ಅಂತರಂಗ
ಕುಸಿಯುತ್ತಿರುವ ನೈತಿಕ ಮೌಲ್ಯಗಳು – ಸರಿಪಡಿಸುವ ಜವಾಬ್ದಾರಿ ಯಾರದ್ದು..?
- ಕ್ರಾಂತಿರಾಜ್ ಒಡೆಯರ್ ಎಂ,ಸಹಾಯಕ ಪ್ರಾಧ್ಯಾಪಕರು,ಮೈಸೂರು
ನನಗೆ ಆಪ್ತರಾಗಿರುವ ಪ್ರೊಫೆಸರ್ ಒಬ್ಬರ ಜೊತೆ “ಕುಸಿಯುತ್ತಿರುವ ಶಿಕ್ಷಣ ವ್ಯವಸ್ಥೆ” ಬಗ್ಗೆ ಮಾತನಾಡುತ್ತಾ, “ವಿಶ್ವವಿದ್ಯಾನಿಲಯಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾಗಿವೆ. ಶಿಕ್ಷಕರ ಬೌದ್ಧಿಕ ಮಟ್ಟ, ಬೋಧಿಸುವ ವಿಷಯಗಳಲ್ಲಿ ಅವರು ತೋರುತ್ತಿರುವ ಆಸಕ್ತಿ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಸಮರ್ಪಣಾ ಮನೋಭಾವದಲ್ಲಿ ಕೊರತೆ ಇದೆ.
ಇವೆಲ್ಲ ಕಾರಣಗಳಿಂದಾಗಿ ಶಿಕ್ಷಣ ವ್ಯವಸ್ಥೆ ಕನಿಷ್ಠ ಮಟ್ಟಕ್ಕೆ ದೂಡಲ್ಪಡುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಕ್ಕೆ, “WE WILL GET THE SYSTEM THAT WE DESERVE” (ನಮ್ಮ ಮನಸ್ಥಿತಿಗೆ ಹೊಂದುವ ವ್ಯವಸ್ಥೆಯನ್ನ ನಾವು ಪಡೆಯುತ್ತೇವೆ) ಎಂಬ ಅಭಿಪ್ರಾಯವನ್ನು ಪ್ರೊಫೆಸರ್ ಹಂಚಿಕೊಂಡರು. ಅವರ ಮಾತು ಸರಿ ಅನಿಸಿತು.
ನನ್ನ ವಿದ್ಯಾರ್ಥಿ ಜೀವನದ ಪಯಣದಲ್ಲಿ ಕೆಲವೇ ಕೆಲವು ಶಿಕ್ಷಕರನ್ನು ಹೊರತುಪಡಿಸಿ ಬಹುತೇಕ ಶಿಕ್ಷಕರು ಅತ್ಯುತ್ತಮ ಬೋದನಾ ಕೌಶಲ್ಯ/ಶೈಲಿಗೆ ಹೆಸರುವಾಸಿ. ನಾನು ಪ್ರೌಢ ಶಿಕ್ಷಣ ಪಡೆದ ಜವಾಹರ್ ನವೋದಯ ವಿದ್ಯಾಲಯ, ಶಿವಾರಗುಡ್ಡದಲ್ಲಿ ಪಠ್ಯ ಬೋಧನೆಯಲ್ಲಿ ಅತ್ಯುತ್ತಮ ಪರಿಣಿತಿಯನ್ನು ನಮಗೆ ಪಾಠ ಮಾಡುತ್ತಿದ್ದ ಶಿಕ್ಷಕರು ಹೊಂದಿದ್ದರು. ಅಲ್ಲಿನ ಅತ್ಯುತ್ತಮ ಶಿಕ್ಷಕರ ಗುಂಪಿಗೆ ಸೇರಿಸಬಹುದಾದವರ ಪಟ್ಟಿ ಬಹಳ ದೊಡ್ಡದು. ಈಗ ಅದರ ಗುಣಮಟ್ಟ ಕುಸಿದಿರುವ ವಾಸನೆ ಬರುತ್ತಿದೆ.
