Connect with us

ಭಾವ ಭೈರಾಗಿ

ಹುಲಿಯ ಆತ್ಮಕಥೆ..!

Published

on

ಚಿತ್ರ : ಮನೋಜ್ ಬೂಕನಕೆರೆ
  • ಮಜ್ ಖುಷ್ವಂತ್ ಕೋಳಿಬೈಲು

ನಮ್ಗೆ ಮನುಷ್ಯರ ರೀತಿ ಭಾಷಣ ಮಾಡೋಕೆ ಬರಲ್ಲ , ಸಾಹಿತ್ಯ ಬರಿಯೋಕು ಬರಲ್ಲ.. ಅದ್ರೆ ನೀವುಗಳು ದಿನ ನಿತ್ಯ ನಮ್ಮ ಬಗ್ಗೆ ಚರ್ಚೆ ಮಾಡ್ತಾ ಇದ್ದಾಗ ನಾವು ತೆಪ್ಪಗಿದ್ರೆ ತಪ್ಪಾಗುತ್ತೆ. ಪ್ರತಿ ಘಟನೆಗೂ ಅನೇಕ ಆಯಾಮಗಳಿರುತ್ತೆ ಸ್ವಾಮೀ .. ಎಲ್ಲಾ ಕೋನಗಳಿಂದ ನೋಡೋದು ಬೇಡ್ವೇ??
ಹುಲಿಗಳ ಬಗ್ಗೆ ಇಷ್ಟೊಂದು ಚರ್ಚೆ – ಹೋರಾಟಗಳು ನಡೀತ್ತಿದ್ದಾಗ ಹುಲಿ ಸಮಾಜದವ್ರು ಬಾಯಲ್ಲಿ ಏನಿಟ್ಕೊಂಡು ಕೂತಿದ್ರು ಅಂತ ನಾಳೆ ನಮ್ಮನ್ನ ಯಾರೂ ಪ್ರಶ್ನೆ ಮಾಡಬಾರದು ನೋಡಿ..

ನಮ್ಮ‌ ಸಮಾಜದವರು ಮತ್ತೆ ನಿಮ್ಮ ಮನುಷ್ಯ ಸಮಾಜದವರು ಇದೇ ಭೂಮಿ ಮೇಲೆ ಲಕ್ಷಾಂತರ ವರ್ಷಗಳಿಂದ ಇದ್ದೀವಿ. ಅದೂ ಒಂದು ಕಾಲ ಇತ್ತು.. ಸುಮಾರು ನಾಲ್ಕು ಲಕ್ಷ ವರ್ಷಗಳ ಹಿಂದೆ, ಭೂಮಿ ಮೇಲೆಲ್ಲ ನಮ್ದೇ ಹವಾ ಇತ್ತು . ಅಹಾರ ಸರಪಳಿಯ ತುತ್ತ ತುದಿಯಲ್ಲಿ ನಾವುಗಳಿದ್ರೆ ನೀವುಗಳು ನಡುವಿನಲ್ಲಿ ಬರ್ತಾ ಇದ್ರಿ. ಈವಾಗ ನೀವು ಎಲ್ಲೋ ತಲುಪಿದ್ದೀರಾ ಆದರೆ ಆ ದಿನಗಳಲ್ಲಿ ನೀವು ಕೂಡ ನಮ್ಮ ತರಹ ಕಾಡು ಮೇಡು ಅಲೀತಾ ಆಹಾರ ಸಂಗ್ರಹ ಮಾಡ್ತಿದ್ರಿ.

ನಮ್ಮ ಸುಳಿವು ಸಿಕ್ರೆ ಓಡೋಗಿ ಮರ ಹತ್ತೋದಾ ಅಥವಾ ಗುಹೆ ಸೇರ್ಕೋತಿದ್ರಿ. ಯಾವಾಗ ಮೂರು ಲಕ್ಷ ವರ್ಷಗಳ ಹಿಂದೆ ಬೆಂಕಿನ ಬಳಸೋದನ್ನು ಕಂಡುಕೊಂಡ್ರಿ ಅಮೇಲೆ ನಿಮ್ಮನ್ನ ಹಿಡಿಯೋರೆ ಇಲ್ಲ. ಆಹಾರ ಸರಪಳಿಯಲ್ಲಿ ಮೇಲಕ್ಕೆ ಹೊರಟೋದ್ರಿ.

ನಿಮ್ಮ ಸಮಾಜದವರ ಸಂಖ್ಯೆ ಬೆಳೀತಾನೇ ಹೋಯ್ತ ಮತ್ತೆ ಅನೇಕ ಪ್ರಾಣಿಗಳ ಸಂತತಿನೇ ಖಾಲಿಯಾಯ್ತು. ಕಾಡು ಮೇಡು ಅಲೆಯೋದು ಬಿಟ್ಟು ಹತ್ತಿಪತ್ತು ಸಾವಿರ ವರ್ಷಗಳ ಹಿಂದೆ ಒಂದು ಕಡೆ ನೆಲೆ ನಿಂತು ವ್ಯವಸಾಯ ಬೇರೆ ಕಲ್ತು , ಪ್ರಾಣಿಗಳನ್ನ ಪಳಗಿಸಿದ್ರಿ. ನಮ್ಮ ಸಮಾಜದವರನ್ನೂ ನಿಮ್ಮ ಸರ್ಕಸ್ಗಳಲ್ಲಿ ನೀವುಗಳು ಕುಣಿಸೋದಿಲ್ವಾ??

ನಿಜ ಹೇಳ್ಬೇಕು ಅಂದ್ರೆ ನಿಮ್ಮನ್ನು ಕಂಡ್ರೆ ನಮಗೆ ಬಹಳ ಭಯ ಸ್ವಾಮಿ. ಟಾರ್ಚ್ ಬೆಳಕು ಕಣ್ಣಿಗೆ ಬಿದ್ರೆ ತಲೆ ತಿರ್ಗುತ್ತೆ. ವಾಹನಗಳ ಶಬ್ದದಿಂದ ತಲೆ ನೋವು ಬರೋ ನಮ್ಮವರು ಪಟಾಕಿ ಶಬ್ದ ಕೇಳ್ದಾಗ ನಿಜಕ್ಕೂ ಬೆಚ್ಚಿ ಬೀಳ್ತೀವಿ. ನೀವು ನಿಮ್ಮ ಸಮಾಜದ ಮುಖಂಡರನ್ನ ಹುಲಿ, ರಾಜಾಹುಲಿ ಎಂದೆಲ್ಲ ಕರೆದಾಗ ನಮ್ಗೆ ನಗು ಬರುತ್ತೆ.‌ ನೋಡಕ್ಕೆ ನಾವುಗಳು ಭೀಕರವಾಗಿ ಕಂಡ್ರೂ ಮನುಷ್ಯರ ಕಂಡ ತಕ್ಷಣ ನಮ್ಮ ಸಮಾಜದವರ ಮೀಟರ್ ಆಫ್ ಆಗೋಗುತ್ತೆ ಸ್ವಾಮಿ.

ನಮ್ಮವರು ಗಟ್ಟಿ ಮುಟ್ಟಾಗಿದ್ದಾರೆ ಮತ್ತು ನಮ್ಮ ಘರ್ಜನೆಗೆ ಕಾಡು ನಡುಗುತ್ತೆ. ನಮ್ಮವರು ಪಂಜಲ್ಲಿ ಎತ್ತಿ ಒಂದು ಬಿಟ್ರೆ ನಾನೂರು ಕೆಜಿ ತೂಗುವ ಕಾಡೆಮ್ಮೆಗಳೇ ನೆಗ್ದು ಬೀಳುತ್ತೆ.ಆದ್ರೆ ತಾಯಾಣೆಗೂ ಹೇಳ್ತೀನಿ , ಮನುಷ್ಯ ಸಮಾಜದವರನ್ನ ನಾವು ತಿನ್ನಕ್ಕೆ ಇಷ್ಟಪಡಲ್ಲ. ನಿಮ್ಮಿಂದ ದೂರ ಇರಕ್ಕೆ ಇಷ್ಟ ಪಡ್ತೀವಿ‌. ಅಪ್ಪಿ ತಪ್ಪಿ ಕಾಡಲ್ಲಿ ನೀವು ಕಣ್ಣಿಗೆ ಬಿದ್ರೆ ಬಾಲ ಮುದುರಿಕೊಂಡು ನಾವು ಓಡೋಗ್ತೀವಿ.

ಇದನ್ನೂ ಓದಿ |ಹೆಣ್ಣು ಮಕ್ಕಳಿಗೆ ಕಿರುಕುಳ ಕೊಡುವವರ ವಿರುದ್ಧ ದೂರು ನೀಡಲು ಈ ನಂಬರ್ ಗೆ ಕಾಲ್ ಮಾಡಿ..!

ಈ ದಿನ ನಿಮ್ಮ ಸಮಾಜ ಎಷ್ಟು ದೊಡ್ಡದಾಗಿ ಬೆಳೆದಿದೆ ನೋಡಿ. ಭಾರತದಲ್ಲೆ ನೀವು ನೂರಾಮೋವತ್ತು ಕೋಟಿ ಮೇಲಿದ್ದೀರಿ. ನೀವು ಬೆಳೀತಾ ಬೆಳೀತಾ ಭೂಮಿ ಮೇಲಿದ್ದ ಅನೇಕ ಪ್ರಾಣಿಗಳನ್ನ ಹೆಂಗೆ ತುಳಿದ್ರಿ ಅಂದ್ರೆ ಕೆಲವು ಪ್ರಾಣಿಗಳ ಸಮಾಜದಲ್ಲಿ ಅವರ ಹೆಸ್ರು ಹೇಳಕ್ಕೂ ನೀವು ಯಾರನ್ನೂ ಉಳ್ಸಿಲ್ಲ. 2006ರಲ್ಲಿ ನಮ್ಮ ಜೀವನೂ ಬಾಯಿಗೆ ಬಂದಿತ್ತು. ನಮ್ಮವರು ಕೇವಲ 1411 ಹುಲಿಗಳು ಉಳ್ಕೊಂಡಿದ್ರು.

