ಭಾವ ಭೈರಾಗಿ
ಕವಿತೆ | ನಾವು ಕಚ ಕುಚಗಳ ಬಗ್ಗೆ ಬರೆಯಬಾರದು
- ಪ್ರತಿಭಾ ನಂದಕುಮಾರ್
ನಾವು ಕಚ ಕುಚಗಳ ಬಗ್ಗೆ ಬರೆಯಬಾರದು
ನೀವು ಅದನ್ನು ವಿರೂಪಗೊಳಿಸಬಹುದು!
ನಾವು ತೊಡೆ ಜಘನ ನಾಭಿ ಸ್ಥಳಗಳನ್ನು ಕಾಣಿಸಬಾರದು
ನೀವದನ್ನು ಅತಿಕ್ರಮಿಸಿ ಸ್ಥಾಪಿತರಾಗಬಹುದು!
ನಾವು ಯೋನಿಗೆ ಅಪಚಾರವಾಗದಂತೆ ಕಾಯ್ದಿರಿಸಿಕೊಳ್ಳ ಬೇಕು
ನೀವದರ ಅತ್ಯಾಚಾರಕ್ಕೆ ಸದಾ ಹಾತೊರೆಯಬಹುದು!
ನಮ್ಮ ಗರ್ಭದೊಳಗೆ ಹೆಂಗಸು ಹುಟ್ಟಬಾರದು
ನೀವು ಕಂದಮ್ಮಗಳನ್ನೂ ಮುಟ್ಟು ಹಾಕಿಕೊಳ್ಳಬಹುದು!
ನಾವು ಹೊಸಿಲು ದಾಟಿದರೂ ಅಡಿಗೆಮನೆಯೊಳಗೇ ಬೆಂದರೂ
ಮೆಟ್ಟಿಲು ಹಜಾರ ಅಂಗಳ ಬಚ್ಚಲುಮನೆ ಬಾಲ್ಕನಿಯಲ್ಲಿ ನಿಂತರೂ ಕೂತರೂ ಮಲಗಿದರೂ ಮಂಡಿಮಡಿಚಿ ಗುಬರಿಟ್ಟು ಗೋಗರೆದರೂ
ನೀವು ಭವಿಷ್ಯ ನುಡಿಯಬಹುದು
ಇಂಥಲ್ಲಿ ಇಷ್ಟುಹೊತ್ತಿಗೆ ಹೀಗೆ ಇಂಥವರಿಂದ
ವಿನಾಕಾರಣ ಅತ್ಯಾಚಾರಕ್ಕೊಳಗಾಗುತ್ತೀರಿ!
ತಂದೆ ಅಣ್ಣ ತಮ್ಮ ಗಂಡ ಮೈದುನ ಭಾವ ಪಕ್ಕದ ಮನೆಯವಳ ಗಂಡ
ಒಂದು ಶಿಶ್ನವಷ್ಟೇ ಅಸ್ತಿತ್ವವುಳ್ಳ ಗಂಡುಪ್ರಾಣಿ ಯಾವುದಾದರೂ
ನಮ್ಮನ್ನು ಶ್ಲೀಲದಿಂದ ಅಶ್ಲೀಲದೆಡೆಗೆ
ಮಾನದಿಂದ ಭಂಗದವರೆಗೆ
ಪಾವಿತ್ರ್ಯದಿಂದ ಕುಲಟೆಯಾಗಿಸಿ
ಸತಿಯಿಂದ ಸೂಳೆಯಾಗಿಸಿ
ಸ್ಥಾನ ಪಲ್ಲಟಗೊಳಿಸಬಹುದು
ನಾವು ಭಯಭೀತರಾಗಿ ಬೆಚ್ಚಿ
ಮುಚ್ಚಿಕೊಳ್ಳಬೇಕು ಮೈಮನಸ್ಸನ್ನು
ಕತ್ತರಿಸಿಕೊಳ್ಳಬೇಕು ಸ್ತನಗಳನ್ನು
ಹೊಲಿದುಕೊಳ್ಳಬೇಕು ಯೋನಿಗಳನ್ನು
ಜಾರಿಸಿಕೊಳ್ಳಬೇಕು ರಕ್ತಸಿಕ್ತ ತೊಡೆಗಳನ್ನು
ಬಿಗಿಹಿಡಿಯಬೇಕು ಜಜ್ಜಿದ ತುಟಿಗಳನ್ನು
ಎಂದು ಭ್ರಮಿಸಿ ನಿಮ್ಮ ಪುರುಷತ್ವದ ಅಹಮ್ಮಿನಲಿ
ಹೀಗೆ ತೇಲಿದರೆ ಗಾಳಿ ತುಂಬಿದ ಬಲೂನಿನಲ್ಲಿ ಬಹಳ ಬೇಗ ನೆಲಕ್ಕಿಳಿಯುವಿರಿ ಚುಚ್ಚಿ ನಿಜದ ಸೂಜಿ
ಸ್ರಾವ ನಿಂತರೂ ಹೆಣ್ಣು ಹೆಣ್ಣೇ
ನಾವೇನೋ ಹೇಗೋ ಸವೆಸುವೆವು ಕಾಲ ಆದರೆ…
ಆಪಕಾ ಕ್ಯಾ ಹೋಗಾ ಜನಾಬೇ ಅಲೀ…
(‘ಪ್ರೇತಗಳೆಂದು ಕರೆಯಲು ಮನಸ್ಸಾಗದು‘ ಕವನ ಸಂಕಲನದಿಂದ ಈ ಕವಿತೆಯನ್ನು ಆಯ್ಕೆಮಾಡಿಕೊಳ್ಳಲಾಗಿದೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243