ಭಾವ ಭೈರಾಗಿ

ಕವಿತೆ | ಪಂದ್ಯ ಗೆಲ್ಲುತ್ತಲೇ ಇವೆ

Published

on

 

ಗದ ಗೋಡೆಗಳು
ಸಾವಿರ ವರುಷಗಳಿಂದಲೂ
ನೋಡುತ್ತಿವೆ
ಹಾಳು ಹಸಿವು
ಅನ್ನ ಬಸಿಯುವವರೆಗೂ
ತಾಳುತ್ತಿಲ್ಲ

ಹಗಲು ರಾತ್ರಿಯಾಗುವತನಕ
ರಾತ್ರಿ ಹಗಲಾಗುವತನಕ
ಹಸಿವಿಗಾಗಿ
ನಡೆಯುತ್ತಲೇ ಇವೆ
ಕೃತ್ಯಗಳು
ಇತ್ತ ಕವಿ ಮಾತ್ರ
ಲೇಖನಿ ಹಿಡಿದವ
ಇನ್ನೂ ಕೈ ಬಿಟ್ಟಿಲ್ಲ

ಪೆನ್ನಿನಿಂಕಿನ ವಾಂತಿಗೆ
ಬಿಳಿಹಾಳೆಯೇ ಬಸಿರಾದ ಸಂತಸ
ಶೀತಲೀಕರಿಸಿದ ಸಾಲುಗಳ ಕಲಸಿ
ನೀರಾಗಿಸಿದ ಕವಿತೆಗಳು
ಕೊನೆಗೆ ಕವಿಯನ್ನೇ ನೋಡಿ
ಮುಗುಳ್ನಕ್ಕಿವೆ
ಹಸಿವು ನೀಗುತ್ತಿಲ್ಲ

ಅಡುಗೆ ಕೋಣೆ ಗೋಡೆಗಳೊಳಗೆ
ಅಮ್ಮ ಮಾಡುತ್ತಲೇ ಇದ್ದಾಳೆ
ಬೆವರಿನ ಮುದ್ದೆಗೆ ಪ್ರೀತಿಯ ಬಸ್ಸಾರು
ಕಷ್ಟಗಳ ಜೋಳದ ರೊಟ್ಟಿಗೆ
ಮೊಳಕೆಯೊಡೆದ
ಪಿಳಿಪಿಳಿ ಕಾಳುಗಳು
ಜಠರದಲಿ ಆಮ್ಲ ಹೆಚ್ಚಾಗುತ್ತಲೇ ಇದೆ
ಎದೆಯ ಉರಿ ಮುಂದೆ
ಘೋರ ಕಾಡ್ಗಿಚ್ಚುಗಳೂ
ಮೈಮರೆಸಿಕೊಂಡಿವೆ
ಕವಿತೆಗಳು ನೊಣ ಹೊಡೆಯುತ್ತಲೇ ಇವೆ
ಅಮ್ಮ ಮಾಡಿದ ರೊಟ್ಟಿಗಳು ಮಾತ್ರ
ಪಂದ್ಯ ಗೆಲ್ಲುತ್ತಲೇ ಇವೆ.

– ಡಾ. ಸಂತೋಷ್. ಕೆ. ಬಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version