ಭಾವ ಭೈರಾಗಿ

ಕವಿತೆ | ಶಾಂತಿಗೆ ಸಾವುಗಳ ಲೆಕ್ಕವಿಲ್ಲ..!

Published

on

  • ಮಂಜುಳಾ ಹುಲಿಕುಂಟೆ

ಸಾಹೇಬಾ ..
ನೀವೊದ ದಿನವಂತೆ ಇಂದು
ನೀವಿರಬೇಕಿತ್ತೆನ್ನುವ
ಅದೇ ಅನಾಥಪ್ರಜ್ಞೆಯೊಂದಿಗೆ
ನೀವಿಲ್ಲದೇ…..
ಎಂಬ ಆತಂಕದಲ್ಲೇ
ಕಳೆಯುವ ದಿನವಿದು.

ಮತ್ತೊಂದು ಬೆಳಗೂ
ರಕ್ತದೊಕುಳಿಯಲ್ಲೇ
ಮುಳುಗೇಳುತ್ತಿದೆ ಬಾಬಾ
ಉಳ್ಳವರ ಕಾಲಡಿಯಲ್ಲಿ
ಉಸಿರಾಡದೇ ಮಲಗಿದೆ ನ್ಯಾಯ
ಈಗ ಶಾಂತಿ ನೆಲೆಸಿದೆ
ಬಡವನ ಹೆಣದ ಮೇಲೆ.

ಧರ್ಮಕ್ಕುಟ್ಟಿದ
ಕಟುಕರಿದ್ದಾರೆ ಕುರ್ಚಿಯ ಮೇಲೆ
ಅನ್ಯಾಯವೋ ನ್ಯಾಯವೋ
ಮಿಸುಕಾಡುವಂತಿಲ್ಲಾ ನೊಂದವರು
ಈಗ ನ್ಯಾಯ ಹೊಗೆಯಾಡುತ್ತಿದೆ
ಕಿತ್ತು ತಿಂದ ಹೆಣ್ಣುಗಳ
ಸುಟ್ಟ ಚರ್ಮದಷ್ಟೇ ಶಾಂತವಾಗಿ.

ಬುದ್ಧ ಬಸವನ ಕಳೆದುಕೊಂಡ
ನೆಲದಲ್ಲೀಗ ರಕ್ತಮಾತ್ರ ಚೆಲ್ಲಿಲ್ಲ ಸಾಹೇಬಾ
ರಕ್ತಹೀರುವವರ ಮೆರವಣಿಗೆಗೆ
ನಿತ್ಯವೂ ಬಲಿಬೇಕು
ನ್ಯಾಯ ಉಸಿರೆತ್ತದೇ ಶಾಂತವಾಗಿದೆ.

ನೀವಿಟ್ಟ ಅನ್ನಕ್ಕೂ
ಬದುಕಿಗೂ ಸುಂಕಕಟ್ಟುತ್ತಿದ್ದೇವೆ
ನಾವುಣ್ಣುವ ಅನ್ನ ಅವರ ಹೊಲಸು ತಕ್ಕಡಿಯಲ್ಲಿ
ನಿತ್ಯಕ್ಕೊಂದು ರೂಪುಪಡೆಯುತ್ತದೆ.

ಮೊನ್ನೆಯಷ್ಟೇ
ಇದನ್ನೇ ತಿನ್ನಬೇಕು
ಇದನ್ನ ತಿನ್ನಬಾರದು
ಎನ್ನುವ ಪತ್ವಗಳ ನಡುವೆಯೇ
ಬಡವನ ಗುಡಿಸಲಿನಲ್ಲಿ
ಅನ್ನಕಾಣದ ಕಂದಮ್ಮಗಳು
ಮಣ್ಣುತಿಂದದ್ದೀಗಲು
ದಿಗಿಲುಟ್ಟಿಸುತ್ತದೆ
ನ್ಯಾಯವೀಗ ಬಾಯಿಗೆ ಬೀಗಜಡಿದುಕೊಂಡಿದೆ.

