ನೆಲದನಿ
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ..?
- ರಂಗನಾಥ ಕಂಟನಕುಂಟೆ
“ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ, ಮನದಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲ ಸಂಗಮದೇವ.”
–ಬಸವಣ್ಣನವರ ವಚನಗಳು, ಬಸವರಾಜು ಎಲ್, ಪು.53
ಬಸವಣ್ಣನವರ ಈ ವಚನ ಬಹಳ ಜನಪ್ರಿಯ ಮತ್ತು ಬಹುಚರ್ಚಿತ. ಈ ವಚನವನ್ನು ‘ಮನುಶ್ಯತ್ವ’ದ ಇಲ್ಲವೇ ವ್ಯಕ್ತಿಯ ‘ಶುದ್ಧ’, ಐಡಿಯಲ್ ವ್ಯಕ್ತಿತ್ವದ ಅಭಾವದಲ್ಲಿ ‘ಮಾನವೀಯತೆ’ಯ ಹುಡುಕಾಟದ ಕುರುಹಾಗಿ ಚರ್ಚಿಸಲಾಗಿದೆ. ‘ಮನೆ’ ಎನ್ನುವುದನ್ನು ದೇಹವಾಚಿಯಾಗಿಸಿ ಅದರ ಒಳಹೊರಗೆ ಹುಲ್ಲು ರಜ ಹುಸಿ ವಿಶಯಗಳು ಬಿದ್ದಿರುವ ವಿವರಗಳ ಮೂಲಕ ಒಂದು ಪಾಳುಬಿದ್ದಿರುವ ಭಗ್ನಚಿತ್ರವನ್ನು ನೀಡಲಾಗಿದೆ.
ಮುಖ್ಯವಾಗಿ ಮನುಶ್ಯರ ಪ್ರಜ್ಞೆಯೊಳಗೆ ತುಂಬಿಕೊಂಡಿರುವ ಅಪಕಲ್ಪನೆಗಳು, ಕೇಡಿಗತನಗಳು, ಮೌಢ್ಯಗಳು, ಸ್ವಾರ್ಥ, ದ್ವೇಶ, ದುಶ್ಟತನ, ಭವಿತ್ವ ಮುಂತಾದ ಭಾವನೆಗಳಿಂದ ತುಂಬಿಹೋಗಿ ‘ಮನುಶ್ಯರು’ ಎಂದು ಕರೆದುಕೊಳ್ಳುವವರಲ್ಲಿ ‘ಮನುಶ್ಯತ್ವ’ವೇ ಇಲ್ಲದಿರುವ ಮೌಲ್ಯಹೀನ ಬದುಕಿನ ಬಗೆಯನ್ನು ಚರ್ಚಿಸಲು ಈ ವಚನವನ್ನು ಆಕರವಾಗಿ ಬಳಸಲಾಗಿದೆ. ದೇಹ ಮತ್ತು ಮನಸ್ಸುಗಳ ನಡುವಿನ ಬಿರುಕು; ಅಂತರಂಗ ಹಾಗೂ ಬಹಿರಂಗಗಳು ಗಬ್ಬೆದ್ದುಹೋಗಿರುವುದನ್ನು ಎತ್ತಿತೋರಿಸುವ ಬಗೆಯಾಗಿ ಓದಲಾಗಿದೆ.
ಅಲ್ಲದೆ ವ್ಯಕ್ತಿಯು ತನ್ನನ್ನು ತಾನು ಆತ್ಮಶೋಧನೆ ಮಾಡಿಕೊಳ್ಳುವ ಬಗೆಯಾಗಿಯೂ ವಿವರಿಸಿಕೊಳ್ಳಲಾಗಿದೆ. ಇದಕ್ಕೆ ವಚನದಲ್ಲಿಯೇ ಸೂಚನೆಯಿದೆ. ಮೊದಲ ಸಾಲಿನಲ್ಲಿ ‘ಮನೆ’ ಎಂದು ಸೂಚಿತವಾದುದು ನಾಲ್ಕನೆಯ ಸಾಲಿನಲ್ಲಿ ‘ತನು’ ಎಂದು ಸ್ಪಶ್ಟವಾಗುತ್ತದೆ. ಹಾಗಾಗಿಯೇ ಇದನ್ನು ದೇಹ ಮತ್ತು ಮನಸ್ಸುಗಳ ಆಂತರಿಕ ಸಂಬಂಧಗಳು ಮತ್ತು ಬಿರುಕುಗಳಿಗೆ, ಅಲ್ಲಿನ ಗಬ್ಬೆದ್ದುಹೋಗಿರುವ ಚಿತ್ರಕ್ಕೆ ಲಗತ್ತಿಸಿ ಚರ್ಚಿಸಲಾಗುತ್ತದೆ. ಇದನ್ನು ಸಮಸ್ಯೆ ಎಂದು ಭಾವಿಸಬೇಕಿಲ್ಲ.
ಸದ್ಯ ಈ ವಚನದಲ್ಲಿ ಬಳಕೆಗೊಂಡಿರುವ ಭಾಶಿಕ ಸೂಚನೆಗಳನ್ನು ಬಳಸಿ ವಚನವನ್ನು ಬೇರೊಂದು ಬಗೆಯಲ್ಲಿ ಓದಲು ಸಾಧ್ಯವಿದೆ. ‘ಮನೆ’ಯನ್ನು ದೇಹ, ವ್ಯಕ್ತಿ, ಮನುಶ್ಯರು ಎಂದು ಮಾತ್ರವಲ್ಲದೆ ಅದನ್ನು ಲೋಕ, ವಿಶ್ವ, ಜಗತ್ತು, ಪ್ರಪಂಚ, ಯೂನಿವರ್ಸ್ ಎನ್ನುವ ರೀತಿಯಲ್ಲಿ ಓದಿದರೆ ಆಗ ಈ ವಚನ ಯಾವ ತಿರುಳನ್ನು ಧ್ವನಿಸುತ್ತದೆ? ಹಾಗೆಯೆ ‘ಒಡೆಯ’ ಎಂಬುದನ್ನು ಈ ಲೋಕವನ್ನು ಸೃಶ್ಟಿಸಿರುವ ‘ಅತೀಂದ್ರಿಯ ಶಕ್ತಿ’, ‘ದೇವರು’ ಎಂದು ಗ್ರಹಿಸಿದರೆ ಆಗ ಯಾವ ಅರ್ಥ ಧ್ವನಿಸುತ್ತದೆ? ‘ಮನೆಯೊಳಗೆ ಮನೆಯೊಡೆನಿದ್ದಾನೋ ಇಲ್ಲವೋ?
