ಅಂತರಂಗ
ವೀಸಾರಹಿತ ವ್ಯವಸ್ಥೆ
- ರಘೋತ್ತಮ ಹೊ.ಬ.
ನಿನ್ನೆ ಡಿಸೆಂಬರ್ 25 ಕ್ರಿಸ್ಮಸ್ ಹಬ್ಬ. ನನಗೆ ತಿಳಿದಂತೆ ಕ್ರಿಶ್ಚಿಯನ್ನರೆಂದರೆ ಬಹುತೇಕ ಅವರು ಮಾಜಿ ದಲಿತರು. ದಲಿತರು ಮಾತ್ರ ಯಾಕೆ ಕ್ರಿಶ್ಚಿಯನ್ನರಾದರು? ಹಾಗೆಯೇ ಸಿಖ್, ಮುಸ್ಲಿಂ ಹೀಗೆ ಇತರೆ ಧರ್ಮಗಳಿಗೆ ಮತಾಂತರ ಹೊಂದಿದರು? ತಾವು ಹಿಂದೂಗಳಲ್ಲ ಎಂಬ ಕಾರಣಕ್ಕೆ ಅವರು ಹೀಗೆ ಮಾಡಿದರೆ? ಊಹ್ಞೂಂ. ಹಿಂದೂ ಪರಿಕಲ್ಪನೆಗೂ ಅವರ ಮತಾಂತರಕ್ಕೂ ಸಂಬಂಧವಿಲ್ಲ. ಯಾಕೆಂದರೆ ಹಿಂದೂ ಪರಿಕಲ್ಪನೆ ತೀರಾ ಈಚಿನದ್ದು.
ಹಾಗಿದ್ದರೆ ಕಾರಣ? ಉತ್ತರ: ವೀಸಾ! ಏನಿದು ವೀಸಾ ಎಂದುಕೊಂಡಿರಾ? ಖ್ಯಾತ ಚಿಂತಕ ವಿ.ಟಿ.ರಾಜಶೇಖರ್ ಜಾತಿವ್ಯವಸ್ಥೆಯನ್ನು “Nations within a Nation (ರಾಷ್ಟ್ರದೊಳಗಿನ ರಾಷ್ಟ್ರಗಳು) ” ಎನ್ನುತ್ತಾರೆ. ವಿ.ಟಿ.ರಾಜಶೇಖರರ ಈ ಮಾತಿಗೆ ಸ್ಫೂರ್ತಿ ಅಂಬೇಡ್ಕರರ Waiting for a Visa (ವೀಸಾ ಪಡೆಯಲು ಕಾಯುತ್ತಿದ್ದೇನೆ) ಕೃತಿ.
ಈ ಕೃತಿಯ ಪ್ರಕಾರ ಭಾರತ ಒಂದು ರಾಷ್ಟ್ರವಾದರೆ ವಿವಿಧ ಜಾತಿಗಳು ಅದರೊಳಗಿನ ಪುಟ್ಟ ಪುಟ್ಟ ರಾಷ್ಟ್ರಗಳು. ಯಾಕೀ ಪರಿಕಲ್ಪನೆ? ಯಾಕೆಂದರೆ, ಎಲ್ಲರಿಗೂ ತಿಳಿದಿರುವಂತೆ ಭಾರತದಿಂದ ಅಮೆರಿಕಾ, ಇಂಗ್ಲೆಂಡ್, ಜಪಾನ್ ಹೀಗೆ ಬೇರೆ ಬೇರೆ ದೇಶಗಳಿಗೆ ಹೋಗಲು ವೀಸಾ ಬೇಕು. ಆಶ್ಚರ್ಯವೆಂದರೆ ಇದೆ ವೀಸಾ ವ್ಯವಸ್ಥೆ ಜಾತಿಪದ್ಧತಿಯಲ್ಲಿದೆ! ಹೇಗೆಂದರೆ ಒಂದು ಬೀದಿಯಿಂದ ಮತ್ತೊಂದು ಬೀದಿಗೆ ಹೋಗಲು!
