕೆಗಳಾಗಿ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಇವು ರೂಪುಗೊಂಡಿವೆ. ಇದು ಸ್ವಾಗತಾರ್ಹ ಬೆಳವಣಿಗೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದನ್ನೇ ಮತ್ತೊಂದು ಆಯಾಮದಿಂದ ನೋಡುವುದಾದರೆ, ಇಂದಿನ ಕಾಲಘಟ್ಟದಲ್ಲಿ ಒಂದು ವಿಚಾರದ ಬಗೆಗೆ ಆರೋಗ್ಯಕರ ಚರ್ಚೆಗಳು ನೆಡೆಯುವುದಕ್ಕಿಂತಲೂ ಹೆಚ್ಚಾಗಿ ತಮ್ಮ ಅಭಿಪ್ರಾಯಗಳಿಗೆ ಅಥವಾ ತಾವು ನಂಬಿದ ಸಿದ್ದಾಂತಗಳಿಗೆ ವಿರುದ್ಧವಾದ ವಿಚಾರವೇನಾದರೂ ಇದ್ದಲ್ಲಿ ಅದರ ಸಾಧಕ‌ ಭಾಧಕಗಳ ಅರ್ಥಪೂರ್ಣ ಚರ್ಚೆಗಿಂತ ಮಿಗಿಲಾಗಿ ಪೂರ್ವಾಗ್ರಹ ಪೀಡಿತವಾದ ವಿಷಯ ಮಂಡನೆಗಳು, ಜಾತಿ- ಮತ, ರಾಜಕೀಯ, ಪಕ್ಷ ಆಧಾರಿತ ದ್ವೇಷಪೂರಿತ ಪ್ರತಿಕ್ರಿಯೆಗಳು , ನಿಂದನೆ , ಆರೋಪ , ಪಕ್ಷಪಾತ ಎಲ್ಲವೂ ಒಟ್ಟೊಟ್ಟೊಗೇ ವಕ್ಕರಿಸಿಬಿಡುತ್ತವೆ. ಯಾರು ಹೆಚ್ಚು ಯಾವುದು ಶ್ರೇಷ್ಠ ಎನ್ನುವ ಅನಾರೋಗ್ಯಕರ ಮೇಲಾಟದಲ್ಲಿ ಮಾನವೀಯ ಮೂಲಗಳನ್ನೇ ಹೊಸಕಿ ಬಿಸುಡುವ ಹಂತಕ್ಕೆ ಹೋಗಿ ತಲುಪಿರುತ್ತದೆ.

ಅಪ್ಪಿತಪ್ಪಿ ಮೋದಿಯವರ ಸರ್ಕಾರದ ಉತ್ತಮ ಸಾಧನೆಯನ್ನು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ದಿಟ್ಟ‌ ನಿರ್ಧಾರಗಳನ್ನು ಹೊಗಳಿದರೆ ನೀವು ಬಲಪಂಥೀಯ ಅಥವಾ ಹಿಂದೂವಾದಿಯಾಗಿ ಗೋಚರಿಸುತ್ತೀರ. ಅದೇ ರೀತಿ ಕಾಂಗ್ರೆಸ್‌ನ ಕೆಲವು ಹಿಂದಿನ ಸಾಧನೆಗಳನ್ನು ಮೆಚ್ಚಿ ಹೇಳಿದರೆ ನೀವು ಎಡ ಪಂಥೀಯನಾಗಿ ಅಪಹಾಸ್ಯಕ್ಕೀಡಾಗಿಬಿಡುತ್ತೀರ.