ಅಂದರೆ ಈ ಲೋಕದಲ್ಲಿ ದೇವರಿದ್ದಾನೋ? ಇಲ್ಲವೋ ಎನ್ನುವ ಮೂಲಕ ಅನುಮಾನ ಸಂದಿಗ್ಧತೆ ಹುಡುಕಾಟ ತಾಕಲಾಟಗಳನ್ನು ವ್ಯಕ್ತಪಡಿಸುವ ವಚನವಾಗಿದೆ. ಕೊನೆಯಲ್ಲಿ ‘ಮನೆಯೊಳಗೆ ಮನೆಯೊಡೆಯನಿಲ್ಲ!’ ಎನ್ನುತ್ತದೆ. ಈ ನಿರ್ಣಾಯಕ ಮಾತನ್ನು ವ್ಯಕ್ತಪಡಿಸಿದಾಗ ಈ ಲೋಕದಲ್ಲಿ ಸೃಶ್ಟಿಕರ್ತನೆಂದು ಭಾವಿಸಿ ನಂಬಲಾಗಿರುವ ‘ಅತೀಂದ್ರಿಯ ಶಕ್ತಿ’, ‘ದೇವರು’ ಇತ್ಯಾದಿ ಶಕ್ತಿ ‘ಇಲ್ಲ’ ಎಂಬ ಅರ್ಥವೂ ಧ್ವನಿಸಬಹುದಲ್ಲವೇ? ‘ಮನೆಯೊಡೆಯನಿಲ’್ಲ ಎಂಬ ಮಾತಿನಲ್ಲಿ ‘ದೇವರು’ ಇಲ್ಲ ಎಂದೂ ಧ್ವನಿಸಬಹುದಲ್ಲವೇ? ಅವನಿಲ್ಲದ ಕಾರಣಕ್ಕಾಗಿಯೇ ಮಾನವರ ಸಮಾಜ ಅತ್ಯಂತ ಹೆಚ್ಚು ಬರ್ಬರವಾಗಿದೆ ಎಂದೂ ವಾದಿಸಬಹುದು. ಪ್ರಾಣಿಜಗತ್ತಿನಲ್ಲಿ ಮಾನವರು ‘ಪ್ರಚ್ಚನ್ನ’ ಪ್ರಾಣಿಗಳಾಗಿ ಬೇರೆಲ್ಲ ಪ್ರಾಣಿಗಳಿಗಿಂತ ಹೆಚ್ಚು ವ್ಯವಸ್ಥಿತವಾಗಿ ಉದ್ದೇಶಪೂರ್ವಕವಾಗಿ ಹಿಂಸೆ ಕ್ರೌರ್ಯ ದಮನ ನರಮೇಧ ಮೋಸ ವಂಚನೆಗಳನ್ನು ನಡೆಸಿದ್ದಾರೆ ಮತ್ತು ನಡೆಸುತ್ತಿದ್ದಾರೆ.
ಇದರಿಂದ ಮಾನವರ ಕುಲ ಬೇರೆ ಪ್ರಾಣಿಗಳಿಂದ ಅತ್ಯಂತ ಹೆಚ್ಚು ಹಿಂಸೆಯನ್ನು ಅನುಭವಿಸಿದೆ. ಅಂದರೆ ಮನೆಯೊಡೆಯನಾದ ಆ ಶಕ್ತಿ ಮತ್ತು ಆ ಶಕ್ತಿರೂಪಿಯಾಗಿರುವ ‘ಅರಿವು’ ಮನುಶ್ಯರ ಅಂತರಂಗ ಬಹಿರಂಗಗಳಲ್ಲಿ ಆಚರಣೆಯಲ್ಲಿ ಇಲ್ಲದಿರುವುದೇ ಇಶ್ಟೆಲ್ಲಾ ದುರಂತಗಳಿಗೆ ಕಾರಣ. ಈ ಬಗೆಯ ಅನುಮಾನ ಬಸವಣ್ಣನಿಗೆ ಕಾಡಿರಬಹುದೇ? ಲೋಕದಲ್ಲಿರುವ ಮನುಶ್ಯತ್ವದ ಅಭಾವವೇ ಬಸವಣ್ಣನ ಒಳಗಿನ ತುಮುಲಕ್ಕೆ ಕಾರಣ. ಅದೇ ಇಂತಹ ವಚನದ ಹಿಂದಿನ ಪ್ರೇರಣೆಯಾಗಿದೆ.
ಇಲ್ಲಿನ ಮುಖ್ಯ ಪ್ರಶ್ನೆಯೆಂದರೆ, ಬಸವಣ್ಣನಿಗೆ ಈ ಲೋಕದಲ್ಲಿ ಮನೆಯೊಡೆಯ ಇಲ್ಲವೇ ಅತೀಂದ್ರಿಯ ಶಕ್ತಿ ಇದೆಯೋ ಇಲ್ಲವೋ ಎಂಬ ಅನುಮಾನ ಹುಟ್ಟಿರುವ ಸಾಧ್ಯತೆ ಇದ್ದಂತಿದೆ. ಆ ಮೂಲಕ ನಿರಂತರವಾಗಿ ಒಂದು ‘ಶಕ್ತಿ’ಯನ್ನು ಕಲ್ಪಿಸಿಕೊಳ್ಳುವ, ಹುಡುಕಿಕೊಳ್ಳುವ, ಕಟ್ಟಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾನೆ ಎನ್ನಿಸುತ್ತದೆ. ಹಾಗಾಗಿಯೇ ದೇವರು ಗುಡಿಯಲ್ಲಿದ್ದಾನೆ/ಇದ್ದಾಳೆ ಎಂದು ನಂಬಿಸುವ ಪುರೋಹಿತಶಾಹಿ ಕಲ್ಪನೆಗಿಂತ ಭಿನ್ನವಾಗಿ, ಆ ‘ಶಕ್ತಿ’ ಎಲ್ಲಿಯೋ ಇಲ್ಲ ಮತ್ತು ಅದು ನಮಗೆ ಪ್ರತ್ಯಕ್ಶವಾಗುವುದಿಲ್ಲ. ಅದೇನಿದ್ದರೂ ನಮ್ಮೊಳಗೆ ನಾವೇ ಕಂಡು ಕೊಳ್ಳಬೇಕಾದ ‘ಸತ್ಯ’ ಎಂದು ಭಾವಿಸಿದಂತಿದೆ. ಅದಕ್ಕಾಗಿಯೇ ಬಸವಣ್ಣ ‘ದೇಹವೇ ದೇಗುಲ, ಕಾಯವೇ ಕೈಲಾಸ’ ಎಂದಿರುವಂತಿದೆ. ದೇಹ ಮತ್ತು ಕಾಯಕಗಳು ಕಣ್ಣೆದುರಿನ ವಾಸ್ತವಗಳು.