ಚನ್ನಾಗಿ ಪೋಟೋ , ವಿಡಿಯೋ ಮಾಡ್ಕೊಂಡು ಇಟ್ಕೊಳಿ.. ಮುಂದಿನ ದಿನ ಇವುಗಳ ಸಮಾಜದವರು ಇದ್ರು ಅಂತ ಸಾಕ್ಷಿ ಇರುತ್ತೆ ಅಂತ ನಿಮ್ಮವರು ಮಾತಾಡ್ಕೊಂಡಿದ್ದನ್ನ ಹಸು ಹಿಡಿಯಕ್ಕೆ ಊರು ಕಡೆ ಬಂದಿದ್ದ ನಮ್ಮವರ ಕಿವಿಗೂ ಬಿತ್ತು. ನಮ್ಮ ಸಂಖೆ ಕಮ್ಮಿಯಾಗ್ತಿರೋ ವಿಷ್ಯ ನಮ್ಮ ಸಮಾಜದ ಮೀಟಿಂಗುಗಳಲ್ಲಿ ಚರ್ಚೆಗೆ ಬರೋದು.

ನಮ್ಮ ಉಗರು , ಹಲ್ಲು ಮತ್ತು ಚರ್ಮಕ್ಕಾಗಿ ಈ ಪಾಟಿ ಹಿಡೀತಾ ಇದ್ರೆ ನಾವು ಉಳಿತೀವಾ ಇಲ್ವಾ ಎಂದು ನಮ್ಗೆ ಅನುಮಾನ ಇತ್ತು.ನಮ್ಮ ಮಾಂಸ ತಿಂದ್ರೆ ನಿಮ್ಮಗಳ ಲೈಂಗಿಕ ಶಕ್ತಿ ಹೆಚ್ಚಾಗಿ ರೊಚ್ಚಿಗೇಳ್ತೀರಿ ಅಂತಾನು ಗುಸು ಗುಸು ಮಾತುಗಳಿದ್ವು. ಅಲ್ಲ ಸ್ವಾಮಿ ಈವಾಗ ಇರೊ ನಿಮ್ಮಗಳ ಜನಸಂಖ್ಯೆ ಸಾಲ್ದೇ..??

ಪ್ರಪಂಚದಲ್ಲಿರೂ ಹುಲಿಗಳಲ್ಲಿ 80% ಭಾರತದಲ್ಲೆ ಇರೋದು.ನಾವು ಇಲ್ಲಿ ರಾಷ್ಟ್ರೀಯ ಪ್ರಾಣಿ ಬೇರೆ. ಹಾಗಾಗಿ ನಿಮ್ಮಲ್ಲಿ ಸ್ವಲ್ಪ ಜನ ದೊಡ್ಡ ಮನಸ್ಸು ಮಾಡಿ ಹುಲಿ ಸಮಾಜದವರೂ ಉಳಿಬೇಕು ಅಂತ ಯೋಜನೆಗಳನ್ನು ಮಾಡಿದ್ರು. 2018ರಲ್ಲಿ ನಮ್ಮ ಜನಸಂಖ್ಯೆ ಜಾಸ್ತಿಯಾಗಿ ಈಗ ನಮ್ಮ ಸಮಾಜದಲ್ಲಿ 2967 ಸದಸ್ಯರಿದ್ದಾರೆ. ಧನ್ಯವಾದಗಳನ್ನ ಹೇಳೋಣ ಅಂದ್ರೂ ಎನೂಂತ ಹೇಳ್ಲಿ.. ಚಿವುಟೋರು ನೀವೇ.. ತೊಟ್ಟಿಲು ತೂಗೋರು ನೀವೆ.

ಇಂದು ಭಾರತದ ಐವತ್ತು ಕಡೆಗಳಲ್ಲಿ ನಮ್ಮ ಸಮಾಜದವರು ಚನ್ನಾಗಿ ಬಾಳಿ ಬದುಕ್ಲಿ ಅಂತ project Tiger ಹೆಸರಲ್ಲಿ ವ್ಯವಸ್ಥೆಗಳು ಆಗಿವೆ. ಜಿಮ್ ಕಾರ್ಬೆಟ್ ಪಾರ್ಕ್ ಬಿಟ್ರೆ ಹುಲಿಗಳು ಹೆಚ್ಚಾಗಿರೋದು ನಮ್ಮ ನಾಗರಹೊಳೆ ಏರಿಯಾದಲ್ಲೆ. ನಾವು ಕಳೆದ ಹದಿನೈದು ವರ್ಷಗಳಲ್ಲಿ ಚನ್ನಾಗಿ ಮಕ್ಳು ಮರಿ ಮಾಡ್ಕೊಂಡು ಸಂಖ್ಯೆ ಜಾಸ್ತಿಮಾಡ್ಕೊಂಡ್ವಿ. ನಾಗರಹೊಳೆ ಸುಮಾರು 650 sqkm ಪ್ರದೇಶದಲ್ಲಿ ಮೊದಲೆಲ್ಲ ಬಹಳ ಚನ್ನಾಗೇ ಇತ್ತು. ನಮ್ಗೆ ಚನ್ನಾಗಿ ಬದುಕಕ್ಕೆ , ಬೇಟೆಯಾಡಕ್ಕೆ ಎಲ್ಲಾ ಅನುಕೂಲಗಳೂ ಇತ್ತು..

ನೋಡಿ ಸ್ವಾಮಿ, ನಮ್ಮ ಸಮಾಜದವರಿಗೆ ನಿಮ್ಮ ತರಹ ಮೋವತ್ತು – ನಲವತ್ತು ಸೈಟಲ್ಲಿ ಮನೆ ಕಟ್ಟಿ , ಬಡಾವಣೆಗಳಲ್ಲಿ ಸಂಸಾರ ಮಾಡಕ್ಕೆ ಬರ್ತಿದ್ರೆ ನಾವ್ಯಾಕೆ ಹಿಂಗೆ ಇರ್ತಾಇದ್ವಿ. ನಮ್ಗೆ ವಿಶಾಲವಾದ ಕಾಡು ಬೇಕು ಸ್ವಾಮಿ. ಒಂದೊಂದು ಹುಲಿಗೆ ಓಡಾಡಕ್ಕೆ , ಬೇಟೆಯಾಡಕ್ಕೆ ಹತ್ತಿಪ್ಪತ್ತು sqkm ಕಾಡು ಬೇಕು.ನಮ್ಮ ಏರಿಯಾದೊಳಗೆ ನಮ್ಮ ಅಣ್ಣತಮ್ಮಂದಿರನ್ನು ಬಿಟ್ಕೊಳ್ಳಲ್ಲ.

ಒಮ್ಮೆ ಉಚ್ಚೆ ಹೊಯ್ದು ನಮ್ಮ ಇಲಾಖೆಗಳ ಗಡಿ ನಿರ್ಧಾರ ಮಾಡ್ಕೊಂಡ್ವಿ ಅಂದ್ರೆ ಅದೇ ನಮ್ಮ ಸರ್ವಸ್ವ, ಅದರೊಳಗೆ ಯಾರು ಬಂದ್ರೂ ನಾವು ಗುರ್ ಅನ್ನದೇ ಇರಲ್ಲ. ಆದರೆ ನಮ್ಗೆ ನಿಮ್ಮ ಸಮಾಜದವರ ತರಹ ದುರಾಸೆ ಇಲ್ಲ. ಇರೋ – ಬರೋ ಊರಲ್ಲಿ , ದೇಶದಲ್ಲೆಲ್ಲ ಬೇನಾಮಿ ಹೆಸರಲ್ಲೆಲ್ಲ ಆಸ್ತಿ ಮಾಡಲ್ಲ.

ಕಳೆದ ಕೆಲವು ವರ್ಷಗಳಲ್ಲಿ ನಾಗರಹೊಳೆ ಪ್ರದೇಶದಲ್ಲಿ ನಮ್ಮ ಸಮಾಜದವರ ಸಂಖ್ಯೆ ಜಾಸ್ತಿಯಾಗ್ತಾ ಹೋಗಿ ಒಂದೊಂದು ಹುಲಿಗೂ ಓಡಾಡಕ್ಕೆ ಇರೋ ಜಾಗ ಕಮ್ಮಿಯಾಗ್ತಾ ಹೋಯ್ತು. ಕೆಲವು ಹುಲಿಗಳಂತೂ ಮೂರು ನಾಲ್ಕು sqkm ಏರಿಯಾ ಇರೋ ಪುಟ್ಟ ಪ್ರದೇಶಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಬಂತು. ಥೂ..ಥೂ.. ನಮ್ಮ ಕಾಲದಲ್ಲೆಲ್ಲ ಹಿಂಗಿರ್ಲಿಲ್ಲಪ್ಪ!!
ಅಷ್ಟು ಚಿಕ್ಕ ಜಾಗದಲ್ಲಿ ಬೇಟೆನೂ ಆಗಲ್ಲ, ನೆಮ್ಮದಿಯಾಗಿ ಬದುಕಕ್ಕೂ ಆಗಲ್ಲ‌.

ಪಕ್ಕದ ಏರಿಯಕ್ಕೆ ನೀರು ಕುಡಿಯಕ್ಕೆ ಹೋದ್ರೂ ಅಲ್ಲಿ ನಮ್ಮ ಸಮಾಜದವರೇ ನಮ್ಗೆ ” ಗುರ್” ಅಂತಿದ್ರು. ಇನ್ನು ನಿಮ್ಮ ಸಮಾಜದವ್ರು ಕೂಡ ಕಾಡಲ್ಲಿ ಕಣ್ಣಿಗೆ ಬಿದ್ರೆ ಗುಂಡು ಹಾರ್ಸೋದು, ನಾವು ಅರ್ಧ ತಿಂದು ಬಿಟ್ಟಿದ್ದ ಊಟಕ್ಕೆ ವಿಷ ಹಾಕೋದು ಮಾಡ್ತಾ ಇದ್ರಿ.‌ ನಮ್ಮ ಮೂಗು ನಮ್ಮ ಕಣ್ಣಷ್ಟು ಸೂಕ್ಷ್ಮ ಇಲ್ಲಾ ಸ್ವಾಮಿ. ನಮ್ಮ ಸಮಾಜದಲ್ಲಿ ಎಷ್ಟೊ ಜನ ನೀವು ಬೆರಸಿದ್ದ ಪಾಲಿಡಾಲ್ ಕುಡಿದು ವಿಲ ವಿಲ ಒದ್ದಾಡಿ ಪ್ರಾಣ ಬಿಟ್ರು.