ಸ್ವಲ್ಪಮಟ್ಟಿಗೆ ಜಾತ್ಯಾತೀತತೆಯ ನೆರಳಲ್ಲಿ ಬರೆದರೆ ಬು(ಲ)ದ್ದಿಜೀವಿಯೆಂದೋ , ವಸ್ತುನಿಷ್ಠ ವಾಗಿ ವಿಮರ್ಶಿಸುವವ ಗಂಜಿಕಿರಾಕಿಯಾಗಿಯೋ ಕಂಗೊಳಿಸುವಂತೆ ಎಲ್ಲೆಡೆ ಅಸಹ್ಯಕರ ವಾಂತಿಯಾಗಿರುತ್ತದೆ. ತಮ್ಮ ಪಕ್ಷವನ್ನು ಹೊಗಳುವ ಸಿನಿಮಾ ನಟ ಅಥವಾ ನಟಿಯನ್ನು ಹಿಂದೆ ಮುಂದೆ ನೋಡದೆ ಆರಾಧಿಸುವ ಹಾಗೆ ಅವರು ಹಿಂಬಾಲಿಸುವ ಪಕ್ಷದ ತಪ್ಪುಗಳನ್ನು ಎತ್ತಿ ತೋರಿಸುವ ನಟ ನಟಿಯ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡೋದು….ತೀರಾ ಅಸಹ್ಯವಾಗಿ ಟ್ರೋಲ್ ಮಾಡುವುದು ನಿತ್ಯದ ಪ್ರಕ್ರಿಯೆಯಾಗಿದೆ.

ಯಾರಾದರೂ ಅಪರಾಧ ಮಾಡಿ ತಗಲಾಕಿಕೊಳ್ಳುವ ಮುನ್ನ ತಮ್ಮ ಪಕ್ಷದವರೆಂದು ರಾಜಾರೋಷವಾಗಿ ಹೇಳುತ್ತಿದ್ದವರು , ಅವರ ಅಪರಾಧ ಬಯಲಿಗೆ ಬಂದ ಕೂಡಲೇ ಅವರ ವರಸೆ ಬದಲಾಯಿಸಿ ಅವರನ್ನು ತಮ್ಮವರೆಂದು ಒಪ್ಪಿಕೊಳ್ಳಲು ತಯಾರಾಗದೇ ಅದನ್ನು ವಿರೋಧಿಗಳ ಹಣೆಗೆ ಕಟ್ಟುವ ಚಾಳಿ ಪರಸ್ಪರ ಕೆಸರೆರೆಚಾಟ ಮಾಮೂಲಿಯಾಗಿ ಬಿಟ್ಟಿದೆ.

ಕೆಲವರಂತೂ ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ನೀವು ಏನೇ ಬರೆದರೂ ತಮ್ಮ ಪಕ್ಷಾಧಾರಿತ ಚೌಕಟ್ಟನ್ನು ಮೀರಿ ಹೊರಬರಲಾರರು. ಮತ್ತೇ ಕೆಲವರು ತಮ್ಮ ಧರ್ಮ ಅಥವಾ ಜಾತಿಯ ವ್ಯೂಹದಿಂದ ಆಚೆಗೆ ಏನನ್ನೂ ನೋಡುವ ಅರ್ಹತೆಯನ್ನೇ ಕಳೆದುಕೊಂಡುಬಿಟ್ಟಿರುತ್ತಾರೆ. ಬೇರೆಯವರ ಜಾತಿ ಹಾಗೂ ಧರ್ಮಗಳು ಇಂಥವರ ಕಣ್ಣಿಗೆ ಅಸಹ್ಯವಾಗಿಯೇ ಕಾಣುತ್ತವೆ.

ಉದಾಹರಣೆಗೆ ಒಂದಷ್ಟು ಜನಕ್ಕೆ ಮೋದಿಯವರನ್ನು ಹಿಂದೂಗಳನ್ನು ಕಂಡರೆ ನಖ‌ಶಿಖಾಂತ ಉರಿದುಕೊಂಡು ಹೀಯ್ಯಾಳಿಸದಿದ್ದರೆ ಸಮಾಧಾನವಿರೋದಿಲ್ಲ. ಮತ್ತೇ ಹಲವರಿಗೆ ಇಂದಿರಾ ನೆಹರೂ ಫ಼್ಯಾಮಿಲಿ ಕಂಡರೆ ಕೆಂಡದಂಥ ಕೋಪ. ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳುವ ಹಾಗೇ ಇಲ್ಲ. ರಾಮನಿಗೆ ಬಾಬರ್ ಕಂಡರೆ ದ್ವೇಷದಂತೆ , ಬಾಬರ್ ಗೆ ರಾಮನನ್ನು ಕಂಡರೆ ಈರ್ಷ್ಯೆಯಂತೆ
ಅನ್ಯ ಧರ್ಮೀಯರ ಪ್ರತೀ ನಡೆಯಲ್ಲೂ ವಿವಾದ ಹುಡುಕುವ ಪ್ರಯತ್ನ ಮುಂದುವರೆಸುತ್ತಾ ಮಂದಿರ ಮಸೀದಿ ಗಳನ್ನು ವಾರ್ ಫ಼ೀಲ್ಡ್ ಮಾಡಿಕೊಂಡು ಬಿಟ್ಟಿರುತ್ತಾರೆ.