ಆದರೆ ಅಂತಹ ಒಂದು ಶಕ್ತಿಯಿಲ್ಲದೆ ಈ ಜಗತ್ತು ಸೃಶ್ಟಿಗೊಳ್ಳಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯೂ ಕಾಡಿರುವಂತಿದೆ. ಅಂತಹ ಕಾಡುವಿಕೆಯಿಂದಲೇ ‘ಶಕ್ತಿ’ಯಾದ ಕೂಡಲಸಂಗಮನ ಹುಡುಕಾಟ ಮಾಡಲಾಗಿದೆ. ಎಲ್ಲ ವಚನಕಾರರು ಸಂತರು ಇದನ್ನೇ ಮಾಡಿದ್ದಾರೆ. ಅಕ್ಕ ಪ್ರಿಯಕರ ಮಲ್ಲಿಕಾರ್ಜುನನನ್ನು ಹುಡುಕುವ ಪರಿಯನ್ನು ಗಮನಿಸಿದರೆ ಇದರ ತೀವ್ರತೆಯ ಅರಿವಾಗುತ್ತದೆ. ಬಸವಣ್ಣನಲ್ಲಿ ‘ಶಕ್ತಿ’ಯ ನಿರಂತರ ಹುಡುಕಾಟವಿದೆಯೇ ಹೊರತು ಆತ್ಯಂತಿಕ ನಿರ್ಣಯವಿಲ್ಲ.
ಇಂತಹ ಹುಡುಕಾಟದಲ್ಲಿಯೇ ‘ದೇವರು’ ಜೀವಂತವಾಗಿ ಕಾಣಿಸಿಕೊಂಡಿದ್ದಾನೆ. ಇಂತಹ ಹುಟುಕಾಟ ನಡೆಸಿದ ಬುದ್ಧ ಕೊನೆಗೆ ಮೌನವಹಿಸುತ್ತಾನೆ. ದೇವರನ್ನು ಜಡಶಿಲೆಗೊಳಿಸಿರುವ ಕಡೆಗಳಲ್ಲಿ ದೇವರು ಪ್ರಚ್ಚನ್ನ ಮೌಢ್ಯದ ಅವತಾರವೆತ್ತಿದ್ದಾನೆ. ಅಲ್ಲಿ ಹಿಂಸಾಮಯಿ ಕೂಡ ಆಗಿರುವುದನ್ನು ಕಾಣಬಹುದು. ಉಳಿದೆಡೆ ಚಲನಶೀಲತೆಯ ಅರಿವಿನ ಸ್ವರೂಪವಾಗಿ ಕಾಣಿಸುತ್ತದೆ.
ಆದರೆ ಇಂದು ಬಸವಾನುಯಾಯಿಗಳಲ್ಲಿ, ಮಠಾಧೀಶರಲ್ಲಿ, ಸ್ವಾಮೀಜಿಗಳಲ್ಲಿ, ಪಾದ್ರಿಗಳು ಮುಲ್ಲಾಗಳು ಹಾಗೂ ಜಗತ್ತಿನಲ್ಲಿರುವ ಎಲ್ಲ ಧರ್ಮಗಳ ಅನುಯಾಯಿಗಳಲ್ಲಿ ಆ ಶಕ್ತಿಯಿದೆ ಎಂಬ ಆತ್ಯಂತಿಕ ನಿಲುವಿದೆ. ಅಂತಹ ನಂಬಿಕೆಯನ್ನು ಬಲವಾಗಿ ಬೆಳೆಸಲಾಗಿದೆ. ಅಲ್ಲಿ ಯಾವುದೇ ಹುಡುಕಾಟವಿರುವುದಿಲ್ಲ. ಬಸವಣ್ಣನಿಗಿರುವಂತೆ ಆ ‘ಶಕ್ತಿ’ ಇದೆಯೋ ಇಲ್ಲವೋ ಎಂಬ ಅನುಮಾನ ಸಂಶಯ ಸಂದಿಗ್ಧತೆಗಳೇ ಕಾಡುವುದಿಲ್ಲ. ಆ ಶಕ್ತಿಯನ್ನು ಕಾಣಬೇಕು ಎಂಬ ತವಕ ತಲ್ಲಣ ಅಚಲ ಅದಮ್ಯ ಬಯಕೆಗಳೂ ಇರುವುದಿಲ್ಲ.
ಅದೇನಿದ್ದರೂ ಕೇವಲ ಕುರುಡು ನಂಬಿಕೆ ಮಾತ್ರ. ಆ ನಂಬಿಕೆಯಾಚೆಗೆ ಆ ಶಕ್ತಿಗೆ ಯಾವ ಅಸಿತ್ವವೂ ಇಲ್ಲ. ಅರ್ಥವೂ ಇಲ್ಲ. ಆ ಶಕ್ತಿಯ ಬಗೆಗೆ ಪ್ರಾಮಾಣಿಕ ಜಿಜ್ಞಾಸೆಯೂ ಇರುವುದಿಲ್ಲ. ಮತೀಯ ಕುರುಡುತನದ ನಂಬಿಕೆಗಳ ಹುದುಲಿನಲ್ಲಿ ಆ ‘ಶಕ್ತಿ’ಯನ್ನು ಹೂತುಹಾಕಿ ಅದರ ಮೇಲೆ ಸಾಮ್ರಾಜ್ಯಗಳನ್ನು, ಧರ್ಮಗಳನ್ನು ದಂತಗೋಪುರಗಳನ್ನು ಕಟ್ಟಲಾಗಿದೆ.
