Connect with us

ಅಂತರಂಗ

‘ಭಾಶಾಹೀನರ ಸಂಗ ಅಭಿಮಾನ ಭಂಗ’ | ದ್ವೇಶದ ಭಾಶೆ ಮತ್ತು ಪ್ರತಿದ್ವೇಶದ ಭಾಶೆಯ ಅಪಾಯಗಳು

Published

on

  • ರಂಗನಾಥ ಕಂಟನಕುಂಟೆ

ಇದು ಬಹಳ ವಿಚಿತ್ರ ಸಂಗತಿಯಾದರೂ ವಾಸ್ತವದ ಸಂಗತಿ. ಅದೇನೆಂದರೆ ಆಧುನಿಕ ಭಾರತದಲ್ಲಿ ‘ಧರ್ಮ’ ಶಕ್ತಿರಾಜಕಾರಣದ ಕೇಂದ್ರಕ್ಕೆ ಬಂದ ನಂತರ ಸಾರ್ವಜನಿಕ ಭಾಶೆಯ ಸ್ವರೂಪವೇ ಬದಲಾಗಿ ಹೋಗಿದೆ. ಸದ್ಯದಲ್ಲಿ ಸಾರ್ವಜನಿಕ ಭಾಶೆ ಮುಕ್ತಮಾತುಕತೆಯ ಸಂವಾದದ ಚಹರೆಯನ್ನು ಕಳೆದುಕೊಂಡು ಆಕ್ರಮಣ ಮತ್ತು ಪ್ರತಿ ಆಕ್ರಮಣದ ಸ್ವರೂಪ ಪಡೆದುಕೊಂಡಿದೆ.

ಭಾಶೆಯನ್ನು ಬಳಸುವಾಗ ಸಹನೆ ಮತ್ತು ಲಜ್ಜೆಗಳ ಎಲ್ಲೆಯನ್ನು ಮೀರಲಾಗುತ್ತಿದೆ. ಅಲ್ಲದೆ ‘ಧರ್ಮ’ಗಳು ಬೋಧಿಸುವ ದಯೆ, ಕರುಣೆ, ಮಮತೆ, ಸಾಮರಸ್ಯ, ಸೌಹಾರ್ದತೆ, ಸಹಿಶ್ಣತೆಯ ಗುಣಗಳಿಗೆ ವಿರುದ್ಧವಾದ ‘ದ್ವೇಶದಭಾಶೆ’ ಮುಂಚೂಣಿಗೆ ಬಂದಿದೆ. ಇಲ್ಲಿನ ದುರಂತವೆಂದರೆ, ದ್ವೇಶದ ಭಾಶೆಯನ್ನು ಬಳಸುವ ಜನರನ್ನು ವಿರೋಧಿಸುವ ಭರದಲ್ಲಿ ಅವರ ವಿರೋಧಿಗಳು ಕೂಡ ‘ಆಕ್ರೋಶ ಮತ್ತು ಅಸಹನೆ’ಯ ಭಾಶೆಯನ್ನೇ ಬಳಸುತ್ತಿದ್ದಾರೆ. ದ್ವೇಶದ ಭಾಶೆಗೆ ಪ್ರತಿದ್ವೇಶದ ಭಾಶೆ ಬಳಕೆಯಾಗುತ್ತಿದೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ದೇವರು ಮತ್ತು ಧರ್ಮಗಳು ಚರ್ಚೆಯ ಕೇಂದ್ರಕ್ಕೆ ಬಂದಾಗ ಅವುಗಳ ವಕ್ತಾರರ ಭಾಶೆ ಯಾವಾಗಲೂ ಒಂದು ಬಗೆಯ ಆಕ್ರಮಣಕಾರಿ ಗುಣವನ್ನೇ ಪಡೆದುಕೊಳ್ಳುವಂತೆ ಕಾಣುತ್ತದೆ. ಅದರಲ್ಲಿಯೂ ಏಕದೇವೋಪಾಸನೆಯನ್ನು ಪ್ರತಿಪಾದಿಸುವ ಎಲ್ಲ ಧಾರ್ಮಿಕ ಪಂಥಗಳು ಇಂತಹ ಆಕ್ರಮಣಕಾರಿ ಭಾಶೆಯನ್ನೇ ಬಳಸುವುದನ್ನು ಕಾಣಬಹುದು.

ಪುರಂದರದಾಸರು ತಮ್ಮದೊಂದು ಕೀರ್ತನೆಯಲ್ಲಿ, ‘ಮೂರ್ಖರಾದರು ಇವರು ಲೋಕದೊಳಗೆ ಏಕದೈವವ ಬಿಟ್ಟು ಕಾಕು ದೈವವ ಭಜಿಸಿ’ ಎನುತ್ತಾರೆ. ಇಲ್ಲಿ ತಾವು ನಂಬಿದ ದೈವ, ಧರ್ಮದ ವಿಚಾರಗಳ ಹೊರತಾಗಿರುವ ಜನರ ಬಗೆಗೆ ತಮ್ಮ ಭಿನ್ನಮತ ವ್ಯಕ್ತಪಡಿಸುವಾಗ ಅವರ ಭಾಶೆ ಕೊಂಚ ವ್ಯಂಗ್ಯ ಸೇರಿಕೊಂಡು ಒರಟಾಗುತ್ತದೆ. ಬಸವಣ್ಣ ಕೂಡ ಕೆಲವೊಮ್ಮೆ ಆಕ್ರಮಣಕಾರಿ ಭಾಶೆಯನ್ನೇ ಬಳಸುತ್ತಾನೆ.

ಭಕ್ತರ ಕಂಡರೆ ಬೋಳಪ್ಪಿರಯ್ಯ;
ಸವಣರ ಕಂಡರೆ ಬತ್ತಲೆಯಪ್ಪಿರಯ್ಯ,
ಹಾರುವರ ಕಂಡರೆ ಹರಿನಾಮವೆಂಬಿರಯ್ಯ
ಅವರವರ ಕಂಡರೆ ಅವರವರಂತೆ,
ಸೂಳೆಗೆ ಹುಟ್ಟಿದವರ ತೋರದಿರಯ್ಯ,
ಕೂಡಲಸಂಗಮಯ್ಯನ ಪೂಜಿಸಿ ಅನ್ಯದೈವಂಗಳಿಗೆರಗಿ,
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಎಲ್ ಬಸವರಾಜು, ಪು.54
ಎನ್ನುತ್ತಾನೆ.

ಈ ವಚನದಲ್ಲಿ ‘ಸೂಳೆಗೆ ಹುಟ್ಟಿದವರ ತೋರದಿರಯ್ಯ’ ಎನ್ನುವಲ್ಲಿ ಒಂದು ಬಗೆಯ ಸಿಟ್ಟು ಆಕ್ರೋಶ ‘ಅಸಹನೆ’ ಎದ್ದು ಕಾಣಿಸುತ್ತದೆ. ಅವಕಾಶವಾದಿಗಳ ಹಾಗೆ ವರ್ತಿಸುವ ಭಕ್ತರ ಕಂಡು ವ್ಯಕ್ತಮಾಡುತ್ತಿರುವ ಸಿಟ್ಟು ಸಮಣರ, ಹಾರುವರ ಬಗೆಗಿನ ಸಿಟ್ಟು ಕೂಡ ಆಗಿದೆ. ಕೂಡಲಸಂಗಮನಲ್ಲದ ಇತರೆ ದೈವಗಳ ಬಗೆಗೆ ಆಸಕ್ತಿ ತೋರಿಸುವ ಜನರ ಬಗೆಗೆ ಇರುವ ಸಿಟ್ಟಿನ ಮೂಲದಲ್ಲಿ ದೇವರು ಮತ್ತು ಧರ್ಮ ಪರವಾದ ‘ಕಟ್ಟಾವಾದಿತನ’ ಎದ್ದು ಕಾಣಿಸುತ್ತದೆ.

ಅಂದರೆ ಧಾರ್ಮಿಕವಾದ ಭಾವನೆಯಲ್ಲಿ ಕಟ್ಟಾವಾದಿತನ ದೃಢವಾಗುವ ಹೊತ್ತಿನಲ್ಲಿ ಭಾಶೆ ವ್ಯಗ್ರ ಸ್ವರೂಪವನ್ನು ಪಡೆಯುವುದು ಅಚ್ಚರಿಯ ಸಂಗತಿ. ಜನಪದ ದೈವಗಳನ್ನು ಟೀಕಿಸುವ ಉತ್ಸಾಹದಲ್ಲಿ ಮಡಕೆ ದೈವ ಮೊರ ದೈವ ಕಲ್ಲು ದೈವಗಳೆಂದು ಬಸವಣ್ಣ ಜರಿಯುತ್ತಾನೆ. ಹಾಗೆಯೇ ವೈದಿಕ ಪರಂಪರೆಯನ್ನು ಟೀಕಿಸುವ ಉಮೇದಿನಲ್ಲಿ ಅಲ್ಲಮ ಕೂಡ ‘ಪುರಾಣವೆಂಬುದು ಪುಂಡರಗೋಶಿ’್ಟ ಎಂದುಬಿಡುತ್ತಾನೆ! ಅಕ್ಕಮಹಾದೇವಿ ತನ್ನದೊಂದು ವಚನದಲ್ಲಿ ‘ಗೋವಿಂದನ ನಯನ ತನ್ನ ಉಂಗುಶ್ಟದ ಮೇಲಿಪ್ಪುದು’ ಎನ್ನುತ್ತಾಳೆ. ಕನಕದಾಸ ವಿಶ್ಣು ಮತ್ತು ಶಿವರ ನಡುವೆ ಸಾಮರಸ್ಯ ಮೂಡಿಸಲು ಪ್ರಯತ್ನಿಸುತ್ತಾನೆ.

ಇದನ್ನೂ ಓದಿ |ಮಹಾಡ್: ದಲಿತರ ಚಾರಿತ್ರಿಕ ದಂಗೆಯ ಕಥನ

ಆದರೂ ಅವನಲ್ಲಿಯೂ ನಾರಾಯಣನಿಶ್ಟೆ ಉಗ್ರವಾಗಿ ವ್ಯಕ್ತವಾಗುವಾಗ ಅವನ ಭಾಶೆಯು ಆಕ್ರಮಣಕಾರಿಯಾಗುತ್ತದೆ. “ಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದವರ ಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು” ಎನ್ನುತ್ತಾನೆ. ಇಲ್ಲಿ ಕನಕ ಜನಪದ ದೈವಗಳನ್ನು ನಿರಾಕರಿಸುವಾಗ ವ್ಯಕ್ತಪಡಿಸಿರುವ ಮಾತಿನಲ್ಲಿ ಅಸಹನೆ, ಆಕ್ರೋಶವಿದೆ ಎನ್ನಿಸುತ್ತದೆ. ಠಕ್ಕು ದೇವರು ಎಂದು ಜರಿಯುವ, ವ್ಯಂಗ್ಯವಾಡುವ ಬಗೆಯಿದೆ. ‘ಜಡ ದೈವಗಳ ಪೂಜೆ ಬೇಡಿರೋ’ ಎಂದು ಕೊನೆಗೆ ಕರೆ ಕೊಡುತ್ತಾನೆ.