ಅನಗತ್ಯ ಪೋಸ್ಟ್ ಗಳಿಂದ ಸಾಮಾನ್ಯ‌ ಜನಜೀವನವನ್ನೇ ‌ಕಂಗೆಡಿಸಿಬಿಡುತ್ತಾರೆ. ಯಾವನೋ ಒಬ್ಬ ಒಂದು ಧರ್ಮದ ವಿಚಾರದಲ್ಲಿ ಅಯೋಗ್ಯತನದ ಕೆಲಸ ಮಾಡಿದರೆ, ಅಪರಾಧ ಮಾಡಿದರೆ ಅವನು ಮೊದಲು ಯಾವ ಪಾರ್ಟಿಯವನೆಂದು , ಯಾವ ಧರ್ಮಕ್ಕೆ ಸಂಘಟನೆಗೆ‌ ಸೇರಿದವನೆಂದು ‌ಅಳೆದು ತೂಗಿ ಪ್ರತಿಕ್ರಿಯಿಸುತ್ತಾರೆಯೇ ಹೊರತು ಅವನ‌ ಕುಕೃತ್ಯವನ್ನು ಮನಸಾರೆ ಖಂಡಿಸುವ ಹೃದಯ ವೈಶಾಲ್ಯತೆ ಇರುವುದಿಲ್ಲ.

ಅಂದರೆ ಧರ್ಮಾಂಧನೊಬ್ಬ ತನ್ನ ಜಾತಿ- ಧರ್ಮಕ್ಕೆ ಸೇರಿದವನಾಗಿ ಎಂತಹಾ ಹಲ್ಕಾ ಕೆಲಸ ಮಾಡಿದರೂ ಅವನನ್ನು‌ ನಿರ್ಲಜ್ಜವಾಗಿ ಸಮರ್ಥಿಸಿಕೊಳ್ಳುವ ಮನಸ್ಥಿತಿಯ ಮಹಾನುಭಾವರು ನಮ್ಮ‌ ನಡುವೆ‌ ಹೆಚ್ಚಾಗುತ್ತಿದ್ದಾರೆ . ಅವನ‌ ಜಾತಿ ಧರ್ಮ ಪಕ್ಷದ ಹಿನ್ನೆಲೆ ನೋಡದೇ ಕೇವಲ ಅವರ ತಪ್ಪು ತಪರಾಕಿಗಳನ್ನು‌ ನೀವು ವಸ್ತುನಿಷ್ಠ ವಾಗಿ ಬರೆದರೋ…ಅಲ್ಲಿಗೆ ನಿಮ್ಮ ಮೇಲೆ ಎಡ ಬಲ ಗಂಜಿ ಎಂಬಿತ್ಯಾದಿ ವಿಶೇಷಣಗಳ ಬಾಣಗಳಿಂದ ಇಲ್ಲ ಸಲ್ಲದ ಯುದ್ಧಕ್ಕೆ ರೆಡಿಯಾಗುವ ಮಹಾನ್ ಸರಸ್ವತಿ ಪುತ್ರರು ಸಾಮಾಜಿಕ ಜಾಲತಾಣಗಳ ಸೈನ್ಯದಲ್ಲಿ ಶಸ್ತ್ರ ಸಜ್ಜಿತರಾಗಿ ಕಾದುಕುಳಿತಿರುತ್ತಾರೆ.!!

