ಭಾವ ಭೈರಾಗಿ

ಕವಿತೆ | ದರ್ಕಾಸಿನೊಳಗೆ..!

Published

on

  • ರೇಣುಕಾ ಹೆಳವರ್, ಕಲಬುರ್ಗಿ

ದಾರಿಗುಂಟ ಮಾರು ಹರದಾರಿ ದೂರ ಬರಿಗಾಲ ಫಕೀರರಂತೆ ನಡೆದು ಬೊಬ್ಬೆಯೊಡದರೂ
ಕಾಲ ಹುಣ್ಣಿನ ನೋವಿಗೆ ಮುಲಾಮಿನ ನಗೆಯ
ಚೆಲ್ಲಿದವರಿಗೆ ದರ್ಕಾಸಿನ ದರಬಾರಿನೊಳಗೆ ಠಕ್ಕನ ಪಟ್ಟ.

ಹಾಲುಗಲ್ಲದ ಹಸುಳೆ
ಅವ್ವನ ಸೆರಗಿಡಿದು
ಆಡುವ ಬಾಲೆಯ
ದೇಹ ಮುಕ್ಕಿ ದೇವಮಂದಿರದ ಅಗ್ನಿಕುಂಡಗಳಲಿ ಬೇಯುವಾಗ ದರ್ಕಾಸಿನ ದರಬಾರಿನೊಳಗೆ ಸತ್ಯವೂ ಉರಿಯುತ್ತದೆ.

ಅವ್ವ ಸೂಳೆ ಸಂಕವ್ವೆಯ ಸಂತಾನಗಳು
ಹಾದಿ ಬೀದಿಯಗುಂಟ ಕಂಗಲಾಗಿ ತುತ್ತು ಕೂಳಿಗೆ ಹಸಿದಿವೆ
ಹಸಿದೇಹವ ರಣಹದ್ದಿನಂತೆ ಕುಕ್ಕಿಸಿಕೊಂಡು ದರ್ಕಾಸಿನ ದರಬಾರಿನೊಳಗೆ ಜೈಲು ಸೇರಿವೆ.

ಎಡಗಿಯ ನಾಗಿದೇವನ ವಂಶಜರು ಕೋಲ ಬಿಟ್ಟು ಸಂಭೋಳಿ ಸಂಭೋಳಿ ಎನ್ನದೆ ಊರ ಹೊರಗೆ
ಬಾಯಿಪಸೆಯ ಬೆವರಿಗೆ ಒಡಲಕ್ಕಿ ಕುದಿಯುವಾಗ ದರ್ಕಾಸಿನ ದರಬಾರಿನೊಳಗೆ ಖೈದಿಗಳಾಗುತ್ತಾರೆ.

ಕಾಲನ ಹೊಡೆತದಲ್ಲಿ
ದುರಿತದ ಹಾದಿಯಲ್ಲಿ ಬುದ್ಧ,ಬಸವ, ಅಂಬೇಡ್ಕರ್ ಕೈಹಿಡಿವ ಬೆಳಕ ಹಿಲಾಲುಗಳು..
ನೀಲಿ, ಕೆಂಪು ಅಂಗಳದ ತುಂಬೆಲ್ಲ ಒಡಲ ಹೂಗಳು ಕದಳಿ ತುಂಬೆಲ್ಲ ಹರಡಿ ದರ್ಕಾಸಿನ ದರ್ಬಾರು ಮೆಟ್ಟಿ ನಗುತಾರೆ.

ದರ್ಕಾಸು-, ದೂರು,ಫಿರ್ಯಾದಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version