ಭಾವ ಭೈರಾಗಿ
ಕವಿತೆ | ಯಾವುದು ಪ್ರಸಾದವಯ್ಯ?
ದೇವರಿಲ್ಲದ ಗುಡಿಯಲ್ಲಿ ಕೊಟ್ಟಿದ್ದು
ಪ್ರಸಾದವಲ್ಲವಯ್ಯ
ನಮಗೆಂದೇ ಮನೆಯಲ್ಲಿ ಮಾಡಿದ್ದು
ಪ್ರಸಾದವಯ್ಯ
ತುಂಬಿದ ಹೊಟ್ಟೆಗೆ ತುಂಬಿ ಕೊಳ್ಳೋದು
ಪ್ರಸಾದವಲ್ಲವಯ್ಯ
ಹಸಿದ ಹೊಟ್ಟೆಗೆ ಅನ್ನ ನೀಡಿದ್ದು
ಪ್ರಸಾದವಯ್ಯ
ಬೆವರಿಲ್ಲದ ಬಿಟ್ಟಿಊಟ
ಪ್ರಸಾದವಲ್ಲವಯ್ಯ
ಉತ್ತು ಬಿತ್ತಿ ಬೆಳೆದು ಉಂಡದ್ದು
ಪ್ರಸಾದವಯ್ಯ
ಗಿಡದಿಂದ ಕಿತ್ತು ದೇವರಿಗಿಟ್ಟ ಹೂ
ಪ್ರಸಾದವಲ್ಲವಯ್ಯ
ಎಲೆ ಚಿಗುರಿ ಹೂ ಬಿಟ್ಟದ್ದು
ಪ್ರಸಾದವಯ್ಯ
ಕಲ್ಲು ಸಕ್ಕರೆ ಕುಟ್ಟಿ ರಸಾಯನ ಮಾಡಿದ್ದು
ಪ್ರಸಾದವಲ್ಲವಯ್ಯ
ಜೇನು ಕಟ್ಟಿ ಸಿಹಿ ಬಿಟ್ಟಿದ್ದು
ಪ್ರಸಾದವಯ್ಯ
ಉಂಡು ಉಳಿಸಿದ್ದು
ಪ್ರಸಾದವಲ್ಲವಯ್ಯ
ಉಣ್ಣದೆ ಬಿಸಾಡಿದ್ದು
ಪ್ರಸಾದವಯ್ಯ
ದೇವರಿಗೆಂದು ನಾವು ಮಾಡಿದ್ದು
ಪ್ರಸಾದವಲ್ಲವಯ್ಯ
ನಮಗೆಂದು ದೇವರು ಮಾಡಿದ ಪ್ರತಿ ತುತ್ತು
ಪ್ರಸಾದವಯ್ಯ
ಇಂಥೆಲ್ಲಾ ಪ್ರಸಾದಕ್ಕೆ ವಿಷವಿಟ್ಟರೆ…
ಮುಂದೆಲ್ಲಾ ಈ ಜಗತ್ತು
ಸುಡುಗಾಡು ನೋಡಯ್ಯ…!
–ಡಾ. ಗಿರೀಶ್ ಮೂಗ್ತಿಹಳ್ಳಿ
ಚಿಕ್ಕಮಗಳೂರು
ಸುದ್ದಿದಿನ.ಕಾಂ|ವಾಟ್ಸಾಪ್|9986715401