ನಮ್ಮ ಸಮಾಜದ ವಯಸಾಗಿರೋರು , ಹಲ್ಲು ಬಿದ್ದೋಗಿರೋರು ಕಾಡಲ್ಲಿ ಬೇಟೆ ಮಾಡೋಕೆ ಆಗ್ದೆ ಊರು ಕಡೆ ಬಂದು ನಿಮ್ಮ ದನಗಳಿಗೆ ಬಾಯಿ ಹಾಕಿದ್ವು. ಹಸಿವು ಸ್ವಾಮಿ, ಹೊಟ್ಟೆಪಾಡು ಅದು ಬಿಟ್ರೆ ನಾವು ಸಾಯಿಸಿರೋ ದನಗಳ ಮೇಲೆ ನಮ್ಗೇನು ದ್ವೇಷವಿಲ್ಲ. ನಮ್ಮ‌ ಸಮಾಜದವ್ರು ನೋಡಕ್ಕೆ ಕ್ರೂರಿಗಳ ತರಹ ಇರ್ಬೋದು ಆದ್ರೆ ನಾವು ಯಾವತ್ತೂ ದ್ವೇಷಕ್ಕೆ , ಮತ್ಸರಕ್ಕೆ ಮತ್ತು ಆಸ್ತಿಗಾಗಿ ಕೊಲೆಗಳನ್ನು ಮಾಡಿಲ್ಲ…

ನಿಮ್ಮ ಸಮಾಜದಲ್ಲಿ ಮಕ್ಕಳನ್ನು ಚನ್ನಾಗಿ ಸಾಕಿ ಮದ್ವೆ ಮಾಡೋ ತನಕ ಮನೇಲಿ ಇಟ್ಕೋತಿರಿ ಅದ್ರೆ ನಮ್ಮಲ್ಲಿ ಅಬ್ಬಬ್ಬಾ ಅಂದ್ರೆ ಎರಡು ವರ್ಷ ಅಷ್ಟೆ. ನಮ್ಮ ಹೆಣ್ಮಕ್ಕಳು ಮರಿಗಳನ್ನು ಅವರ ಸ್ವಂತ ಕಾಲ ಮೇಲೆ ನಿಲ್ಲಲಿ ಅಂತ ತಮ್ಮಿಂದ ದೂರ ಓಡಿಸ್ತಾರೆ.ಅವರಿನ್ನೂ ಬೇಟೆಲಿ ಪಳಗಿರಲ್ಲ ಜೊತೆಗೆ ದೊಡ್ಡ ಹುಲಿಗಳ ಜೊತೆ ಹೋರಾಡಿ ತಮ್ಮ ಇಲಾಖೆ ಭದ್ರಪಡಿಸಿಕೊಳ್ಳೊ ಶಕ್ತಿಯಿರಲ್ಲ.

ಹಾಗಾಗಿ ಅವುಗಳೂ ಊರ ಕಡೆ ಬಂದು ದನ ಗಿನ ಹಿಡಿದ್ರೂ ಹಿಡಿತವೆ. ಸ್ವಲ್ಪ ಗಟ್ಟಿಮುಟ್ಟಾದ ತಕ್ಷಣ ಕಾಡೊಳಗೆ ತಮ್ಮ ಜಾಗ ಮಾಡಿಕೊಳ್ತವೆ. ಸ್ವಾಮಿ ದನ ಹಿಡಿಯೋ ಎಲ್ಲಾ ಹುಲಿಗಳು ವಯಸ್ಸಾದವಲ್ಲ ಮತ್ತು ದನ ಹಿಡಿಯೋ ಹುಲಿಗಳೆಲ್ಲ ನರಭಕ್ಷಕರಲ್ಲ. ನಮ್ಮ ಸಮಾಜ ಯುವಮೋರ್ಚಾದವರೂ ಈ ಕೆಲಸ ಮಾಡ್ತಾರೆ. ಜೋಪಾನ ಸ್ವಾಮಿ ಅವರೇ ನಮ್ಮ ಸಮಾಜದ ಭವಿಷ್ಯ‌. ನಾವು ದನ ಹಿಡಿದ್ರೆ ನಿಮಗೆ ಸಿಕೋ ಪರಿಹಾರ ಬಹಳ ಕಮ್ಮಿ ಅಂತ ಗೊತ್ತಿದೆ ಸ್ವಾಮಿ ಆದ್ರೆ ನಮ್ಮ ಮಾತು ಯಾರು ಕೇಳ್ತಾರೆ.. ನಮ್ಮತ್ರ ಓಟೂ ಇಲ್ಲ ನೋಟೂ ಇಲ್ಲ.

ನಿಮ್ಮಷ್ಟು ಕಾನೂನಿನ ಜ್ಞಾನ ನಮಗಿಲ್ಲ ಅದರೆ ನಮ್ಮ ಹಿರಿಯರು ಹೇಳ್ತಾ ಇದ್ದ ಮಾತು ನಮಗಿನ್ನೂ ನೆನಪಿದೆ.‌ ಯಾವುದೇ ಕಾರಣಕ್ಕೂ ಮನುಷ್ಯನ ಮುಟ್ಟಿದ್ರೆ ನಮ್ಮ ಅಂತ್ಯ ಖಚಿತ ಅಂತ ಯಾವತ್ತೂ ಹೇಳ್ತಿದ್ರೂ. ಮನುಷ್ಯ ಸಮಾಜದವರು ನರಹಂತಕರನ್ನ ಹುಡುಕಿಕೊಂಡು ಕಾಡೊಳಗೆ ಬರ್ತಾರೆ. ನರಹಂತಕರ ಜೊತೆ ನಮ್ಮ ಸಾಮಾಜದ ಬೇರೆಯವರಿಗೂ ತೊಂದರೆಯಾಗುತ್ತೆ ಅಂತ ಎಚ್ಚರಿಸ್ತಿದ್ರು. ನರಹಂತಕರೆಲ್ಲ ನರಭಕ್ಷಕರೂ ಅಗಿರಲ್ಲ.

ಒಮ್ಮೊಮ್ಮೆ ಕಾಡಲ್ಲಿ ನಿಮ್ಮ ಸಮಾಜದವರು ಗೊತ್ತಿಲ್ಲದೆ ನಮ್ಮ ತುಂಬಾ ಹತ್ರಕ್ಕೆ ಬಂದಾಗ ನಾವು ಭಯ ಮತ್ತು ಆತಂಕದಲ್ಲಿ ಪಂಜ ಬೀಸಿ ಬಿಡ್ತೀವಿ. ಆಕಸ್ಮಿಕವಾಗಿ ಆಗೋ ಈ ಘಟನೆಗಳಲ್ಲಿ ನಿಮ್ಮ ಸಮಾಜದವರನ್ನು ಕೊಲ್ಲಬೇಕು ಅಥವಾ ತಿನ್ನಬೇಕು ಎಂಬ ಅಲೋಚನಗಳೇ ಇರಲ್ಲ. ನಮಗೂ ಈ ಜಟಾಪಟಿಗಳು ಇಷ್ಟವಿಲ್ಲ ಯಾಕೆಂದರೆ ಮುಳ್ಳು ಸೀರೆ ಮೇಲೆ ಬಿದ್ದರೂ ಸೀರೆ ಮುಳ್ಳಿನ ಮೇಲೆ ಬಿದ್ದರೂ ಹರಿಯೋದು ಸೀರೇನೆ…

ನಾಗರಹೊಳೆ ಸುತ್ತಮುತ್ತ ಇರೋ ಹಳ್ಳಿಗಳಲ್ಲಿ ನಮ್ಮ ಒಡಾಟ ಮುಂದಿನ ದಿನಗಳಲ್ಲಿ ಕಮ್ಮಿಯಾಗಲ್ಲ ಸ್ವಾಮಿ , ನಮ್ಮ ಸಂಖ್ಯೆ ಈ ಪ್ರದೇಶದಲ್ಲಿ ಗಣನೀಯವಾಗಿ ಜಾಸ್ತಿಯಾಗಿದೆ. ಎರಡೂ ಸಮಾಜದವರು ಕೂತು ಮಾತಾಡ್ಕೊಂಡು ವಾಸ್ತವಾಂಶಗಳನ್ನು ಅರ್ಥಮಾಡಿಕೊಳ್ಳಬೇಕು.. ನೋಡಿ ಸ್ವಾಮಿ

1. ನಿಮ್ಮ‌ಸಮಾಜದವರು ಕಾಡೊಳಗೆ ಬಂದು ನಮ್ಮ ಅಹಾರವನ್ನು ಬೇಟೆಯಾಡೋದು ಬಿಟ್ಟುಬಿಡಿ. ನಾವಂತೂ ಅದನ್ನೆ ನಂಬ್ಕೊಂಡಿದ್ದೀವಿ. ಇನ್ನು ನಾಗರಹೊಳೆ ಪಕ್ಕ ಉಳಿದಿರೋ ಗೋಮಾಳ , ದೇವರಕಾಡುನ್ನು ಅದರ ಪಾಡಿಗೆ ಬಿಟ್ಟುಬಿಡಿ.

