Connect with us

ನೆಲದನಿ

ಖಾಲಿ ಹೊಟ್ಟೆಯಲ್ಲೇ ಮಲಗಿದ ಕಾನ್ಷಿರಾಮ್ ಜೀ

Published

on

  • ರಘೋತ್ತಮ ಹೊ.ಬ

ಒಂದು ದಿನ ಕಾನ್ಷಿರಾಮ್ ಮತ್ತು ಅವರ ಸ್ನೇಹಿತ ಮನೋಹರ್ ಅಟೆ ರಾತ್ರಿ10ಕ್ಕೆ ಪುಣೆಯನ್ನು ತಲುಪಿದರು. ಏಕೆಂದರೆ ಪ್ರತಿ ದಿನ ಪುಣೆಯಿಂದ ಮುಂಬಯಿಗೆ ಹೋಗುತ್ತಿದ್ದ ಕಾನ್ಷಿರಾಮ್ ರವರು ತಮ್ಮ ಕಚೇರಿಯಿಂದ ಪುಣೆ ರೈಲು ನಿಲ್ದಾಣದವರೆಗೆ 15 ಕಿ.ಮೀ ದೂರ ಸೈಕಲ್ ಹೊಡೆದು ಅದನ್ನು ರೈಲು ನಿಲ್ದಾಣದಲ್ಲಿ ನಿಲ್ಲಿಸಿ ಮುಂಬೈಗೆ ಭೇಟಿ ಕೊಟ್ಟು ಮುಂಬೈನಲ್ಲಿ ಚಳುವಳಿಯ ಕಾರ್ಯಕರ್ತರನ್ನು ಭೇಟಿ ಮಾಡಿ ನಂತರ ಅದೇ ರೈಲಿನಲ್ಲಿ ಪುಣೆಗೆ ವಾಪಸ್ ಬರುತ್ತಿದ್ದರು. ಹೀಗೆ ನಿತ್ಯ ರೈಲಿನಲ್ಲಿ ಓಡಾಡುತ್ತಿದ್ದ ಕಾನ್ಷಿರಾಮ್ ರ ಬಳಿ ರೈಲು ಪಾಸ್ ಇತ್ತು.

ಅಂದಹಾಗೆ ಆ ದಿನ ಕಾನ್ಷಿರಾಮ್ ಜೀ ಮತ್ತು ಮನೋಹರ್ ಅಟೆ ರೈಲು ಇಳಿದಾಗ ಮೊದಲೇ ಹೇಳಿದಂತೆ ರಾತ್ರಿ ಹತ್ತಾಗಿತ್ತು. ಇಬ್ಬರೂ ಕೂಡ ಸೈಕಲ್ ಹತ್ತಿದವರೆ 15ರಿಂದ 20 ಕಿ.ಮೀ ದೂರ ಇದ್ದ ಬಾಮ್ ಸೆಫ್ ಕಚೇರಿಯನ್ನು ತಲುಪಲು ಪ್ರಾರಂಭಿಸಿದರು. ಮಧ್ಯೆ ಮಧ್ಯೆ ಸೈಕಲ್ ಇಳಿದು ನಡೆದುಕೊಂಡು ಮಾತನಾಡುತ್ತ ಹೋಗುತ್ತಿರಲು ಎಂದಿನಂತೆ ಅವರೆದುರು ಪುಣೆಯ ಸ್ಟೇಷನ್ ಬಳಿಯ ವಂದನಾ ಹೊಟೆಲ್ ಎದುರಾಯಿತು.

ವಂದನಾ ಹೊಟೆಲ್ ಆ ಕಾಲದಲ್ಲಿ ಕಡಿಮೆ ಬೆಲೆಯ ಊಟಕ್ಕಾಗಿ ಫೇಮಸ್ ಆಗಿತ್ತು. ಆದ್ದರಿಂದ ಹೊಟೆಲ್ ಸಿಗುತ್ತಲೇ ಮನೋಹರ ಅಟೆಯವರು ತಮ್ಮ ಜೇಬಿನಲ್ಲಿ ಹಣ ಇಲ್ಲದ್ದರಿಂದ ಕಾನ್ಷಿರಾಮ್ ರವರ ಬಳಿ ಹಣ ಇರಬಹುದು ಅವರೇ ಇಂದು ಊಟ ಕೊಡಿಸುತ್ತಾರೆ ಎಂದುಕೊಂಡರು. ಆದರೆ ಹೊಟೆಲ್ ಮುಂದೆ ಪಾಸ್ ಆಗುತ್ತಿದ್ದರೂ ಕಾನ್ಷಿರಾಮ್ ರವರು ಹೊಟೆಲ್ ಬಳಿ ನಿಲ್ಲಲಿಲ್ಲ.