ಜನಪದ ದೈವಗಳು ಠಕ್ಕು ಮತ್ತು ಜಡದೇವರಾದರೆ ನಾರಾಯಣನೂ ಅಂತಹ ಠಕ್ಕಿನ ಮತ್ತು ಜಡದೇವರೇ ಅಲ್ಲವೇ? ಅಂದರೆ ತಮ್ಮ ದೇವರು ಧರ್ಮಗಳನ್ನು ಸಮರ್ಥಿಸಿಕೊಳ್ಳುವ ವಿಚಾರಕ್ಕೆ ಬಂದಾಗ ವಿರಾಗಿಗಳ ಸಂತರ ಭಾಶೆಯೂ ಸ್ವಲ್ಪ ಲಯ ತಪ್ಪಿ ಒರಟಾಗುತ್ತದೆ. ಅವರೂ ಅಸಹನೆಯ ಆಕ್ರೋಶದ ಭಾಶೆಯನ್ನೇ ಬಳಸಿರುವುದನ್ನು ಗಮನಿಸಬಹುದು. ಹಾಗೆಯೇ ಕೆಲವು ಜೈನ, ಶೈವ ಧರ್ಮೀಯ ಕವಿಗಳಲ್ಲಿಯೂ ಇಂತಹದೇ ಭಾಶೆ ಢಾಳಾಗಿ ಕಾಣಿಸುತ್ತದೆ. ನಮ್ಮ ಪರಂಪರೆಯಲ್ಲಿ ಧಾರ್ಮಿಕ ನಿಶ್ಟೆಯನ್ನು ಆತ್ಯಂತಿಕವಾಗಿ ವ್ಯಕ್ತಪಡಿಸುವ ಉತ್ಸಾಹದಲ್ಲಿ ‘ಅನ್ಯ’ವಾದುದು ಇಲ್ಲವೇ ತನ್ನ ‘ಎದುರಾಳಿ’ಗಳಿಗೆ ಸಂಬಂಧಿಸಿದ ವಿಚಾರಗಳನ್ನು ಅಲ್ಲಗಳೆಯುವ ಹೊತ್ತಿನಲ್ಲಿ ಆಕ್ರಮಣಕಾರಿಯಾದ ಭಾಶೆ ಬಳಸಿರುವುದನ್ನು ಕಾಣಬಹುದು

ಹೀಗೆ ವ್ಯಕ್ತಮಾಡಿರುವವರು ಮೂಲತಃ ಅನುಭಾವಿಗಳು, ಜ್ಞಾನಿಗಳು, ವಿರಾಗಿಗಳು, ಕವಿಗಳು ಮತ್ತು ಸಕಲ ಜೀವಿಗಳಿಗೂ ಲೇಸನ್ನೇ ಬಯಸುವ ಮಹಾತ್ಮರು. ತಮ್ಮ ಆರಾಧ್ಯ ದೈವವನ್ನು ಪ್ರಾಮಾಣಿಕವಾಗಿ ನಂಬಿರುವ ನಿಜವಾದ ಭಕ್ತರು ಮತ್ತು ನಿಸ್ವಾರ್ಥಿಗಳು. ಇವರೂ ಕೂಡ ಅನ್ಯರ ಧಾರ್ಮಿಕ ನಿಶ್ಟೆ ಮತ್ತು ಎದುರಾಳಿಗಳ ವಿಚಾರವನ್ನು ಖಂಡಿಸುವ ಹೊತ್ತಿನಲ್ಲಿ ‘ದ್ವೇಶದ ಭಾಶೆ’ ಬಳಸಿದ್ದಾರೆ ಎನ್ನಲು ಬಾರದಿದ್ದರೂ, ಭಾವಾವೇಶದ, ಆಕ್ರೋಶದ ಭಾಶೆ ಬಳಸಿದ್ದಾರೆ ಎನ್ನಬಹುದು. ಇವರು ಬೇರೆಯವರನ್ನು ವಿಮರ್ಶೆ ಮಾಡಿದಶ್ಟು ತೀವ್ರವಾಗಿಯೇ ತಮ್ಮನ್ನೂ ವಿಮರ್ಶೆ ಮಾಡಿಕೊಂಡಿರುವುದು ತಿಳಿದು ಬರುತ್ತದೆ. ಇದು ಅವರ ಭಾಶೆಯನ್ನು ದ್ವೇಶದ ಭಾಶೆಯಾಗುವ ಅಪಾಯದಿಂದ ತಪ್ಪಿಸಿದೆ.

ಆದರೆ ಇಂದು ದೇವರು ಧರ್ಮಗಳ ಹೆಸರಿನಲ್ಲಿ ಮೂಲಭೂತವಾದಿಗಳಾಗಿ ಬದಲಾಗಿರುವ ‘ದೇಶಭಕ್ತರು’ ಬೇರೆಯವರ ಮೇಲೆ ದಾಳಿ ಮಾಡುವ ‘ದ್ವೇಶಭಕ್ತ’ರಾಗಿದ್ದಾರೆಯೇ ಹೊರತು ತಮ್ಮ ಧರ್ಮ, ಆಚರಣೆ ಮತ್ತು ವ್ಯಕ್ತಿಗತ ನಡತೆಗಳನ್ನು ವಿಮರ್ಶೆ ಮಾಡಿಕೊಳ್ಳುವುದೇ ಇಲ್ಲ. ಹಾಗಾಗಿ ಅಲ್ಲಿ ದ್ವೇಶದ ಭಾಶೆಯು ಹುಲುಸಾಗಿ ಬೆಳೆಯುತ್ತದೆ. ಅವರಿಂದ ಮತ್ತಾವುದೇ ಬಗೆಯ ಹೊಸ ಅರಿವು ಸೃಶ್ಟಿಯಾಗುವುದಿಲ್ಲ. ಅವರು ಕಿಚ್ಚಿನ ಬೊಂಬೆಗಳಂತಿದ್ದು ಬೇರೆಯವರನ್ನು ಸುಟ್ಟು ತಾವೂ ದಹಿಸಿಹೋಗುತ್ತಾರೆ. ಆತ್ಮವಿಮರ್ಶೆಯಿಲ್ಲದ ಮತ್ತು ಜ್ಞಾನದ ಗಂಧಗಾಳಿಯೂ ಇಲ್ಲದ ಅಜ್ಞಾನ-ಮೌಢ್ಯಗಳ ಮೂರ್ತ ರೂಪವಾಗಿರುವ ಧಾರ್ಮಿಕ ಮೂಲಭೂತವಾದಿಗಳು ಎಂದಿಗೂ ಯಾವುದೇ ಜ್ಞಾನವನ್ನು ಸೃಶ್ಟಿಸುವುದಿಲ್ಲ.

ಅವರು ದೇಶಕ್ಕೆ, ಮನುಕುಲಕ್ಕೆ ಅವರು ಕಂಟಕವಾಗಿರುತ್ತಾರೆಯೇ ಹೊರತು ಅವರು ಪರಿಹಾರವಾಗಿರುವುದಿಲ್ಲ. ಈ ಮೂಲಭೂತವಾದಿಗಳು/ಕೋಮುವಾದಿಗಳು ದೇವರು ಮತ್ತು ಧಾರ್ಮಿಕ ವಿಚಾರಗಳನ್ನು ಸ್ವಾರ್ಥ, ದ್ವೇಶದ ರಾಜಕಾರಣಕ್ಕೆ ಬಳಸುತ್ತಾರೆ. ಹಾಗಾಗಿಯೇ ಅವರ ಭಾಶೆ ದ್ವೇಶದ ಲೇಪನ ಪಡೆದುಕೊಂಡು ಬಳಕೆಯಾಗುತ್ತದೆ.

ಅಲ್ಲಮ ಬಸವಣ್ಣ ಕನಕ ಮುಂತಾದವರು ಆಳವಾದ ಜ್ಞಾನದೊಂದಿಗೆ ವೈಚಾರಿಕವಾಗಿ ಎದುರಾಳಿಗಳ ಚಿಂತನೆಯನ್ನು ಗೆಲ್ಲುವ ಹಠದಲ್ಲಿ ಕೊಂಚ ಆವೇಶದ ಭಾಶೆಯನ್ನು ಬಳಸುತ್ತಾರೆ. ಮತ್ತು ಹೊಸ ತಿಳಿವನ್ನು ಸೃಶ್ಟಿಸುತ್ತಾರೆ. ಆದರೆ ವೈಚಾರಿಕತೆ ಜ್ಞಾನಗಳ ಶತ್ರುಗಳಾಗಿರುವ ಎಲ್ಲ ಧರ್ಮಗಳ ಮೂಲಭೂತವಾದಿಗಳು ಮತಾಂಧರು ತಮ್ಮ ಅಜ್ಞಾನವನ್ನು ಮರೆಮಾಚಲೆಂದೇ ಸಂವಾದದ ಬದಲಿಗೆ ದ್ವೇಶದ ಭಾಶೆಗೆ ಮೊರೆಹೋಗುತ್ತಾರೆ.

ಅಂದರೆ ತಮ್ಮ ಸ್ವಾರ್ಥ, ದುಶ್ಟತನ, ಅವೈಚಾರಿಕತೆ, ಅಜ್ಞಾನ, ಟೊಳ್ಳುತನಗಳನ್ನು ಮುಚ್ಚಿಕೊಳ್ಳಲು ದ್ವೇಶದ ಭಾಶೆಯ ಮೊರೆಹೋಗುತ್ತಾರೆ. ‘ಬಾಯಿದ್ದವರು ಬರದಲ್ಲಿಯೂ ಬದುಕಿದರು’ ಎಂಬಂತೆ ವೈಚಾರಿಕತೆ ಮತ್ತು ಸತ್ಯ ಸಂಗತಿಗಳ ಆಧಾರದ ಮೇಲೆ ಜ್ಞಾನದ ಮೂಲಕ ಎದುರಾಳಿಗಳನ್ನು ಗೆಲ್ಲಲಾಗದ ಹೊತ್ತಿನಲ್ಲಿ ಗಂಟಲುಮಾರಿತನದಿಂದ ದ್ವೇಶದ ವಾಗ್ದಾಳಿಗಳಿಂದ ಗೆಲ್ಲಲು ಪ್ರಯತ್ನಿಸಲಾಗುತ್ತದೆ. ಇದೂ ಸಾಲದಾದಾಗ ನೇರವಾಗಿ ದೈಹಿಕವಾಗಿ ಹಲ್ಲೆ ಮಾಡುವ ಮಟ್ಟಕ್ಕಿಳಿಯುತ್ತಾರೆ.

ವಿಚಾರದ ಮೂಲಕ ಗೆಲ್ಲಲು ಸಾಧ್ಯವಾಗದೇ ಇದ್ದಾಗ ದ್ವೇಶದ ಭಾಶೆಯನ್ನು ಬಳಸಲಾಗುತ್ತದೆ. ಇಂತಹ ಭಾಶೆಯ ಮೂಲಕವೇ ಎದುರಾಳಿಗಳಲ್ಲಿ ಭಯೋತ್ಪಾದನೆ ಮೂಡಿಸಲಾಗುತ್ತದೆ. ಇಂತಹ ಭಯೋತ್ಪಾದನೆ ಮತ್ತು ದ್ವೇಶದ ಭಾಶೆಯ ಮೂಲಕವೇ ಜನರ ಮನಸ್ಸನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ.

ವ್ಯಂಗ್ಯವೆಂದರೆ ಇಂತಹ ದ್ವೇಶ ಮತ್ತು ಭಯೋತ್ಪಾದನೆಯ ಭಾಶೆಯ ಹಿಂದಿರುವ ಸಾರ್ವಜನಿಕ ವಂಚನೆಯನ್ನು ಅರ್ಥಮಾಡಿಕೊಳ್ಳದೆ ಅದಕ್ಕೆ ಬಲಿಯಾಗುವ ಜನರ ಸಂಖ್ಯೆ ದೇಶದಲ್ಲಿ ಹೆಚ್ಚಿದೆ. ಇದು ಈ ಕಾಲದ ದೊಡ್ಡ ದುರಂತ. ಹೀಗೆ ಮುಗ್ಧ ಮನಸ್ಸುಗಳನ್ನು ವಶಪಡಿಸಿಕೊಳ್ಳುವವರಿಗೆ ಬಲಿಯಾಗಿ ದ್ವೇಶ ಭಾಶೆಯನ್ನೇ ಅಭಿವ್ಯಕ್ತಿಯ ಮಾಧ್ಯಮವಾಗಿಸಿಕೊಂಡಿದ್ದಾರೆ.