2. ನಮ್ಗೇನು ನಾಗರಹೊಳೆನೇ ಬೇಕಂತಿಲ್ಲ. ಭಾರತದಲ್ಲಿ ಐವತ್ತು ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿವೆ. ಹಲವಾರು ಕಡೆ ನಮ್ಮಗಳಲ್ಕಿ ಸಮಾಜದವರ ಸಂಖ್ಯೆ ಕಡಿಮೆಯಿದೆ. ಅಂತ ಜಾಗದಲ್ಲಿ ನಮ್ಮನ್ನು ಕರ್ಕೊಂಡೋಗಿ ಬಿಟ್ರೆ ಎಲ್ಲರಿಗೂ ಒಳ್ಳೆದು. ಅಲ್ಲಿನೂ ನಮ್ಮ ಸಂತತಿ ಜಾಸ್ತಿ ಮಾಡ್ಕೊತೀವಿ.ಇಲ್ಲಿ ನಿಮ್ಮ ತೋಟದೊಳಗೆ ನಾವು ಓಡಾಡಿ ನಿಮಗೆ ತೊಂದರೆಯಾಗೋದೂ ತಪ್ಪುತ್ತೆ.

3. ನಮ್ಮ ಸಮಾಜದ ಇತಿಹಾಸದಲ್ಲಿ ನಮ್ಮ ಹಿರಿಯರು ವಯಸ್ಸಾದ ಕಾಲದಲ್ಲಿ , ಕಂಗಾಲಾದ ಕಾಲದಲ್ಲಿ ನರಭಕ್ಷಕರಾದ ಅನೇಕ ಉದಾಹರಣೆಗಳಿವೆ. ಆಂತವರೇನಾದ್ರು ನಿಮ್ಮ ತಂಟೆಗೆ ಬಂದ್ರೆ ನೀವು ಮಾಡೋದು ಮಾಡಿ‌. ಚನ್ನಾಗಿ ಬದುಕಿ ಬಾಳಿ ಮಕ್ಕಳು ಮರಿ ಮಾಡಿ ಈಗ ಮುದಿಯಾಗಿ ಜೀವನದ ಮುಸ್ಸಂಜೆಯಲ್ಲಿ ಹುಲಿಗಳವು. ಕಾಡು ಹೋಗು ಅನ್ನುವ ಮತ್ತು ಊರು ಬನ್ನಿ ಎನ್ನುವ ಕಾಲಘಟ್ಟದಲ್ಲಿರುವ ನರಭಕ್ಷಕ ಹುಲಿಗಳನ್ನು ಹಿಂದಿದಲೂ ಮನುಷ್ಯ ಮುಗಿಸುತ್ತಲೆ ಬಂದಿದ್ದಾನೆ. ಆದರೆ ನಮ್ಮ ಸಮಾಜದ ಹೆಚ್ಚಿನವರು ನಿಮ್ಮ ತಂಟೆ ತಕರಾರಿಗೆ ಬಂದೂ ಇಲ್ಲ ಬರುವುದೂ ಇಲ್ಲ…
ಮನುಷ್ಯ ಅಂದ್ರೆ ತಮಾಷೆನಾ!!

-ಇಂತಿ ನಿಮ್ಮ ಪ್ರೀತಿಯ
ಹುಲಿಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ

ಕವಿತೆ | ಇಂಥಾ ದೇಶ ನಮ್ದು

Published

on

ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್
  • ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್

ನೀತಿ ಕೆಟ್ಟು ಮಾನ ಬಿಟ್ಟು
ನೋಟ ನೋಡಿ ವೋಟ ಕೊಟ್ಟು
ಹೋರಾಟ ಮಾಡೋ ದೇಶ ನಮ್ದು

ಜನಾವ ಸೇರ್ಸಿ ಸುಳ್ಳಾ ಹೇಳಿ
ಬೊಬ್ಬೆ ಹೊಡ್ದು ಜಾತಿ ಬೀತಿ ತಂದು
ತಮಾಷೆ ನೋಡೊ ದೇಶ ನಮ್ದು

ಬರಿ ಕಾರು ಬಾರು ಕೇಳೊರಿಲ್ಲ ಜನಗಳ ಗೋಳು
ಮಂತ್ರಿಗಳಿಗೆಲ್ಲ ಜನತೆಗಿಲ್ಲ ಚೂರುಪಾರು
ಸಿಕ್ಕಾಪಟ್ಟೆ ಪ್ರಚಾರ ಗೀಳು
ನೋಡ್ಕೊಂಡಿರೊ ದೇಶ ನಮ್ದು

ರೈತರ ಗೋಳು ಕೇಳೋರು ಯಾರು
ಬರಿ ಅಶ್ವಾಸನೆ ಕೋಡೊ ಶಾಸಕರು
ಸಾಲವ ಮಾಡಿ ಸಾವಿಗೆ ಶರಣಾಗ್ತಾರೆ ಅನ್ನದಾತರು
ಮಂತ್ರಿ ಮಾತು ನಂಬ್ಕೊಂಡಿರೋ ದೇಶ ನಮ್ದು

ರಾಷ್ಟ್ರ ಭಾಷೆ ಸ್ವಾಭಿಮಾನ ಅಂತ ವೈಕೋತಾರೆ
ಮಾಡೋದ್ ಮಾತ್ರ ಹಲ್ಕಕೆಲ್ಸನೆ
ಮಡಿ ಮೈಲ್ಗೆ ಅಂತ ಬಡ್ಕೊತಾರೆ
ಮಾಡೋದೆಲ್ಲ ಬರಿ ಅನಾಚಾರ, ಅತ್ಯಾಚಾರ ನೋಡ್ಕೊಂಡಿರೋ ದೇಶ ನಮ್ದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕುರ‍್ಡ

Published

on

ಲೇಖಕಿ : ಶಾಂತಾ ಜಯಾನಂದ್
  • ಶಾಂತಾ ಜಯಾನಂದ್

ಯಾರಾದ್ರು ರಸ್ತೆಯಲ್ಲಿ ಸಡನ್ ಆಗಿ ಅಡ್ಡ ಬಂದ್ರೆ ಅಥವಾ ಅಪ್ಪಿ ತಪ್ಪಿ ಏನಾದ್ರೂ ಮಾಡಿದ್ರೆ, ಏ, ಕುರ‍್ಡ ಕಣ್ ಕಾಣೋಕಿಲ್ವಾ? ಎಂಬ ಮೊದಲಿಕೆಯ ಮಾತು ಎಲ್ಲೆಡೆ ಸರ್ವೇ ಸಾಮಾನ್ಯ ಅದನ್ನ ಬಹಳ ಸರಿ ಯೋಚಿಸ್ತೇನೆ ಮಾರ್ಕೆಟ್‌ನಲ್ಲೋ ಶಾಪಿಂಗ್ ನಲ್ಲೋ ಪಡ್ಡೆ ಹುಡುಗ್ರು ಡಿಕ್ಕಿ ಹೊಡ್ಕಂಡು ಹೋದ್ರೆ ಕಣ್ ಕಾಣಲ್ವಾ.

ಕುರುಡನ ಹಾಗೆ ನುಗ್‌ತ್ತಾನೆ ಎನ್ನುವಂತಹ ಮಾತಿದೆ.  ಪಾಪ, ನಾನು ನೋಡ್ದಂಗೆ ನಿಜವಾದ ಕಣ್ಣಿಲ್ಲದವರೂ ಯಾರಿಗೂ ತೊಂದ್ರೆ ಕೊಡದೆ ಬರೀ ಶಬ್ಧಗಳನ್ನ ಗ್ರಹಿಸ್ತಾ ಕೋಲನ್ನ ಹಿಡಿದೂ, ಅಥವಾ ಅವರವರೇ ಕೈ ಹಿಡಿದೊ, ರಸ್ತೆ ದಾಟುತ್ತಾರೆ.  ಯಾವುದೇ ರೀತಿಯ ತಲೆಹರಟೆಯಿಂದ ವರ್ತಿಸುವುದಿಲ್ಲ.

ಆದರೂ ಯಾರಾದರೂ ಈ ರೀತಿಯ ತಲೆಹರಟೆ, ತರಲೆಗಳನ್ನು ಮಾಡಿದಾಗ ಕುರ‍್ಡ ಕಣ್ ಕೊಟ್ಟಾ| ಅಂತಾನೊ ಆ ಕುರಡ ನನ್ನ ಮಗ, ಹಂಗ್ ಮಾಡ್ದಾ, ಹೀಂಗ್ ಮಾಡ್ದಾ, ಅಂತ ಮಾತುಗಳು.

ಹೌದು ಈ ಕುರುಡುತನ, ಎಂಬುದು ಹೀಗೇ? ಅಲ್ವಾ.  ಹುಟ್ಟು ಕುರುಡ ಮಧ್ಯದಲ್ಲಿ ಯಾವುದೋ ಕಾರಣಕ್ಕಾಗಿ ಕುರುಡಾದವರೋ, ಯಾವುದೋ ಅಪಘಾತದಲ್ಲಿ ಕಣ್ಣು ಕಳೆದುಕೊಂಡವರು, ಬೆಂಕಿಯ ಆಘಾತ, ಕಡೆಗೆ ಸಕ್ಕರೆ ಕಾಯಿಲೆ ಹೆಚ್ಚಾಗಿ ಸಹ ಕಣ್ಣು ಕಳೆದುಕೊಂಡವರೊ, ಆದರೇ ಹುಟ್ಟು ಕುರುಡನ ಕಥೆ ಹೆಂಗೆ ಕತ್ತಲೊಳಗೆ ಕೈ ಆಡಿದಂತೆ, ಏನೂ ಇಲ್ಲ, ಶೂನ್ಯ, ಶೂನ್ಯ ಬರೀ ಶೂನ್ಯ, ದೇವರು ಏನೋ ಒಂದು ಸಿಕ್ಸ್ತ್ ಸೆನ್ಸ್ ಕೊಟ್ಟರ‍್ತಾನೋ, ಸ್ಪರ್ಶ ಜ್ಞಾನ, ಶಬ್ದಗ್ರಹಣ ವಾತಾವರಣದ ವ್ಯತ್ಯಾಸ, ಮುಂತದವುಗಳಿಂದ ಅಂತ ಸಂದರ್ಭವನ್ನು ನಿರ್ಧರಿಸಬೇಕಾಗುತ್ತದೆ.

ಹುಟ್ಟು ಕುರುಡರಿಗೆ ಪ್ರಪಂಚದ ಕಲ್ಪನೆಯೇ ಇರುವುದಿಲ್ಲ ಅಲ್ವಾ; ನಾನು ಕಲ್ಪನೆ ಮಾಡಿಕೊಂಡು ಕಣ್ಮುಚ್ಚಿ ಮನೆಯಲ್ಲಿ ಓಡಾಡಲು ಹೋಗಿ, ಮಂಚಕ್ಕೆ ಸರಿಯಾಗಿ ತಾಗಿ ಎಡವಿದ್ದು ಉಂಟು, ಮೂತಿ ಹೊಡೆದು ಹೋಗುವ ಹಾಗೆ ಈ ಕತ್ತಲು ಅಂದರೆ ಭಯ ಹುಟ್ಟಿಸುವಂತೆ, ಯಾವಾಗಲೂ ಕಿವಿ, ಅಲರ್ಟ್ ಆಗಿರಲೇಬೇಕು.  ನಮಗೆ ತಿಳಿದ ಭಾಗ, ನಮ್ಮ ಮನೆ, ನಮ್ಮ ಕೊಠಡಿ, ಮುಂತಾದ ಕಡೆ, ಓಡಾಡಲೂ ಹೇಗೆ ಎಡವಿ ಬಿದ್ದು, ನಮಗೆ ಅಬ್ಭಾ, ಈ ಅಂಧರು ಹೇಗೆ ಓಡಾಡುತ್ತಾರೆ.

ಒಂದು ನಿಮಿಷ ಅವರ ಸ್ಥಾನದಲ್ಲಿ ನಿಂತು ಕಲ್ಪಿಸಿಕೊಳ್ಳಲು ಆಗುವುದಿಲ್ಲ.  ನಾನು ಸಹ ಬಿಗಿಯಾಗಿ ಕಣ್ಮುಚ್ಚಿ ಶೂನ್ಯದಲ್ಲಿ ಕೈಯಾಡಿಸಿಕೊಂಡು ಓಡಾಡಿ ನೋಡಿದ್ದುಂಟು.  ಇನ್ನೊಂದು ಈ ಪ್ರಾಣಿ ಗಳು ಕುರುಡಾದ್ರೆ ಏನ್ಮಾಡ್ತವೋ ಅಂತ ನಮ್ಮ ಮನೆ, ನಾಯಿಯನ್ನೇ ದಿಟ್ಟುಸುತ್ತೇನೆ.  ಅಂಧ ಮಕ್ಕಳ ಆಶ್ರಮ ಅದು ಇದು ಅಂತ, ಬಹಳಷ್ಟು ಅಂಧ ಮಕ್ಕಳಶಾಲೆ ಎಲ್ಲಾ ಉಂಟು.  ಆದರೆ, ನನಗನ್ನಿಸುತ್ತೆ ನಮ್ಮಗಳ ಜೊತೆಯೋ ಅವರನ್ನ ಬೆಳೆಸುತ್ತಾ ಮನೆಯವರೇ ಜವಾಬ್ದಾರಿ ಇರಿಸಿಕೊಂಡು ಏಕೆ ಒಟ್ಟಿಗೆ ಬಾಳ್ವೆ ಮಾಡಬಾರದು, ಇಲ್ಲಿ ಬಡವರ ಸಿರಿವಂತರ ಪ್ರಶ್ನೆ ಅಲ್ಲ.

ಬಡವರು ಬೇರೆ ಮಕ್ಕಳನ್ನು ಬಡತನ ಇದೆ ಎಂದು ಸಾಕುವುದಿಲ್ವೇ, ಹಾಗೇ, ಶಾಲೆಗೆ ಕಳಿಸಲಿ, ಏಕೆ ಹೀಗೆ, ಅನಾಥ ಆಶ್ರಮಕ್ಕೆ ಸೇರಿಸ್ತಾರೋ ತಿಳಿಯುವುದಿಲ್ಲ.  ಅವರೇನೋ, ಅನಾಥರಲ್ಲವಲ್ಲ ಬೆಂಗಳೂರಿನ ಹಲವು ಬೀದಿಗಳಲ್ಲಿ (ಬೇರೆ ಬೇರೆ ಊರುಗಳಲ್ಲೂ ಸಹ ಇರಬಹುದು), ಮೈಕ್ ಇಟ್ಕೊಂಡು, ಹಾಡೇಳಿಕೊಂಡು ಪಾಪ ಒಂದು ಬೇರೆ ರೀತಿಯ ಬಿಕ್ಷೆ ಅನ್ನಿಸುತ್ತದೆ.  ಹಾಡೇಳುತ್ತಾ ಇರುತ್ತಾರೆ.

ಯಾಕ್ರೀ ಹೆತ್ತವರೇ ಇಷ್ಟೇ ಬಡತನ ಇರಲಿ, ಶ್ರೀಮಂತಿಕೆ ಇರಲಿ, ನೀವು ಹೆತ್ತ ಮಕ್ಕಳನ್ನು ನೀವು ಸಾಕುವುದಿಲ್ವಾ?  ಕುರುಡರಾದ ತಕ್ಷಣ ಈ ರೀತಿ ಏಕೆ ಆಶ್ರಮಕ್ಕೆ ಸೇರಿಸ್ತೀರಾ?  ಅಂತ, ಗಟ್ಟಿಸಿ ಕೇಳಬೇಕೆನಿಸುತ್ತದೆ.  ಹಾಗೆ ಕೈಲಾದಷ್ಟು ವೈದ್ಯರ ಸಹಾಯ ಪಡೆದು ಅವರಿಗೆ ದೃಷ್ಟಿ ಕೊಡಿಸಲು ಪ್ರಯತ್ನಸಿ ಅಂತ ಅನ್ನಬೇಕೆನಿಸುತ್ತದೆ.

ಜಗತ್ತಿನ ಪ್ರಕೃತಿ ಸೌಂದರ್ಯವಾದ “ಸ್ವಿಜ್ಜರ್‌ಲ್ಯಾಂಡ್” ಗೆ ಹೋಗಿದ್ದೆವು.  ಪ್ರಕೃತಿ ಸೌಂದರ್ಯವನ್ನು ನೋಡು, ಮನಸ್ಸು ಗಾಳಿ ತುಂಬಿದ ಬೆಲೂನಿನಂತೆ ಹಾರಾಡುತ್ತಿತ್ತು ಸಲ್ವಾ ದೈವ ಸೃಷ್ಟಿಯೋ ಅಂತ, ಆ ಹಿಮಾಚ್ಛಾದಿತ ಪರ್ವತಗಳು ಸ್ವಲ್ಪ ಬಿಸಿಲಿಗೆ ಹೀಗೆ, ಯಾಕೋ ಸಡನ್ ಆಗಿ ಕುರುಡರ ನೆನಪಾಯ್ತು.  ದೇವ್ರೆ, ಖಂಡಿತ, ಈ ಜಗತ್ತಿನಲ್ಲಿ ಕುರುಡರನ್ನು ಮಾತ್ರ ಸೃಷ್ಠಿಸಬೇಡಪ್ಪಾ – ದೇವ್ರೇ ಅಂತ ಕಾಣದ ದೇವರಲ್ಲಿ ಮೊರೆ ಇಟ್ಟಿದ್ದು ಸತ್ಯ, ನಾನು ಸಹ ಬೆಂಗಳೂರಿಗೆ ಬಂದ ತಕ್ಷಣ ನಾರಾಯಣ ನೇತ್ರಾಲಯಕ್ಕೆ ನೇತ್ರದಾನಕ್ಕೆ ಬರೆಸಿ ರಿಜಿಸ್ಟರ್ ಮಾಡಿ ಬಂದು ಒಂದು ನಿಟ್ಟುಸಿರಿಟ್ಟಿದ್ದಂತೂ ನಿಜ.

ಮಕ್ಕಳ ಕೈಯಲ್ಲಿ ಕಾರ್ಡನ್ನು ತೋರಿಸಿ, ನಾನು ಸತ್ತ ನಂತರ ದಯವಿಟ್ಟು ನನ್ನ ನೇತ್ರದಾನ ಮಾಡಿ ಎಂದು ಹೇಳಿದ್ದು ಅತ್ಯಂತ ಪ್ರಕೃತಿ ಪ್ರಿಯಳಾದ ನನಗೆ ಅದಕ್ಕೆಂದೇ ಬಹಳಷ್ಟು ಪ್ರವಾಸಗಳನ್ನು ಕೈಗೊಳ್ಳುವ ನನಗೆ ಆ ಸೌಂದರ್ಯದಲ್ಲಿ ಮೈಮರೆಯುವ ಹುಚ್ಚು.  ಅಂಧರಿಗೆ ಹೇಗೆ, ಇದರ ಕಲ್ಪನೆಯನ್ನು ಹೇಳಲು ಸಾಧ್ಯವಿಲ್ಲ ಅಲ್ವಾ?  ಅನ್ನಿಸುತ್ತದೆ.  ಯಾವುದೇ ಕುಳಿ ಗಾಳಿ, ಪ್ರಕೃತಿ ಸುವಾಸನೆಯನ್ನು ಆಸ್ವಾದಿಸಿದರೂ ಆ ಕಲ್ಪನೆಯ ಚಿತ್ರ ಬರಲು ಸಾಧ್ಯವೇ ಇಲ್ಲ.

“ಕುರುಡ ಆನೆ ಮುಟ್ಟಿದಂತೆ” ಎಂಬ ಗಾದೆ ಮಾತು ಸತ್ಯ,  ಇಲ್ಲಿ ಇನ್ನೊಂದು ಮಾತು ಅಂದ್ರೆ, ಇಷ್ಟು ಹುಟ್ಟು ಕುರುಡರ ಕಥೆ ಆದ್ರೆ, ಮಧ್ಯದಲ್ಲಿ ಅಪಘಾತದಲ್ಲೋ ಅಥವಾ ಆರೋಗ್ಯದ ಕಾರಣದಿಂದಲೋ ಕಣ್ಣು (ದೃಷ್ಠಿಹೀನ) ಹೋದರೆ, ಅವರು ಮೊದಲು ಕಂಡ, ಬೆಳಕು, ಕತ್ತಲೆ, ಸೂರ್ಯ, ಚಂದ್ರ, ನೀರು ಬಣ್ಣಗಳು ಎಲ್ಲವೂ ಸಹ ನೆನಪಿಗೆ ಬರುತ್ತದೆ ಅಲ್ವಾ? ನಾವು ಏನನ್ನಾದರೂ ಹೇಳಿದರೇ ಕಲ್ಪಿಸಿಕೊಳ್ಳುವಷ್ಟಾದರೂ, ಇರುತ್ತದೆ.