ಆಗ ಅಟೆಯವರು ಕಾನ್ಷಿರಾಮ್ ರವರು ಮಟನ್ ಪ್ರಿಯರು, ಆದ್ದರಿಂದ ಸಮೀಪದಲ್ಲೇ ಇರುವ ನಾನ್ ವೆಜ್ ಹೊಟೆಲ್ ನ್ಯೂಯಾರ್ಕ್ ಹೊಟೆಲ್ ಗೆ ಕರೆದುಕೊಂಡು ಹೋಗಬಹುದು ಅದಕ್ಕೆ ಅವರು ವಂದನಾ ಹೊಟೆಲ್ ಬಳಿ ಏನು ಮಾತಾಡಲಿಲ್ಲ ಎಂದುಕೊಂಡರು. ಏಕೆಂದರೆ ಕಾನ್ಷಿರಾಮ್ ರ ಬಳಿ ದುಡ್ಡು ಜಾಸ್ತಿ ಇದ್ದಾಗ ಆಗಾಗ ಅವರು ಅಟೆಯವರನ್ನು ಮಟನ್ ಊಟಕ್ಕೆ ನ್ಯೂಯಾರ್ಕ್ ಹೊಟೆಲ್ ಗೆ ಕರೆದುಕೊಂಡು ಹೋಗುತ್ತಿದ್ದರು.

ಆದ್ದರಿಂದ ಇಂದೂ ಕೂಡ ಹಾಗೆ ಮಾಡಬಹುದು ಎಂದು ಅಟೆಯವರು ಅಂದುಕೊಂಡರು. ಆದರೆ… ನ್ಯೂಯಾರ್ಕ್ ಹೊಟೆಲ್ ಬಂತು, ಕಾನ್ಷಿರಾಮ್ ರವರು ಅಲ್ಲಿಯೂ ಕೂಡ ನಿಲ್ಲಲಿಲ್ಲ! ಆಗ ಅಟೆಯವರಿಗೆ ಅರ್ಥ ಆಗಿತ್ತು “ಓಹ್, ಕಾನ್ಷಿರಾಮ್ ರ ಬಳಿ ದುಡ್ಡಿಲ್ಲ” ಎಂದು. ಹಾಗೆ ಕಾನ್ಷಿರಾಮ್ ರವರಿಗೂ ಅಟೆ ಬಳಿ ಹಣ ಇಲ್ಲ ಎಂಬುದು ಅರ್ಥ ಆಗಿತ್ತು. ಇಬ್ಬರೂ ಪರಸ್ಪರ ಏನೂ ಮಾತಾಡದೇ ಮೌನವಾಗಿ ಬಾಮ್ಸೆಫ್ ಕಚೇರಿ ಕೂಡ ತಲುಪಿದ್ದರು. ಅಂದಹಾಗೆ ಅಂದು ಅವರಿಗೆ ನೀರೇ ಆಹಾರವಾಗಿತ್ತು… ಖಾಲಿ ಹೊಟ್ಟೆಯಲ್ಲೇ ಆ ರಾತ್ರಿ ಕಳೆದರು…!

ಹಾಗೆ ಬೆಳಿಗ್ಗೆಯಾಗುತ್ತಲೇ ಅಟೆಯವರಿಗೆ ಅಂದು ರಜೆ ಇದ್ದುದ್ದರಿಂದ ಅವರು ಇನ್ನೂ ಮಲಗೇ ಇದ್ದರು. ಆದರೆ ಮುಂಬೈಗೆ ಹೋಗಿ ಕಾರ್ಯಕರ್ತರನ್ನು ಭೇಟಿ ಮಾಡಬೇಕಿದ್ದುದ್ದರಿಂದ ಕಾನ್ಷಿರಾಮ್ ರವರು ಬೇಗ ಎದ್ದು ರೆಡಿಯಾಗಿ ತಮ್ಮ ಒಂದು ಸಣ್ಣ ಬ್ಯಾಗ್ ಸಿಕ್ಕಿಸಿಕೊಂಡು ಅಟೆಯವರಿಗೆ “ಅಟೆ ನಾನು ಹೋಗ್ತಾ ಇದೀನಿ” ಅಂದರು. ಆಗ ಅಟೆಯವರು “ಆಯ್ರು, ಬಾಗಿಲು ಎಳೆದುಕೊಂಡು ಹೋಗಿ, ನಾನು ಏಳೋದು ಲೇಟ್ ಆಗುತ್ತದೆ” ಎಂದರು.