ಇವೆಲ್ಲವೂ ಅಕ್ರಮ ಮತ್ತು ಅನೈತಿಕ ನೆಲೆಯ ಮೇಲೆಯೇ ಸ್ಥಾಪನೆಗೊಂಡಿವೆ. ಇವುಗಳ ಸ್ಥಾಪಕರಿಗೆ ದೇವರು ಒಂದು ಸಂಕೇತನಾಮ ಮಾತ್ರ. ಅಂತಹ ಸಂಕೇತನಾಮವನ್ನು ಭರ್ಜರಿಯಾಗಿ ವ್ಯಾಪಾರ ಮಾಡಲಾಗುತ್ತದೆ. ಎಲ್ಲ ಧರ್ಮಗಳು ಇಂತಹ ವ್ಯಾಪಾರದಲ್ಲಿ ತೊಡಗಿವೆ. ಅವು ಮಾನವರ ಅಂತರಂಗವನ್ನು ಶುದ್ಧಗೊಳಿಸುತ್ತಿಲ್ಲ. ಮತ್ತಶ್ಟು ಕಲುಶಿತಗೊಳಿಸುತ್ತಿವೆ. ಮತ್ತು ಅಂತಹ ಶಕ್ತಿಯನ್ನು ಒಂದು ಅನುಭವವಾಗಿ, ಅರಿವಾಗಿ ಅಂತರಂಗಕ್ಕೆ ತೆಗೆದುಕೊಳ್ಳುವುದಿಲ್ಲ. ಬಹಿರಂಗದಲ್ಲಿ ಜೀವನ ಮೌಲ್ಯವಾಗಿ ಯಾವ ಧರ್ಮೀಯರೂ ಆಚರಿಸುವುದಿಲ್ಲ. ಆ ಮೂಲಕ ಲೋಕವನ್ನು ಶುಚಿಯಾಗಿಡುವುದಿಲ್ಲ.
ಬದಲಿಗೆ ಶಿಲುಬೆ, ಲಿಂಗ, ಹಸ್ತ-ನಕ್ಶತ್ರ, ಓಂ ಇತ್ಯಾದಿಗಳನ್ನು ಸಂಕೇತಗಳಾಗಿ ಬಳಸಲಾಗುತ್ತದೆ. ಗುಡಿ ಚರ್ಚು ಮಸೀದಿ ಮಂದಿರಗಳನ್ನು ಕಟ್ಟಲಾಗುತ್ತದೆ. ಅವುಗಳನ್ನು ಜನರ ಎದೆಯ ಮೇಲೆ ಹೊರಿಸಿ ಅರಿವನ್ನು ನಾಶ ಮಾಡಲಾಗುತ್ತದೆ. ನಂಬಿಕೆಯ ಕೋಟೆಯ ಸುತ್ತ ಕುರುಡುತನ, ಮೌಢ್ಯದ ಆಚರಣೆಗಳ ಬೇಲಿ ನಿರ್ಮಿಸಲಾಗುತ್ತದೆ. ಅಲ್ಲಿ ಅವೈಚಾರಿಕತೆ ಹುಟ್ಟಿಕೊಳ್ಳುವುದೇ ಹೊರತು ಯಾವುದೇ ಅರಿವು ಹುಟ್ಟುವುದಿಲ್ಲ. ಹಾಗಾಗಿಯೇ ಬಸವಣ್ಣ ಹೇಳಿರುವಂತೆ ಲೋಕದ ಅಂತರಂಗ ಬಹಿರಂಗಗಳಲ್ಲಿ ಹುಸಿ ರಜ ವಿಶಯಗಳು ತುಂಬಿ ಈ ಜಗತ್ತು ಭಗ್ನಗೊಂಡಿದೆ ಇಲ್ಲವೇ ಪಾಳುಬಿದ್ದಂತಿದೆ. ‘ಪ್ರಚ್ಛನ್ನ ಪಶುತ್ವ’ದ ಕ್ರೌರ್ಯ ಅನಾವರಣಗೊಳ್ಳುತ್ತಲೇ ಇದೆ.
ದೇವರ ಇರುವಿಕೆಯ ಬಗೆಗೆ ಅನುಮಾನ ವ್ಯಕ್ತಪಡಿಸಿ ಅದನ್ನು ಕಾಣುವ ತವಕ ತಲ್ಲಣಗಳಿಂದ ಬೆಂದ ಭಕ್ತರಲ್ಲಿ ಸಂತರಲ್ಲಿ ಮಾತ್ರ ದೇವರು ಮತ್ತೆ ಮತ್ತೆ ಹುಟ್ಟಿದ್ದಾನೆ. ಅಲ್ಲಿಯೇ ಇಂದಿಗೂ ಆ ಶಕ್ತಿ ಜೀವಂತವಾಗಿರುವುದು. ಮತ್ತು ಅಂತಹ ಕಡೆಯಲ್ಲಿ ಹೊಸ ತಿಳುವಳಿಕೆ ಹುಟ್ಟಿದೆ. ಇದಕ್ಕೆ ಸ್ವತಃ ಬಸವಣ್ಣನೇ ಉದಾಹರಣೆ. ನಂತರ ಅಲ್ಲಮ ಅಕ್ಕ ಕಬೀರ ಮೀರಾ ಕುವೆಂಪು ಇತ್ಯಾದಿ. ಅಂತಹ ಕಡೆಗೆ ಮಾತ್ರ ಮಾನವರು ತಮ್ಮ ಬದುಕನ್ನು ಹಸನಾಗಿಡುವ ಮೂಲಕ ಜೀವನದ ಪಥವನ್ನು ಶುದ್ಧವಾಗಿಟ್ಟುಕೊಳ್ಳುವ ಪಾರದರ್ಶಕ ನುಡಿಯನ್ನು ರೂಪಿಸುವ ಕೆಲಸ ಮಾಡಿದ್ದಾರೆ.
