ದಿನದ ಸುದ್ದಿ

ಚರಮೂರ್ತಿ ಕಾರಣೀಕ ಶ್ರೀ ಗುರು ಕಾಶೀಮಹಾಲಿಂಗ ಸ್ವಾಮೀಜಿಯವರ ಕರ್ತೃಗದ್ದುಗೆಗೆ ತರಳಬಾಳು ಶ್ರೀ ಜಗದ್ಗುರುವರ್ಯರ ಭಕ್ತಿ ಸಮರ್ಪಣೆ

Published

on

ತರಳಬಾಳು ಶ್ರೀಗುರು ಪರಂಪರೆಯ ತಪಸ್ವೀಶಕ್ತಿ ನಿರಂಜನಗುರುವರ್ಯರಾಗಿ ಭಕ್ತರ ಬಯಕೆಯನ್ನು ತಮ್ಮ ನುಡಿಕಾರಣೀಕದಿಂದಲೆ ಸಿದ್ಧಿಸುವ ಅಧಮ್ಯ ಶಕ್ತಿಯಚೇತನಮಯರಾದ ಶ್ರಿ ಕಾಶೀಮಹಾಲಿಂಗ ಸ್ವಾಮಿಜಿಯವರಿಗೆ ಪ್ರತಿ ವರ್ಷದ ಪರಂಪರೆಯಂತೆ ನಿನ್ನೆ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಸಾಸ್ವಾಮೀಜಿಯವರ ಸಾನ್ನಿಧ್ಯದಿ ಶ್ರೀ ಗುರುವಿಗೆ ವಿಶೇಷ ಶ್ರದ್ಧಾ ಭಕ್ತಿಯಿಂದ ನಮನಗಳನ್ನು ಅರ್ಪಿಸಿ ಸಾವಿರರು ಶಿಷ್ಯ ಬಳಗಕ್ಕೆ ಅನ್ನಸಂತರ್ಪಣೆ ವಿನಿಯೋಗಿಸುವ ವಿಶೇಷ ಕಾರ್ಯಕ್ರಮ ಜರುಗಿತು.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವಿರಕ್ತ ಗುರುವರ್ಯರಾಗಿ ಯಾವ ಸೌಲಭ್ಯಗಳಿಲ್ಲದ ಕಷ್ಟಕಾಲದಲ್ಲಿ ಸಮಾಜವನ್ನು ಸಂಘಟಿಸಿದ ಅವರ ಕರ್ತವ್ಯ ಶಕ್ತಿಗೆ ಬೆರಗಾಗಲೇಬೇಕು.
‘ಸಿರಿಗೆರೆಗೆ ಬರ ಎಂದವರ ಬಾಯಲ್ಲಿ ಕೆರ’
ಎಂಬ ದೈವವಾಣಿಯನ್ನು ಮೊಟ್ಟ ಮೊದಲು ಅರ್ಥೈಸಿ ಈ ಭಾಗದ ರೈತಾಪಿ ಜನರ ಮನದಲ್ಲಿ ಶಕ್ತಿ ಸಂಪನ್ನವಾದ ಗುರುವೆಂದೇ ಸ್ಥಾನಪಡೆದಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ಜೀವನಾಡಿಯಾದ ಮಳೆಯು ಕೈ ಕೊಟ್ಟ ಸಂದರ್ಭದಲ್ಲಿ ಶ್ರೀ ಕಾಶೀಮಹಾಲಿಂಗ ಸ್ವಾಮೀಜಿಯವರಿಗೆ ಭಕ್ತಿ ಶ್ರದ್ಧೆಯ ದಾಸೋಹ ಕೈಂಕರ್ಯ ಸಲ್ಲಿಸಿದರೆ ತತ್ ಕ್ಷಣವೇ ವರುಣ ಕಣ್ಣು ತೆರೆಯುತ್ತಾನೆ ಎನ್ನುವ ಧಾರ್ಮಿಕ ನಂಬಿಕೆ ಅಚಲವಾಗಿದ್ದು ಅದು ಸತ್ಯ ಎನ್ನುವಂತೆ ಭರ್ಜರಿ ಮಳೆಯಾಗಿರುವ ಉದಾಹರಣೆ ಹಲವಾರು ಬಾರಿ ಸಾಬೀತಾಗಿದೆ.

ತರಳಬಾಳು ಗುರುಪರಂಪರೆಯ ನಾಲ್ಕು ಜಗದ್ಗುರುವರ್ಯರ ಪಟ್ಟವಲ್ಲರಿಯ ಸಾಮಿಪ್ಯದಿ ಸಮಾಜ ಕಟ್ಟಿದ ಧೀಮಂತ ಚೇತನ, ಮಕ್ಕಳ ಪಾಲಿನ ಪ್ರೀತಿಯ ತಾತನಾಗಿ, ಇಂದಿನ ಪ್ರಸ್ತುತ ಶ್ರೀ ತರಳಬಾಳು ಜಗದ್ಗುರುವರ್ಯರ ಪೂರ್ವಾಶ್ರಮದ ನಾಮಕರಣ ಸಮಾರಂಭದಲ್ಲಿ ಆಕಸ್ಮಿಕ ದರ್ಶನಗೈದು ‘ಶಿವಮೂರ್ತಿ’ ಎಂದು ನಾಮಕರಣಗೈದು ತರಳಬಾಳು ಗುರು ಪರಂಪರೆಯು ವಿಶ್ವ ಮಟ್ಟದಿ ಪ್ರಜ್ವಲಿಸುವ ಭವಿಷ್ಯವನ್ನು ಎಲ್ಲರಿಗಿಂತಲೂ ಮೊದಲೇ ಅರಿತಿದ್ದ ಪ್ರಾಜ್ಞ ಕಾಲಜ್ಞಾನಿಗಳು. ಸರಳತೆ ,ಆದರ್ಶ, ಕಾಯಕವೇ ಶ್ರೀ ಗಳ ಬದುಕಾಗಿತ್ತೆಂದು ಇಂದು ಸಹ ಹಿರಿಯರು ಶ್ರೀ ಗಳ ಕುರಿತು ಗೌರವದ ಮಾಹಿತಿ ನೀಡುತ್ತಾರೆ.

ಅಂತಹ ಶಿವಯೋಗಿ ಶಕ್ತಿ ಸಂಪನ್ನರಾದ ಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ಶ್ರೀ ಕಾಶೀಮಹಾಲಿಂಗ ಸ್ವಾಮೀಜಿಯವರ ಅಂತರಾತ್ಮಕ್ಕೆ ಭಕ್ತಿ ಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತಾ.ಶ್ರೀಗಳ ಆಶೀರ್ವಾದದ ಶ್ರೀ ರಕ್ಷೆ ಸಮಸ್ತ ಸಮಾಜದ ಮೇಲಿರಲೆಂಬುದೇ ನಮ್ಮಯ ಆಶಯ.

(-ಬಸವರಾಜ ಸಿರಿಗೆರೆ)

Leave a Reply

Your email address will not be published. Required fields are marked *

Trending

Exit mobile version