ಅದಕ್ಕೆ ಕಾನ್ಷಿರಾಮ್ ರವರು ಸರಿ ಎಂದು ಬಾಗಿಲು ಮುಚ್ಚಿ ಹೊರಟರು. ಅಂದಹಾಗೆ ಹಾಗೆ ಹೇಳಿ ಐದು ನಿಮಿಷವಾಗಿರಬಹುದಷ್ಟೆ , ಕಾನ್ಷಿರಾಮ್ ರವರು ಮತ್ತೆ ಅಟೆಯವರ ಬಳಿ ಬಂದರು. ಬಂದವರೇ “ಅರೆ ಭಾಯ್ ಅಟೆ, ನಿನ್ನ ಹತ್ತಿರ ಸ್ವಲ್ಪ ದುಡ್ಡಿದೆಯಾ” ಎಂದರು. ಅದಕ್ಕೆ ಅಟೆಯವರು “ಇಲ್ಲವಲ್ಲ” ಎಂದರು. ಅದಕ್ಕೆ ಕಾನ್ಷಿರಾಮ್ ರವರು “ಇರಬಹುದು ನೋಡು, ನಿನ್ನ ಅಕ್ಕಪಕ್ಕ ಅಲ್ಲೇಲ್ಲಾದರೂ ಇಟ್ಟಿರುತ್ತೀಯ” ಎನ್ನಲು ಕಚೇರಿಯಲ್ಲಿ ಹಣ ಒಂಚೂರು ಇಲ್ಲ ಎಂಬುದನ್ನು ತಿಳಿದಿದ್ದ ಅಟೆಯವರು ಕಾನ್ಷಿರಾಮ್ ರವರ ತೃಪ್ತಿಗಾಗಿ ಡ್ರಾಯರ್ ಅನ್ನೆಲ್ಲ ಹುಡುಕಿ “ಇಲ್ಲ, ಒಂದು ಪೈಸೆನೂ ಇಲ್ಲ” ಎಂದರು.

ಅದಕ್ಕೆ ಕಾನ್ಷಿರಾಮ್ ರವರು “ಐದು ಪೈಸೆಯಾದ್ರೂ ಇದ್ದರೆ ನೋಡಪ್ಪ” ಅಂದರು. ಆಗ ಅಟೆಯವರು “ಇಲ್ಲ ಸಾಹೆಬ್ರೆ, ಐದು ಪೈಸೆನೂ ಇಲ್ಲ, ಅದಿರಲಿ, ನಿಮಗ್ಯಾಕೆ ಈಗ ಐದು ಪೈಸೆ” ಎಂದು ಕೇಳಿದರು. ಆಗ ಕಾನ್ಷಿರಾಮ್ ರವರು “ಅರೆ ಯಾರ್, ನನ್ನ ಸೈಕಲ್ ಟೈರ್ ನಲ್ಲಿ ಗಾಳಿ ಇಲ್ಲ. ಟೈರ್ ಗಳಿಗೆ ಗಾಳಿ ತುಂಬಿಸಲು ಕಡೆ ಪಕ್ಷ ಐದು ಪೈಸೆಯಾದರೂ ಬೇಕು” ಎಂದರು.

ಅದಕ್ಕೆ ಅಟೆಯವರು “ಅದಕ್ಕ್ಯಾಕೆ, ನನ್ನ ಸೈಕಲ್ ತಗೊಂಡ್ಹೋಗಿ” ಎನ್ನಲು ಕಾನ್ಷಿರಾಮ್ ರವರು “ನಿನ್ನ ಸೈಕಲ್ ನಲ್ಲೂ ಕೂಡ ಗಾಳಿ ಇಲ್ಲ, ನಾನು ಅದನ್ನು ಕೂಡ ಚೆಕ್ ಮಾಡಿದೆ. ಇರಲಿ ತಲೆ ಕೆಡಿಸಿಕೊಳ್ಳಬೇಡ, ನಾನು ನಡೆದುಕೊಂಡೇ ಹೋಗುತ್ತೇನೆ” ಎನ್ನುತ್ತ ಟ್ರೇನ್ ಹಿಡಿಯಲು 15 ಕಿ.ಮೀ ದೂರದಲ್ಲಿದ್ದ ಸ್ಟೇಷನ್ ನತ್ತ ಓಡಲು ಪ್ರಾರಂಭಿಸಿದರು…!(ಆಧಾರ: KANSHIRAM; Leader of Dalits by Badri Narayan, Pp.37)

ಯಾಕೆ ಈ ಘಟನೆಗಳನ್ನು ಇಲ್ಲಿ ಹೇಳಬೇಕಾಗಿದೆಯೆಂದರೆ ಇಂದು ನಾವು ಯಥೇಚ್ಛ ಉಂಡು ಮಲಗುತ್ತೇವೆ. ಸಹಸ್ರಾರು ರೂ. ದುಂದುವೆಚ್ಚ ಮಾಡುತ್ತೇವೆ. ಆದರೆ ನಮ್ಮೆಲ್ಲರನ್ನು ಎಚ್ಚರಿಸಿದ ಕಾನ್ಷಿರಾಮ್ ಜೀಯವರಿಗೆ ಅಂದು ಉಣ್ಣಲು ತುತ್ತು ಅನ್ನವಿರಲಿಲ್ಲ ಖಾಲಿ ಹೊಟ್ಟೆಯಲ್ಲೇ ಅದೆಷ್ಟು ರಾತ್ರಿ ಕಳೆದಿದ್ದಾರೆಂದರೆ… ಹಾಗೆಯೇ ನಮಗೆ ಇಂದು ಓಡಾಡಲು ಆಡಿ ಕಾರೇ ಬೇಕು. ರಾಯಲ್ ಎನ್ ಫೀಲ್ಡ್ ಗಳೇ ಬೇಕು.

ಆದರೆ ಸಾಹೇಬ್ ಕಾನ್ಷಿರಾಮ್ ರವರು ಅಂದು ಬರೀ ಸೈಕಲ್ ತುಳಿದೇ ಇಡೀ ಭರತ ಖಂಡ ಸುತ್ತಿದರು! ಸೈಕಲ್ ಗಾಗಿ ಗಾಳಿ ತುಂಬಿಸಲು ಐದು ಪೈಸೆಯೂ ಇಲ್ಲದೆ ಕಾರ್ಯಕರ್ತರನ್ನು ಭೇಟಿಯಾಗಲು ನಡೆಯುತ್ತಲೇ ಮುನ್ನುಗ್ಗಿದರು. ಇದನ್ನು ಬರೀ ತ್ಯಾಗ ಅಂದರೆ ತಪ್ಪಾಗುತ್ತದೆ. ಅರ್ಪಣೆ, ಬದ್ಧತೆ, ಶೋಷಿತರ ಏಳಿಗೆಗಾಗಿ ಒಂದು ಬೃಹತ್ ಚಳುವಳಿ ಕಟ್ಟಲು ಸರ್ವವನ್ನು ತ್ಯಜಿಸಿ ನಿಂತ ಮಹಾನ್ ಚೇತನ ದಾದಾಸಾಹೇಬ್ ಕಾನ್ಷಿರಾಮ್ ಜೀ. ಅವರ ಹೆಸರು ಹೇಳಲು ಕೂಡ ನಮಗೆ ಯೋಗ್ಯತೆ ಅರ್ಹತೆ ಬೇಕು ಅಂತಹ ಪವಿತ್ರ ವ್ಯಕ್ತಿತ್ವ ದಾದಾಸಾಹೇಬರದು.

ಇಂದು (ಮಾರ್ಚ್ 15) ಅವರ ಜನ್ಮದಿನ. ಕಾನ್ಷಿರಾಮ್ ಜೀ ನಮ್ಮೆಲ್ಲರಲ್ಲಿ ನೆಲೆಸಲಿ, ಬಾಬಾಸಾಹೇಬರ ಚಳುವಳಿಯನ್ನು ಒಂದು ಪ್ರಾಯೋಗಿಕ ರೂಪಕ್ಕೆ ಅಂತಹ ದಿವ್ಯ ಶಕ್ತಿ ನಮ್ಮೆಲ್ಲರಲ್ಲಿ ಆವಿರ್ಭವಿಸಲಿ ಎಂದು ಪ್ರೀತಿಯಿಂದ ಕೇಳಿಕೊಳ್ಳೋಣ. ಅವರ ಜನ್ಮದಿನವನ್ನು ಸಡಗರದಿಂದ ಆಚರಿಸೋಣ. “ಮತ್ತೊಮ್ಮೆ ಹುಟ್ಟಿ ಬನ್ನಿ ಕಾನ್ಷಿರಾಮ್ ಜೀ, ನಿಮಗೆ ನಿಮ್ಮ ಪ್ರೀತಿಯ ಮಟನ್ ಊಟವನ್ನು ಪ್ರೀತಿಯಿಂದ ನಾವು ಹಾಕಿಸುತ್ತೇವೆ” ಎಂದು ಆಹ್ವಾನಿಸೋಣ. ಅವರ ಹೋರಾಟದ ಋಣವ ತೀರಿಸೋಣ. ಜೈಭೀಮ್ ಜೈಭಾರತ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ

ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ಅಚ್ಚಕನ್ಯೆ ಜಲಪಾತ

Published

on

ತೀರ್ಥಹಳ್ಳಿ ಎಂದೊಡನೆ ನೆನಪಾಗುವುದು ಹಚ್ಚ ಹಸಿರ ಪ್ರಕೃತಿ. ಕಾಡಿನ ನಡುನಡುವೆ ಅಲ್ಲಲ್ಲಿ ತಲೆ ಎತ್ತಿ ನಿಂತಿರುವ ಅಡಕೆ ತೋಟಗಳು. ಮಾರಿಗೊಂದೊಂದು ಮನೆಗಳು. ಈ ಎಲ್ಲಾ ಸೌಂದರ್ಯಕ್ಕೆ ತನ್ನದೊಂದು ಕೊಡುಗೆಯಿರಲಿ ಎಂದು ನದಿ ಸೃಷ್ಟಿಸಿರುವ ಜಲಪಾತಗಳು. ಈ ಜಲಪಾತಗಳನ್ನು ನೋಡುವುದು, ಅವುಗಳಲ್ಲಿ ಆಟವಾಡುವುದು ಎಂದರೇ ಒಂದು ಆನಂದ. ಇಂತಹ ಜಲಪಾತಗಳಲ್ಲಿ ಒಂದು ತೀರ್ಥಹಳ್ಳಿ ತಾಲ್ಲೂಕಿನ ಅಚ್ಚಕನ್ಯೆ ಜಲಪಾತ.

ಪ್ರಥಮ ಬಾರಿಗೆ ಏಳು ಅಡಿ ಎತ್ತರದಿಂದ ಜಲಪಾತವಾಗಿ ಶರಾವತಿ ನದಿ ಧುಮುಕುತ್ತದೆ. ಇದೇ ಅಚ್ಚಕನ್ಯೆ ಜಲಪಾತ. ಶರಾವತಿ ಉದಯಿಸುವ ಅಂಬುತೀರ್ಥ ಅಚ್ಚಕನ್ನೆ ಜಲಪಾತದಿಂದ 05 ಕಿ.ಮೀ ದೂರದಲ್ಲಿದೆ.

ನೋಡಲು ನಯನ ಮನೋಹರವಾಗಿರುವ ಈ ಜಲಪಾತ, ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 82 ಕಿ.ಮೀ ಮತ್ತು ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಿಂದ 21 ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿಯಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಈ ಸ್ಥಳ ಸಿಗುತ್ತದೆ. ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗಿನ ಅವಧಿ ಜಲಪಾತವನ್ನು ನೋಡಲು ಸೂಕ್ತ ಸಮಯ.

ಹೆಚ್ಚಿನ ಮಾಹಿತಿಗಾಗಿ

Achakanya Falls, Shimoga – A Hidden Beauty

ಪರಾಮರ್ಶನ

https://kanaja.karnataka.gov.in

ಕೃಪೆ | dipr shimoga

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ಮೈಸೂರು ಕಾಗದ ಕಾರ್ಖಾನೆ ನಿಯಮಿತ (ಎಂ.ಪಿ.ಎಂ)

Published

on

ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್ ರವರು ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್ (ಎಮ್ ಪಿ ಎಮ್) ನ್ನು 1936 ರಲ್ಲಿ ಸ್ಥಾಪಿಸಿದರು. ಇದನ್ನು ಅಂದಿನ 1017ರ ಮೈಸೂರು ಕಂಪನಿಗಳ ಅಧಿನಿಯಮದ ನಿಯಮ 08ರ ಅಡಿಯಲ್ಲಿ 20 ಮೇ 1936 ರಂದು ರಿಜಿಸ್ಟಾರ್ ಮಾಡಲಾಯಿತು.

ಬಳಿಕ 1977ರಲ್ಲಿ ಸರ್ಕಾರಿ ಕಂಪನಿಯಾಗಿ ಬದಲಾಯಿತು. ಕಂಪನಿಯ ನೋಂದಾಯಿತ ಕಛೇರಿ ಬೆಂಗಳೂರಿನಲ್ಲಿದೆ ಮತ್ತು ಅದರ ಘಟಕ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿದೆ.

ಕರ್ನಾಟಕ ಸರ್ಕಾರ ಕಂಪನಿಯ 65% ಷೇರನ್ನು ಹೊಂದಿದೆ. ಐಡಿಬಿಐ ಮತ್ತು ಇತರೆ ಹಣಕಾಸು ಸಂಸ್ಥೆಗಳು 18% ಷೇರನ್ನು ಹೊಂದಿವೆ ಮತ್ತು 17%ರಷ್ಟು ಸಾರ್ವಜನಿಕರ ಷೇರುಗಳಿವೆ. 306 ಜನ ನೌಕರರು, 250 ಗುತ್ತಿಗೆದಾರರು ಸೇರಿದಂತೆ ಅನೇಕರು ಇತರೆ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 266 ಎಕರೆ ವ್ಯಾಪ್ತಿಯಲ್ಲಿ ಈ ಉದ್ಯಮ ನಡೆಯುತ್ತಿದೆ.

75 ಸಾವಿರ ಎಕರೆ ಪ್ರದೇಶದಲ್ಲಿ ಅಕೇಶಿಯ, ನೀಲಗಿರಿ ಸೇರಿದಂತೆ ಇತರೆ ಮೆದು ಮರಗಳನ್ನು ಬೆಳೆಯಲಾಗುತ್ತಿದೆ ಮತ್ತು ಅವುಗಳನ್ನು ಕಂಪನಿಗೆ ಕಚ್ಚಾವಸ್ತುವನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

ಬರವಣಿಗೆ ಮತ್ತು ಮುದ್ರಣಕ್ಕಾಗಿ ಕಾಗದ, ಡ್ರಾಯಿಂಗ್ ಹಾಳೆ ಸೇರಿದಂತೆ ಎಲ್ಲಾ ವಿಧದ ಕಾಗದಗಳನ್ನು, ಎಲ್ಲಾ ವಿಧದ ಗಾತ್ರಗಳಲ್ಲಿ ತಯಾರು ಮಾಡುತ್ತದೆ. ವಾರ್ಷಿಕ 88000 ಮೆಟ್ರಿಕ್ ಟನ್ ಕಾಗದಗಳನ್ನು ಉತ್ಪಾದನೆ ಮಾಡಲಾಗುತ್ತಿತ್ತು.

ಇದನ್ನೂ ಓದಿ |ನಮ್ಮ ಶಿವಮೊಗ್ಗ – ನಮ್ಮ ಹೆಮ್ಮೆ : ಕೊಡಚಾದ್ರಿ

ಲಾಭದಾಯಕವಾಗಿ ಕೆಲಸ ನಿರ್ವಹಿಸುತ್ತಿದ್ದ ಈ ಕಂಪನಿಯು ಹಲವಾರು ಕಾರಣಗಳಿಂದ ಬರು ಬರುತ್ತ ತನ್ನ ವ್ಯಾಪಾರ ವಹಿವಾಟುಗಳನ್ನು ಕಳೆದುಕೊಂಡು ಮುಚ್ಚುವ ಹಂತಕ್ಕೆ ತಲುಪಿ 2005ರಲ್ಲಿ ರಾಜ್ಯ ಸರ್ಕಾರ ಮುದ್ರಣ ಕಾಗದದ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

ಜಿಲ್ಲೆಯ ಕೈಗಾರಿಕಾ ನಕಾಶೆಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ ನಿಯಮಿತವು ಭದ್ರಾವತಿ ತಾಲ್ಲೂಕು ಕೇಂದ್ರದಿಂದ 03 ಕಿ.ಮೀ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 22 ಕಿ.ಮೀ ಅಂತರದಲ್ಲಿದೆ.

ಹೆಚ್ಚಿನ ಮಾಹಿತಿಗಾಗಿ

ಪರಾಮರ್ಶನ

https://mpm.karnataka.gov.in

ಕೃಪೆ : Dipr shimoga

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ನಮ್ಮ ಶಿವಮೊಗ್ಗ – ನಮ್ಮ ಹೆಮ್ಮೆ : ಕೊಡಚಾದ್ರಿ

Published

on

ಕೊಡಚಾದ್ರಿ ಬೆಟ್ಟ

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಂಡು ಬರುವ ಗಿರಿ ಶಿಖರಗಳು ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಇಂತಹ ರಮಣೀಯ ಸ್ಥಳಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಬೆಟ್ಟವು ಕೂಡ ಒಂದು. ಕೊಡಚಾದ್ರಿ ಬೆಟ್ಟ ಚಾರಣ ಪ್ರಿಯರಿಗೆ ಬಹು ಪರಿಚಿತ ಸ್ಥಳ. ಇಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದ ಬಗ್ಗೆ ಪ್ರತೀತಿ ಇದೆ.

ಇಲ್ಲಿರುವ ಸರ್ವಜ್ಞ ಪೀಠ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಪೀಠ ಎನ್ನಲಾಗುತ್ತದೆ. ಈ ಬೆಟ್ಟದಿಂದ ಸೂರ್ಯೋದಯ ನೋಡುವುದೇ ಒಂದು ಅದ್ಭುತ ದೃಶ್ಯ. ಇಲ್ಲಿನ ಚಿತ್ರ ಮೂಲವೆಂಬ ಬೆಟ್ಟ ಕೂಡ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇದು ಆಯುರ್ವೇದ ಗಿಡಮೂಲಿಕೆಗಳ ಆಗರ. ಇಲ್ಲಿ ಹಲವು ಗುಹೆಗಳಿವೆ. ಅಲ್ಲದೇ ಇಲ್ಲಿನ ರಾಮತೀರ್ಥ ಎಂಬ ಸ್ಥಳದಲ್ಲಿ ಹರಿಯುವ ನೀರಿನ ಮಧ್ಯೆ ಈಶ್ವರಲಿಂಗದ ರಚನೆಯನ್ನು ಕಾಣಬಹುದು.

ಕೊಡಚಾದ್ರಿಗೆ ಪುರಾತನ ಕಾಲದಿಂದಲೂ ಜನರು ಯಾತ್ರೆ ಹೋಗುತ್ತಿದ್ದರು. ಇಲ್ಲಿಗೆ ಹತ್ತಿರದ ಸ್ಥಳವಾದ ನಿಲಸಕಲ್ಲು ಎಂಬಲ್ಲಿ ನವ ಶಿಲಾಯುಗದ ಕಾಲದ ನಿಲುವುಗಲ್ಲುಗಳ ಸಾಲುಗಳನ್ನು ಗಮನಿಸಿದರೆ, ಈ ಸುತ್ತಲಿನ ಪ್ರದೇಶದಲ್ಲಿ ಕನಿಷ್ಟ ಮೂರು ಸಾವಿರ ವರ್ಷಗಳ ಹಿಂದೆ ಜನ ವಸತಿ ಇದ್ದಿರಬೇಕು ಎಂದೆನಿಸುತ್ತದೆ.

ಕೊಡಚಾದ್ರಿಯಲ್ಲಿ ಪುರಾತನ ಜನವಸತಿ ಇದ್ದ ಕುರುಹುಗಳು ಇನ್ನೂ ಪತ್ತೆಯಾಗಿಲ್ಲವಾದರೂ, ಕ್ರಿ.ಶ ಏಳನೆಯ ಶತಮಾನದಲ್ಲಿ ಶಂಕರಾಚಾರ್ಯರು ಕೊಡಚಾದ್ರಿಗೆ ಬೇಟಿ ಕೊಟ್ಟಿದ್ದು, ಇಲ್ಲಿದ್ದ ಮೂಲ ಮೂಕಾಂಬಿಕೆಯನ್ನು ಪರ್ವತದ ತಳದಲ್ಲಿರುವ ಕೊಲ್ಲೂರಿನಲ್ಲಿ ಪ್ರತಿಷ್ಟೆ ಮಾಡಿದರು ಎಂದು ಕೊಲ್ಲೂರಿನ ಸ್ಥಳಪುರಾಣ ಹೇಳುತ್ತದೆ. ಶಿಖರದ ಹತ್ತಿರವಿರುವ ಮೂಲ ಮೂಕಾಂಬಿಕೆ ದೇವಾಲಯವೂ ಸಹ ಪುರಾತನವಾದುದ್ದು. ಈ ದೇವಾಲಯದ ಬಳಿ ಸುಮಾರು 40 ಅಡಿ ಎತ್ತರದ ಕಬ್ಬಿಣದ ಕಂಬವಿದ್ದು, ಇದನ್ನು ಮೂಕಾಸುರನನ್ನು ವಧಿಸಲು ದೇವಿ ಉಪಯೋಗಿಸಿದ ತ್ರಿಶೂಲ ಎಂದು ಸ್ಥಳೀಯರು ಹೇಳುತ್ತಾರೆ.

ಕೊಡಚಾದ್ರಿಯ ಸುತ್ತ ಮುತ್ತ ಇರುವುದು ಸಹ್ಯಾದ್ರಿಯ ನಿತ್ಯ ಹರಿದ್ವರ್ಣ ಕಾಡು. ಭಾರತದ ಅತಿ ಹೆಚ್ಚು ಮಳೆ ಬೀಳುವ ಈ ಪರ್ವತ ಶ್ರೇಣಿಯಲ್ಲಿ ಬೆಳೆದಿರುವ ಈ ಕಾಡುಗಳು ತನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿದೆ. ಕೊಡಚಾದ್ರಿಯ ತುದಿಯಲ್ಲಿ ನಿಂತು ನೋಡಿದರೆ ನಾಲ್ಕೂ ದಿಕ್ಕಿನಲ್ಲಿ ನಿಬಿಡಾರಣ್ಯವು ಅಲೆ ಅಲೆಯಂತೆ ಹರಡಿರುವ ದೃಶ್ಯ ಕಾಣುತ್ತದೆ.

ಇದೇ ನಾಡಿನಲ್ಲಿ ಹುಟ್ಟಿ ಬೆಳೆದ ರಾಷ್ಟ್ರಕವಿ ಕುವೆಂಪುರವರ ಕವಿತೆಯ ಒಂದು ಸಾಲಾಗಿರುವ “ಹಸುರಿತ್ತಲ್, ಹಸುರತ್ತಲ್, ಹಸುರೆತ್ತಲ್ ಕಡಲಿನಲಿ” ಎನ್ನುವ ಸಾಲು ನೆನಪಾಗುವಂತಹ ತಾಣ ಕೊಡಚಾದ್ರಿ. ಅಲ್ಲದೇ ಇಲ್ಲಿಯ ಸೂರ್ಯಾಸ್ತ ಅಪರೂಪದ ದೃಶ್ಯವಾಗಿದ್ದು, ಈ ರಮ್ಯ ಮನೋಹರ ದೃಶ್ಯವನ್ನು ಆಸ್ವಾದಿಸಲು ದೇಶದ ಎಲ್ಲಾ ಕಡೆಗಳಿಂದಲೂ ಜನರು ಬರುತ್ತಾರೆ.

ಇದು ಹೊಸನಗರ ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿ.ಮೀ ಅಂತರದಲ್ಲಿದೆ.

ಹೆಚ್ಚಿನ ಮಾಹಿತಿಗಾಗಿ

ಪರಾಮರ್ಶನ

https://kn.wikipedia.org

ಕೃಪೆ : dipr shimoga

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending