ಭಾವ ಭೈರಾಗಿ
ಕವಿತೆ | ಅರಳು ಮುನ್ನ ಬಾಡಿದ ಬದುಕು
- ತಿಮ್ಮೇಶ್ ದೇವಸುತ
ದೇಹ ಬೆಳದಿಲ್ಲ ಹೃದಯ ಬಯಸಿಲ್ಲ
ಯೌವ್ವನದ ಭಾವ ಮೂಡಿಲ್ಲ,
ತಾಳಿ ಬೆಲೆ ಗೊತ್ತಿಲ್ಲ;
ವಿವಾಹ ಬಂಧನಕ್ಕೊಳಪಟ್ಟಳು
ರಾಜಕುಮಾರಿ……ಈ…….ಕಿಶೋರಿ
ಅವಳ ಕಥೆ ಸಂಯಮದ ದುರ್ಗತೆ
ಆಡಿ ಕಲಿತು ನಲಿಯಬೇಕಾದ ಪುಟ್ಟ ಪೋರಿ
ಕಳೆದುಕೊಂಡಳು ಬಾಲ್ಯವನು ಹಸೆಮಣೆ ಏರಿ
ಅಪ್ಪಿಕೊಂಡಳು ಅರಿಯದೇ ದುರ್ದೈವದ ಬದುಕ
ಕಲಿಕೆಯು ನಿಂತಿತು ಆಸೆಯು ಮುದುಡಿತು
ದಿನಗಳು ಉರುಳಿ ತಿಂಗಳು ತುಂಬಿದವು
ಗರ್ಭದಲ್ಲಿ ಬಲವಿಲ್ಲ ಫಲ ಪೂರ್ಣವಾಗಿಲ್ಲ
ನೊಂದು ಬೆಂದು ನೀರಾದಳು ಪ್ರಸೂತಿ ಸಮಯದಿ
ರಟ್ಟೆಯಲಿ ಬಲವಿಲ್ಲ ಜೀವನ ಗೊತ್ತಿಲ್ಲ
ಸೋತಿದೆ ಮನ ಸಂಸಾರ ನೊಗದ ಭಾರಕೆ
ಬಲವಿಲ್ಲದ ಸೊಂಟದ ಮೇಲೆ
ಬೆಳವಣಿಗೆ ಇಲ್ಲದ ಪಿಳ್ಳೆ
ಒಂಟಿ ಮಾಡಿ ಹೊಂಟ ಗಂಡನ ನೋವು
ನಿರ್ಧರಿಸಿದೆ ಬದುಕು ಇಷ್ಟೇ
ಒಳಗೆ ಬರೀ ನೀರವ ಮೌನ
ಕಣ್ಣುಗಳಲಿ ಕನಸಿಲ್ಲ
ಬಲ ತುಂಬುವ ಕಾಯಕ ಮಗುವಿಗೆ
ಬದುಕಲೇಬೇಕಿದೆ ಹೆದರಿ ಸಮಾಜಕೆ
ಮಗುವಿನ ಮುಖ ನೋಡಿ ಅರಳಬೇಕಿದೆ
ಕಾಯ್ದೆ ಕಾನೂನು ನೂರಿದ್ದರೂ
ಮೌಢ್ಯ ತೊಲಗಿಲ್ಲ ಜಾಗೃತಿ ಮೂಡಿಲ್ಲ
ಸಂದಿಗ್ಧತೆಗೆ ಸಿಕ್ಕು ನಲುಗುತ್ತಲೇ ಇಹರು
ಬಾಗೇಪಲ್ಲಿಯ ರಾಜಕುಮಾರಿಯರು
ಅರಳುವ ಮುನ್ನವೇ ಹೂ ಬಾಡುತ್ತಿದ್ದರೂ
ಕೇಳುವ ಧ್ವನಿಗಳಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243