ಭಾವ ಭೈರಾಗಿ
ಕವಿತೆ | ಪ್ರೇಮಕ್ಕೆ ದಿನದ ಹಂಗೇಕೆ?
- ಡಾ.ಎನ್.ಕೆ.ಪದ್ಮನಾಭ
ಪ್ರೇಮಿಗಳಿಗೆ ಆ ಒಂದೇ ಒಂದು ದಿನವೇ?
ಒಪ್ಪಲಾಗದು
ಕಟ್ಟುನಿಟ್ಟಿನ ಬಂಧ ಸಹಿಸಲಾಗದು
ನಿಯಮಗಳ ಭಾರ ಹೊರಲಾಗದು
ಧಿಕ್ಕರಿಸಲೂ ಆಗದು
ಜಗದ ಜಿಪುಣತನದ ಸಣ್ಣತನಕೆ
ಪ್ರೇಮದ ಮೃದು ಮಧುರ ಮೌನ ಸವಾಲು
ಅದೊಂದೇ ಒಂದು ದಿನವೇ?
ಇಷ್ಟಪಡುವ ಒಡಲಾಳದ ಆಂತರ್ಯ
ಸಾಬೀತುಪಡಿಸಲಾಗದು
ಕೊಡುಗೆಗಳ ಆಡಂಬರ ತೋರಿಕೆಗಳೊಳಗೆ
ಮಿಂದೇಳಿಸಿ ಮೆಚ್ಚಿಸಲೂ ಆಗದು
ಜಗದ ಜಡ್ಡುಗಟ್ಟಿದ ಮನಕೆ
ಪ್ರೇಮದ ಹೃದಯಪೂರ್ವಕ ತಕರಾರು
ಒಂದೇ ಒಂದು ದಿನದ ಆಚರಣೆಯ ಶಿಕ್ಷೆಯೇ?
ಧರ್ಮದ ಅಂಗಿ ತೊಟ್ಟು ಬೆನ್ನು ಹತ್ತುವ
ಬೇತಾಳಗಳ ಭಯ
ಜಾತಿಯ ವಿಷದ ನಶೆಯೇರಿಸಿಕೊಂಡ
ಕೊಲೆಗಡುಕ ‘ಮರ್ಯಾದಾ’ ಪುರುಷೋತ್ತಮರ ಉಗ್ರ ಪ್ರತಾಪ
ಜಗದೋನ್ಮಾದ ಅನ್ಯಾಯ ಪರಾಕ್ರಮಕೆ
ಪ್ರೇಮದ ಹೂಭಾಷೆಯ ದೂರು
ಪ್ರೇಮಕ್ಕೆ
ದಿನದ ಕ್ಷಣದ ವರುಷಗಳ ಹಂಗಿನರಮನೆಯ ಖಯ್ಯಾಲಿಯಿಲ್ಲ
ಜಗದ ಯುಗದ ಜನ್ಮಾಂತರದ
ನದಿಯ ನಡಿಗೆಯ ಹಾಗೆ
ಎಲ್ಲ ಮಿತಿಗಳ ಮೀರುವಾಸೆಯ ಹಂಬಲ
ಸುದ್ದಿದಿನ.ಕಾಂ|ವಾಟ್ಸಾಪ್|9980346243