ಭಾವ ಭೈರಾಗಿ
ಕವಿತೆ | ಕಿರಿಯ ಕವಿಗೆ ೧ – ೨
- ಕೆ.ಎಸ್. ನರಸಿಂಹ ಸ್ವಾಮಿ
೧
ಅನುಭವವೆ ನೆನಪಾಗಿ ಹೆಪ್ಪುಗಟ್ಟುವ ತನಕ
ನೀನು ಕವಿತೆಗೆ ಕೈಯ ಹಾಕಬೇಡ;
ಮಳೆಯಿರದ ಮೋಡಗಳ ಚೆಲುವ ವರ್ಣಿಸಬೇಡ,
ಇಲ್ಲದುದ ಇಹುದೆಂದು ಹಾಡಬೇಡ.
ಬೆಟ್ಟಗಳ ಹತ್ತಿ ಬಾ, ನದಿಗಳನು ದಾಟಿ ಬಾ
ಆಗುವಾಯಾಸಕ್ಕೆ ಹೆದರಬೇಡ;
ಅಗ್ಗಿಷ್ಟಿಕೆಯ ಕೆಂಡ ಹೊತ್ತಿಕೊಳ್ಳುವ ತನಕ
ಒಲೆಯ ಮೇಗಡೆ ಪಾತ್ರೆ ಇರಿಸಬೇಡ.
ಎಲೆ ಮರೆಯ ಕೋಗಿಲೆಯ ಹಾಡು ಕೇಳುತ ನಿಂತ ನೀನದನು ವರ್ಣಿಸಲು ತೊಡಗಬೇಡ;
ಚಿಂತಾಗ್ನಿಯಲ್ಲಿ ಚಿನ್ನ ಕರಗುವುದ ಕಂಡಿಹೆಯ?-
ಭಾಷೆ ಒದಗಲಿ, ಹೊಳಪು ಕಂಡುಬರಲಿ.
ಭಾವಗೀತೆಯಲಿ ಸಂಕೀರ್ಣತೆಯನಳವಡಿಸು,
ಬೆಂಕಿ ಕಲ್ಮಷಗಳನು ಸುಟ್ಟುಬಿಡಲಿ;
ಹಸೆಯ ಮೇಲಿನ ಹೆಣ್ಣು ಗಂಡುಗಳ ರೀತಿಯಲಿ
ಮಾತು ಮಾತಿನ ಜೊತೆಗೆ ಸೇರಿಕೊಳಲಿ.
ಒಂದೊಂದು ಪದ್ಯವೂ ಒಂದು ಮೆರವಣಿಗೆ ಕಣಾ,
ಅಂಕಗಣಿತದ ಹಾಗೆ ಹಾಕು ತಾಳ;
ಅರಿತವನು ಅಪ್ಪುವನು ಭಾವದೊಲುಮೆಯ ಹೆಣ್ಣ,
ಅರಿಯದವರಿಗೆ ಅದುವೆ ಬರಿಯ ಚಿತ್ರ!
ಹಸಿದ ಒಡಲಿಗೆ ಬೇಕು ಅನ್ನ, ಬರಿ ಹಾಡಲ್ಲ
ಬಾಯಾರಿಕೆಗೆ ಬೇಕು ತಂಪು ನೀರು;
ಚಳಿಗಾಲ ಕಳೆಯುತ್ತ ಜೀವ ನಡೆದಿದೆ ಮುಂದೆ,
ಒಂದು ಶಾಲೇ ಅದರ ಚಳಿಗೆ ಸಾಕು.
ಮಾತಿಗೂ ಮೌನಕೂ ಇರುವ ಅಂತರದಲ್ಲಿ
ಮೂಡುವುದು ಬಾನಾಡಿಯಳತೆ ಭಾವ;
ನೊಂದ ಬದುಕಿಗೆ ಬೇಕು ಸಾವಿರ ಸಮಾಧಾನ,
ಅದರ ಜೊತೆಗೂ ಬರಲಿ ನಿನ್ನ ಕವನ!
ನಿನ್ನಹಂಕಾರಕ್ಕು ಒಂದು ಮಿತಿಯಿರಬೇಕು,
ಸ್ಥಿತಿಗತಿಗಳಿರಬೇಕು ನಿನ್ನ ಕೃತಿಗೆ;
ಕವನವೇ ಒಂದು ನಂದಾದೀಪ, ನುಡಿಯಲ್ಲಿ
ಮಾಡಲೇಬೇಕು ಆನಂದಲಹರಿ!