ಬಸವಣ್ಣನ ಈ ವಚನವನ್ನು ಬ್ರೆಕ್ಟನ ಕವಿತೆಯ ಜೊತೆಗೆ ಓದಬಹುದೆನಿಸುತ್ತದೆ. ಬ್ರೆಕ್ಟ್ ಹೇಳುವಂತೆ, ‘ಹಂದಿಗಳು ತಾವು ಮಲಗುವ ಜಾಗವನ್ನು ಹೇಲು ಉಚ್ಚೆಗಳಿಂದ ಅಧ್ವಾನಗೊಳಿಸಿಕೊಂಡಂತೆ ಜರ್ಮನಿ ತನ್ನ ನಾಡನ್ನು ಮಲಿನ ಮಾಡಿಕೊಂಡಿದೆ’ ಎನ್ನುತ್ತಾನೆ. ಅವನ ಮತ್ತು ಬಸವಣ್ಣನ ಮಾತನ್ನು ಸಮೀಕರಿಸಿ ಹೇಳುವುದಾದರೆ, ‘ಮಾನವರು’ ತಮ್ಮ ಇಡೀ ಮನುಕುಲವನ್ನು ದ್ವೇಶ, ಹಿಂಸೆ, ಕೊಲೆ, ಸುಲಿಗೆ, ಕ್ರೌರ್ಯ, ಸ್ವಾರ್ಥ, ಅಧಿಕಾರದ ಮದ ಮತ್ತು ಭ್ರಶ್ಟ ಗುಣಗಳಿಂದ ಇಡೀ ಭೂಮಂಡಲವನ್ನು ಸ್ಮಶಾನದಂತೆ, ಕಸಾಯಿಖಾನೆಯಂತೆ ಮಾಡಿದ್ದಾರೆ. ಇಲ್ಲಿ ಆಗಿಹೋಗಿರುವ ಜನಾಂಗಿಯ ಕಲಹಗಳು, ಯುದ್ಧಗಳು, ಧಾರ್ಮಿಕ ಸಂಘರ್ಶಗಳು ವರ್ಣ ಜಾತಿ ದ್ವೇಶದ ಕಗ್ಗೊಲೆಗಳನ್ನು ಗಮನಿಸಿದರೆ ಇದರ ಭೀಕರತೆ ತೀವ್ರತೆಗಳು ಅರ್ಥವಾಗುತ್ತವೆ. ಇದರಿಂದ ನದಿಗಳಲ್ಲಿ ನೀರಿಗಿಂತಲೂ ಹೆಚ್ಚು ರಕ್ತಹರಿದಿದೆ. ಚರಿತ್ರೆಯ ಪುಟಗಳೇ ಇದನ್ನೇ ಸಾಬೀತುಪಡಿಸುತ್ತಿದೆ. ಹಿಟ್ಲರನ ಜರ್ಮನಿ ಇಡೀ ಜಗತ್ತನ್ನು ರಕ್ತಸಿಕ್ಕಗೊಳಿಸಿತ್ತು. ಕಲ್ಯಾಣವೂ ಕೂಡ ನೆತ್ತರಿನಲ್ಲಿ ನೆಂದೇ ನಾಶವಾಗಿದ್ದು ಸುಳ್ಳಲ್ಲ.
ಇಂದು ಜಗತ್ತಿನ ಕೆಲವು ದೇಶಗಳು ಈ ದಾರಿಯಲ್ಲಿ ಹೆಜ್ಜೆಹಾಕುತ್ತಿವೆಯೇ ಎಂಬ ಭಯ ಮೂಡುತ್ತಿದೆ. ಈಗಾಗಲೇ ಅದರ ದಟ್ಟ ವಾಸನೆ ವಿಶ್ವದಲ್ಲಿರುವ ಜಾಗೃತ ಮೂಗುಗಳಿಗೆ ಬಡಿಯುತ್ತಿದೆ. ಬಂಡವಾಳಶಾಹಿ ಸಾಮ್ರಾಜ್ಯಗಳನ್ನು ಕಟ್ಟಲು, ಧರ್ಮವನ್ನು ಸ್ಥಾಪಿಸಲು ಮತ್ತು ಜಾತಿ ವರ್ಣಗಳ ಭದ್ರಕೋಟೆಗಳನ್ನು ಸ್ಥಾಪಿಸಲು ಕೋಟ್ಯಂತರ ಜನರನ್ನು ಬಲಿಕೊಡಲಾಗಿದೆ. ಅದರ ಮುಂದುವರಿದ ಅಧ್ಯಾಯ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಆರಂಭವಾಗಿರುವಂತೆ ಕಾಣುತ್ತದೆ.
ಹೀಗೇ ತಮ್ಮದೇ ಸಂತತಿಯವರನ್ನು ಬಲಿಕೊಟ್ಟು ಸಾಮ್ರಾಜ್ಯವನ್ನು ಧರ್ಮಗಳನ್ನು ಸ್ಥಾಪಿಸಿದ ‘ಪ್ರಾಣಿ’ ಪ್ರಪಂಚವಿಲ್ಲ. ಅಂದರೆ ಬ್ರೆಕ್ಟ್ ಹೇಳಿದ ಮಾತು ಕೇವಲ ಜರ್ಮನಿಗೆ ಸೀಮಿತವಲ್ಲ. ಬಸವಣ್ಣ ಹೇಳಿದ ಹುಸಿ ವಿಚಾರಗಳು ಕೇವಲ ವ್ಯಕ್ತಿಗೆ, ಕಲ್ಯಾಣಕ್ಕೆ ಸಂಬಂಧಿಸಿದವು ಮಾತ್ರವಲ್ಲ. ಅವು ಇಡೀ ಮಾನವರ ಕುಲವನ್ನು ಕುರಿತ ವಿಚಾರಗಳು. ಅಂದರೆ ಅವರಿಬ್ಬರ ಮಾತುಗಳು ಸಾರ್ವತ್ರಿಕ ಮತ್ತು ಸಾರ್ವಕಾಲಿಕವಾಗಿ ಕಾಣಿಸುತ್ತಿವೆ.
