ಭಾವ ಭೈರಾಗಿ
ಕವಿತೆ | ನನ್ನ ಪ್ರೇಮದಲಿ ಬೀಳದಿರಿ
-ಕಾದಂಬಿನಿ
ನನ್ನೊಂದಿಗೆ ಹೆಜ್ಜೆ ಹಾಕುವ
ನಿನಗೂ ನಿನ್ನಂಥ ಹುಡುಗರಿಗೂ
ಶರತ್ತು ಹಾಕಿಯೇ ಹೊರಡುತ್ತೇನೆ
ಹೋಗುತ್ತಾ ಹೋಗುತ್ತಾ
ನನ್ನ ಪ್ರೇಮದಲಿ ಬೀಳದಿರಿ ಎಂದು
ಹೌದು, ನಾನು ದಣಿದುಹೋಗಿದ್ದೇನೆ
ದೇಹ ಆಕಾರವೂ ಹದ ತಪ್ಪಿದೆ
ಪ್ರಾಯ ಸರಿ ಸರಿದಂತೆ
ನಡು, ನಿತಂಬಗಳು
ಲಯಬದ್ಧ ಹೆಜ್ಜೆಹಾಡಿಗೆ ಬಳುಕಿ
ಕುಣಿಯುವುದಿಲ್ಲವೀಗ ನಡೆ ನಡೆದಂತೆ
ಮೊಗವೂ ಕಳೆಗೆಟ್ಟು
ಮೊದಲೇ ಇದ್ದ ತುಸು ಉಬ್ಬು ಹಲ್ಲು
-ಗಳೆಡೆ ತುಟಿಗಳು
ಮೇಲಕ್ಕೋ ಕೆಳಕ್ಕೋ ಸರಿದು
ಜಾರಿ ಜೋಲಾಡುತ್ತಿವೆ
ನಕ್ಷತ್ರಗಳಂತೆ ಮಿನುಗುತ್ತಿದ್ದ ಕಣ್ಣೀಗ
ಎಣ್ಣೆ ಬತ್ತಿ ಕುಗುರುವ ದೀಪಗಳಿಗೂ ಕಡೆ
ಕಡಿದುರುಳಿಸಿದ ಮರದ ಹಾಗೆ
ತುಸು ವಿರಮಿಸಲು ಒರಗಿದೆಡೆ ತೊಡೆ
ಅತ್ತ ಇತ್ತ ರೆಂಬೆಗಳಂತೆ ಚಾಚಿಕೊಂಡು..
ನಿಮ್ಮಂಥ ಹಸಿ ಹುಡುಗರಿಗೆ
ಅಪ್ರಿಯವೆನಿಸುವಂತೆ
ಗರ್ ಗರ್ ಗೊರಕೆ ಹೊಡೆಯುತ್ತೇನೆ
ಕಟಬಾಯಿಯಿಂದ ಜೊಲ್ಲಿನೆಳೆ ಒಸರುತ್ತದೆ
ಆದರೂ ನೀವು ಹುಡುಗರು
ನನ್ನ ಪ್ರೇಮದಲಿ ಬೀಳುತ್ತೀರಿ
ನೆಪೆಂತಿಸ್ ಗಿಡದ ಹಾಗೆ
ಬಾಹುಗಳಲಿ ಉಸಿರುಗಟ್ಟಿಸಿ
ಕೊಂದುಬಿಡಲೆಂದು ಮುಗಿಬೀಳುತ್ತೀರಿ
ಮತ್ತು…
ಚರ್ಮದ ಪದರುಗಳ ಸರಿಸಲು ಹೆಣಗುತ್ತ
ಮೊಲೆಗಳೆಂಬ
ಜೋಲುಬಿದ್ದ ಮಾಂಸದ ಗುಡ್ಡೆಗಳ
ದಾಟಲು ಹವಣಿಸುತ್ತ
ಅದರಾಚೆಯಲಿ
ನೀವು ಕಳೆದುಕೊಂಡದ್ದೇನನ್ನೋ
ಹುಡುಕಿಯೇ ಹುಡುಕುತ್ತೀರಿ,
ಅಲ್ಲಿಯೇ ಎಚ್ಚರದಪ್ಪುತ್ತೀರಿ!
ನಾವು ಈ ದಾರಿಯಾಗಿ
ಈ ಪರಿ ದಂಡು ಕಟ್ಟಿಕೊಂಡು
ಸಾಗುತ್ತಿರುವುದಾದರೂ
ಆ ಸರ್ವಾಧಿಕಾರಿಯ ವಧಾಸ್ಥಾನಕ್ಕೆಂಬುದನು
ಮರೆತುಬಿಡುತ್ತೀರಿ!
ಮತ್ತು ನಾನಲ್ಲಿಂದ..
ಪ್ರತಿಸಲವೂ
ಒಬ್ಬೊಂಟಿಯಾಗಿ ಹಿಂದಿರುಗುತ್ತೇನೆ
ನಾವು ಮತ್ತೊಮ್ಮೆ
ದಂಡುಕಟ್ಟಿಕೊಂಡು ಸಾಗುವಾಗ
ನಾನು ಮತ್ತೆ ಮತ್ತೆ
ಶರತ್ತು ಹಾಕಿಯೇ ಹೊರಡುತ್ತೇನೆ
ನೀನೂ, ನಿನ್ನಂಥ ಹುಡುಗರೂ
ನನ್ನ ಪ್ರೇಮದಲಿ ಬೀಳದಿರಿ ಎಂದು!
ಸುದ್ದಿದಿನ.ಕಾಂ|ವಾಟ್ಸಾಪ್|9980346243