ದೇಶದಲ್ಲೀಗ ಶಾಂತಿಯ
ಮಾತನ್ನಾಡುತ್ತಿದ್ದಾರೆ
ಬೀದಿ ಬೀದಿಯಲ್ಲಿ
ಸಿಕ್ಕಹೆಣ್ಣುಗಳ ಮುಕ್ಕಿ
ಜಾತಿ ಹೆಸರಿನಲ್ಲಿ
ಬೆಂಕಿ ಹಚ್ಚಿ
ದೇಶವನ್ನೇ
ಉರಿಸಿದವರು.

ಮತ್ತೇನು ನ್ಯಾಯ ಸಿಕ್ಕಾಯಿತಲ್ಲಾ
ಶಾಂತಿಗೆ ಸಾವುಗಳ ಲೆಕ್ಕವಿಲ್ಲ..!

ಇಲ್ಲೊಂದಿಷ್ಟು
ಮಾನವೀಯತೆ
ಉಸಿರಾಡಲೂ ನೀವು ನಡೆಸಿದ ಹೋರಾಟವೀಗ
ಮತ್ತೆ ಬೀದಿಗೆ ಬಂದಿದೆ
ಸಂವಿಧಾನವೂ ಅಮಾನತ್ತಿನಲ್ಲಿದೆ
ನ್ಯಾಯಕ್ಕಾಗಿ ನೀವೇ ನೇಮಿಸಿದ
ಜಾಗದಲ್ಲೀಗ ಅನ್ಯಾಯವನ್ನೇ ಉಂಡು ತೇಗುವ
ಕ್ರೂರಿಗಳ ಬಿಡಾರವಿದೆ.

ನ್ಯಾಯವೆಂಬುದೀಗ ಜಾತಿ, ಜನಿವಾರದ ಪಾಲು
ಶಾಂತಿ ನಿನ್ನ ಜನಗಳ
ಸಾವಿನ ಕೋಟೆಯ ಮೇಲೆ
ಸದ್ದಿಲ್ಲದೇ ಬಿದ್ದುಕೊಂಡಿದೆ.

ನೀವಿಲ್ಲದೇ ತಾನಿಲ್ಲದ ದೇಶವೀಗ
ನಿಮ್ಮನ್ನ ಹೊರಗಿಟ್ಟೇ
ತಿನ್ನುವ ತಟ್ಟೆಗೆ
ಮತ್ತೇನೋ ಬೆರಿಸಿ ತಿನ್ನಲು ಕೂತಂತಿದೆ
ನಿಮ್ಮ ನೆರಳಲ್ಲೇ ಬೆಳೆದ
ನಾಯಕರೀಗ ಜಾತಿಗರ
ಮನೆಬಾಗಿಲಿನಲ್ಲಿ
ಭಿಕ್ಷೆಗೆ ನಿಂತಿದ್ದಾರೆ.

ಕುದಿವ ರಕ್ತವೂ ತಣ್ಣಗಾಗಿದೆ ಸಾಹೇಬ
ನಿತ್ಯ ನರಳುವ ಹೆಣ್ಣುಕುಲಕ್ಕೆ,
ಕ್ರೂರ ಜಾತಿರೋಗಕ್ಕೆ
ಗಂಡೆಂಬ ಅಹಂಮ್ಮಿಕೆಯ ಆತ್ಮದ್ರೋಹಕ್ಕೆ
ನೀವಲ್ಲದೇ ಮದ್ದಾಗಬಲ್ಲ
ಬೇರೇನಿದೆ ಈ ದೇಶದಲ್ಲಿ.

ಕಳೆದುಕೊಂಡ ನೋವಲ್ಲದೇ
ಮತ್ತೇನು ಉಳಿದಿಲ್ಲ
ಸಾಹೇಬಾ
ಶಾಂತಿ ಎಂಬುದೀಗ
ಉಳ್ಳವರ ಕಾಲಡಿಯಲ್ಲಿ
ಮಿಸುಗಾಡದೇ ಬಿದ್ದಿರುವ
ನನ್ನವರ ಹೆಣವಷ್ಟೇ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version