ಇದನ್ನು ಗಮನಿಸಿದರೆ ಈ ಲೋಕದಲ್ಲಿ ಆ ‘ಒಡೆಯ’ನಿಲ್ಲ ಎಂಬ ಅನುಮಾನ ಮೂಡುತ್ತದೆ. ಅದರ/ಅವನ/ಅವಳ ಗೈರುಹಾಜರಿ ಎದ್ದುಕಾಣಿಸುತ್ತದೆ. ಇಂತಹದೇ ಅನುಮಾನವನ್ನು ಬಸವಣ್ಣ ಈ ವಚನದಲ್ಲಿ ವ್ಯಕ್ತಪಡಿಸಿರುವಂತೆ ಅನ್ನಿಸುತ್ತದೆ. ಆ ಶಕ್ತಿಯಿದ್ದಿದ್ದರೆ ಇಶ್ಟೊಂದು ರಕ್ತಪಾತ, ಮೋಸ, ವಂಚನೆ ದುಶ್ಟಕೂಟಗಳ ಅಟ್ಟಹಾಸ ನಡೆಯುತ್ತಿರಲಿಲ್ಲ. ಅದರ ಸಹಸ್ರಬಾಹುಗಳು ತಡೆಯುತ್ತಿದ್ದವೇನೋ? ಆ ಶಕ್ತಿಯ ಸಂಕೇತಗಳಲ್ಲಿ ಪ್ರಾಮಾಣಿಕ ನಂಬಿಕೆಯಿಟ್ಟವರೂ ಕ್ರೌರ್ಯದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ದೇವರ ಹೆಸರು ದುರ್ಬಳಕೆಯಾಗುತ್ತಿರಲಿಲ್ಲ.
ಇಂದು ದೇವರ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಲೋಕವನ್ನು ವಂಚಿಸುವ ಮಟ್ಟಿಗೆ ಹುಸಿತನಗಳು ವಿಶಯಗಳು ಹುಲ್ಲು ರಜಗಳು ಜನರಲ್ಲಿ ಮತ್ತು ಆಳುವವರಲ್ಲಿ ಹುಟ್ಟಿವೆ. ಅಂದರೆ ಆ ‘ಒಡೆಯ’ನಲ್ಲಿ ನಂಬಿಕೆಯಿಟ್ಟವರೂ ಕ್ರೌರ್ಯದಲ್ಲಿ ವಂಚನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲವೇ ಕುರುಡಾಗಿ ಆ ಶಕ್ತಿಯನ್ನು ನಂಬಿ ತಮ್ಮ ಎಲ್ಲ ಹೀನ ಕೃತ್ಯಗಳನ್ನು ಎಸಗಲಾಗುತ್ತಿದೆ. ಮಾನವರು ಸೃಶ್ಟಿಸಿಕೊಂಡಿರುವ ಈ ಸಮಸ್ಯೆಗಳಿಗೆ ಯಾವುದೇ ‘ದೈವನ್ಯಾಯ’ ದೊರೆತ ಉದಾಹರಣೆಗಳಿಲ್ಲ. ಆದರೆ ಜನರು ಮಾತ್ರ ಆ ದೇವರು ನೋಡಿಕೊಳ್ಳುತ್ತಾನೆ. ಅವನಲ್ಲಿ ಎಲ್ಲ ಲೆಕ್ಕವಿರುತ್ತದೆ ಎಂದು ಸಮಾಧಾನ ಮಾಡಿಕೊಳ್ಳುತ್ತಾರೆಯಶ್ಟೇ.
ಇದನ್ನು ಚನ್ನಾಗಿ ಬಲ್ಲ ಲೋಕದ ಪುರೋಹಿತಶಾಹಿ ವ್ಯವಸ್ಥೆ ಜನರನ್ನು ವ್ಯವಸ್ಥಿತವಾಗಿ ವಂಚಿಸಿ ಸಮಾಜದ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ. ದುರಂತವೆಂದರೆ ಈ ಬಗೆಯ ವಂಚನೆಯನ್ನು ಜನರು ಅರಿಯುವಲ್ಲಿ ಸೋಲುತ್ತಿದ್ದಾರೆ. ಅವರೂ ಕೂಡ ಅರಿವುಗೇಡಿಗಳಾಗಿ ಬಹಳ ಸುಲಭವಾಗಿ ವಂಚಕರಿಗೆ ಬಲಿಯಾಗಿ ಪುರೋಹಿತಶಾಹಿಯ ಸೇವೆ ಮಾಡಲು ಮುಂದಾಗುತ್ತಾರೆ.
ಅಂದರೆ ಜಿಂಕೆಗಳೆಲ್ಲವೂ ಸೇರಿ ಹುಲಿಯನ್ನು ಸ್ತುತಿಸಿದಂತೆ, ಪೂಜಿಸಿದಂತೆ ನಿತ್ಯ ಅದರ ಪಾದಕ್ಕೆರಗಿ ನಮಸ್ಕರಿಸುವಂತೆ ಕಾಣಿಸುತ್ತದೆ. ಈ ಸೇವೆ ಮಾಡುವ ಜನರಿಗೆ ಬಸವಣ್ಣನಂತೆ ಆ ‘ಒಡೆಯನಿದ್ದಾನೋ ಇಲ್ಲವೋ?’ ಎಂಬ ಒಂದು ಸಣ್ಣ ಅನುಮಾನವನ್ನೂ ವ್ಯಕ್ತಪಡಿಸುವುದಿಲ್ಲ. ಆ ಶಕ್ತಿ ಎಂದೂ ಯಾರಿಗೂ ಪ್ರತ್ಯಕ್ಶವಾಗಿ ದರ್ಶನ ಕೊಟ್ಟಿಲ್ಲ. ಎಲ್ಲವೂ ಪುರಾಣಗಳಲ್ಲಿ ದಂತಕತೆಗಳಲ್ಲಿ ಕಟ್ಟಿರುವ ಪವಾಡದ ಕತೆಗಳಶ್ಟೇ.
ಆದರೂ ‘ಇದ್ದಾನೋ ಇಲ್ಲವೋ’ ಎಂಬ ಅನುಮಾನದೊಂದಿಗೆ ನಿರಂತರವಾಗಿ ಆ ಶಕ್ತಿಯನ್ನು ಕಾಣುವ ಪ್ರಯತ್ನವನ್ನು ಮಾಡದೆ ಕೇವಲ ಕುರುಡಾಗಿ ನಂಬಲಾಗುತ್ತಿದೆ. ಹಾಗಾಗಿ ಕೇವಲ ನಂಬಿಕೆಯ ಲೋಕ ದೈವಜ್ಞಾನಶಾಸ್ತ್ರ ಶಾಖೆಗೆ ಯಾವುದೇ ಹೊಸ ಕೊಡುಗೆ ನೀಡುವುದಿಲ್ಲ. ಬದಲಿಗೆ ಹೊಸ ಹೊಸ ಕುರುಡು ಆಚರಣೆಗಳನ್ನು ಸೃಶ್ಟಿಸಲಾಗುತ್ತದೆ. ಜ್ಯೋತಿಶಿಗಳೇ ಸರ್ವಾಂತರ್ಯಾಮಿಗಳೂ ಸರ್ವಜ್ಞಾನಿಗಳೂ ಆಗಿ ಲೋಕದೆದುರು ಕಾಣಿಸಿಕೊಳ್ಳುತ್ತಾರೆ. ಇಂತಹವರೇ ಹುಸಿ ಹುಲ್ಲು ರಜ ವಿಶಯಗಳನ್ನು ತುಂಬಿಕೊಂಡಿರುವ ಮಾನವರು!
ಇಂತಹವರಿಂದ ಪ್ರಭಾವಗೊಳ್ಳುವ ಜನರು, ‘ಭಕ್ತರು’, ಅರಿವಿನಿಂದ ದೂರವಾಗಿ ನಾಶವಾಗುತ್ತಾರೆ. ಮಜವೆಂದರೆ ಇಶ್ಟೆಲ್ಲವನ್ನೂ ಮತ್ತೆ ಆ ಶಕ್ತಿಯ ಹೆಸರಲ್ಲಿಯೇ ಮಾಡಲಾಗುತ್ತದೆ. ದೇವರ ಹೆಸರಿನಲ್ಲಿಯೇ ಅಕ್ರಮಗಳನ್ನು ನಡೆಸಲಾಗುತ್ತಿದೆ. ಈ ಸಮಸ್ಯೆಗಳಿಗೆ ಆ ಒಡೆಯ ಪರಿಹಾರ ಸೂಚಿಸಲಿಲ್ಲ. ಮತ್ತೆ ಜನರು ಈ ಸಮಸ್ಯೆಗಳ ಮನುಶ್ಯ ಮೂಲವನ್ನು, ಹುನ್ನಾರಗಳನ್ನು ಅರಿತು ಪರಿಹಾರವನ್ನು ಕಂಡುಕೊಳ್ಳಲು ಮುಂದಾಗುವುದಿಲ್ಲ.
ಹಾಗಾಗಿಯೇ ಮನುಶ್ಯರಿಗೆ ಅಂಟಿರುವ ಎಲ್ಲ ರೋಗಗಳು, ದುಶ್ಟತನಗಳು ಅದರಿಂದ ನಿತ್ಯವೂ ನಡೆಯುವ ಎಲ್ಲ ಬಗೆಯ ಕೇಡುಗಳಿಗೆ ಪರಿಹಾರವೇ ಇಲ್ಲದಂತಾಗಿದೆ. ಲೋಕ ಭೀಕರ ಕದನಗಳ, ಪೈಪೋಟಿಯ, ಹಿಂಸಾಭೂಮಿಯಾಗಿ ಪರಿವರ್ತನೆಯಾಗಿದೆ. ನಾಗರಿಕತೆಯ ಬಹುದೊಡ್ಡ ಸಮಸ್ಯೆಯಾಗಿ ಕಾಣಿಸುತ್ತಿದೆ. ಇದೇ ನಾಗರಿಕತೆಯ ‘ಕಾಲಿಗೆ ಕಟ್ಟಿದ ಗುಂಡು ಕೊರಳಿಗೆ ಕಟ್ಟಿರುವ ಬೆಂಡು’. ಅದು ವೇಗವಾಗಿ ಚಲಿಸಲು ಬಿಡುವುದಿಲ್ಲ. ಬದುಕಲೂ ಬಿಡುವುದಿಲ್ಲ ಸಾಯಲೂ ಬಿಡುವುದಿಲ್ಲ.
ಹಾಗಾದರೆ ಇದಕ್ಕೆ ಪರಿಹಾರವೇನು? ಎಂಬುದೇ ಇಲ್ಲಿನ ಮುಖ್ಯ ಪ್ರಶ್ನೆ. ಇದಕ್ಕೆ ಬಸವಣ್ಣನ ಇತರೆ ವಚನಗಳಲ್ಲಿಯೇ ಉತ್ತರವಿದೆ. ನಡೆನುಡಿಗಳು ಒಂದಾಗಿರಬೇಕಾದ ಆಚಾರ ವಿಚಾರಗಳು ಕೂಡಬೇಕಾದ ಸಲಹೆಗಳಿವೆ. ಹಾಗೆಯೇ ಇತರೆ ಶರಣರಲ್ಲಿ ಉತ್ತರವಿದೆ. ಬುದ್ಧನಲ್ಲಿ ಉತ್ತರವಿದೆ. ಗಾಂಧಿ ಅಂಬೇಡ್ಕರ್ ಅವರಲ್ಲಿ ಉತ್ತರವಿದೆ. ಮಾನವರು ತಮ್ಮ ಅಂತರಂಗವನ್ನು ತಾವೇ ಶೋಧಿಸಿಕೊಂಡು ಅದರೊಳಗೆ ಅರಿವಿನ ಒಡೆಯನನ್ನು ಕಟ್ಟಿಕೊಳ್ಳುವ ಕೆಲಸ ಮಾಡಬೇಕಿದೆ. ಜಡಶಿಲೆಯ ಒಡೆಯನನ್ನಲ್ಲ.