ಇವರು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಿದ್ದು ದ್ವೇಶದ ಸಂದೇಶಗಳನ್ನು ಹೆಚ್ಚೆಚ್ಚು ಪ್ರಸಾರ ಮಾಡುತ್ತಿದ್ದಾರೆ. ಹಾಗಾಗಿಯೇ ದೇಶದಲ್ಲಿ ದ್ವೇಶದ ಭಾಶೆ ಮತ್ತು ಸಂದೇಶಗಳ ಪ್ರಸಾರದ ಸುನಾಮಿಯೇ ಬುಗಿಲೆದ್ದಿದೆ. ಆದ್ದರಿಂದಲೇ ಎಲ್ಲೆಡೆ ದ್ವೇಶದ ಭಾಶಣಗಳು ಸಂದೇಶಗಳು ಅನುರಣಿಸುತ್ತಿವೆ. ಈ ಪ್ರವಾಹದಲ್ಲಿ ಕೊಚ್ಚಿಹೋಗುವವರ ಸಂಖ್ಯೆ ವಿಪರೀತವಾಗಿದೆ. ಇಂದು ‘ದ್ವೇಶಭಾಶೆ’ ಪ್ರಸಾರಕ್ಕೆ ಮುಖ್ಯವಾಹಿನಿಯ ಮಾಧ್ಯಮಗಳೇ ಟೊಂಕ ಕಟ್ಟಿ ನಿಂತಿವೆ. ಅಂದರೆ ಬಹುತೇಕ ಪ್ರಭಾವಿ ಮಾಧ್ಯಮಗಳ ಭಾಶೆಯೇ ದ್ವೇಶಭಾಶೆಯಾಗಿಬಿಟ್ಟಿದೆ. ಇದು ಬಹಳ ಅಪಾಯಕಾರಿ ವಿದ್ಯಮಾನ.

ಶತ್ರುಹತ್ಯೆ ಮತ್ತು ಸ್ವ-ಹತ್ಯೆ

ಇಂತಹ ವಿದ್ಯಮಾನದ ಬೆಳವಣಿಗೆಗೆ ಬಹುಸಂಖ್ಯಾತರ ಧಾರ್ಮಿಕ ಮೂಲಭೂತವಾದ, ಕೋಮುವಾದ ಮತ್ತು ಉಗ್ರರಾಶ್ಟ್ರೀಯವಾದಗಳು ಕಾರಣವಾಗಿವೆ. ದ್ವೇಶದ ಭಾಶೆಗೆ ಧರ್ಮ ಮತ್ತು ರಾಶ್ಟ್ರೀಯತೆಗಳು ಇಂಬು ನೀಡಿರುವುದರಿಂದ ಈ ವಿಚಾರಗಳ ಬೆಂಬಲಿಗರು ತಮ್ಮ ಎದುರಾಳಿಗಳ ಮೇಲೆ ಅತ್ಯಂತ ಹೀನವಾದ ಭಾಶೆ ಬಳಸಿ ಆಕ್ರಮಣ ಮಾಡುತ್ತಿದ್ದಾರೆ.

ಧರ್ಮದ ಹೆಸರಿನಲ್ಲಿ ಹಾದಿಬೀದಿಗಳಲ್ಲಿ ಗುಂಪುದಾಳಿ ಮಾಡಿ ದಾಂಧಲೆ ಸೃಶ್ಟಿಸುವುದು ಒಂದು ಬಗೆಯಾದರೆ ನಿತ್ಯವೂ ವಿದ್ಯುನ್ಮಾನ ಮಾಧ್ಯಮಗಳು; ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್‍ಆಫ್ ಮತ್ತು ಫೇಸ್ಬುಕ್‍ಗಳ ಮೂಲಕ ತಮ್ಮ ಎದುರಾಳಿಗಳ ಮೇಲೆ ಮುಗಿಬೀಳಲಾಗುತ್ತಿದೆ. ಹೀಗೆ ಮುಗಿಬೀಳುವ ವೇಳೆ ಅತ್ಯಂತ ಅಸಹ್ಯಕರ ಮತ್ತು ನೀಚಮಟ್ಟದ ಭಾಶೆ ಬಳಸಲಾಗುತ್ತದೆ. ತಮ್ಮ ಎದುರಾಳಿಗಳ ಮೇಲೆ ದಾಳಿ ಆರೋಪ ಮಾಡುವಾಗ ಸಂವಾದದ ಭಾಶೆಯನ್ನು ಬಳಸುವುದಿಲ್ಲ. ಬದಲಿಗೆ ತಮ್ಮ ಸೈದ್ಧಾಂತಿಕ ಎದುರಾಳಿಗಳ ವ್ಯಕ್ತಿತ್ವವನ್ನು ಹೀನಗೊಳಿಸುವಂತಹ ಭಾಶೆಯನ್ನು ಬಳಸಲಾಗುತ್ತದೆ.

ಆ ಮೂಲಕ ಅವರ ವ್ಯಕ್ತಿತ್ವವನ್ನು ವಿಕೃತಗೊಳಿಸಲಾಗುತ್ತದೆ. ಸಮಾಜದಲ್ಲಿ ಅವರ ಬಗೆಗೆ ಅಪನಂಬಿಕೆಯನ್ನು ಸೃಶ್ಟಿಸಲಾಗುತ್ತದೆ. ಇಂತಹ ಅಪಪ್ರಚಾರವನ್ನು ಸುಳ್ಳು ಸಂದೇಶಗಳನ್ನು ನಂಬುವಂತಹ ಜನಸಮೂಹವನ್ನು ವ್ಯವಸ್ಥಿತವಾಗಿ ಸೃಶ್ಟಿಸಿಕೊಳ್ಳಲಾಗಿದೆ. ಇದೇ ಫ್ಯಾಸಿಸಂನಮ ನಿಜವಾದ ಉದ್ದೇಶ ಕೂಡ ಆಗಿರುತ್ತದೆ. ಇಲ್ಲಿ ನಿಜವಾದ ಧರ್ಮ, ಭಾಶೆ ಮತ್ತು ಮೌಲ್ಯಗಳು ಎಲ್ಲವೂ ಅವಸಾನಗೊಳ್ಳುತ್ತವೆ ಇಲ್ಲವೇ ಅನರ್ಥ ಪಡೆದುಕೊಳ್ಳುತ್ತವೆ. ಅಂದರೆ ಧರ್ಮದ ಹೆಸರಿಯಲ್ಲಿಯೇ ಧರ್ಮದ ನೈಜ ಮೌಲ್ಯಗಳನ್ನು ನಾಶ ಮಾಡಲಾಗುತ್ತದೆ.

ಹೀಗೆ ತಮ್ಮ ‘ಸೈದ್ಧಾಂತಿಕ ಎದುರಾಳಿ’ಗಳ ಮೇಲೆ ದಾಳಿ ಮಾಡಲು ಬಳಸುವ ಭಾಶೆ ಅದು ಎದುರಾಳಿಗಳನ್ನು ಮಾತ್ರ ನಾಶ ಮಾಡುವುದಿಲ್ಲ. ಬದಲಿಗೆ ಮೊದಲು ‘ದ್ವೇಶಭಾಶೆ’ ಬಳಸುವವರನ್ನೇ ನಾಶಮಾಡಿರುತ್ತದೆ. ಯಾಕೆಂದರೆ ಅವರು ಮೊದಲು ತಮ್ಮ ವ್ಯಕ್ತಿತ್ವವನ್ನು ಕೊಂದುಕೊಂಡು ಅಮಾನುಶರಾಗಿ ಬದಲಾಗಿರುತ್ತಾರೆ. ಯಾವುದೇ ಬಗೆಯ ವೈಚಾರಿಕತೆ ಮತ್ತು ನೈಜವಾದ ಧಾರ್ಮಿಕ ಮೌಲ್ಯಗಳಲ್ಲಿ ನಂಬಿಕೆಯಿಟ್ಟಿರುವುದಿಲ್ಲ.

ಇವುಗಳ ಬಗೆಗೆ ವಚನಕಾರರಂತೆ ಪ್ರಾಮಾಣಿಕವಾಗಿ ಶೋಧನೆಯನ್ನೂ ಮಾಡುವುದಿಲ್ಲ. ಅವುಗಳ ನಿಜನೆಲೆಯನ್ನು ಅರಿವ ತುಡಿತವಿರುವುದಿಲ್ಲ. ಅವನ್ನು ಕುರುಡಾಗಿ ಭಾವಿಸಿ ಧರ್ಮದ, ದೇಶದ ಮತ್ತು ಸಂಸ್ಕøತಿ ರಕ್ಶಣೆಯ ಹೆಸರಿನಲ್ಲಿ ದ್ವೇಶದ ಭಾಶೆಯೊಂದಿಗೆ ದಾಳಿ ನಡೆಸಲಾಗುತ್ತದೆ. ಅಲ್ಲದೆ ಅವರ ಭಾಶೆ ವೈಚಾರಿಕವೂ ಚಿಂತನಶೀಲವೂ ಆದ ಸೃಜನಶೀಲ ಭಾಶೆಯಲ್ಲ. ಅದು ಯಾವುದೇ ಹೊಸ ವಿಚಾರವನ್ನೂ ಹುಟ್ಟಿಸುವುದಿಲ್ಲ. ಅದು ಒಂದು ಬಗೆಯ ಕಿಚ್ಚಿನ ಭಾಶೆ. ಕಿಚ್ಚು ಎಲ್ಲವನ್ನೂ ದಹಿಸುವಂತೆ ಕಿಚ್ಚಿನ ಭಾಶೆ ಬಳಸುವ ವ್ಯಕ್ತಿಗಳನ್ನು, ಅವರು ನಂಬಿರುವ ಧರ್ಮ ಮತ್ತು ಸಂಸ್ಕøತಿಯ ಉದಾತ್ತ ಮೌಲ್ಯಗಳನ್ನೂ ನಾಶ ಮಾಡುತ್ತಿರುತ್ತವೆ. ಅಲ್ಲದೆ ಈ ಭಾಶೆ ಸೃಜನಶೀಲತೆ ವಿರೋಧಿಯಾಗಿದ್ದು ವಿದ್ವಂಸಕಾರಿಯಾಗಿರುತ್ತದೆ. ಹಾಗಾಗಿ ಇಲ್ಲಿ ನಡೆಯುವುದು ಶತ್ರುಹತ್ಯೆಯಲ್ಲ! ಸ್ವಹತ್ಯೆ ಇಲ್ಲವೇ ಆತ್ಮಹತ್ಯೆ.

ದುರಂತವೆಂದರೆ ಇಂತಹ ವಿದ್ವಂಸಕಾರಿಯಾದ ಭಾಶೆಯೇ ಇಂದಿನ ಮುಖ್ಯವಾಹಿನಿ ಮಾಧ್ಯಮಗಳ ಭಾಶೆಯಾಗಿಬಿಟ್ಟಿದೆ. ಇಂದಿನ ಮುಖ್ಯವಾಹಿನಿಯ ಮಾಧ್ಯಮಗಳು, ಅಧಿಕಾರಶಕ್ತಿಗಳು, ಧರ್ಮರಕ್ಶಕರು, ವಿದ್ವಂಸಕಾರಿ ಭಾಶೆಯನ್ನು ಬಳಸುತ್ತಿರುವ ಕಾರಣ ದ್ವೇಶದ ವಿಚಾರಗಳನ್ನು ಹೊರತುಪಡಿಸಿ ಹೊಸ ವಿಚಾರದ ಕೊಡುಗೆ ನೀಡುವುದಿಲ್ಲ. ದೇಶಭಕ್ತಿ ದ್ವೇಶಭಕ್ತಿಯಾಗಿ ಕೆಲಸ ಮಾಡುತ್ತಿರುತ್ತದೆ. ಆದರೆ ಬಸವಣ್ಣ, ಅಲ್ಲಮ ಅಕ್ಕ ಕನಕನಂತಹವರು ಸಿಟ್ಟಿನ ಆವೇಶದ ಆಕ್ರೋಶದ ಭಾಶೆಯನ್ನು ಬಳಸಿದರೂ ಅವರು ತಮ್ಮೊಳಗೆ ದ್ವೇಶದ ಭಾವನೆ ಹೊಂದಿರುವುದಿಲ್ಲ.