ಯಾಕೆ ಹೀಗೆ…??? ಒಂದು‌ ವಿಷಯವನ್ನು ಅದರ ಸತ್ಯದ ಹಾಗೂ ವಾಸ್ತವದ ನೆರಳಲ್ಲೇ ನೋಡಿ ನೈಜತೆಯಿಂದ ಹೇಳುವ , ಬರೆಯುವ ಅಥವಾ ವಿಮರ್ಶಿಸುವ ಪರಿಸ್ಥಿತಿ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣವಾಗಿ ಕಾಣೆಯಾಗುತ್ತಿದೆಯೇ ? ವಾಸ್ತವಿಕ ನೆಲೆಗಟ್ಟಿನಲ್ಲಿ ಪ್ರಶ್ನಿಸುವುದು ಅಪರಾಧವಾಗಿ ಕಂಡುಬರುತ್ತಿದೆಯೇ ? ಎಲ್ಲವನ್ನೂ ನಮ್ಮ ನಮ್ಮ‌ ಮೂಗಿನ‌ ನೇರಕ್ಕೇ ನೋಡಿ ನಿರ್ಧರಿಸುವ ಪರಿಯೇ ಇಂದಿನ ಆದೇಶವೇ ? ವಿದ್ಯೆಗೂ ವಿವೇಕಕ್ಕೂ ಸಂಬಂಧವಿಲ್ಲದಂತೆ ವರ್ತಿಸುವ ರೀತಿಯಲ್ಲಿ ಮನುಷ್ಯನ ಕಾಮನ್ ಸೆನ್ಸ್ ಕಾಣೆಯಾಗುತ್ತಿರುವುದರ ಬಗ್ಗೆ ಯಃಕಿಂಚಿತ್ ಅಳುಕೂ, ಆತ್ಮವಿಮರ್ಶೆ ಇಲ್ಲವಾಗುತ್ತಿದೆಯೇ ?

ತಮಾಷೆ ಹಾಗೂ ವಿಪರ್ಯಾಸವೆಂದರೆ ಈ ಎಲ್ಲಾ ಉಲ್ಟಾ ಬೆಳವಣಿಗೆಗೆ ಅವಿದ್ಯಾವಂತರು ಕಾರಣರಲ್ಲ. ಅವರೆಲ್ಲಾ ಮೊದಲು ಹೇಗಿದ್ದರೋ ಈಗಲೂ ಅದೇ ಮುಗ್ದತೆ ಮತ್ತು ಅಮಾಯಕತನವನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ ವಿದ್ಯಾವಂತರೆನ್ನುವ ಗುಂಪುಗಳ ನಡುವೆ ಈ ವೈಷಮ್ಯದ ಮೇಲಾಟ ದ್ವೇಷಮಯವಾಗಿ ಮಾರ್ದನಿಸುತ್ತಿರುವುದು ದೇಶದ ಭವಿಷ್ಯಕ್ಕೇ ಮಾರಕ. ಇನ್ನೂ ನೋವೆಂದರೆ ಇದರ ಗಂಭೀರತೆಯನ್ನು ಅರಿಯದೇ ಅದನ್ನು ಪೋಷಿಸುವ ಕೆಲಸ ಅವ್ಯಾಹತವಾಗಿ ನೆಡೆಯುತ್ತಿರುವುದು !

ಗೆಳೆಯರೇ, ಸಾಮಾಜಿಕ ಜಾಲತಾಣದಲ್ಲಿ ಯಾರು ಯಾರನ್ನೂ ಬದಲಾಯಿಸಲು ಅಥವಾ ಪ್ರಭಾವ ಬೀರಲು ಸಾಧ್ಯವಿಲ್ಲ . ಎಲ್ಲರೂ ಅವರವರ ನೇರಕ್ಕೆ ಸರಿಯೇ ! ಆದರೆ ಒಂದು ವಿಚಾರ ತನಗೆ ಇಷ್ಟವಾಗದಿದ್ದರೂ ಒಂದು ಆರೋಗ್ಯಕರ ಚರ್ಚೆಗೆ ಒಳಪಡುವ ಮನಸು‌ ಬಹಳಷ್ಟು ಜನರಿಗೆ ಇಲ್ಲವಾಗಿರುವುದು ಆತಂಕಕಾರಿ ಪ್ರವೃತ್ತಿ. ಈ ರೀತಿಯ ರೋಗಗ್ರಸ್ತ ಮನಸುಗಳಿಂದ ನರಳುವವರ ಭಯಾನಕ ಕೃತ್ಯಗಳ ಪರಿಣಾಮ ಸಮಾಜದ ಭಾವೈಕ್ಯತೆಯ ದೃಷ್ಟಿಯಿಂದ ತೀರಾ ಅಪಾಯಕಾರಿ.