ಅಂತರಂಗವೇ ಕಾಯಕದ ಅರಿವಿನ ಮನೆಯಾಗಿ ಅದೇ ಸ್ವರ್ಗವಾಗಬೇಕಿದೆ. ಅಂತಹ ಕಡೆ ಹುಸಿತನ ರಜಭಾವಗಳು ವಿಶಯಗಳ ಕ್ರೌರ್ಯ ಯಾವುದೂ ಇರಬಾರದು. ಅಂದರೆ ಎಲ್ಲ ದುರಂತಗಳಿಗೂ ಮನುಶ್ಯರೇ ನೇರ ಕಾರಣವಾಗಿರುವುದರಿಂದ ಇದಕ್ಕೆ ಮಾನವರೇ ಪರಿಹಾರವನ್ನು ಕಂಡುಕೊಳ್ಳಬೇಕು. ಇದಕ್ಕೆ ಯಾವ ‘ದೈವಿಕ ಪರಿಹಾರ’ಗಳೂ ಇಲ್ಲ. ಇದು ದುಶ್ಟಕೂಟಕ್ಕೆ ಚನ್ನಾಗಿ ತಿಳಿದಿದೆ. ಸದ್ಯ ದುಶ್ಟರಕೂಟಗಳು ಎಲ್ಲ ದೇಶಗಳಲ್ಲಿಯೂ ಅಧಿಕಾರದ ಗದ್ದುಗೆಗೇರಿರುವುದರಿಂದ ಮಾನವರ ಸಮಾಜ ನಿತ್ಯವೂ ಕ್ಶೋಭೆಗಳಲ್ಲಿ ಬೇಯುತ್ತಿದೆ. ಇದುವರೆಗಿನ ಪ್ರಪಂಚದ ಚರಿತ್ರೆಯನ್ನು ಗಮನಿಸಿದರೆ ಅಲ್ಲಿ ಇಂತಹ ದುಶ್ಟಕೂಟಗಳೇ ಆಳ್ವಿಕೆ ನಡೆಸಿರುವುದು.
ಇದನ್ನೂ ಓದಿ |ಖಾಸಗಿ ವಾಹನಗಳ ನಿರ್ವಾಹಕ-ಕ್ಲೀನರ್ ನೋಂದಣಿಗೆ ಅರ್ಜಿ ಆಹ್ವಾನ
ಹಾಗಾಗಿ ಪ್ರಭುತ್ವ ಎಂದರೇನೆ ದುಶ್ಟಕೂಟಗಳ ಐಕ್ಯತೆಯ ಚರಿತ್ರೆಯೂ ಆಗಿದೆ. ಇದನ್ನು ಮಾನವೀಯಗೊಳಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಆದರೆ ಇಂತಹ ಪ್ರಯತ್ನಗಳನ್ನು ಹತ್ತಿಕ್ಕಲಾಗಿದೆ. ದುಶ್ಟಕೂಟಕ್ಕೆ ಲಜ್ಜೆಯಿಲ್ಲ. ಪ್ರಜ್ಞಾವಂತರಿಗೆ ಸದಾ ಲಜ್ಜೆಯಿರುತ್ತದೆ. ಅವರು ಅಂಜುತ್ತಾರೆ. ಆದ್ದರಿಂದ ಇದಕ್ಕೆ ದುಶ್ಟಕೂಟದಿಂದ ಪರಿಹಾರ ಸಾಧ್ಯವಿಲ್ಲ. ಆ ಎಲ್ಲ ದುಶ್ಟತನಗಳ ಬಗೆಗೆ ಎಚ್ಚರವಿರುವ ಜಾಗೃತ ಜನರು ಸಂಘಟಿತರಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಅದು ಮಾತ್ರವೇ ಮನೆಯನ್ನೂ ಮನವನ್ನೂ ಅಂತರಂಗವನ್ನೂ ಬಹಿರಂಗವನ್ನೂ ಶುದ್ಧಗೊಳಿಸಬಲ್ಲದು.
ಬುದ್ಧ ಅಂತಹ ಕೆಲಸಕ್ಕೆ ಕೈಹಾಕಿ ಸಮಾಜವನ್ನು ಕೊಂಚ ದೂರ ನಡೆಸಿಕೊಂಡು ಬಂದಿದ್ದ. ಇಂದು ಆತನ ಅನುಯಾಯಿಗಳು ಕೂಡ ಜನಾಂಗಗಳನ್ನು ನಿರ್ಮೂಲಿಸುವ ಕೆಲಸದಲ್ಲಿ ನಿರತರು. ಇಂತಹ ಪ್ರಮಾದಗಳನ್ನು ಅರಿತು ಚರಿತ್ರೆಯಿಂದ ಪಾಠ ಕಲಿತು ಸಾಧ್ಯವಾದಶ್ಟು ಮಾನವರ ಕುಲದ ಕಶ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಅಂತಹ ಪರಿಹಾರದ ದಾರಿಗಳಲ್ಲಿ ದೇವರು ಸಂಕೇತನಾಮವಾಗದೆ ಅರಿವಿನ ಮಾರ್ಗವಾಗಬೇಕಿದೆ.
ಸ್ವತಃ ಅರಿವೇ ಆಗಬೇಕಿದೆ. ‘ಮನೆಯೊಡೆಯನಿದ್ದಾನೋ ಇಲ್ಲವೋ? ಎಂಬ ತಾಕಲಾಟಗಳಲ್ಲಿ ಪ್ರಾಮಾಣಿಕತೆಯ ಹಾದಿಯಲ್ಲಿ ಅಂತರಂಗದ ಶೋಧದಲ್ಲಿ ಸಾಗಿದರೆ ಸಮಸ್ಯೆಯಿಲ್ಲ. ಅದಿಲ್ಲದೆ ಕೇವಲ ಜಡಶಿಲೆಗೊಳಿಸಿ ದೇವರ ಹೆಸರಿನಲ್ಲಿ ಮೌಢ್ಯಾಚರಣೆಗಳ ಹುತ್ತ ಬೆಳೆಸಿ ಸ್ತುತಿಪಠಣಗಳನ್ನು ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಆಗ ಕೊನೆಗೂ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಎಂಬ ಸಂಶಯ ಉಳಿದೇ ಇರುತ್ತದೆ. ಈ ಸಂಶಯವನ್ನು ಶಾಶ್ವತವಾಗಿ ಇಲ್ಲವಾಗಿಸುವ ಬಗೆಹರಿಸುವ ಉತ್ತರಿಸುವ ‘ಬುದ್ಧಶಕ್ತಿಗಳು’ ಇನ್ನೂ ಉದಯಿಸಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.


