ಭಾವ ಭೈರಾಗಿ
ಕವಿತೆ | ಮಣ್ಣು- ಬಿತ್ತ
- ಹೆಚ್. ಆರ್. ಸುಜಾತಾ
ಕಟ್ಟಿಟ್ಟಿದ್ದ ಬಿತ್ತಕೆ ಉಸಿರಾಗಲು
ಮಣ್ಣ ಮೈ ಹುಡಿಹುಡಿ ಆಗುತ್ತಾ ಕೂಡುತ್ತ
ಗಾಳಿನೀರು ಬಿಸಿಲುಗಳ ಒಳಸೆಳೆಯುತ್ತ
ಬಿಸಿಲುಬೆಳದಿಂಗಳೊಡಗೂಡಿ
ಕೂಡುಣ್ಣುವ ಸುಖವನ್ನು ಎದೆಗಿಳಿಸಿಕೊಳ್ಳುತ್ತಾ
ಬಿತ್ತದ ಬೇರನ್ನು ಒತ್ತಿಕೊಳ್ಳುತ್ತಾ
ಹೊರಬಿಟ್ಟ ಚಿಗರುಗಣ್ಣಿಗೆ ಕೈಯೂರಲು ಹೆಗಲಾಗುತ್ತಾ
ಒಳಗಣ್ಣಲಿ ಬೇರುಗಣ್ಣಿನ ಬೆರಗನ್ನು ಸಿಂಬೆಸುತ್ತುತ್ತ ಮುತ್ತುತ್ತ ಇರುವಾಗ..,
ತನ್ನ ಮೈ ಸುತ್ತಿಕೊಂಡು
ಅಗಲದ
ಮಣ್ಣಕಣಕಣವನು ಹರಿದು ಮರೆತು
ಜಿಗಿದು ಆಗಸಕೆ ನೆಗೆಯುವಾಸೆ!
ಎತ್ತರದ ನೆಟ್ಟನೆಯ ಮರಕೆ!!
ಅರಿಯದದು ನೆಲಕುರುಳುವ ಕಾಲದಲ್ಲೂ
ಮಣ್ಣು ಆತು ತನ್ನ ಕರಗಿಸಿಕೊಳ್ಳುವ ಪರಿಯನ್ನು
ಮಣ್ಣು ತಾನು ತಾನಾಗುಳಿವುದೇ
ಮಣ್ಣಿನ ತಿಳುವಳಿಕೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243