ಈ ಎಲ್ಲದಕ್ಕೂ ಕಾರಣ – ಸಮಾಜದ ಇಡೀ ವ್ಯವಸ್ಥೆಯನ್ನು ಬಹುಪಾಲು ಜನ ಪೂರ್ವಾಗ್ರಹ ಪೀಡಿತರಾಗಿ, ಹುಟ್ಟುವ ಮುನ್ನ ಹೀಗೇ ಇಂತಹದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಗುಜರಾಯಿಸಿ ಹುಟ್ಟಿದವರಂತೆ ಭಾವಿಸಿ, ಹಳದಿ‌ ಕನ್ನಡಕ ಧರಿಸಿ ನೋಡುತ್ತಿರುವುದೇ ಆಗಿದೆ. ಆರೋಗ್ಯಕರ ಚರ್ಚೆಯ ತಕ್ಕಡಿಯಲ್ಲಿ ತೂಗಿದ ವಿಚಾರಗಳು ಎಲ್ಲರಲ್ಲೂ ಉತ್ಸಾಹ ಉಲ್ಲಾಸವನ್ನು‌ ಮೂಡಿಸುವಂತಿದ್ದರೂ ಅದನ್ನು ಮರೆತು ಜಾತಿ- ಧರ್ಮ, ಪಕ್ಷ, ಹುಸಿ ತತ್ವದ ಕುರುಡಲ್ಲಿ ವಾಸ್ತವವನ್ನು ಕಸದಂತೆ ಹೊಸೆದು ಬಿಸುಡುವ ದಾನವತೆ ಮೈಮೇಲೆ ಬಂದಂತಾಡುವ ಮನಸ್ಥಿತಿ ಮೆರೆಯುತ್ತಲಿದೆ.

ಮರೆಯುವ ಮುನ್ನ

ಕೇವಲ ಉನ್ನತ ವಿದ್ಯೆಯಿಂದ, ಹುದ್ದೆಯಿಂದ ನಾವು ದೊಡ್ಡವರಾಗುವುದಿಲ್ಲ. ನಾವು ಕಲಿತ ವಿದ್ಯೆ ನಮಲ್ಲಿನ ವಿವೇಕ‌, ಬುದ್ದಿ ಹಾಗೂ ಮುಖ್ಯವಾಗಿ ಸಾಮಾನ್ಯ ಜ್ಞಾನವನ್ನು ವೃದ್ದಿಗೊಳಿಸುವಂತಿದ್ದರೆ ಮಾತ್ರವೇ ವಿದ್ಯಾವಂತರಾಗಿದ್ದಕ್ಕೂ ಸಾರ್ಥಕ. ಇಲವಾದಲ್ಲಿ ಅದು ನಾಯಿ ಮೊಲೆಯಲ್ಲಿನ ಹಾಲಂತೆ ಸಮಾಜಕ್ಕೆ‌ ನಿಷ್ಪ್ರಯೋಜಕ. ನಮ್ಮಿಂದ ಮತ್ತೊಬ್ಬರಿಗೆ ಒಳ್ಳೆಯದಾಗದಿದ್ದರೂ ಪರವಾಗಿಲ್ಲ ಆದರೆ ಕೆಟ್ಟದ್ದನ್ನು ಬಯಸುವ, ಮಾಡುವ ಕೆಲಸ ಆಗದಿದ್ದರೆ ಅದೂ ಈ ಸಮಾಜಕ್ಕೆ ಮಾಡುವ ಉಪಕಾರದಂತೆ ! ದೀಪದಿಂದ ದೀಪ ಹಚ್ಚುವ ಕೆಲಸವಾಗಬೇಕೇ ವಿನಃ ಬೆಂಕಿ ಹಚ್ಚುವ ಕೃತ್ಯವಾಗಬಾರದು. ಸಾಮಾಜಿಕ ಜಾಲತಾಣಗಳು ತಂತ್ರಜ್ಞಾನ ಇವೆಲ್ಲವನ್ನೂ ಮನುಷ್ಯತ್ವದ ತತ್ವದಾಧರದಲ್ಲಿ ಆರೋಗ್ಯಕರ ರೀತಿಯಲ್ಲಿ‌ ಬಳಸಿದರೆ ಮಾತ್ರವೇ ನಾಡಿಗೆ ಕ್ಷೇಮ ! ಇಲ್ಲವಾದಲ್ಲಿ ಮುಂದೊಂದು ದಿನ ಅದರಿಂದ ಮಾನವೀಯ ಮೌಲ್ಯಗಳ ಕ್ಷಾಮ !

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version