ಆದರೆ ಹುಟ್ಟು ಅಂಧಕಾರ ಬಹಳ ಭಯಂಕರ ಬಿಡ್ರಿ.  ನ್ಯಾಯದೇವತೆಯು ಕಣ್ಣೆಗೆ ಬಟ್ಟೆ ಕಟ್ಟಿ ಅಂಧ ಕಾನೂನು ಅಂತಾರೆ.  ಕಾನೂನು ಏನು ತಿಳಿಯದೇ ತೀರ್ಪು ಕೊಡುತ್ತೆ ಅಂತಾನಾ? ಇನ್ನು ಪ್ರೇಮ ರಾಗ, ನಮ್ಮ ಶೃಂಗಾರ ಸೌಂದರ್ಯಗಳಲ್ಲಂತೂ ಕಣ್ಣು ಸರಿಯಾಗಿ ಕಾಣದಿದ್ದರೇ, ಕನ್ನಡಕ ಬಂತು ಎಷ್ಟು ಸಂಶೋಧನೆಗಳನ್ನು ಮಾಡಿ, ಅವರ ದೃಷ್ಠಿ ದೋಷಕ್ಕೆ ಕಾರಣವಾದ ಮಸೂರ, ತೆಳು ಗಾಜು ಕಣ್ಣಿಗೆ ಹಾಕೇ ಇಲ್ಲ ಎನ್ನುವಂತಹ ಕನ್ನಡಕಗಳು ಬಂದವು.

ಅಬ್ಬಾ ಈಗ ಕನ್ನಡಕ ಇಲ್ಲ ಲೆನ್ಸ್ ಬಂತು.  ಆ ಕಣ್ಣ ಗುಡ್ಡೆಗೆ ಲೆನ್ಸ್ ಹಾಕುವುದು ಮನಸ್ಸಿನ ವಿಜ್ಞಾನಿಗಳ ವೈದ್ಯ ತಂಡದ ಚಮತ್ಕಾರಕ್ಕೇ ತಲೆದೂಗಲೇ ಬೇಕು.  ಹೋ ಈಗಂತೂ, 10 ನಿಮಿಷದಲ್ಲಿ ಲೇಸರ್ ಆಪರೇಷನ್, ಕಣ್ಣಿನ ರೆಟಿನಾವನ್ನೇ ಸರಿಪಡಿಸಿ ಹೋಗಿ ಆರಾಮವಾಗಿ ಹತ್ತು ನಿಮಿಷದಲ್ಲೇ ಓಡಾಡಿಕೊಂಡಿರುವಂತೆ ಮಾಡುತ್ತಾರೆ.  ಗ್ರೇಟ್ ಅಲ್ವಾ?  ನಿಜಕ್ಕೂ ಕಣ್ಣಿನ ವಿಷಯದಲ್ಲಿ ಏನೇನೋ ಅದ್ಭುತಗಳು ಬಂದಿವೆ.  ಸತ್ತ ಮನುಷ್ಯನ ಕಣ್ಣನ್ನು ತೆಗೆದು, ಒಬ್ಬ ಅಂಧನಿಗೆ ಜೋಡಿಸಿ ಅವನಿಗೆ ದೃಷ್ಠ ಬರುವಂತೆ, ಮಾಡುವುದು, ವಿಜ್ಞಾನದ ಅದ್ಭುತಗಳಲ್ಲಿ ಒಂದು.

ವಯಸ್ಸಾದ ಮೇಲೆ ಸಹ ಕಣ್ಣು ಕಾಣುವಂತಹ ಅನೇಕ ಸಲ್ಯೂಷನ್‌ಗಳನ್ನು ವೈದ್ಯ ವಿಜ್ಞಾನಿಗಳ ಲೋಕ ಕಂಡು ಹಿಡಿದದ್ದು ಅದ್ಭುತವೇ ಸರಿ.  ಇಲ್ಲಿ ನಮ್ಮ ನೇತ್ರ ತಜ್ಞ ಮೋದಿಯವರನ್ನು ಸಹ ನೆನೆಯಲೇ ಬೇಕು.  ಎಷ್ಟು ಜನರಿಗೆ ದೃಷ್ಠಿ ನೀಡಿದ್ದಾರೋ,  ಕಣ್ಣೆ ಎಲ್ಲಾ,  ನಿನ್ನ ಕೈಗನ್ನಡಿಯಲ್ಲಿ, ಚೆಲುವೆಯ ಅಂದದ ಮೊಗಕೆ, ಕಣ್ಣು ಕಣ್ಣು  ಕಲೆತಾಗ, ಹೀಗೆ ಕಣ್ಣಿನ ಬಗ್ಗೆ ಅನೇಕ ಹಾಡುಗಳನ್ನೇ ನೂರಾರು ಉದಾಹರಿಸಬಹುದಾಗಿದೆ.

ಕವಿಯ ಕಲ್ಪನೆಯಲ್ಲಿ ಮುಖದ ಚೆಲುವಿಗೆ ಕಣ್ಣೆ ಸಾಕು.  ನಮ್ಮ ಡಿಂಡಿಮ ಕವಿಯು “ಕಮಲೇ ಕಮಲೋತ್ಪತ್ತಿಃ” ಎಂದು ಕಮಲದಂತಹ ಮುಖದಲ್ಲಿ ಉತ್ಪತ್ತಿಯಾದಂತಹ ಕಮಲಗಳು ಎಂಥ ಕಣ್ಣುಗಳು, ಎಂಬಂತಹ ಅರ್ಥ ಕೊಡುತ್ತದೆ.  ಯಾವುದೇ ಕಾವ್ಯ ಓದುವಾಗ ಹೆಣ್ಣಿನ ಬಣ್ಣನೆ ಇದ್ದರೆ ಅದಕ್ಕೆ ಕಣ್ಣೇ ಕಾರಣ.  ಇನ್ನು ಎಲ್ಲಾ ಭಾವನೆಗಳನ್ನು ಮನುಷ್ಯನು ತನ್ನ ಕಣ್ಣುಗಳಿಂದಲೇ ವ್ಯಕ್ತಪಡಿಸುವುದು.

ದುಃಖ, ಸಂತೋಷ, ಪ್ರೇಮ, ಕಾಮ, ತುಂಟಾಟ, ನವರಸಗಳನ್ನು ಸಹ ಕಣ್ಣಿನಿಂದಲೇ ವ್ಯಕ್ತಪಡಿಸಲು ಸಾಧ್ಯ ಅಲ್ಲವೇ?  ಅಂತಹ ಕಣ್ಣೇ ಇಲ್ಲ ಅಂದ್ರೆ ಹೇಗಲ್ವಾ ದೇವರೇ ಅಂತ, ನಮ್ಮ ಕಣ್ಣಿನ ವೈದ್ಯರಿಗೆ, ನಿಜವಾಗ್ಲೂ ಎರಡು ಕೈ ಎತ್ತಿ ಮುಗಿಯಬೇಕು.  ವೈದ್ಯರುಗಳು ಕಣ್ಣಿನ ಬಗ್ಗೆ ವಿಶೇಷವಾಗಿ ಓದಿ, ದೃಷ್ಠಿ ದಾನದಂತಹ ಅದ್ಭುತ ಚಮತ್ಕಾರದ ಆಪರೇಷನ್ ಮಾಡಿ ದೃಷ್ಠಿ ಬರುವಂತೆ ಮಾಡುತ್ತಾರೆ ಎಂದ್ರೆ ಅಬ್ಬಾ! ಮನುಷ್ಯನ ಬುದ್ದಿವಂತಿಕೆಗೆ ವೈದ್ಯ ಲೋಕಕ್ಕೆ ಭೇಷ್ ಅಂತ ಅನ್ನಲೇಬೇಕು.  ವಯಸ್ಸಾದವರಿಗೆ ಕಣ್ಣಿನ ಪೊರೆ, ತೆಗೆದು ಮಾಡುವ ಆಪರೇಷನ್, ಕಣ್ಣಿನ ದೃಷ್ಠಿಯನ್ನು ಹೊಳಪು ಬರಿಸುವುದು, ಏನೀ ವಿಸ್ಮಯವೇ?

ನಾನು, ಮೊದಲು ಅಂದುಕೊಳ್ಳುತ್ತಾ ಇದ್ದೆ, ಪುಣ್ಯಾತ್ಮ ಅಲ್ವಾ? ಇನ್ನು ಹುಟ್ಟು ಅಂಧಕಾರದಲ್ಲಿರುವವರು ಎಲ್ಲಾ ಸ್ಪರ್ಶ ಜ್ಞಾನದಿಂದಲೇ ತಿಳಿಯಬೇಕಲ್ಲವೇ? ಅದಕ್ಕೆ ಓದು ಬರಹದ ಕಲ್ಪನೆಯಲ್ಲಿ ಬ್ರೈಲ್ ಲಿಪಿ ಕಂಡು ಹಿಡಿದ “ಲೂಯಿಸ್ ಬ್ರೈಲ್” ಫ್ರೆಂಚ್ ಶಿಕ್ಷಣ ತಜ್ಞರನ್ನು ಜ್ಞಾಪಿಸಿಕೊಳ್ಳಲೇ ಬೇಕು.  ಅಲ್ಲಿಂದ ಆರಂಭವಾದ ಬ್ರೈಲ್ ಆಕ್ಟ್, ಕುರುಡರಿಗೆ ಉಪಯುಕ್ತವಾದಂತಹ ಎಷ್ಟೋ ಸಂಗತಿಗಳನ್ನು ಕಂಡುಹಿಡಿಯುತ್ತಲೇ ಇದ್ದಾರೆ.

