ಭಾವ ಭೈರಾಗಿ

ಕವಿತೆ | ನೆನಪ ಹಿಂಬಾಲಿಸಿ ಬಂದವಳು

Published

on

 

  • ಅಪೂರ್ವ ಜಗದೀಶ್

ಡೆವ ದಾರಿಯಲಿ ನಾ ಎಡವಿದಾಗಲೆಲ್ಲ
ಕಿಸೆಯಲ್ಲಿನ ನೆನಪುಗಳು ರಸ್ತೆಯ ತುಂಬೆಲ್ಲ
ನಕ್ಷತ್ರಗಳಂತೆ ಹರಡಿಬಿಡುವವು.
ಹುಚ್ಚಿಯಂತೆ ಅವುಗಳನ್ನೆಲ್ಲ ಒಂದೊಂದಾಗಿ
ಹೆಕ್ಕಿ ಮತ್ತೆ ಕಿಸೆಗೆ ತುಂಬಿಸಿಕೊಳ್ಳುತ್ತೇನೆ.

ಹೀಗೆಯೇ ಎಡವಿ ಬಿದ್ದ ನೆನಪೊಂದು
ಕೆಂಪು ಬಸ್ಸಿನ ಚಕ್ರದಡಿ ಸಿಲುಕಿ
ಮಾಯಾವಾಗಿ ಬಿಟ್ಟಿತು.
ನಾನು ಈಗಲೂ ಅಲ್ಲಿಯೇ ಕಾದು ಕುಳಿತಿದ್ದೇನೆ
ಯಾರಾದರು ಅದರ ಕಳೇಬರವನ್ನು ಕೈಗಿಡಬಹುದೆಂದು.

ಮೊದಲಿನ ಸಂಕೋಚವಾಗಲಿ
ಭಯವಾಗಲಿ ನನ್ನೊಳಗೆ ಇಲ್ಲವೇ ಇಲ್ಲ.
ಕಡುಕತ್ತಲ ರಾತ್ರಿಯಲಿ ಗೊತ್ತುಗುರಿಯಿಲ್ಲದೆ
ಅದೆಷ್ಟೋ ದೂರವ ಒಬ್ಬಳೇ ಕ್ರಮಿಸಿಬಿಟ್ಟಿದ್ದೇನಿ,
ಯಾವುದೋ ನೆನಪನ್ನು ಹಿಂಬಾಲಿಸಿ ಬಂದವಳು,
ಹಿಂದಿರುಗಿ ನೋಡಿದಾಗ ಬಂದದಾರಿಯನೇ ಮರೆತುಬಿಟ್ಟಿದ್ದೇನೆ.

ಹಗಲು ಇರುಳೆನ್ನದೇ ಜನಸಂದಣಿಯ
ಮಧ್ಯದಲ್ಲೆಲ್ಲ ಗಂಟೆಗಟ್ಟಲೇ ಕಾದು ಕುಳಿತಿದ್ದೇನೆ,
ಯಾರು..? ಯಾಕಾಗಿ..? ಯಾರಿಗಾಗಿ..?
ಎಂದು ಕೇಳಿದರೆ ಹೇಳಲಾರದೆ ಚಡಪಡಿಸಿ
ಎದ್ದು ಹೊರಟಿದ್ದೇನೆ.

ಅಂದೂ ಹೀಗೆಯೇ ಮದ್ಯರಾತ್ರಿಯ
ಮಳೆಯಲ್ಲಿ ನೆನೆಯುತ್ತಾ ಒದ್ದೆಯಾದವಳು
ಇಂದಿಗೂ ಮಳೆಯ ಹನಿಗಳನು ಕಣ್ಣಿನಲ್ಲೆ
ಹೊತ್ತು ತಿರುಗುತ್ತಲಿದ್ದೇನೆ ಎಂದಾದರೊಂದು
ದಿನ ಬೆಂಕಿ ಬಿದ್ದ ಒಡಲಲ್ಲಿ ನೀರ ಕಾಯಿಸಿ
ನೆನಪಿನ ಮೈಲಿಗೆಯಿಂದ ಮಡಿಯಾಗಿಬಿಡಬಹುದೆಂದು…!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version