ನನ್ನ ಉನ್ನತ ಶಿಕ್ಷಣ ವ್ಯಾಸಂಗದಲ್ಲಂತೂ ಉತ್ತಮ ಶಿಕ್ಷಕರಿಂದ ಪಾಠ ಕೇಳುವ ಭಾಗ್ಯ ಒಲಿದು ಬಂತು. ಪ್ರತಿಷ್ಠಿತ ಮಹಾರಾಜಾ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿದ್ದ ಪ್ರೊಫೆಸರ್ ನಾಗಣ್ಣ, ಪ್ರೊಫೆಸರ್ ಭಗವಾನ್ ಅವರಂತಹ ಬೋಧಕರು ಒಂದೆಡೆಯಾದರೆ, ಮಾನಸ ಗಂಗೋತ್ರಿಯ ಎಂ ಬಿ ಈ ವಿಭಾಗದಲ್ಲಿದ್ದ ಪ್ರೊಫೆಸರ್ ಅನಂತನ್, ಪ್ರೊಫೆಸರ್ ಶಿವರಾಜ್, ಪ್ರೊಫೆಸರ್ ಆನಂದ್ ಹಾಗೂ ಇನ್ನೂ ಹಲವಾರು ಖ್ಯಾತ ಶಿಕ್ಷಕರ ದೊಡ್ಡ ಪಡೆಯೇ ಇತ್ತು. ಎಲ್ಲರೂ ಸ್ಪರ್ಧೆಗೆ ಇಳಿದವರಂತೆ ಪಾಠ ಮಾಡುತ್ತಿದ್ದರು. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಒಳ್ಳೆಯ ಶಿಕ್ಷಕರನ್ನು ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ | ‘ಭಾಶಾಹೀನರ ಸಂಗ ಅಭಿಮಾನ ಭಂಗ’ | ದ್ವೇಶದ ಭಾಶೆ ಮತ್ತು ಪ್ರತಿದ್ವೇಶದ ಭಾಶೆಯ ಅಪಾಯಗಳು
ಪರಿಣಾಮವಾಗಿ, ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಕುಸಿಯುತ್ತಿದ್ದು, ವ್ಯವಸ್ಥೆಯ ಮುಂದಿನ ದಿನಗಳು ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಕೆಟ್ಟ ವ್ಯಸ್ಥೆ ಸೃಷ್ಟಿಯಾಗಿರುವುದಕ್ಕೆ ನಾನು ಇಂದಿನ ಶಿಕ್ಷಕ ವೃಂದವನ್ನಷ್ಟೇ ದೂಷಿಸುತ್ತಿಲ್ಲ.
ಬದಲಾಗಿ ವ್ಯವಸ್ಥೆಗೆ ಒಳಪಟ್ಟ ಎಲ್ಲರೂ ಇದರ ಕಾರಣಕರ್ತರಾಗಿದ್ದು, ಇದನ್ನು ಆದಷ್ಟು ಬೇಗ ಸರಿಪಡಿಸದೆ ಇದ್ದರೆ, ಇಂದಿನ ಹಾಗೂ ಮುಂಬರುವ ಯುವಪೀಳಿಗೆಗೆ ಸರಿಯಾದ ಮಾರ್ಗದರ್ಶನವಿಲ್ಲದೇ, ಸಮಾಜ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕುಸಿಯುತ್ತಿರುವ ಮೌಲ್ಯಗಳು ಬರೀ ಶಿಕ್ಷಣ ವ್ಯವಸ್ಥೆಯಲ್ಲಷ್ಟೇ ಅಲ್ಲ, ಸಮಾಜದ ಎಲ್ಲಾ ಅಂಗಗಳಲ್ಲೂ ಇದು ಸರ್ವೇ ಸಾಮಾನ್ಯವಾಗಿದೆ.
ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ತಿರುಗಿ ನೋಡಿದಾಗ, ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹಾಗೂ ನಾಯಕರು ಜಾತಿ ಹಾಗೂ ಧರ್ಮಗಳನ್ನು ಮುಂದಿಟ್ಟುಕೊಂಡು ಮತವನ್ನು ಕೇಳುತ್ತಿದ್ದುದ್ದು, ಜಾತಿ ಹಾಗೂ ಧರ್ಮ ಆಧಾರಿತ ರಾಜಕೀಯ ಮಾಡುತ್ತಿದ್ದುದ್ದು ನಗಣ್ಯ.
ಒಳಗೊಳಗೇ ನೆಡೆಯುತ್ತಿದ್ದರೂ, ಸಾಮಾಜಿಕ ಸ್ತರಗಳಲ್ಲಿ ದೊಡ್ಡಮಟ್ಟದಲ್ಲಿ ಗೋಚರಿಸುತ್ತಿರಲಿಲ್ಲ. ಆದರೆ, ಇಂದಿನ ವ್ಯವಸ್ಥೆ ಅದಕ್ಕೆ ತದ್ವಿರುದ್ದವಾಗಿದ್ದು, ರಾಜಕೀಯ ವ್ಯವಸ್ಥೆ ಜಾತಿ, ಧರ್ಮಗಳನ್ನು ತನ್ನ ಕಾವಲುಗಾರನಂತೆ ಮಾಡಿಕೊಂಡಿದೆ.
ಪೊಲೀಸ್ ವ್ಯವಸ್ಥೆ, ಆರೋಗ್ಯ ವ್ಯವಸ್ಥೆ ಹಾಗೂ ಜನಸಾಮಾನ್ಯರಿಗಂತಲೇ ಇರುವ ಇತರೆ ಆಡಳಿತ ವ್ಯವಸ್ಥೆಯಲ್ಲಿನ ಅಧಿಕಾರಿಗಳೆಂದರೆ ಸಮಾಜದಲ್ಲಿ ಅವರಿಗೆ ಬಹಳ ಗೌರವ ಇರುತ್ತಿತ್ತು. ಇವರೆಲ್ಲಾ ಯುವಜರಿಗೆ ಆದರ್ಶ ಪುರುಷರೊ/ಮಹಿಳೆಯರೋ ಆಗಿರುತ್ತಿದ್ದರು. ಸರ್ಕಾರಿ ಆಫೀಸುಗಳಲ್ಲಿ ಲಂಚದ ವ್ಯವಹಾರವೂ ಗೌಪ್ಯವಾಗಿ ನೆಡೆಯುತ್ತಿತ್ತು.
ಲಂಚದ ಹಣ ಪಡೆಯಲು ಕೆಳಸ್ತರದ ನೌಕರರೂ ಕೂಡ ಆಫೀಸಿನ ಹಿಂದಕ್ಕೂ ಅಥವಾ ದೂರಕ್ಕೂ ಪಲಾನುಭವಿಯನ್ನು ಕರೆದುಕೊಂಡು ಹೋಗಿ ಲಂಚ ಪಡೆದುಕೊಳ್ಳುತ್ತಿದ್ದರು. ಆದರೆ ಇಂದು, ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎನ್ನುವುದು ಸರ್ಕಾರದ ನೀತಿಯಾಗಿ ರೂಪಗೊಂಡಿದ್ದು, ಸಮಾಜದ ಕಣ್ಣಿಗೆ ದೊಡ್ಡದಾಗಿ ಗೋಚರಿಸುವಂತೆ ಬೆಳೆದು ನಿಂತಿದೆ. ಈ ವ್ಯವಸ್ಥೆಯನ್ನ ಸಮಾಜದ ಎಲ್ಲರೂ ಸಂತೋಷದಿಂದ ಸ್ವೀಕರಿಸಿದ್ದೇವೆ. ಹೀಗಾಗಿ ಅನೈತಿಕತೆಯು ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ, ಪತ್ರಿಕಾ ರಂಗ ಹಾಗೂ ಎಲ್ಲಾ ರಂಗಗಳಲ್ಲೂ ಬೇರೂರಿರುವುದು ನಮ್ಮೆಲ್ಲರ ಕಣ್ಣಿಗೆ ಗೋಚರಿಸುತ್ತಿದೆ.
ತಾಂಡವವಾಡುತ್ತಿರುವ ಭ್ರಷ್ಟಾಚಾರ, ಕುಸಿಯುತ್ತಿರುವ ನೈತಿಕ ಮೌಲ್ಯಗಳ ಪರಿಣಾಮ ಹಾಗೂ ಪರಿಹಾರಗಳ ಬಗ್ಗೆ ನನ್ನ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ, ಒಬ್ಬ ಸ್ನೇಹಿತ “ಇದು ಹೀಗೇ ಮುಂದುವರಿದಾಗ, ಇದರ ದುಷ್ಪರಿಣಾಮಗಳನ್ನು ಎದುರಿಸುವ ಜನರೆಲ್ಲಾ ರೊಚ್ಚಿಗೆದ್ದು, ಈ ಕೆಟ್ಟ ವ್ಯವಸ್ಥೆಯನ್ನು ಬದಲಾಯಿಸುತ್ತಾರೆ” ಎಂದು ಹೇಳಿದರು.
ಆದರೆ, ಅನೈತಿಕ ವ್ಯವಸ್ಥೆಯೊಂದಿಗೆ ಕಾಲಕ್ಕೆ ತಕ್ಕಂತೆ ರಾಜಿ ಮಾಡಿಕೊಂಡು ಬದುಕುವ ಕಲೆಯನ್ನು ಬಹುತೇಕ ಜನರು ಕರಗತ ಮಾಡಿಕೊಂಡಿದ್ದು, ಇಂತಹವರು ಸಮಾಜದ ಎಲ್ಲಾ ಸ್ತರಗಳಲ್ಲೋ ಹರಡಿಕೊಂಡಿರುವ ಈ ಸಂದರ್ಭದಲ್ಲಿ, ನನ್ನ ಸ್ನೇಹಿತರು ಹೇಳಿದ “ನೈತಿಕ/ಆದರ್ಶ ಸಮಾಜ” ನಿರ್ಮಾಣ ಸಾಧ್ಯವೇ ಎಂಬ ಯಕ್ಷಪ್ರಶ್ನೆ ನನ್ನನ್ನು ಕಾಡುತ್ತಿದೆ. ಕಾಲವೇ ಉತ್ತರ ನೀಡಬೇಕು. ಕಾಲಾಯ ತಸ್ಮಾಯೇ ನಮಃ…
(-ಕ್ರಾಂತಿರಾಜ್ ಒಡೆಯರ್ ಎಂ
ಸಹಾಯಕ ಪ್ರಾಧ್ಯಾಪಕರು
ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗ
ಸೇಪಿಯೆಂಟ್ ಕಾಲೇಜು
ಮೈಸೂರು.)
ಸುದ್ದಿದಿನ.ಕಾಂ|ವಾಟ್ಸಾಪ್|9980346243