ಅವರಿಗೆ ಕಣ್ಣು ಗ್ರಹಣ ಶಕ್ತಿ ಬಹಳ ಸೂಕ್ಷ್ಮವಾಗಿರುವುದರಿಂದ ಇರಬೇಕು.  ಬಹಳಷ್ಟು ಕುರುಡರು ಸಂಗೀತಗಾರರಾಗಿ ತಮ್ಮ ಜೀವಿತವನ್ನು ಕಳೆದಿದ್ದಾರೆ ಎಂದು ಹೇಳಬಹುದು.  ಹಿಂದೆ ಸಿಡುಬು ರೋಗದಂತಹ ಮಾರಕ (ಅಮ್ಮ) ಬಂದರೂ ಸಹ ಈ ದೃಷ್ಟಿ ಮಾಂಧ್ಯತೆ, ಬರುತ್ತಲಿತ್ತು.  ಆ ಸಿಡುಬಿನ ಭೀಕರ ಪರಿಣಾಮದಿಂದ ಅಂಧಕಾರವಾಗ್ತ ಇತ್ತು.  ಈಗ ಬಹಳಷ್ಟು ಅಂಧ ಮಕ್ಕಳು ನೃತ್ಯ ಪ್ರಕಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಏನೋ ಒಟ್ಟಿನಲ್ಲಿ ಅಂಧರ ಬಗ್ಗೆ ಯೋಚಿಸುತ್ತಿದ್ದರೆ, ಬಹಳಷ್ಟು ಚಿಂತನೆಗಳು ತಲೆಯಲ್ಲಿ ತುಂಬುತ್ತವೆ.  ಅವರನ್ನು ಅಂಧರೆಂದು, ಗುರುತಿಸಲಿ, ಅವರಿಗೇ ಯಾರು ತೊಂದರೆ ಕೊಡದಿರಲಿ ಎಂಬ ಕಾರಣಕ್ಕಾಗಿಯೇ ಕಪ್ಪು ಗ್ಲಾಸಿನ ಕನ್ನಡಕವೇನೋ ಚಾಲ್ತಿಯಲ್ಲಿವೆ.

ಹಾಗೆ ಸ್ಪರ್ಶ ಜ್ಞಾನ ತಿಳಿಯಲು ವಾಕಿಂಗ್ ಸ್ಟಿಕ್‌ನಂತಹ ಕೋಲು ಸಹ ಇದೆ. ಹಾಗೇ ನಾವು ಸರ‍್ಯನ ಕಣ್ಣಿಗೆ ತಡೆಯೊಡ್ಡಲು, ಹಾಗೇ ಫ್ಯಾಶನ್‌ಗೆ ಸಹ ಕಪ್ಪು ಕನ್ನಡಕವನ್ನು ಧರಿಸುತ್ತೇವೆ.  ಆಗ ಸಹ ಏನೋ ನಾನೂನೂ ಕುರ‍್ಡನಾ? ಅನ್ನುವ ಮಾತು, ನನಗೇ ಯಾರಾದರೂ ಆ ಮಾತೆತ್ತಿದರೆ ತುಂಬವೇ ಕೋಪ ಬರುತ್ತೆ.  ಬಹಳಷ್ಟು ಕುರುಡರ ಬಗ್ಗೆ ಚಿತ್ರಗಳೂ ಸಹ ಬಂದಿವೆ.  ಮನಮುಟ್ಟುವಷ್ಟು ಪರಿಣಾಮಕಾರಿಯಾದಂತಹ ಚಲನ ಚಿತ್ರಗಳನ್ನು ನೋಡಿದ್ದು, ನನಗೆ ನೆನಪಿಲ್ಲ.

ಹಾಂ, ಅಂದ ಹಾಗೆ ನನಗೆ ನೆನಪಾಯ್ತು ಪ್ರಾಣ , ಪಕ್ಷಿಗಳ ಕುರುಡಿನ ಬಗ್ಗೆ ಯೋಚಿಸ್ತಾ ಇದ್ದೆ.  ನನಗೇ ತಿಳಿದಿಲ್ಲ.  ಒಂದು ಘಟನೆಯಂತೂ ನೆನಪಿದೆ, ಒಂದ್ಸಾರಿ ನಮ್ಮ ಮನೆಯಲ್ಲಿ ಅಮ್ಮ ಮೀನು ಸಾರು ಮಾಡಿ ಇಟ್ಟಿದ್ರು, ಅದರ ವಾಸನೆಗೆ ಬೆಕ್ಕು ಬಂದಿತ್ತು, ಅಡಿಗೆ ಮನೆಯಲ್ಲಿ ಯಾರು ಇಲ್ಲದಾಗ, ಆ ಬೆಕ್ಕು ಹೋಗಿ ಆ ಸಾರಿನ ಪಾತ್ರೆಗೆ ಮುಖ ಹಾಕಿ ಸಾರು ಖಾಲಿ ಮಾಡಿದೆ.  ಚಿಕ್ಕ ಬಾಯಿಯ ಪಾತ್ರೆ ಅದು ಪೂರ್ತಿ ಸಾರನ್ನು ತಿಂದ ನಂತರ ತಲೆ ಎತ್ತಲು ಹೋಗಿದೆ.

ಆಚೆ ಬರಲು ಆಗಿಲ್ಲ, ಪಾತ್ರೆ ಸಮೇತ ಹೊರಗೆ ಬಂದು ದಾಂಧಲೆ ಎಬ್ಬಿಸ್ತಾ ಇತ್ತು.  ನಾವೆಲ್ಲಾ ಹೋದ ಗಾಬರಿಗೆ, ಸಿಕ್ಕ ಸಿಕ್ಕೆಲ್ಲಾ ಕಡೆ, ಓಡೋಗಿ ಗೋಡೆಗೆ ಡ್ಯಾಷ್ ಹೊಡೆದು, ಹೇಗ್ಹೇಗೋ ಓಡಾಡ್ತಾ ಇತ್ತು.  ಕಡೇಗೆ ಅದನ್ನ ಹಿಡಿದು ಪಾತ್ರೆ ಹೊರ ತೆಗೆದು ಅದರ ಮುಖ ಕ್ಲೀನ್ ಮಾಡಿ ಬಿಡುವಾಗ ಸಾಕೋ ಸಾಕಾಯ್ತು.  ಹೀಗೆ ಇನ್ನು ಕಣ್ಣಿಲ್ಲದ ಪ್ರಾಣ ಗಳ ಕಥೆ ಹೇಗೇ ಅಂತ.

ಅಂತೂ ಯಾವಗಲೂ ಪ್ರಕೃತಿಯ ಸೌಂದರ್ಯ, ಹೂವು ಬೆಟ್ಟ-ಗುಡ್ಡ, ಕಾಡು-ಮೇಡು, ಮೋಡ ಎಲ್ಲಾ ಬಗೆಯ ಪ್ರಕೃತಿಯ ವೈಚಿತ್ರ್ಯಗಳನ್ನು ಕಾಣುವಾಗ, ಆನಂದಿಸುವಾಗ, ಭಾವಾವೇಶಕ್ಕೆ ಒಳಗಾದಾಗ, ಇಲ್ಲಿ ಇನ್ನೊಂದು ವಿಷಯ ಪ್ರೀತಿ ಕುರುಡು ಅನ್ನುವಂತಹ ಮಾತಿದೆ.  ಬಹುಶಃ ಈ ಮಾತು, ಏಕೆ ಬಂದಿರಬಹುದು ಅಂದ್ರೆ, ಪ್ರೀತಿ ಎಂಬುದು ಭಾವಕ್ಕೆ ಭಾವನೆಗಳಿಗೆ ಸಂಬಂಧಪಟ್ಟಿದ್ದು ಎನಿಸುತ್ತೆ.  ಅದಕ್ಕೆ ಕಾಣುವಿಕೆ ಮುಖ್ಯವಲ್ಲ ಅನ್ನಿಸುತ್ತೆ.  ಭಾವಕ್ಕೆ ಭಾವಸ್ಪಂದನೆ ಉಂಟಾಗಬೇಕು.  ಆದ್ದರಿಂದ ಪ್ರೀತಿಯನ್ನು ಕುರುಡುತನಕ್ಕೆ “love is blind“ ಅಂತ ಹೇಳ್ತಾರೆ ಅಂತ ಕಾಣುತ್ತೆ ಒಟ್ಟಿನಲ್ಲಿ ನನ್ನದು ದೇವನಲ್ಲಿ ಒಂದೇ ಒಂದು ಮನಃಪೂರ್ವಕ ಪ್ರಾರ್ಥನೆ.
ಇಂತಹ ಸುಂದರ
ಸೃಷ್ಠಿಯ ಸೃಷ್ಠಿಸಿದ
ಹೇ, ಭಗವಂತಾ
ಅಂಧರ ಸೃಷ್ಠಿಸಬೇಡ
ಈ ಜಗದೊಳು…

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಭಾವ ಭೈರಾಗಿ

ವಿಮರ್ಶೆ | ಸ್ವಪ್ನದಲ್ಲಿ ಸೊರಗಿದ ಪ್ರೀತಿ

Published

on

  • ನೇತ್ರಾವತಿ ಸಿ.ಎಂ (ನೆಲ್ಲಿಕಟ್ಟೆ)

ಕಾದಂಬರಿ :ಸ್ವಪ್ನದಲ್ಲಿ ಸೊರಗಿದ ಪ್ರೀತಿ
ಲೇಖಕ : ಶ್ರೀಧರ್(ಕೆ. ಸಿರಿ)


ಆತ್ಮೀಯ ಗೆಳೆಯರು ಅದ ಕೆ.ಶ್ರೀಧರ್(ಕೆ. ಸಿರಿ)ರಚಿಸಿದ “ಸ್ವಪ್ನದಲ್ಲಿ ಸೊರಗಿದ ಪ್ರೀತಿ” ಅದ್ಭುತ ಶೀರ್ಷಿಕೆಯಿಂದಲೇ ಎಲ್ಲರ ಕಣ್ಮನ ಸೆಳೆಯುವ, ತಲ್ಲಣಗೊಂಡ ಮನಸ್ಸೊಂದರ ಪ್ರಾಮಾಣಿಕ ಪ್ರೀತಿ ಅನಾವರಣಗೊಂಡಿದೆ.ಈ ಪುಸ್ತಕದಲ್ಲಿ ನಮ್ಮನ್ನು ಗಾಢವಾಗಿ ಆವರಿಸಿಕೊಳ್ಳುವ ಮತ್ತೊಂದು ವಸ್ತುವೆಂದರೆ ಪ್ರೇಮ !.

ಈ ಪ್ರೇಮವು ರಮ್ಯವಾಗಿಯೂ ಇರದೆ ವಿರಹವನ್ನು ಅಲ್ಪವಿರಾಮವನ್ನು ಕಾಣುತ್ತದೆ.ಗುರಿ ಮತ್ತು ಪ್ರೀತಿ ಎರಡರ ಪ್ರಾಮುಖ್ಯತೆಯನ್ನು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತನ್ನದೇ ಭಾಷೆಯನ್ನು ಇಲ್ಲಿ ಬಿಂಬಿಸಿದ್ದಾರೆ. ಹದಿಹರೆಯದಲ್ಲಿ ಹುಟ್ಟಿದ ಪ್ರೀತಿಯು ತನ್ನ ಜೀವನದ ಗುರಿಯನ್ನು ಬದಲಾಯಿಸಿ ಬಿಟ್ಟಿದೆ.

ಇಲ್ಲಿ ಪ್ರೀತಿ ಮತ್ತು ಪ್ರೇಮ ಎನ್ನುವ ಹೆಸರಿನಿಂದ ವ್ಯಕ್ತವಾದ ವ್ಯಕ್ತಿತ್ವಗಳು, ಪ್ರೀತಿ ಮತ್ತು ಪ್ರೇಮ್ ಎರಡು ಹೃದಯಗಳಲ್ಲಿ ಹುಟ್ಟಿದ ಪ್ರೀತಿಯು, ಪ್ರೀತಿ ತನ್ನ ಪ್ರೀತಿಯನ್ನು ಪ್ರೇಮದೊಂದಿಗೆ ವ್ಯಕ್ತಪಡಿಸುವ ಪರಿಯೂ ಇಲ್ಲಿ ಅವಳ ಹುಚ್ಚುಮನಸ್ಸಿನ ಸ್ವಚ್ಛ ಪ್ರೀತಿಯ ಹಿಂದೆ ಬಿದ್ದು ಅವಳ ಜೀವನವನ್ನೆಲ್ಲಾ ಏಳು ವರ್ಷಗಳ ಪ್ರೀತಿಯ ಕಾಯುವಲ್ಲಿ ಜೀವನ ಗುರಿಯನ್ನೇ ಮರೆತು ಪ್ರೀತಿಯ ಜೀವನದ ಮುಖ್ಯವೆಂದು ಪ್ರೇಮ ಪ್ರೀತಿಗೆ ಹಗಲು-ಇರುಳು ಮುಗ್ಧ ಮನಸ್ಸಿನ ಪೆದ್ದು ಹುಡುಗಿ ತನ್ನ ಆಸೆ ಆಕಾಂಕ್ಷೆ ಪ್ರೇಮ್ ಅವನ ಪ್ರೀತಿಗೆ ಅವನಿಗೆ ಪರಿಪರಿಯಾಗಿ ಹಂಬಲಿಸುವ ಪ್ರೀತಿ ಒಂದು ಕಡೆಯಾದರೆ.

ಪ್ರೇಮ ಕಷ್ಟದಾ ಕುಟುಂಬದಲ್ಲಿ ಬೆಳೆಯುತ್ತಿದ್ದ. ಹುಡುಗ ತನ್ನ ತಂದೆ-ತಾಯಿಯ ಜೀವನ ನಡೆಸುವ ಒಂದು ಹೊತ್ತಿನ ತುತ್ತಿಗೆ ಶ್ರಮಪಡುವ ತಂದೆತಾಯಿಯನ್ನು ಪ್ರತಿದಿನ ನೋಡುತ್ತಿದ್ದ. ಪ್ರೇಮ್ ತಾನು ಜೀವನದಲ್ಲಿ ಓದಿ ಕುಟುಂಬವನ್ನು ನಡೆಸುವ ದೊಡ್ಡ ಅಧಿಕಾರಿಯಾಗಬೇಕು ಎನ್ನುವ ಛಲ ಹೊಂದಿದ್ದ ಹುಡುಗ. ಪ್ರೀತಿ ತನ್ನ ಪ್ರೇಮ್ ಗೆ ಪ್ರೀತಿಯ ಬಗ್ಗೆ ವ್ಯಕ್ತಪಡಿಸಿದಾಗ, ಪ್ರೇಮ್ ನಲ್ಲಿದ್ದ ಭಾವನೆಗಳು, ಪ್ರೀತಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲಾಗುತ್ತದೆ.

ಪ್ರೀತಿಯನ್ನು ನಿಂದಿಸುತ್ತಾನೆ. ಅಪ್ಪ ಹೇಳಿದ ಮಾತು ಮನಸ್ಸಿನಲ್ಲಿ ಬೆಂಬಿಡದೆ ಕಾಡಿದಾಗ ತಾನು ಜೀವನದಲ್ಲಿ ಏನಾದರೂ ಸಾಧಿಸಬೇಕು, ಎನ್ನುವ ಯೋಚನೆಯಲ್ಲಿ ತೊಡಗಿಕೊಂಡವನು.
ಮನುಷ್ಯ ಭಾವನೆಗಳ ಜೀವಿ ಭಾವನೆಗಳು ಇಲ್ಲದೆ ಮನುಷ್ಯನು ಇರಲಾರ ಪ್ರೀತಿಯು ಜೀವನದ ಬಹು ಮುಖ್ಯವಾದ ಅಂಶವಾಗಿದೆ.

ಇದನ್ನೂ ಓದಿ | ಆನೆಗಳು ಓಡೋದನ್ನು, ನಡೆಯೋದನ್ನ ನೋಡಿದ್ದೇವೆ..! ಮಲಗೋದು ಹೇಗೆ? ಇಲ್ಲಿದೆ ಅಪರೂಪದ ಚಿತ್ರ..!

ಆನೆಗಳು ಓಡೋದನ್ನು, ನಡೆಯೋದನ್ನ ನೋಡಿದ್ದೇವೆ..! ಮಲಗೋದು ಹೇಗೆ? ಇಲ್ಲಿದೆ ಅಪರೂಪದ ಚಿತ್ರ..!

ಇಲ್ಲಿ ಪ್ರೇಮ್ ವಿದ್ಯಾಭ್ಯಾಸ ಮುಗಿಸಿ ಅಧಿಕಾರದೊಂದಿಗೆ ಪ್ರೀತಿಯನ್ನು, ಪ್ರೀತಿಗೆ ಹೇಳಿಕೊಳ್ಳಲು ಕುಟುಂಬದೊಂದಿಗೆ ಅವಳನ್ನು ಭೇಟಿ ಮಾಡಲು ಹೋದಾಗ ನಿಜಕ್ಕೂ ಕಾದಂಬರಿ ಓದುಗರ ಮನಸಲ್ಲಿ ಮೌನವು ಆವರಿಸುತ್ತದೆ. ತನ್ನದೇ ಪ್ರೀತಿಯನ್ನು ವ್ಯಕ್ತಪಡಿಸಲಾಗದೆ, ಗುರಿಯ ಕಡೆಗೆ ಹೊತ್ತು ನೀಡಿದ್ದ ಪ್ರೇಮ್ ಅಂದು ತನ್ನ ಪ್ರೀತಿಯನ್ನು ಕಳೆದುಕೊಳ್ಳುವ ಪರಿ. ವರ್ಷಗಳಿಂದ ಪ್ರೇಮ್ ಕಾಯುತ್ತಿದ್ದ ಪ್ರೀತಿಯು ಅವನ ನೆನಪಿನಲ್ಲಿ ಪ್ರಾಣತ್ಯಾಗ ಮಾಡುತ್ತಾಳೆ.

ಪ್ರೇಮ್ ತನ್ನ ಪ್ರೀತಿಯನ್ನು ಕಳೆದುಕೊಂಡ ಮೇಲೆ ಜೀವನದ ದಿಕ್ಕಿ ಬದಲಾದ ಹಾಗೆ ಪರಿಪರಿಸುತ್ತನೆ . ಈ ಜಗದ ನಿಯಮವೇ ಹಾಗೆ ಸತ್ತುಹೋದವರು ನೆನಪುಗಳು ಮಾತ್ರ ಜೀವನವನ್ನು ಕಟ್ಟಿಕೊಳ್ಳುವುದು ಹಾಗೆಯೇ ಪ್ರೇಮ್ ಪಾರ್ವತಿಯೊಂದಿಗೆ ವಿವಾಹವಾಗಿ ಹೊಸ ಜೀವನಕ್ಕೆ ಕಾಲುಇಡುವುದರ ಮೂಲಕ ಪ್ರೀತಿಯನ್ನು ಪಾರ್ವತಿಯ ರೂಪದಲ್ಲಿ ನೋಡುತ್ತಾ ಜೀವಿಸುತ್ತಾನೆ.

ಒಟ್ಟಾರೆ ಈ ಸ್ವಪ್ನದಲ್ಲಿ ಸೊರಗಿದ ಪ್ರೀತಿ ಇತ್ತೀಚಿನ ಹದಿಹರೆಯದ ಯುವಮನಸ್ಸುಗಳು ಗುರಿ ಆದರ್ಶವನ್ನು ಕೈಗೆತ್ತಿಕೊಂಡರೆ ಏನು ಬೇಕಾದರೂ ನಿಶ್ಚಲದಿಂದ ಸಾಧಿಸಬಹುದು ಎಂಬುದನ್ನು ