ಅಂತರಂಗ
ಏನಿದು ವರ್ಷದುಡುಕು;ಹೊಸ್ತುಡುಕು..?
- ಕೆ.ಶ್ರೀಧರ್ (ಕೆ.ಸಿರಿ)
ಏಪ್ರಿಲ್ 13 ಕ್ಕೆ ಚಾಂದ್ರಮಾನ ಯುಗಾದಿ ಹಬ್ಬ ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯರಿಗೆ ನಿಜವಾದ ಹೊಸ ವರ್ಷ ಬೆಳಗ್ಗೆ ಎದ್ದು ನೀರಿಗೆ ಬೇವಿನ ಎಲೆ ಹಾಕಿ ಮೈಗೆಲ್ಲಾ ಎಣ್ಣೆ ಸವರಿಕೊಂಡು ಎಣ್ಣೆ ಸ್ನಾನ ಮಾಡಿ ಹೊಸ ಹುಡುಪುಗಳನ್ನು ಧರಿಸಿ ಮನೆಗೆ ತಳಿರು ತೋರಣ ಕಟ್ಟಿ ಇಷ್ಟ ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ಸವಿದು ತಾಯಿ ಮಾಡಿದ ಸಿಹಿಯಾದ ತಿಂಡಿ ತಿನಿಸುಗಳ ತಿಂದು ಇಡೀ ದಿನ ಸಂಭ್ರಮದಿಂದ ಹಬ್ಬ ಆಚರಿಸುವುದು ಬಂಧು ಬಾಂಧವರೆಲ್ಲರೂ ಸಂಭ್ರಮ ಪಡುವುದು ಸಂಜೆಯ ನಂತರ ಚಂದ್ರನನ್ನು ನೋಡಿ ಹೊಸ ವರ್ಷ ಆರಂಭಿಸುವುದು ವಿಶೇಷ.
ಯುಗಾದಿ ಎಂದರೆ ಇಷ್ಟೇ ಎಂದು ನಾನು ತಿಳಿದಿದ್ದೆ. ಆದರೆ ಇನ್ನೊಂದು ದಿನವೂ ಹಬ್ಬವಿದೆ ಆ ಹಬ್ಬ ತುಂಬಾ ವಿಶೇಷ ಎನಿಸಿದ್ದು ಈ ವರ್ಷದುಡುಕಿನ ಸಂಭಾಷಣೆ ಕೇಳಿದ ನಂತರವೆ. ನಾನು ಏಪ್ರಿಲ್ 14 ರಂದು ನನ್ನ ಕೆಲಸದ ನಿಮಿತ್ತ ಎಲ್ಲಿಯೋ ಹೊರಟಿದ್ದೆ ಪೆಟ್ರೋಲ್ ಹಾಕಿಸಲು ಬಂಕ್ ನ ಬಳಿ ಹೋದಾಗ ಯಾರೋ ಒಬ್ಬ ಯುವಕ ಬ್ಯಾಗ್ ಹಾಕಿಕೊಂಡು ಯಾವುದೋ ಊರಿಗೆ ಹೋಗುವಂತಿತ್ತು ಅದೇ ಸಂದರ್ಭದಲ್ಲಿ ಬಂದ ಆ ಯುವಕನ ಗೆಳೆಯ ಈ ರೀತಿಯಾಗಿ ಸಂಭಾಷಣೆ ಬೆಳೆಸಿದ.
“ಡೋ ಎಲ್ಲಿಗಡಾ ಹೋಗ್ತಿದೇ’?_
“ಬೆಂಗಳೂರಿಗೆ ಹೋಯ್ತಾವ್ನೀ ಕಯ್ಯಾ”_
“ಯೋ ಎಲ್ಗೋದೇ ಬಾ ನಾಳೆ ಹೊಸ್ತುಡುಕದೆ ಕಣಾ ತೀರಿಸ್ಗಂಡ್ ಹೋಗೈ”
“ಇಲ್ಲ ಬಾಮೈದ ಟೇಮಾಗದ ಆಗಲೇ ರಜಾ ತೀರದ ಕಣಾ ಹೋಗ್ಬೇಕ”
“ಇದ್ಯಾಂವಂಡಾ ಇವಾ ವರ್ಷದುಡುಕು ಮಾಡಾದ್ ಬುಟ್ಟು ಕೆಲಸಕ್ಕ ಹೋದನಂತೆ ಇಮ”
“ಯಾನ್ ಮಾಡದಯ್ಯ ನೀವ್ ಮಾಡ್ರೀ ಹೊಸ್ತುಡುಕ ನಾ ಮುಂದಿನ ಕಿತ ಬರ್ತೀನಿ ಕಣಾ”
“ಆಯ್ತು ಹೋಗಿದ್ದ್ ಬೊಯ್ಯ”
“ನೋಡ್ದಾ ಬಾವೋಜಿ ಇವನ್ ಸುಮಾನ್ವಾ ಹಬ್ಬ ಮಾಡೋ ಬಡ್ಡಿದೇ ಅಂದ್ರೆ ಕೆಲಸಕ್ಕೆ ಹೋದನಂತೆ ಇಮ”
“ನಡೈ ಬಾಮೈದ ಯಾನ್ಹಾ ಮಾಡ್ಲಿ ಹೊಣ್ಣೇರ್ ಕಟ್ಬೇಕು ಬ್ಯಾಗನ್ ನಡೈ ಊರ್ಗೋಗಮು”
ಎಂದು ಮಾತನಾಡುತ್ತಾ ಮಾತನಾಡುತ್ತಾ ಹಾಗೇಯೇ ದ್ವಿಚಕ್ರ ವಾಹನದಲ್ಲಿ ಊರ ಕಡೆ ಹೊರಟರು. ನಾನು ವಿಜಯನಗರ ಜಿಲ್ಲೆಯವನಾದುದರಿಂದ ಈ ವರ್ಷದುಡುಕು/ಹೊಸ್ತುಡುಕು,ಹೊಣ್ಣೇರ್ ಕಟ್ಟೋದು ಈ ಪದಗಳು ಅಪರಿಚಿತ ಅನಿಸ್ತು ತಲೆಯಲ್ಲಿ ಒಂಥರಾ ಈ ಪದಗಳು ಕೊರೆಯಲು ಶುರುಮಾಡಿದವು.
ಚಾಮರಾಜನಗರ ಮೊದಲೇ ದೇಸಿ ಭಾಷೆಯ ಪದಗಳಿಗೆ ಫೇಮಸ್ಸು ಅಂತ ನನಗೆ ಗೊತ್ತಿತ್ತು ಆ ಕುತೂಹಲ ಇನ್ನೂ ನನ್ನಲ್ಲಿ ಹೆಚ್ಚಾಯ್ತು ಹೇಗಾದರೂ ಮಾಡಿ ಈ ಪದಗಳ ಅರ್ಥ ತಿಳ್ಕೋಬೇಕು ಇದ್ಯಾವುದೂ ಇದು ವರ್ಷದುಡುಕು/ಹೊಸ್ತುಡುಕು ಹಬ್ಬ ಅನ್ನೋ ಉತ್ಕಟ ಆಸಕ್ತಿ ಹೆಚ್ಚಾಯಿತು ಹೀಗೆಯೇ ಹಳ್ಳಿಗೆ ಹೋದಾಗ ಗ್ರಾಮಸ್ಥರನ್ನು ಕುರಿತು ಹೀಗೆ ಸಂಭೋಧಿಸಿದೆ.
“ಏನ್ರೀ ಯಜಮಾನ್ರೇ ವರ್ಷದುಡುಕು ಜೋರಾ”?
“ವ್ಹಾ ಬನ್ನಿ ಸಾ ಜೋರದ ಕಣಾ, ಹಬ್ಬ ಅಂದಮ್ಯಾಗ ಇದ್ದಿದ್ದೇ ಅಲ್ವಾ ಕಣೀ ಸಾ”
“ಅದ್ಸರಿ ಏನೀ ಈ ಹೊಸ್ತುಡುಕು ಅಂದ್ರೆ”?
“ವ್ಹಾ ನೀವು ಸರಿಗೆ ಕೇಳಿದ್ರೀ ಕಪಾ ಇನ್ನೇನಾ ಸಾ ಯುಗಾದಿ ಮುಗಿದ ಮಾರ್ನೇ ದಿನಾ, ಎಲ್ಲರೂ ಮನೇಲೆ ಇರ್ತಾರ, ಹೈಕ ಮಕ್ಕ ನೀರೇರೆಚಗತಾರ, ಒಬ್ಬಿಟ್ಟು ಪಾಯಾಸ,ತಿಂಡಿ ಗಿಂಡಿ ಮಾಡ್ಕಂಡಮಾ ದ್ಯಾವ್ರಗ ಎಡೆ ಗಿಡೆ ಮಡಗಿ ಮಕ್ಕ ಮರಿ ತಿನ್ಕಂಡು ಉಣ್ಕಂಡು ಹಟ್ಟೀಲಿ ಜಾಲಿಯಾಗಿ ಇರ್ತಾರ”.
“ಇಷ್ಟೇಯಾ ವರ್ಷದುಡುಕು ಅಂದ್ರೆ”?
“ಅದ ಸಾ ಆಡೋರು ಇಸ್ಪೀಟ್ ಗಿಸ್ಪೀಟ್ ಆಡ್ತಾರ ಒಂಥರಾ ರಜೆ ಇದ್ದಂಗೆ ಸಾ ದಿನವೆಲ್ಲಾ ಹಟ್ಟೀಲೆ ಇರ್ತಾರ”
“ಅದ್ಸರಿ ಈ ಹೊಣ್ಣೇರ್ ಕಟ್ಟೋದು ಅಂದ್ರೆ ಏನು”?”ಅದಿನ್ಯಾನಿದ್ದು ಸಾ ಆರಂಭಕಾರ್ರಿಗೆ ಇದು ಹೊಸ್ವರ್ಸ ಇದ್ದಂಗ ಎತ್ಗಳಿಗ ನೊಗ ಹಾಕಿ,ನೇಗ್ಲು ಹೂಡಿ, ಕಕ್ಕೆ ಹೂವ,ಗಣಿಗಲ ಹೂವ ಎತ್ಗೋಳ್ ಕೊಂಬಿಗೆ ಕಟ್ಟಿ ಊರಾಗ ಒಂದ್ ರೌಂಡ್ ಸುತ್ತಿಸಿಗಂಡಮಾ ಪೂಜಾ ಗೀಜಾ ಮಾಡಿ ಆರಂಭ ಶುರು ಮಾಡೋದಕ್ಕ ಹೊಣ್ಣೇರ್ ಕಟ್ಟೋದು ಅಂತಾರೆ ಅಷ್ಟೇಯಾ ಅದು ಈಗ ಅಷ್ಟೋಂದಿಲ್ಲ ಸಾ ಕೆಲವು ಕಡಿಗ್ಯಾ ಮಾಡ್ತಾರಾ ಕೆಲವು ಕಡಿಗ್ಯಾ ಬುಡ್ತಾರಾ ಅದೆಲ್ಲಾ ಒಂದ್ ಜಮಾನ್ದಾಗಿತ್ತು”
“ಓಹ್ ಸರಿ ಈ ಕಕ್ಕೆ ಹೂವು ಗಣಗಲ ಹೂವು ಅಂದ್ರೆ ಯಾವುದು”? “ಅದೇ ಸಾ ಈ ರೋಡ್ಚೋರಿ ಕೆಂಪ್ಗ ಇರ್ತಾವಲ್ಲ ಅವೇ ಕಕ್ಕೆ ಹೂವು, ಅರಿಶಿಣ ಬಣ್ಣದ ಹೂವ್ ಇರ್ತಾವಲ್ಲ ಅವು ಗಣಿಗಲ್ವೂ ಈ ರಸ್ತಿ ಅಗಲೀಕರಣದಿಂದ ಆ ಹೂವುಗಳು ಸಿಗೋದೆ ಅಪರೂಪ ಆಗ್ಬುಟ್ಟದಾ!”
“ಹೂಂ… ಸರಿ ಇಷ್ಟೇಯಾ ಹಾಗಾರೆ ಹೊಸ್ತುಡುಕು ಅಂದ್ರೆ”?
“ಹೂಂ ಇನ್ನೂ ಅದೆ ಮಾಡೋರು ಮರಿ ಕೂದು ಬಾಡ್ಗಿಡೂಟಾ ಮಾಡ್ತಾರೆ ಎಣ್ಣಿ ಗಿಣ್ಣಿ ಹೊಡ್ದು ಜಾಲಿ ಮಾಡ್ತಾರೆ”
“ಈ ವರ್ಷದುಡುಕ್ಲೀ ಮಾಂಸದೂಟ ಕಡ್ಡಾಯಾ ನಾ”?