ಉದಾಹರಣೆಗೆ ನಮ್ಮೂರಿನ ಲಿಂಗಾಯತರ ಕೇರಿಗೆ ಹೋಗಲು, ಕುರುಬರ ಬೀದಿಗೆ ಹೋಗಲು ನಾನು ಹೀಗೆಯೇ ವೀಸಾ ಇದೆಯೇ ಇಲ್ಲವೇ ಎಂದು ಈಗಲೂ ಚಡಪಡಿಸಬೇಕಿದೆ. ಅವರ ಬೀದಿಯೊಳಕ್ಕೆ ಹೋಗುತ್ತಲೇ ನನ್ನ ಅಪ್ಪನನ್ನು ನಾನು ಅಪ್ಪ ಎಂದು ಕರೆಯದಿದ್ದರೂ ಅವರುಗಳನ್ನು ‘ಅಪ್ಪಾ, ಅವ್ವಾ,’ ಎನ್ನಬೇಕಿದೆ! ನಾಗರಾಜು ಅಂತ ಅವರ ಹೆಸರಿದ್ದರೆ ನಾನು ನಾಗರಾಜಪ್ಪ ಎನ್ನಬೇಕು! ಇನ್ನು ಬುದ್ಧಿ, ಸ್ವಾಮಿ ಪದ ಧಾರಾಳವಾಗಿ ಬಂದರಷ್ಟೆ ನಮಗೆ ವೀಸಾ ಸಿಗುತ್ತದೆಯೇ ಇಲ್ಲವೆ ಎಂಬ ಕಾತರಿ.
ಒಟ್ಟಾರೆ ಆ ದೇಶಕ್ಕೆ(ಬೀದಿಗೆ) ಹೋಗಲು ವೀಸಾ(ಒಪ್ಪಿಗೆ ಪತ್ರ) ಬೇಕೇಬೇಕು. ವಾಸ್ತವ ಹೀಗಿದ್ದಾಗ ಕ್ರಿಶ್ಚಿಯನ್ ಮತ್ತು ಇತರೆ ಧರ್ಮಗಳು ದಲಿತರಿಗೆ ಮುಕ್ತವಾಗಿ ಬಾಗಿಲು ತೆರೆದವು, ವೀಸಾ ನೀಡಿದವು. ಮತ್ತು ಅಂಬೇಡ್ಕರರೂ ಅಷ್ಟೆಯೇ ಹೀಗೆ ತಮ್ಮದೇ ಒಂದು ವೀಸಾರಹಿತ ವ್ಯವಸ್ಥೆಯನ್ನು (ಬೌದ್ಧಧರ್ಮ) ಆರಿಸಿಕೊಂಡರು. ಅಂತಿಮ ಘಳಿಗೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಜಾತಿ ವ್ಯವಸ್ಥೆ ತೊಲಗಬೇಕು. ಅಂತಹ ಆಸೆ ಸಹೃದಯಿಗಳಲ್ಲಿದ್ದರೆ ಹೀಗೆ ವೀಸಾ ಬೇಡುವ ಪದ್ಧತಿ ನಾಶವಾಗಬೇಕು. ವೀಸಾ ಇಲ್ಲ ಎಂಬ ಕಾರಣಕ್ಕೆ ಅಂತಹವರ ವಿರುದ್ಧ ದೌರ್ಜನ್ಯ ಎಸಗುವ ಮನಸ್ಥಿತಿ ತೊಲಗಬೇಕು. ರಾಷ್ಟ್ರದೊಳಗಿನ ರಾಷ್ಟ್ರಗಳ ನಡುವೆ ಇರುವ ಗೋಡೆ ಮುರಿದು ಬೀಳಬೇಕು. ಎಲ್ಲರಿಗೂ ಮುಕ್ತಪ್ರವೇಶವಿದೆ ಎಂಬ ಬೋರ್ಡುಗಳು ಎಲ್ಲ ಕಡೆ ಬರಬೇಕು.
ಅಂದಹಾಗೆ ಹಾಗೆ ವ್ಯವಸ್ಥೆ ಬದಲಾದರೆ ‘ಮತಾಂತರ’ದ ಅಗತ್ಯವಾದರೂ ಎಲ್ಲುಂಟಾಗುತ್ತದೆ? ಈ ನಿಟ್ಟಿನಲ್ಲಿ ವೀಸಾ ವ್ಯವಸ್ಥೆಯಿಂದ ನಮ್ಮ ವ್ಯವಸ್ಥೆ ಹೊರಬರಲಿ, ಭಾರತ ಬರೇ ಒಂದು ರಾಷ್ಟ್ರವಾಗಲಿ, ರಾಷ್ಟ್ರದೊಳಗಿನ ರಾಷ್ಟ್ರ ವ್ಯವಸ್ಥೆ ತೊಲಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243