ತಮ್ಮ ತಮ್ಮ ಅಂತರಂಗದಲ್ಲಿರುವ ಅಜ್ಞಾನ, ಸ್ವಾರ್ಥ ದ್ವೇಶದ ಭಾವನೆಗಳನ್ನು ಖಾಲಿಮಾಡಿಕೊಂಡ ನಂತರವೇ ಅವರು ಮಾತನಾಡುತ್ತಿದ್ದಾರೆ. ಅವರ ವಿಡಂಭನೆಯ ಭಾಶೆ ಆಳವಾದ ಜ್ಞಾನದಿಂದ ಹುಟ್ಟಿರುವುದರಿಂದ ಅದರಲ್ಲಿ ದ್ವೇಶವಿರುವುದಿಲ್ಲ. ಬದಲಿಗೆ ಅದು ದಪ್ಪ ಚರ್ಮದ ಜನರನ್ನು ತಿವಿದು ಎಚ್ಚರಿಸುತ್ತದೆ. ಆದರೆ ಇಂದು ದ್ವೇಶದ ಭಾಶೆಯನ್ನು ಬಳಸುವ ಜನರು ತಮ್ಮೊಳಗಿನ ಅಜ್ಞಾನದ ಕೊಡವನ್ನು ಖಾಲಿ ಮಾಡದೆ ಅದಕ್ಕೆ ಇನ್ನಶ್ಟು ಮೌಢ್ಯಗಳನ್ನು ದುಶ್ಟತನವನ್ನು ತುಂಬಿಕೊಳ್ಳಲು ದ್ವೇಶದ ಲೇಪನ ಮಾಡಿ ಅದನ್ನು ಅಲಗಾಗಿಸಿ ಎದುರಾಳಿಗಳ ಮೇಲೆ ದಾಳಿ ಮಾಡುತ್ತಾರೆ.

ಇದು ಅವರನ್ನು ಮತ್ತು ಜನರನ್ನು ನಾಶ ಮಾಡುತ್ತದೆ. ಪುರಂದರದಾಸರು ‘ವಿಚಾರವಿಲ್ಲದೆ ಪರರ ದೂಶಿಸುವುದಕ್ಕೆ ಚಾಚಿಕೊಂಡಿರುವಂತೇ ಇರುವ ನಾಲಿಗೆ’ಗಳು ಎನ್ನುತ್ತಾರೆ. ಅಂದರೆ ವಿಚಾರಹೀನತೆಯೇ ದ್ವೇಶದ ಭಾಶೆ ಬಳಸುವುದರ ಮೂಲ. ಅಂತಹವರೇ ನಾಲಗೆಗಳನ್ನು ಆಯುಧವಾಗಿಸಿ ದಾಳಿ ಮಾಡುತ್ತ ಅರಿವಿನ ಶತ್ರುಗಳಾಗಿ ಬೆಳೆಯುತ್ತಾರೆ. ಪುರಂದರ ದಾಸರು ‘ಭಾಶಾಹೀನರ ಸಂಗ ಅಭಿಮಾನ ಭಂಗ’ ಎನ್ನುತ್ತಾರೆ. ಅಂದರೆ ದ್ವೇಶಭಾಶೆ ಭಾಶಾಹೀನತೆಯ ದ್ಯೋತಕವೂ ಹೌದು. ಸಾಮಾಜಿಕ ಸೌಖ್ಯದಲ್ಲಿ ಭಾಶೆಯ ಪಾತ್ರ ಬಹಳ ಮಹತ್ವದ್ದು. ಹಾಗಾಗಿ ದ್ವೇಶಭಾಶೆಯಿಂದ ನಿಡುಗಾಲದಲ್ಲಿ ಸಾಮಾಜಿಕ ಸೌಖ್ಯದದ ಮೇಲೆ ಆಗುವ ಪರಿಣಾಮಗಳೇನು? ಎಂಬುದನ್ನು ಊಹಿಸಿದರೆ ಆತಂಕವಾಗುತ್ತದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಸಂಗತಿಯೆಂದರೆ ಇಂತಹ ದ್ವೇಶಭಾಶೆಯನ್ನು ವಿರೋಧಿಸುವ ಒಂದು ವಿದ್ಯಮಾನವೂ ಇಂದು ಭಾರತದಲ್ಲಿ ಪ್ರಬಲವಾಗಿಯೇ ಬೆಳೆದಿದೆ. ಆದರೆ ಇದರಲ್ಲಿ ಒಂದು ವರ್ಗ ದ್ವೇಶಭಕ್ತಿಗೆ ಪದಲಿಯಾಗಿ ಪ್ರತಿದ್ವೇಶಭಕ್ತಿ ಭಾಶೆಯನ್ನು ಬಳಸುತ್ತಿದೆ. ಅಂದರೆ ಮತೀಯವಾದಿಗಳ ನೀಚಭಾಶೆಯನ್ನು ಖಂಡಿಸಲು ಅಂತಹದೇ ಭಾಶೆಯನ್ನು ಅದನ್ನು ವಿರೋಧಿಸುವ ಜನರು ಬಳಸುತ್ತಿದ್ದಾರೆ. ಇಂತಹ ಕಡೆ ಬಲಪಂಥೀಯರಲ್ಲಿ ಕಾಣುವಂತಹ ಅಸಹನೆ ಅಸಹಿಶ್ಣತೆಯ ಭಾವಗಳೇ ವಿರೋಧಿಸುವವರ ಭಾಶೆಯಲ್ಲಿ ಎದ್ದು ಕಾಣಿಸುತ್ತಿರುತ್ತದೆ. ಇದು ಅನೌಪಚಾರಿಕ ವಲಯದಲ್ಲಿ ಹೆಚ್ಚು.

ವಿಶೇಶವಾಗಿ ಫೇಸ್ಬುಕ್‍ನಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಟ್ರೊಲ್ ಭಾಶೆಯೇ ಇಲ್ಲಿ ಪ್ರಧಾನ. ಬಲಪಂಥೀಯರು ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಖಂಡಿಸಲು ವಿರೋಧಿಸಲು ಗೇಲಿ ವ್ಯಂಗ್ಯ ಅಸಹ್ಯ ಬೈಗುಳ ಇತ್ಯಾದಿ ಎಲ್ಲವನ್ನೂ ಬಳಸುತ್ತಾರೆ. ಇಂತಹ ಭಾಶೆಯನ್ನು ಬಳಸಿ ಸಂವಾದ ನಡೆಸುವಾಗ ಅಲ್ಲಿ ಕೇಳುಗರ ಇಲ್ಲವೇ ಯಾರನ್ನು ಉದ್ದೇಶಿಸಿ ಬರೆಯಲಾಗಿರುತ್ತದೆಯೋ ಅವರಲ್ಲಿ ಯಾವ ಬದಲಾವಣೆಯೂ ಕಾಣಿಸುವುದಿಲ್ಲ. ವಿಚಾರ ಪ್ರಚೋದಕವೂ ಆಗಿರುವುದಿಲ್ಲ. ಅಂತಹ ಕಡೆ ಬಳಕೆಯಾಗಿರುವ ಭಾಶೆ ಕೇಳುಗರಲ್ಲಿಯೇ ಬೇರೆ ಬಗೆಯ ಅಸಹನೆ ಸೃಶ್ಟಿಸುವ ಸಾಧ್ಯತೆಗಳೇ ಹೆಚ್ಚು. ಅಂದರೆ ನೀಚ ಭಾಶೆಗೆ ಮತ್ತೊಂದು ಬಗೆಯ ನೀಚ ಭಾಶೆ ಮದ್ದಲ್ಲ. ದ್ವೇಶದ ಭಾಶೆಗೆ ಪ್ರತಿದ್ವೇಶದ ಭಾಶೆ ಮದ್ದಲ್ಲ. ಅಂತಹ ಕಡೆ ಸೌಹಾರ್ದದ ಪ್ರೀತಿಯ ಭಾಶೆಯೇ ಮದ್ದಾಗಿರುತ್ತದೆ.

ಆವೇಶದ ಆಕ್ರೋಶದ ಭಾಶೆಗೆ ಮೆಲುದನಿಯ ಮೃದುತ್ವದ ‘ಬುದ್ಧಭಾಶೆ’ಯೇ ಮದ್ದಾಗಿರುತ್ತದೆ. ಆದರೆ ಇದನ್ನು ಅರಿತುಕೊಳ್ಳದ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದ್ವೇಶದ ಭಾಶೆಯನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಇಂತಹ ಪ್ರತಿದ್ವೇಶದ ಭಾಶೆ ಕೇಳುಗರಲ್ಲಿ ಯಾವುದೇ ಚಿಂತನೆಯನ್ನು ಎಚ್ಚರವನ್ನೂ ಮೂಡಿಸುವುದಿಲ್ಲ. ಬದಲಿಗೆ ಮತ್ತಶ್ಟು ಅಕರಾಳ ವಿಕರಾಳಗಳ ಭಾವನೆಗಳನ್ನೇ ಸೃಶ್ಟಿಸುತ್ತದೆ. ಸಾರ್ವಜನಿಕ ಭಾಶೆ ಅಕರಾಳ ವಿಕರಾಳ ಆದಶ್ಟೂ ಅದು ಒಟ್ಟು ದೇಶದ ವೈಚಾರಿಕ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ದ್ವೇಶದ ನುಡಿಗೆ ಪ್ರತಿದ್ವೇಶದ ನುಡಿಯನ್ನು ಬಳಸದೆ ಪ್ರೀತಿಯ ನುಡಿಯನ್ನು ಬಳಸಬೇಕಾಗಿರುತ್ತದೆ. ಅಜ್ಞಾನದಿಂದ, ದುಶ್ಟತನದಿಂದ ಮಾಡುವ ಉದ್ದೇಶಪೂರ್ವಕ ದಾಳಿಗೆ ಎದುರಾಳಿಯ ಮನಸ್ಸಿನಲ್ಲಿಯೂ ವಿಚಾರದ ಹಣತೆ ಹಚ್ಚುವಂತಹ ಭಾಶೆಯನ್ನು ಬಳಸಬೇಕಾಗುತ್ತದೆ. ಇದೇ ಇಂದಿನ ಅಗತ್ಯ.

ಮಿತ್ರಹತ್ಯೆ ಮತ್ತು ಸ್ವ-ಹತ್ಯೆ

ಸಾಮಾಜಿಕ ಮಾಧ್ಯಮಗಳ ಮೂಲಕ ‘ಮುಖೇಡಿ’ ಚರ್ಚೆಯನ್ನು ಮಾಡಲು ಮುಂದಾದ ನಂತರ ಮಿತ್ರಸಂವಾದವೂ ಶತ್ರುಸಂವಾದದಂತೆ ಬದಲಾಗಿದೆ. ಇದು ಇನ್ನೊಂದು ದೊಡ್ಡ ದುರಂತ. ಖಾಸಗಿಯಾಗಿ ನಡೆಯಬೇಕಾದ ಚರ್ಚೆಗಳು ಸಾರ್ವಜನಿಕವಾಗಿ ನಡೆಯುತ್ತವೆ. ಸಾರ್ವಜನಿಕವಾಗಿ ನಡೆಯಬೇಕಾದ ಚರ್ಚೆಗಳು ಕಣ್ಮರೆಯಾಗುತ್ತಿವೆ. ಎದುರಾಬದುರು ನಡೆಯುವ ಮಾತುಕತೆಯಲ್ಲಿ ಬಳಕೆಯಾಗುವ ಭಾಶೆಯ ಬಗೆಯೇ ಬೇರೆ. ಅಲ್ಲಿ ಮಾತು ಯಾವುದೇ ವ್ಯಕ್ತಿಯ ಎದುರು ನಿಲ್ಲದೆ ಮರೆಯಲ್ಲಿ ನಿಂತು ಮಾತನಾಡುವಾಗ ವಿಚಿತ್ರವಾದ ‘ಪೌರುಶ’ ಬಂದುಬಿಡುತ್ತದೆ.

ಇಲ್ಲಿ ವಿಶ್ವಾಸಗಳಿಗಿಂತ ಅಸಹನೆ ಮತ್ತು ನಂಜಿನ ಭಾವನೆಗಳು ಕಿಡಿಯಾಡುತ್ತಲೇ ಇರುತ್ತವೆ. ಈ ಕಿಡಿಗಳು ಅಲ್ಲಿಯೇ ನಂದಿಹೋಗುವ ಬದಲು ಅವು ಬಾಳಿನುದ್ದಕ್ಕೂ ಮುಂದುವರೆಯುವ ಸಾಧ್ಯತೆಗಳಿರುತ್ತವೆ. ಇದು ನಂಬಿಕೆಗಿಂತ ಅಪನಂಬಿಕೆಯ ಬೆಳೆಯನ್ನೇ ಹೆಚ್ಚು ಬೆಳೆಯುತ್ತಿದೆ. ಇಲ್ಲಿ ಮಾತು ಮನಸ್ಸುಗಳನ್ನು ಬೆಸೆಯುವುದಕ್ಕಿಂತ ಬೇರ್ಪಡಿಸುವ ಕೆಲಸವನ್ನೇ ಹೆಚ್ಚು ಮಾಡುತ್ತಿರುತ್ತದೆ. ಅಲ್ಲದೆ ಇಂತಹ ಸಮಯದಲ್ಲಿ ಮಿತ್ರಹತ್ಯೆ ಮತ್ತು ಸ್ವಹತ್ಯೆಗಳು ಹೆಚ್ಚು ನಡೆಯುತ್ತಿರುತ್ತವೆ. ತಮಗಿಂತ ಭಿನ್ನವಾದ ಅಭಿಪ್ರಾಯ ಮಂಡಿಸುವವರ ಮೇಲೆ ದಂಡೆತ್ತಿ ಹೋಗುವ ಭರದಲ್ಲಿ ಸಂವಾದ ಚೌಕಟ್ಟು ಮೀರಿದ ಭಾಶೆಯನ್ನು ಬಳಸಲಾಗುತ್ತದೆ.

ಇಂತಹ ಸಂದರ್ಭದಲ್ಲಿ ವಿಚಾರವನ್ನು ತಮ್ಮೆದುರು ಇರುವವರಿಗೆ ಮನನ ಮಾಡಿಸುವ ಬದಲಿಗೆ ಆರೋಪ ಮಾಡುವ ಇಲ್ಲವೇ ದೂರುವ ಕೆಲಸ ಮಾಡಲಾಗುತ್ತದೆ. ಇದು ಒಂದು ಬಗೆಯ ಅಸಹನೆ ಮತ್ತು ದ್ವೇಶದ ಭಾವನೆಯನ್ನೇ ಅಂತರಂಗದಲ್ಲಿ ಹೊಂದಿರುವುದನ್ನು ಗಮನಿಸಬಹುದು. ಇವು ಕೆಲವೊಮ್ಮೆ ಅತಿರೇಕ ಮುಟ್ಟಿರುವುದೂ ಉಂಟು. ನಿಜವೆಂದರೆ ಇಲ್ಲಿನ ಎಶ್ಟೋ ಸಂಗತಿಗಳು ಸಾರ್ವಜನಿಕವಾಗಿ ಚರ್ಚಿಸ ತಕ್ಕ ವಿಚಾರಗಳೇ ಆಗಿರುವುದಿಲ್ಲ. ಮುಕ್ತವಾಗಿ ಚರ್ಚಿಸತಕ್ಕ ವಿಚಾರಗಳು ಮತ್ತು ಖಾಸಗಿಯಾಗಿ ಚರ್ಚಿಸಬೇಕಾದ ವಿಚಾರಗಳು ಬೇರೆ ಬೇರೆ.

ಆದರೆ ಅದನ್ನು ಮರೆತು ಪರಸ್ಪರ ಕೆಸರೆರೆಚಿಕೊಳ್ಳುವ ಕೆಲಸವನ್ನು ಸಾರ್ವಜನಿಕ ವೇದಿಕೆಗಳಲ್ಲಿ ಮಾಡಲಾಗುತ್ತಿದೆ. ಇದರಿಂದ ಒಂದುಗೂಡಬೇಕಾದ ಜನರು ಚಿದ್ರಗೊಳ್ಳುತ್ತಿದ್ದಾರೆ. ಕೂಡುವ ಮನಸ್ಸುಗಳು ಮುರಿದು ಬೀಳುತ್ತಿವೆ. ಇಂತಹ ಅಪಾಯಕಾರಿ ವಿದ್ಯಮಾನಕ್ಕೆ ವೇದಿಕೆ ರೂಪಿಸಿರುವುದು ಸಾಮಾಜಿಕ ಮಾಧ್ಯಮಗಳು. ಇದರಿಂದ ಜನವಿರೋಧಿ ಆಳುವ ವರ್ಗಗಳು ಮತ್ತು ಪ್ರತಿಗಾಮಿ ಪುರೋಹಿತಶಾಹಿ ಶಕ್ತಿಗಳೇ ಹೆಚ್ಚು ಪ್ರಯೋಜನ ಪಡೆಯುತ್ತಿವೆ. ಆದರೆ ಜನರು ಒಗ್ಗೂಡಲು ಬಳಸಿಕೊಳ್ಳಬೇಕಾದ ವೇದಿಕೆಗಳನ್ನು ವಿಘಟನೆಗೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ಇದು ಭಾಶೆಯ ಸಮಸ್ಯೆಯೋ ಇಲ್ಲವೇ ಅದನ್ನು ಅರಿತು ಬಳಸದೇ ಇರುವವರ ಸಮಸ್ಯೆಯೋ? ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.

ಭಾಶೆಯ ಲೋಕಪಯೋಗಿ ಕಾರ್ಯ

ಕುವೆಂಪು ಅವರು ಭಾಶೆಯನ್ನು ಭಾವೋಪಯೋಗಿ ಮತ್ತು ಲೋಕೋಪಯೋಗಿ ಎಂದು ಎರಡು ನೆಲೆಯಲ್ಲಿ ಗುರುತಿಸುತ್ತಾರೆ. ಲೋಕೋಪಯೋಗಿ ಭಾಶೆ ಸಾರ್ವಜನಿಕ ಸಂವಹನದ ಮೂಲಕ ಮನಸ್ಸುಗಳನ್ನು ಬೆಸೆಯಬೇಕು. ಹಾಗೆಯೇ ಭಾವೋಪಯೋಗಿ ಗುಣದ ಮೂಲಕ ಮಾನವರು ಭಾಶೆಯನ್ನು ತಮ್ಮ ಅಂತರಂಗದ ವಿಕಾಸಕ್ಕೆ ಬಳಸಿಕೊಳ್ಳಬೇಕಿರುತ್ತದೆ. ಆದರೆ ದ್ವೇಶ ಮತ್ತು ಪ್ರತಿದ್ವೇಶಗಳ ಭಾಶೆ ಸಾಮಾಜಿಕ ನೆಲೆಯಲ್ಲಿ ಅದು ಸಮಾಜವನ್ನು ಭಿನ್ನ ವರ್ಗಗಳನ್ನು ಒಗ್ಗೂಡಿಸುವುದಿಲ್ಲ; ಬದಲಿಗೆ ವಿಭಜಿಸುತ್ತದೆ. ಹಾಗೆಯೇ ದ್ವೇಶ ಪ್ರತಿದ್ವೇಶಗಳ ಭಾಶೆ ಕೂಡ ಅಂತರಂಗವನ್ನು ಬೆಳಗುವುದಿಲ್ಲ. ಮತ್ತು ಅದು ಸೃಜಶೀಲವಾದ ಕಾರ್ಯಗಳಿಗೂ ಒದಗಿಬರುವುದಿಲ್ಲ. ಅಂತಹ ದ್ವೇಶ ಮತ್ತು ಪ್ರತಿದ್ವೇಶಗಳ ಭಾಶೆಯಿಂದ ಯಾವುದೋ ಹೊಸ ಚಿಂತನೆಯನ್ನು ಮನಸ್ಸುಗಳನ್ನು ಹುಟ್ಟಿಸಲು ಸಾಧ್ಯವಿಲ್ಲ.

‘ಕಾಂತಾಸಂಹಿತೆ’ಯಂತಹ ಪ್ರೇಮದಭಾಶೆ ಮಾತ್ರವೇ ಹೊಸವಿಚಾರ ಮಂಡಿಸಲು ಪ್ರಯೋಜನಕ್ಕೆ ಬರುತ್ತದೆ; ದ್ವೇಶದ ಭಾಶೆಯಲ್ಲ. ದ್ವೇಶದ ಭಾಶೆ-ಭಾಶಣಗಳು ಒಂದು ಸಮಾಜದ ರೋಗವನ್ನು ಎತ್ತಿತೋರಿಸುತ್ತವೆಯೇ ಹೊರತು ಅದು ಸಮಾಜದ ಅತ್ಯುನ್ನತ ಸಾಧನೆಯನ್ನು ಬಿಂಬಿಸುವುದಿಲ್ಲ.

ಕಾಡ್ಗಿಚ್ಚಿನ ಎದುರು ‘ನೀರು’ ಮಹತ್ವ ಪಡೆಯುವಂತೆ ದ್ವೇಶದ ಭಾಶೆಯ ಎದುರು ಬುದ್ಧನ ಕಾರುಣ್ಯದ ಭಾಶೆ ಮಹತ್ವ ಪಡೆಯುತ್ತದೆ. ಅಂಗುಲಿಮಾಲನಂತಹ ಭಯಹುಟ್ಟಿಸುವ ವ್ಯಕ್ತಿಯ ಎದುರು ಬುದ್ಧ ನಿಲ್ಲಲು ಸಾಧ್ಯವಾಗಿದ್ದು ಕಾರುಣ್ಯ ಭಾಶೆಯ ಮೂಲಕವೇ. ಗಾಂಧೀಜಿ ಬ್ರಿಟಿಶರನ್ನು ಎದುರಿಸಿದ್ದು ಇಂತಹ ಪ್ರೇಮದ ಭಾಶೆಯ ಮೂಲಕವೇ ಆಗಿತ್ತು. ಇದುವರೆಗಿನ ಚರಿತ್ರೆಯ ಅನುಭವದಿಂದ ಕಲಿತಿರುವ ಪಾಠಗಳನ್ನು ಗಮನಿಸಿದರೆ ಕ್ರೌರ್ಯಕ್ಕೆ ಎದುರಾಗಿ ನಿಂತು ಗೆದ್ದಿರುವುದು ಕ್ರೌರ್ಯವಲ್ಲ; ಬದಲಿಗೆ ಪ್ರೇಮ ಕರುಣೆ ದಯೆ ಮತ್ತು ಸಹನೆಯ ಮೌಲ್ಯಗಳು ಮಾತ್ರವೇ ಆಗಿದೆ.

ಇಂದಿನ ಅಗತ್ಯವೂ ಕೂಡ ಸಹನೆಯ ಮತ್ತು ಕರುಣೆಯ ಭಾಶೆಯೇ ಆಗಿದೆ. ಆದರೆ ಇಂದು ಕ್ರೌರ್ಯವನ್ನು ಎದುರುಗೊಳ್ಳುವ ದಿಟ್ಟತೆ ತೋರುತ್ತಿರುವ ಜನರೂ ಕೂಡ ಕೆಲವೊಮ್ಮೆ ಸಹನೆ ಕಳೆದುಕೊಂಡು ಪ್ರತಿಕ್ರಿಯಿಸುವುದು ಎದ್ದು ಕಾಣಿಸುತ್ತದೆ. ಕೆಲವೊಮ್ಮೆ ದ್ವೇಶಭಾಶೆಯ ಅತಿರೇಕದ ವರ್ತನೆಗಳನ್ನು ಕಂಡಾಗ ಆವೇಶ ಆಕ್ರೋಶಗಳು ಹುಟ್ಟಬಹುದು. ಆದರೆ ಅಂತಹ ಆವೇಶ ಆಕ್ರೋಶಗಳನ್ನು ತಮ್ಮ ಎದುರಾಳಿಗಳಂತೆ ಮೈದುಂಬಿಕೊಂಡಾಗ ವಿಚಾರ ಮತ್ತು ಚರ್ಚೆಗಳು ದಾರಿ ತಪ್ಪುತ್ತವೆ. ಭಾಶೆ ಹದಗೆಡುತ್ತದೆ. ಸಾಮಾಜಿಕ ಆರೋಗ್ಯ ಮತ್ತಶ್ಟು ನಾಶವಾಗುತ್ತದೆ.

ಹಾಗಾಗಿ ಬದಲಾವಣೆ ಬಯಸುವ ಮನಸ್ಸುಗಳು ತಮ್ಮ ಉದಾತ್ತ ಚಿಂತನೆಗಳಿಗೆ ತಕ್ಕುನಾದ ಕಾರುಣ್ಯದ ಭಾಶೆಯನ್ನೇ ಬಳಸಬೇಕಾಗುತ್ತದೆ. ಅತಿರೇಕದ ಭಾಶೆಯನ್ನು ಬಳಸಿದರೆ ಅದು ವಿಚಾರ ಸಂವಹನ ನಡೆಸದೆ ಹಾದಿತಪ್ಪಿರುವ ಮನಸ್ಸುಗಳನ್ನು ಪರಿವರ್ತಿಸುವ ಬದಲು ಮತ್ತಶ್ಟು ಕೆರಳಿಸುವ ಅಪಾಯವಿರುತ್ತದೆ. ಈ ಬಗೆಗೆ ಎಚ್ಚರಿಕೆ ಅಗತ್ಯವಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಹಳ್ಳಿ ಹೆಜ್ಜೆಯ ಸುತ್ತು

Published

on

ಸಾಂದರ್ಭಿಕ ಚಿತ್ರ
  • ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್

ಭಾರತದ ಜನಸಂಖ್ಯೆಯ ಸುಮಾರು 70% ಕ್ಕಿಂತ ಹೆಚ್ಚು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಅಂತೆಯೇ ನಾವು ಸೇವಿಸುವ ಆಹಾರ ಮತ್ತು ಕೃಷಿ ಉತ್ಪನ್ನಗಳ ಮುಖ್ಯ ಮೂಲ ಗ್ರಾಮಗಳು. ಸ್ವಾತಂತ್ರ್ಯದ ನಂತರ ಗ್ರಾಮಗಳು ಜನಸಂಖ್ಯೆ ಮತ್ತು ಶಿಕ್ಷಣ ಎರಡರಲ್ಲೂ ಹೆಚ್ಚು ಬೆಳೆದಿದೆ.

ಹಳ್ಳಿಯ ಜನರು ತಮ್ಮ ಕೆಲಸಕ್ಕೆ ಹೆಚ್ಚು ಸಮರ್ಪಿತರಾಗಿದ್ದಾರೆ, ನಗರದ ಜನರು ಸಹ ಹೆಚ್ಚಿನ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತಾರೆ ಮತ್ತು ನಗರ ಪ್ರದೇಶದ ಜನರಿಗು ಹಳ್ಳಿ ಜನರಿಗು ತುಂಬಾನೆ ವ್ಯತ್ಯಾಸಗಳನ್ನು ಕಾಣಬಹುದು. (ಉಡುಗೆ-ತೊಡುಗೆ, ಕೆಲಸ-ಕಾರ್ಯಗಳಲ್ಲಿ, ಊಟೋಪಚಾರದಲ್ಲಿ)

ಇದಲ್ಲದೆ ಇಡೀ ಗ್ರಾಮವು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತದೆ ಮತ್ತು ಯಾವುದೇ ರೀತಿಯ ಸಂಘರ್ಷವಿಲ್ಲದೆ ಗ್ರಾಮಸ್ಥರು ಪರಸ್ಪರ ದುಃಖ ಮತ್ತು ಸಂತೋಷದಲ್ಲಿ ಮುಂದೆ ಬರುತ್ತಾರೆ ಮತ್ತು ಅವರು ಸಹಾಯಕ ಸ್ವಭಾವವನ್ನು ಹೊಂದಿದ್ದಾರೆ.

ಗ್ರಾಮದ ಮಹತ್ವ

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗ್ರಾಮಗಳು ಅಸ್ತಿತ್ವದಲ್ಲಿವೆ ಮತ್ತು ಸರಕುಗಳ ಬೇಡಿಕೆ ಮತ್ತು ಪೂರೈಕೆಗಾಗಿ ಅವು ಪರಸ್ಪರ ಅವಲಂಬಿತವಾಗಿವೆ. ಅಂತೆಯೇ ಅವು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿವೆ. ಭಾರತವು ತನ್ನ ದ್ವಿತೀಯ ಮತ್ತು ತೃತೀಯ ಕ್ಷೇತ್ರಕ್ಕಿಂತ ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿರುವ ದೇಶ.

ಅಲ್ಲದೆ ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ ಮತ್ತು ಈ ದೊಡ್ಡ ಜನಸಂಖ್ಯೆಯನ್ನು ಪೋಷಿಸಲು ಅವರಿಗೆ ಹಳ್ಳಿಗಳಿಂದ ಬರುವ ಆಹಾರ ಬೇಕು ಇದು ನಮಗೆ ಮತ್ತು ಪ್ರತಿಯೊಬ್ಬರಿಗೂ ಏಕೆ ಮುಖ್ಯವಾಗಿದೆ ಎಂಬುದನ್ನು ಇದು ವಿವರಿಸುತ್ತದೆ. ಗ್ರಾಮಗಳು ಆರ್ಥಿಕತೆಯ ಬೆನ್ನೆಲುಬು ಎಂದು ನಾವು ಹೇಳಬಹುದು.

ಇದನ್ನೂ ಓದಿ | ಚಿತ್ರದುರ್ಗ | ಕೊರೋನಾದಿಂದ ಪಬ್ಲಿಕ್ ಟಿವಿ ಕ್ಯಾಮೆರಾಮನ್ ಬಸವರಾಜ್ ಕೋಟಿ‌ ಸಾವು

ಅಲ್ಲದೆ ನನ್ನ ಗ್ರಾಮವು ಭಾರತದ ಎಲ್ಲಾ ಹಳ್ಳಿಗಳ ಒಂದು ಭಾಗವಾಗಿದ್ದು, ಜನರು ಇನ್ನೂ ಶಾಂತಿ ಮತ್ತು ಸೌಹಾರ್ದಯುತವಾಗಿ ವಾಸಿಸುತ್ತಿದ್ದಾರೆ. ಗ್ರಾಮಗಳ ಜನರು ಸ್ನೇಹಪರರಾಗಿದ್ದಾರೆ ನಗರ ಪ್ರದೇಶದ ಜನರಿಗೆ ಹೋಲಿಸಿದರೆ ಸಂತೋಷದಾಯಕ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ.

ಇದಲ್ಲದೆ ಮರಗಳು, ವೈವಿಧ್ಯಮಯ ಬೆಳೆಗಳು, ಗದ್ದೆ-ತೋಟ, ಹೂವುಗಳ ವೈವಿಧ್ಯತೆ ಮತ್ತು ಹಳ್ಳಕೊಳ್ಳಗಳು ಇತ್ಯಾದಿಗಳಿವೆ. ಇವೆಲ್ಲವುಗಳಲ್ಲದೆ ರಾತ್ರಿಯಲ್ಲಿ ತಂಪಾದ ಆಹ್ಲಾದಕರವಾದ ಗಾಳಿ ಮತ್ತು ಹಗಲಿನಲ್ಲಿ ಬೆಚ್ಚಗಿನ ಗಾಳಿ ಜೋತೆಗೆ ಪೈರಿನ ಸುವಾಸನೆ ಬೀಸುತ್ತದೆ.

ನನ್ನ ಹಳ್ಳಿ

ನನ್ನ ಹಳ್ಳಿಯು ತಗ್ಗು ಪ್ರದೇಶದಲ್ಲಿದ್ದು ಬೆಚ್ಚಗಿನ ಬೇಸಿಗೆಯನ್ನು, ಜಿಟಿ-ಜಿಟಿ ಮಳೆಯನ್ನು ಮತ್ತು ಚುಮು-ಚುಮು ಚಳಿಗಾಲವನ್ನು ಹೊಂದಿದೆ. ಹೆಚ್ಚಾಗಿ ರಜಾದಿನಗಳ ಕಾರಣ ಬೇಸಿಗೆಯಲ್ಲಿ ಪ್ರತಿಯೊಬ್ಬರೂ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಬೇಸಿಗೆಯಲ್ಲಿ ನಗರಕ್ಕಿಂತ ಗ್ರಾಮವು ತಂಪಾಗಿರುತ್ತದೆ. ಅಲ್ಲದೆ ತಂಗಾಳಿಯಿಂದಾಗಿ ನಮಗೆ ಹಳ್ಳಿಯಲ್ಲಿ ಹವಾನಿಯಂತ್ರಣ ಅಗತ್ಯವಿಲ್ಲ.

ಒಂದು ಹಳ್ಳಿಯಲ್ಲಿ ನೀವು ಹಸಿರನ್ನು ನೋಡುತ್ತೀರಿ ಮತ್ತು ಪ್ರತಿಯೊಂದು ಮನೆಯಲ್ಲೂ ಅವರ ಅಂಗಳದಲ್ಲಿ ಕನಿಷ್ಠ ಒಂದು ಮರವಿರುತ್ತದೆ. ಇದಲ್ಲದೆ ಬೇಸಿಗೆ ಸುಗ್ಗಿಯ ಕಾಲವಾಗಿರುವುದರಿಂದ ಹಳ್ಳಿಯಲ್ಲಿ ರೈತರು ತಮ್ಮ ಬೆಳೆಗಳನ್ನು ವಕ್ಕಲು ಮಾಡಿಕೊಳ್ಳುವುದನ್ನು ಕಾಣಬಹುದು ಹಳ್ಳಿಯಲ್ಲಿ ಮೊದಲು ಹೆಚ್ಚು ಕಚ್ಚಾ ಮನೆ (ಮಣ್ಣು ಮತ್ತು ಇಟ್ಟಿಗೆಗಳಿಂದ ಮಾಡಿದ ಮನೆಗಳು) ಇರುವುದನ್ನು ಕಾಣುತ್ತಿದ್ದೆವು ಆದರೆ ಈಗ ಸನ್ನಿವೇಶವು ಬದಲಾಗಿದೆ ಇಂದು ಪಕ್ಕಾ ಮನೆಯ ಸಂಖ್ಯೆ (ಕಾಂಕ್ರೀಟ್ ಮತ್ತು ಇತರ ವಸ್ತುಗಳಿಂದ ಮಾಡಲ್ಪಟ್ಟಿದೆ) ಹೆಚ್ಚಾಗಿದೆ. ಅಲ್ಲದೆ ಗ್ರಾಮದ ಜನರಿಗಿಂತ ಹಳ್ಳಿಯ ಜನರು ಸ್ನೇಹಪರರಾಗಿದ್ದಾರೆ.

ನನ್ನ ಹಳ್ಳಿಯ ಬಗ್ಗೆ ನಾನು ಹೆಚ್ಚು ಇಷ್ಟಪಡುವ ವಿಷಯವೆಂದರೆ ತಾಜಾ ಮತ್ತು ಪುನರುಜ್ಜೀವನಗೊಳಿಸುವ ಗಾಳಿ. ನಾವು 4-5 ಗಂಟೆಗಳ ಕಾಲ ಮಲಗಿದ್ದರೂ ಗಾಳಿಯು ಉಲ್ಲಾಸದ ಭಾವನೆಯನ್ನು ನೀಡುತ್ತದೆ. ಬಹು ಮುಖ್ಯವಾಗಿ ರಾತ್ರಿಯಲ್ಲಿ ನಾನು ನಗರದಲ್ಲಿ ನೋಡಲು ಸಾಧ್ಯವಾಗದ ನಕ್ಷತ್ರಗಳನ್ನು ನೋಡುತ್ತೇನೆ ಮತ್ತು ಎಣಿಸುತ್ತೇನೆ.

ನಮ್ಮ ಹಳ್ಳಿಯು ನಮ್ಮ ರಜಾದಿನಗಳಲ್ಲಿ ಅಥವಾ ನಾವು ದಣಿದಿದ್ದಾಗ ಮತ್ತು ವಿಶ್ರಾಂತಿ ಪಡೆಯಲು ಬಯಸಿದಾಗ ಭೇಟಿ ನೀಡಲು ಇಷ್ಟಪಡುವ ಸ್ಥಳವಾಗಿದೆ. ಹಳ್ಳಿಯು ನಗರದ ಮಾಲಿನ್ಯ ಮತ್ತು ಶಬ್ದದಿಂದ ದೂರವಿರುವ ಸ್ಥಳವಾಗಿದೆ. ಅಲ್ಲದೆ ನೀವು ಹಳ್ಳಿಯ ಮಣ್ಣಿನೊಂದಿಗೆ ಸಂಪರ್ಕವನ್ನು ಅನುಭವಿಸಿದ್ದಾದರೆ ನಿಮ್ಮ ಜೀವನ ತುಂಬಾ ಸುಖಕರವಾಗಿರುವುದಾಗಿದೆ ಎಂಬುದನ್ನ ತಿಳಿದುಕೊಳ್ಳಿ ಏಕೆಂದರೆ ಮಣ್ಣಿನ ವಾಸನೆಯೇ ಹಾಗೆ ಅದನ್ನ ಪಡೆಯಲು ಅದೃಷ್ಟವೇ ಮಾಡಿರಬೇಕು.

ಯಾರಾದರು ಹಳ್ಳಿಗಳ ಬಗ್ಗೆ ಯಾವುದು ಉತ್ತಮ ಎಂಬ ಪ್ರಶ್ನೆಗೆ ಹಳ್ಳಿಗಳಲ್ಲಿ ತಾಜಾ ಗಾಳಿ, ನದಿಗಳು, ಮರಗಳು, ಮಾಲಿನ್ಯವಿಲ್ಲದ ವಾತವರಣ, ಮಣ್ಣಿನ ವಾಸನೆ, ತಾಜಾ ಮತ್ತು ಸಾವಯವ ಆಹಾರ, ಮತ್ತು ಇನ್ನೂ ಅನೇಕ ಉತ್ತಮ ಒಳ್ಳೆಯ ವಿಷಯಗಳಿವೆ ಎಂಬ ಉತ್ತರ ಪ್ರತ್ಯಕ್ಷವಾಗಿ ಕಾಣಸಿಗುತ್ತದೆ.

ಗ್ರಾಮಗಳಲ್ಲಿ ಅಭಿವೃದ್ಧಿಯ ಕೊರತೆಯಿದೆ ಎಂಬುದು ಹಾಸ್ಯಸ್ಪದವಾದ ಸಂಗತಿಯಾಗಿದೆ ಹಳ್ಳಿಗಳು ಸಾಕಷ್ಟು ಉತ್ತಮವಾಗಿ ಅಭಿವೃದ್ಧಿಗೊಂಡಿವೆ ಮತ್ತು ಅವು ನಗರಗಳಿಗಿಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಎಂಬುದು ಸಂತಸದ ಸಂಗತಿಯಾಗಿದೆ.

ಕೋನೆಯದಾಗಿ ಒಂದು ಮಾತು ಹೇಳುವುದಾದರೆ ದೇಶದ ಬೆನ್ನೆಲುಬು ರೈತರಾದರೆ. ದೇಶದ ಹೆಜ್ಜೆಗುರುತು ಹಳ್ಳಿಗಳಾಗಿವೆ ಹಳ್ಳಿಗಳನ್ನ ಬಿಟ್ಟು ದೇಶವಿಲ್ಲ ಎಂಬುದು ವಾಸ್ತವದ ಸಂಗತಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನುಡಿ ನಮನ | ಡಾ. ವಿಠಲ ಭಂಡಾರಿ, ಕ್ಷಮಿಸಿ ಸರ್

Published

on

ಡಾ. ವಿಠಲ ಭಂಡಾರಿ
  • ಡಾ. ಗಿರೀಶ್ ಮೂಗ್ತಿಹಳ್ಳಿ, ಚಿಕ್ಕಮಗಳೂರು

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಂಶೋಧನೆ ಮಾಡುವಾಗ ಡಾ. ಆನಂದ ಪಾಟೀಲ ಅವರ ಸಲಹೆಯಂತೆ ‘ಪ್ರೀತಿಯ ಕಾಳು’ ಪುಸ್ತಕ ಬೇಕಿತ್ತು. ಈ ಪುಸ್ತಕ ವಿಠಲ ಭಂಡಾರಿ ಅವರ ತಂದೆ ಆರ್. ವಿ. ಭಂಡಾರಿ ಅವರ 13 ಮಕ್ಕಳ ನಾಟಕಗಳ ಸಂಕಲನ. ಈ ಕೃತಿಯನ್ನು ಡಾ. ವಿಠಲ ಭಂಡಾರಿ ಅವರು ಸಂಪಾದಿಸಿದ್ದರು. ಮಾನ್ಯ ಭಂಡಾರಿಯವರನ್ನು ಕೇಳಿಕೊಂಡಾಗ ನನಗೆ ಅಂಚೆ ಮೂಲಕ ಕಳುಹಿಸಿಕೊಟ್ಟಿದ್ದರು.

ಬೇಕಾದ ಪೂರಕ ಮಾಹಿತಿಯನ್ನು ಫೋನಿನಲ್ಲಿಯೇ ಚರ್ಚಿಸಿದ್ದರು. ನನ್ನ ಸಂಶೋಧನೆಯಲ್ಲಿ ಜತೆ ಇದ್ದರು. ಆದರೆ ಒಮ್ಮೆ ಎಂದೂ ಭೇಟಿಯಾದವರಲ್ಲ. ಕಾರಣ ದೂರದೂರು ಎಂದು! ಕರೆ ಮಾಡಿದರೆ, ಅವರು ಎಷ್ಟೇ ಕಾರ್ಯನಿರತರಾಗಿದ್ದರೂ ಕರೆ ಸ್ವೀಕರಿಸಿ ವರ್ತಮಾನವನ್ನು ತಿಳಿಸುತ್ತಿದ್ದರು. ಸಂಶೋಧನಾ ಪ್ರಬಂಧವು ಕೃತಿಯಾದಾಗ ಅವರಿಗೆ ಒಂದು ಪ್ರತಿ ಕಳುಹಿಸಿ ಕೊಟ್ಟೆ.. ತುಂಬಾ ಸಂಭ್ರಮಿಸಿದ್ದರು. ಮೆಚ್ಚುಗೆ ಮಾತುಗಳನ್ನಾಡಿದ್ದರು.

ಕಳೆದ ಲಾಕ್ ಡೌನ್ ಸಮಯದಲ್ಲಿ ನನ್ನ ಪುಸ್ತಕವನ್ನು ಆನ್ ಲೈನ್ ಬಿಡುಗಡೆ ಮಾಡೋಣ ಎಂದು ಕಾರ್ಯಕ್ರಮದ ಕ್ರಿಯಾಯೋಜನೆಯನ್ನು ತಯಾರಿಸಿದ್ದರು… ಇಷ್ಟೆಲ್ಲ ಕಾರ್ಯಗಳು ಪರಸ್ಪರ ಭೇಟಿಯಾಗದೆ ಆದ ವಿಶೇಷ ಅನುಭವಗಳು. ಈ ಮಧ್ಯೆ ಅವರಿಗೆ ಕರೆ ಮಾಡುವುದಕ್ಕೆ ಆಗಿರಲಿಲ್ಲ.

ಆದರೆ ಇಂದಿನ ಅವರ ಅಗಲಿಕೆಯ ಸುದ್ದಿ ನನ್ನನ್ನ ನಿಶ್ಚಲವಾಗಿಸಿದೆ…! ಸಾಮಾನ್ಯ ರೀತಿಯಲ್ಲಿ ಮಾನ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಬಹುದು.. ಆದರೆ ಅವರನ್ನು ಭೇಟಿ ಮಾಡಬೇಕೆಂಬ ಆಸೆಯ ಚಿಗುರಿಗೆ ಕೆಟ್ಟ ಸುದ್ದಿಯ ಸಿಡಿಲೊಡೆದಿದೆ… ಕ್ಷಮಿಸಿ ಸರ್… ನನ್ನ ಸರದಿಯೂ ಬಂದಾಗ ಮೇಲೆ ಬರುವೆ.. ಸಿಕ್ಕೋಣ.. ಈ ಅಮಾನವೀಯ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಏನಿದು ವರ್ಷದುಡುಕು;ಹೊಸ್ತುಡುಕು..?

Published

on

ಕೆ.ಶ್ರೀಧರ್ (ಕೆ.ಸಿರಿ)
  • ಕೆ.ಶ್ರೀಧರ್ (ಕೆ.ಸಿರಿ)

ಏಪ್ರಿಲ್ 13 ಕ್ಕೆ ಚಾಂದ್ರಮಾನ ಯುಗಾದಿ ಹಬ್ಬ ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯರಿಗೆ ನಿಜವಾದ ಹೊಸ ವರ್ಷ ಬೆಳಗ್ಗೆ ಎದ್ದು ನೀರಿಗೆ ಬೇವಿನ ಎಲೆ ಹಾಕಿ ಮೈಗೆಲ್ಲಾ ಎಣ್ಣೆ ಸವರಿಕೊಂಡು ಎಣ್ಣೆ ಸ್ನಾನ ಮಾಡಿ ಹೊಸ ಹುಡುಪುಗಳನ್ನು ಧರಿಸಿ ಮನೆಗೆ ತಳಿರು ತೋರಣ ಕಟ್ಟಿ ಇಷ್ಟ ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ಸವಿದು ತಾಯಿ ಮಾಡಿದ ಸಿಹಿಯಾದ ತಿಂಡಿ ತಿನಿಸುಗಳ ತಿಂದು ಇಡೀ ದಿನ ಸಂಭ್ರಮದಿಂದ ಹಬ್ಬ ಆಚರಿಸುವುದು ಬಂಧು ಬಾಂಧವರೆಲ್ಲರೂ ಸಂಭ್ರಮ ಪಡುವುದು ಸಂಜೆಯ ನಂತರ ಚಂದ್ರನನ್ನು ನೋಡಿ ಹೊಸ ವರ್ಷ ಆರಂಭಿಸುವುದು ವಿಶೇಷ.

ಯುಗಾದಿ ಎಂದರೆ ಇಷ್ಟೇ ಎಂದು ನಾನು ತಿಳಿದಿದ್ದೆ. ಆದರೆ ಇನ್ನೊಂದು ದಿನವೂ ಹಬ್ಬವಿದೆ ಆ ಹಬ್ಬ ತುಂಬಾ ವಿಶೇಷ ಎನಿಸಿದ್ದು ಈ ವರ್ಷದುಡುಕಿನ ಸಂಭಾಷಣೆ ಕೇಳಿದ ನಂತರವೆ. ನಾನು ಏಪ್ರಿಲ್ 14 ರಂದು ನನ್ನ ಕೆಲಸದ ನಿಮಿತ್ತ ಎಲ್ಲಿಯೋ ಹೊರಟಿದ್ದೆ ಪೆಟ್ರೋಲ್ ಹಾಕಿಸಲು ಬಂಕ್ ನ ಬಳಿ ಹೋದಾಗ ಯಾರೋ ಒಬ್ಬ ಯುವಕ ಬ್ಯಾಗ್ ಹಾಕಿಕೊಂಡು ಯಾವುದೋ ಊರಿಗೆ ಹೋಗುವಂತಿತ್ತು ಅದೇ ಸಂದರ್ಭದಲ್ಲಿ ಬಂದ ಆ ಯುವಕನ ಗೆಳೆಯ ಈ ರೀತಿಯಾಗಿ ಸಂಭಾಷಣೆ ಬೆಳೆಸಿದ.

“ಡೋ ಎಲ್ಲಿಗಡಾ ಹೋಗ್ತಿದೇ’?_
“ಬೆಂಗಳೂರಿಗೆ ಹೋಯ್ತಾವ್ನೀ ಕಯ್ಯಾ”_
“ಯೋ ಎಲ್ಗೋದೇ ಬಾ ನಾಳೆ ಹೊಸ್ತುಡುಕದೆ ಕಣಾ ತೀರಿಸ್ಗಂಡ್ ಹೋಗೈ”
“ಇಲ್ಲ ಬಾಮೈದ ಟೇಮಾಗದ ಆಗಲೇ ರಜಾ ತೀರದ ಕಣಾ ಹೋಗ್ಬೇಕ”
“ಇದ್ಯಾಂವಂಡಾ ಇವಾ ವರ್ಷದುಡುಕು ಮಾಡಾದ್ ಬುಟ್ಟು ಕೆಲಸಕ್ಕ ಹೋದನಂತೆ ಇಮ”
“ಯಾನ್ ಮಾಡದಯ್ಯ ನೀವ್ ಮಾಡ್ರೀ ಹೊಸ್ತುಡುಕ ನಾ ಮುಂದಿನ ಕಿತ ಬರ್ತೀನಿ ಕಣಾ”
“ಆಯ್ತು ಹೋಗಿದ್ದ್ ಬೊಯ್ಯ”
“ನೋಡ್ದಾ ಬಾವೋಜಿ ಇವನ್ ಸುಮಾನ್ವಾ ಹಬ್ಬ ಮಾಡೋ ಬಡ್ಡಿದೇ ಅಂದ್ರೆ ಕೆಲಸಕ್ಕೆ ಹೋದನಂತೆ ಇಮ”
“ನಡೈ ಬಾಮೈದ ಯಾನ್ಹಾ ಮಾಡ್ಲಿ ಹೊಣ್ಣೇರ್ ಕಟ್ಬೇಕು ಬ್ಯಾಗನ್ ನಡೈ ಊರ್ಗೋಗಮು”

ಎಂದು ಮಾತನಾಡುತ್ತಾ ಮಾತನಾಡುತ್ತಾ ಹಾಗೇಯೇ ದ್ವಿಚಕ್ರ ವಾಹನದಲ್ಲಿ ಊರ ಕಡೆ ಹೊರಟರು. ನಾನು ವಿಜಯನಗರ ಜಿಲ್ಲೆಯವನಾದುದರಿಂದ ಈ ವರ್ಷದುಡುಕು/ಹೊಸ್ತುಡುಕು,ಹೊಣ್ಣೇರ್ ಕಟ್ಟೋದು ಈ ಪದಗಳು ಅಪರಿಚಿತ ಅನಿಸ್ತು ತಲೆಯಲ್ಲಿ ಒಂಥರಾ ಈ ಪದಗಳು ಕೊರೆಯಲು ಶುರುಮಾಡಿದವು.