ಕೊಡು ಅದನು ಜನಕೆ, ಕೈಬಿಡು ವ್ಯರ್ಥ ಪದಗಳನು
ಕೇವಲ ಅಲಂಕಾರ ಕವಿತೆಯಲ್ಲ:
ಬರಿ ಮಾತ ಮಿಂಚುಗಳು ಬಂದು ಹೋಗಲಿ, ಬಳಿಕ
ನಿನ್ನ ಬದಕೇ ಒಂದು ಹಾಡಾಗಲಿ!
ಕವಿತೆ | ಕಿರಿಯ ಕವಿಗೆ – ೨
ಒಂದೆರಡು ಹೂಗಳನು ಗಿಡದ ಮೇಲೆಯೆ ಬಿಟ್ಟು
ಉಳಿದವನು ಕಿತ್ತುಕೋ ಎನುವೆ ನಾನು;
ಎಲ್ಲವೂ ಅರ್ಥವಾಯಿತು ಎಂದು ಹೇಳದಿರು,
ಕವಿತೆಗಸ್ಪಷ್ಟತೆಯು ಒಂದು ಚೆಲುವು.
ನೀನು ಹುಟ್ಟುವ ಮುನ್ನ ಲೋಕ ಹೇಗಿತ್ತೆಂದು
ಹೇಗೆ ಹೇಳಲಿ ನಾನು, ಅರಿಯದವನು;
ಇಲ್ಲಿ ಯಾವುದು ಪೂರ್ತಿ, ಯಾವುದರೆ ಗೊತ್ತಿಲ್ಲ
ಅರಕೆಯಿಂದಲೆ ಕವಿತೆ ಹುಟ್ಟಬಹುದು.
ಅಷ್ಟಿಷ್ಟು ಲೋಪವಿಲ್ಲದ ಕೃತಿಯನೇ ಕಾಣೆ,
ಮುಖದ ಚೆಲುವಿಗೆ ಬೇಕು ಯಾವುದೊ ಕಲೆ;
ಮಿಂಚಿಗಾಸರೆ ಮುಗಿಲು, ಸೂರ್ಯಸಾರಥಿ ಹೆವಳ
ಬಿಸಿಲಲ್ಲೆ ಆಡುವನು ತುಂಟ ಹುಡುಗ.
ತಕ್ಕಡಿಯೆ ಏರುಪೇರಾಗುವುದು ಎನ್ನುವರು,
ಇನ್ನೊಂದರಲಿ ದೋಷ ಒಂದರ ಗುಣ;
ಯಾರು ಯಾರೋ ಕುಳಿತು ಕೊಟ್ಟ ತೀರ್ಪೆಂತಿರಲಿ,
ಕೃತಿಯ ಬೆಲೆಯೇ ಅಲ್ಲ ನೀಡಿದ ಹಣ.
ಶಾಸ್ತ್ರಗಾರರ ಬೀದಿಯಲ್ಲಿ ಓಡಾಡದಿರು,
ಶಾಸ್ತ್ರವನು ಮೀರುವುದು ಕವಿತೆಯ ಕಲೆ,
ಕವಿಹೃದಯ ಕಂಡುಕೊಳ್ಳುವುದು ಕವಿತೆಯ ಚೆಲುವು,
ನಿನ್ನ ತಲೆಯಲ್ಲಿಲ್ಲ ಕವನದ ಸೆಲೆ.
ಉಪಹಾರ ಮಂದಿರದ ಮೂಲೆ ಕುರ್ಚಿಗಳಲ್ಲಿ
ವಿಪರೀತ ಚರ್ಚೆಗಳು ನಡೆಯುತಿಹವು;
ಸಿಗರೇಟಿನ ಹೊಗೆಯಲ್ಲಿ ಎದ್ದು ಹೋಗುವ ಮಂದಿ
ಕವಿತೆಯ ವಿಮರ್ಶೆಯನು ಮಾಡುತಿಹರು!
(‘ಎದೆ ತುಂಬ ನಕ್ಷತ್ರ’ ಕವನ ಸಂಕಲನದಿಂದ ಆಯ್ದ ಕವಿತೆಗಳು)
ಸುದ್ದಿದಿನ.ಕಾಂ|ವಾಟ್ಸಾಪ್|9980346243