“ಹೇ ಹಾಗೇನಿಲ್ಲಾ ಸಾ ಆದರೆ ಒಂದ್ ಜಮಾನ್ದಾಗಿತ್ತಂತೆ ಯುಗಾದಿ ಆದ್ ಮರುದಿನ ಮಾಂಸ ತಿನ್ನಲಿಲ್ಲ ಅಂದ್ರೆ ಸ್ವರ್ಗಕ್ಕೆ ಬಿಡೋಲ್ಲ ಮಾಂಸ ತಿನ್ನಬೇಕು ಅನ್ನೋ ಪ್ರತೀತಿ ಇತ್ತಂತೆ ಇದನ್ನೆಲ್ಲ ನಿಮ್ಮ ಜಮಾನ್ದೋರಿಗೆ ಹೇಳಿದ್ರ ಬಿದ್ದು ಬಿದ್ದು ನಗನಾಡ್ತಿರೀ, ಕೆಲವರು ಆ ದಿನ ದುಡ್ಡು ಕಾಸು ಯಾರಿಗೂ ಕೊಡಾಕಿಲ್ಲ ಹಿಂಗ ಹತ್ತಲವು ಸಂಪ್ರದಾಯಾಗಳು ನೇಮ್ಗಳನ್ನ ಮಾಡ್ತಾರೆ”
“ಜಮೀನಿಗೆ ಹೋಗಿ ಉಳುಮೆ ಗಿಳುಮೆ ಮಾಡೋಲ್ವೋ”?
“ಕಂಡೀಸನ್ನಾಗಿ ಯಾರು ಹೊಲ್ನ ಊಳೋಲ್ಲ ಅಪ್ಪಿ ತಪ್ಪಿ ಮಳಿ ಗಿಳಿ ಉಯ್ಯ್ದ್ರೆ ಸ್ಥಳೀಯ್ ಜ್ವಾಳ ಗೀಳ ಬಿತ್ತೋರು ಬಿತ್ತಾರ ಅಷ್ಟೇ” “ಹೂಂ ಆಯ್ತು ಯಜಮಾನ್ರೆ ಥ್ಯಾಂಕ್ಯೂ ನಾನು ಬರ್ತೀನಿ” “ಹೂಂ ಆಯ್ತು ಕಣೀ ಹೋಗಿ ಬುದ್ದೀ ನಂಗು ಹೊಟ್ಟೈಸಿತೈತಿ ಹಟ್ಟಿಗೆ ಹೋಗ್ಬೇಕು ಒಬ್ಬಿಟ್ಟು ತಿನ್ಬೇಕು”.
ನೋಡಿ ನಮ್ಮ ಗ್ರಾಮೀಣ ಭಾಗದ ಸಂಪ್ರದಾಯಗಳು ಎಷ್ಟು ಚೆಂದ ಅಲ್ವಾ ಈ ದೇಸಿ ಭಾಷೆಯಲ್ಲಿ ಎಷ್ಟು ತಾಕತ್ತಿದೆ ಎಷ್ಟು ಗ್ರಾಮೀಣತೆಯ ಸೊಗಡಿದೆ ಈ ಭಾಷೆನಾ ಹಳ್ಳಿಗಳಲ್ಲಿ ಬಿಟ್ರೆ ಜಗತ್ತಿನ ಯಾವ ವಿಶ್ವ ವಿದ್ಯಾಲಯಗಳಲ್ಲೂ ಕೂಡ ಕಲಿಯಲಿಕ್ಕೆ ಆಗೋದಿಲ್ಲ. ನಮ್ಮ ಹಿಂದಿನವರು ನಡೆಸಿಕೊಂಡು ಬಂದ ಕೆಲವೊಂದು ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯ ನಮ್ಮ ಪರಂಪರೆ ಎಂತದ್ದು ಅಂತ ಹೇಳ್ತವೆ. ಈ ಚಾಮರಾಜನಗರದ ವರ್ಷದುಡುಕು ಹಾಗೇನೆ ಒಂಥರಾ ದೇಸಿಯ ಭಾಷೆಯ ಹಬ್ಬ ಹರಿದಿನಗಳ ಪರಿಚಯ ನನಗಾಯ್ತು ಧನ್ಯವಾದಗಳು ಚಾಮರಾಜನಗರ.
(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿಗಳು
ಚಾಮರಾಜನಗರ
9741270125)
ಸುದ್ದಿದಿನ.ಕಾಂ|ವಾಟ್ಸಾಪ್|9980346243