ಭಾವ ಭೈರಾಗಿ

ಕವಿತೆ | ಎಲ್ಲಿರುವನಯ್ಯ ಆ ನಿಮ್ಮ ದೈವ

Published

on

  • ಷಕೀಬ್ ಎಸ್ ಕಣದಮನೆ ನವಿಲೇಹಾಳ್

ಯಾವುದಕ್ಕಾಗಿ ಪ್ರಾರ್ಥಿಸಲಿ
ಯಾರಿಗಾಗಿ ಪ್ರಾರ್ಥಿಸಲಿ
ಎಲ್ಲಿಹನು ಆ ನಿಮ್ಮ ದೈವ
ದೈವ ದೈವ ಎನ್ನುವಿರಿ
ದೇವರ ನಾಮದಿ ಹೊಡೆದಾಡುವಿರಿ

ಉತ್ತರವೇ ಸಿಗದಂತೆ ತತ್ತರಿಸಿ
ಸೂರು ಕಳೆದಕೊಂಡಾಗ
ಎಲ್ಲಿರುವನು ಆ ನಿಮ್ಮ ದೈವ
ದಿಕ್ಕೇ ತೋಚದಂತಾದ
ದಕ್ಷಿಣಕ್ಕಿಹನ ಆ ನಿಮ್ಮ ದೈವ
ಮಹಾಮಾರಿ ಕೊರೋನಾದಿಂದ ಕರಗಿದ ಕಾರ್ಮೋಡದಲ್ಲಿಹನ ಆ ನಿಮ್ಮ ದೈವ

ಯಾವುದಕ್ಕಾಗಿ ಯಾರಿಗಾಗಿ ದೈವ
ಜಾತಿ-ಧರ್ಮ, ಮೇಲು-ಕೀಳು,
ಮಠ-ಮಂದಿರ, ಮಸೀದಿ-ಚರ್ಚು,
ಗುಡಿ-ಗೋಪುರಗಳೆಂದು ಕಾಲ್ಕೆರೆದು
ಎದೆಬಡೆದು ಕಿರುಚಾಡಿ-ಅರ್ಚಾಡುತ ಹೊಡೆದಾಡುತ್ತಿರುವಿರಲ್ಲಯ್ಯ
ಎಲ್ಲಿಹನು ಆ ನಿಮ್ಮ ದೈವ

ದೊಪ್ಪನೆ ಮಳೆ ಸುರಿದು ಕಡುಕಷ್ಟದಲಿ
ಬೆಳೆಸಿದ ಬೆಳೆ ನಾಶವಾಗುವಾಗ
ಎಲ್ಲಿಹನು ಆ ನಿಮ್ಮ ದೈವ
ಹಸಿದೊಟ್ಟೆಯಲಿ ಹರೆಬಟ್ಟೆಯಲಿ
ಒಪ್ಪೊತ್ತಿನ ಅನ್ನಕ್ಕಾಗಿ ಪರದಾಡುತ್ತಿರುವರಿಗೆ
ಎಲ್ಲಿಹನು ಆ ನಿಮ್ಮ ದೈವ

ಪೂಜೆ-ಪುನಸ್ಕಾರ, ನಮಾಜ್-ದುವಾ,
ಪ್ರಾರ್ಥನೆಗಳೆಲ್ಲಾ
ಯಾರಿಗಾಗಿ ಯಾವುದಕ್ಕಾಗಿ
ಮನುಷ್ಯತ್ವ ಮಾನವೀಯತೆ ಮರುಕ
ಮೌಲ್ಯವಿಲ್ಲದ ಧರ್ಮದ ದರ್ಪ
ಯಾವುದಕ್ಕಾಗಿ ಯಾರಿಗಾಗಿ
ಧರ್ಮ ದೈವದ ನಾಮದಲಿ
ದರೋಡೆಮಾಡುವ ದುಷ್ಟರಿರುವಾಗ
ಯಾವುದಕ್ಕಾಗಿ ಪ್ರಾರ್ಥಿಸಲಿ
ಯಾರಿಗಾಗಿ ಪ್ರಾರ್ಥಿಸಲಿ..?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version