ಚಾಮರಾಜನಗರ ಮೊದಲೇ ದೇಸಿ ಭಾಷೆಯ ಪದಗಳಿಗೆ ಫೇಮಸ್ಸು ಅಂತ ನನಗೆ ಗೊತ್ತಿತ್ತು ಆ ಕುತೂಹಲ ಇನ್ನೂ ನನ್ನಲ್ಲಿ ಹೆಚ್ಚಾಯ್ತು ಹೇಗಾದರೂ ಮಾಡಿ ಈ ಪದಗಳ ಅರ್ಥ ತಿಳ್ಕೋಬೇಕು ಇದ್ಯಾವುದೂ ಇದು ವರ್ಷದುಡುಕು/ಹೊಸ್ತುಡುಕು ಹಬ್ಬ ಅನ್ನೋ ಉತ್ಕಟ ಆಸಕ್ತಿ ಹೆಚ್ಚಾಯಿತು ಹೀಗೆಯೇ ಹಳ್ಳಿಗೆ ಹೋದಾಗ ಗ್ರಾಮಸ್ಥರನ್ನು ಕುರಿತು ಹೀಗೆ ಸಂಭೋಧಿಸಿದೆ.

“ಏನ್ರೀ ಯಜಮಾನ್ರೇ ವರ್ಷದುಡುಕು ಜೋರಾ”?
“ವ್ಹಾ ಬನ್ನಿ ಸಾ ಜೋರದ ಕಣಾ, ಹಬ್ಬ ಅಂದಮ್ಯಾಗ ಇದ್ದಿದ್ದೇ ಅಲ್ವಾ ಕಣೀ ಸಾ”
“ಅದ್ಸರಿ ಏನೀ ಈ ಹೊಸ್ತುಡುಕು ಅಂದ್ರೆ”?
“ವ್ಹಾ ನೀವು ಸರಿಗೆ ಕೇಳಿದ್ರೀ ಕಪಾ ಇನ್ನೇನಾ ಸಾ ಯುಗಾದಿ ಮುಗಿದ ಮಾರ್ನೇ ದಿನಾ, ಎಲ್ಲರೂ ಮನೇಲೆ ಇರ್ತಾರ, ಹೈಕ ಮಕ್ಕ ನೀರೇರೆಚಗತಾರ, ಒಬ್ಬಿಟ್ಟು ಪಾಯಾಸ,ತಿಂಡಿ ಗಿಂಡಿ ಮಾಡ್ಕಂಡಮಾ ದ್ಯಾವ್ರಗ ಎಡೆ ಗಿಡೆ ಮಡಗಿ ಮಕ್ಕ ಮರಿ ತಿನ್ಕಂಡು ಉಣ್ಕಂಡು ಹಟ್ಟೀಲಿ ಜಾಲಿಯಾಗಿ ಇರ್ತಾರ”.
“ಇಷ್ಟೇಯಾ ವರ್ಷದುಡುಕು ಅಂದ್ರೆ”?
“ಅದ ಸಾ ಆಡೋರು ಇಸ್ಪೀಟ್ ಗಿಸ್ಪೀಟ್ ಆಡ್ತಾರ ಒಂಥರಾ ರಜೆ ಇದ್ದಂಗೆ ಸಾ ದಿನವೆಲ್ಲಾ ಹಟ್ಟೀಲೆ ಇರ್ತಾರ”

“ಅದ್ಸರಿ ಈ ಹೊಣ್ಣೇರ್ ಕಟ್ಟೋದು ಅಂದ್ರೆ ಏನು”?”ಅದಿನ್ಯಾನಿದ್ದು ಸಾ ಆರಂಭಕಾರ್ರಿಗೆ ಇದು ಹೊಸ್ವರ್ಸ ಇದ್ದಂಗ ಎತ್ಗಳಿಗ ನೊಗ ಹಾಕಿ,ನೇಗ್ಲು ಹೂಡಿ, ಕಕ್ಕೆ ಹೂವ,ಗಣಿಗಲ ಹೂವ ಎತ್ಗೋಳ್ ಕೊಂಬಿಗೆ ಕಟ್ಟಿ ಊರಾಗ ಒಂದ್ ರೌಂಡ್ ಸುತ್ತಿಸಿಗಂಡಮಾ ಪೂಜಾ ಗೀಜಾ ಮಾಡಿ ಆರಂಭ ಶುರು ಮಾಡೋದಕ್ಕ ಹೊಣ್ಣೇರ್ ಕಟ್ಟೋದು ಅಂತಾರೆ ಅಷ್ಟೇಯಾ ಅದು ಈಗ ಅಷ್ಟೋಂದಿಲ್ಲ ಸಾ ಕೆಲವು ಕಡಿಗ್ಯಾ ಮಾಡ್ತಾರಾ ಕೆಲವು ಕಡಿಗ್ಯಾ ಬುಡ್ತಾರಾ ಅದೆಲ್ಲಾ ಒಂದ್ ಜಮಾನ್ದಾಗಿತ್ತು”

“ಓಹ್ ಸರಿ ಈ ಕಕ್ಕೆ ಹೂವು ಗಣಗಲ ಹೂವು ಅಂದ್ರೆ ಯಾವುದು”? “ಅದೇ ಸಾ ಈ ರೋಡ್ಚೋರಿ ಕೆಂಪ್ಗ ಇರ್ತಾವಲ್ಲ ಅವೇ ಕಕ್ಕೆ ಹೂವು, ಅರಿಶಿಣ ಬಣ್ಣದ ಹೂವ್ ಇರ್ತಾವಲ್ಲ ಅವು ಗಣಿಗಲ್ವೂ ಈ ರಸ್ತಿ ಅಗಲೀಕರಣದಿಂದ ಆ ಹೂವುಗಳು ಸಿಗೋದೆ ಅಪರೂಪ ಆಗ್ಬುಟ್ಟದಾ!”

“ಹೂಂ… ಸರಿ ಇಷ್ಟೇಯಾ ಹಾಗಾರೆ ಹೊಸ್ತುಡುಕು ಅಂದ್ರೆ”?
“ಹೂಂ ಇನ್ನೂ ಅದೆ ಮಾಡೋರು ಮರಿ ಕೂದು ಬಾಡ್ಗಿಡೂಟಾ ಮಾಡ್ತಾರೆ ಎಣ್ಣಿ ಗಿಣ್ಣಿ ಹೊಡ್ದು ಜಾಲಿ ಮಾಡ್ತಾರೆ”
“ಈ ವರ್ಷದುಡುಕ್ಲೀ ಮಾಂಸದೂಟ ಕಡ್ಡಾಯಾ ನಾ”?
“ಹೇ ಹಾಗೇನಿಲ್ಲಾ ಸಾ ಆದರೆ ಒಂದ್ ಜಮಾನ್ದಾಗಿತ್ತಂತೆ ಯುಗಾದಿ ಆದ್ ಮರುದಿನ ಮಾಂಸ ತಿನ್ನಲಿಲ್ಲ ಅಂದ್ರೆ ಸ್ವರ್ಗಕ್ಕೆ ಬಿಡೋಲ್ಲ ಮಾಂಸ ತಿನ್ನಬೇಕು ಅನ್ನೋ ಪ್ರತೀತಿ ಇತ್ತಂತೆ ಇದನ್ನೆಲ್ಲ ನಿಮ್ಮ ಜಮಾನ್ದೋರಿಗೆ ಹೇಳಿದ್ರ ಬಿದ್ದು ಬಿದ್ದು ನಗನಾಡ್ತಿರೀ, ಕೆಲವರು ಆ ದಿನ ದುಡ್ಡು ಕಾಸು ಯಾರಿಗೂ ಕೊಡಾಕಿಲ್ಲ ಹಿಂಗ ಹತ್ತಲವು ಸಂಪ್ರದಾಯಾಗಳು ನೇಮ್ಗಳನ್ನ ಮಾಡ್ತಾರೆ”

“ಜಮೀನಿಗೆ ಹೋಗಿ ಉಳುಮೆ ಗಿಳುಮೆ ಮಾಡೋಲ್ವೋ”?
“ಕಂಡೀಸನ್ನಾಗಿ ಯಾರು ಹೊಲ್ನ ಊಳೋಲ್ಲ ಅಪ್ಪಿ ತಪ್ಪಿ ಮಳಿ ಗಿಳಿ ಉಯ್ಯ್ದ್ರೆ ಸ್ಥಳೀಯ್ ಜ್ವಾಳ ಗೀಳ ಬಿತ್ತೋರು ಬಿತ್ತಾರ ಅಷ್ಟೇ” “ಹೂಂ ಆಯ್ತು ಯಜಮಾನ್ರೆ ಥ್ಯಾಂಕ್ಯೂ ನಾನು ಬರ್ತೀನಿ” “ಹೂಂ ಆಯ್ತು ಕಣೀ ಹೋಗಿ ಬುದ್ದೀ ನಂಗು ಹೊಟ್ಟೈಸಿತೈತಿ ಹಟ್ಟಿಗೆ ಹೋಗ್ಬೇಕು ಒಬ್ಬಿಟ್ಟು ತಿನ್ಬೇಕು”.

ನೋಡಿ ನಮ್ಮ ಗ್ರಾಮೀಣ ಭಾಗದ ಸಂಪ್ರದಾಯಗಳು ಎಷ್ಟು ಚೆಂದ ಅಲ್ವಾ ಈ ದೇಸಿ ಭಾಷೆಯಲ್ಲಿ ಎಷ್ಟು ತಾಕತ್ತಿದೆ ಎಷ್ಟು ಗ್ರಾಮೀಣತೆಯ ಸೊಗಡಿದೆ ಈ ಭಾಷೆನಾ ಹಳ್ಳಿಗಳಲ್ಲಿ ಬಿಟ್ರೆ ಜಗತ್ತಿನ ಯಾವ ವಿಶ್ವ ವಿದ್ಯಾಲಯಗಳಲ್ಲೂ ಕೂಡ ಕಲಿಯಲಿಕ್ಕೆ ಆಗೋದಿಲ್ಲ. ನಮ್ಮ ಹಿಂದಿನವರು ನಡೆಸಿಕೊಂಡು ಬಂದ ಕೆಲವೊಂದು ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯ ನಮ್ಮ ಪರಂಪರೆ ಎಂತದ್ದು ಅಂತ ಹೇಳ್ತವೆ. ಈ ಚಾಮರಾಜನಗರದ ವರ್ಷದುಡುಕು ಹಾಗೇನೆ ಒಂಥರಾ ದೇಸಿಯ ಭಾಷೆಯ ಹಬ್ಬ ಹರಿದಿನಗಳ ಪರಿಚಯ ನನಗಾಯ್ತು ಧನ್ಯವಾದಗಳು ಚಾಮರಾಜನಗರ.

(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿಗಳು
ಚಾಮರಾಜನಗರ
9741270125)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending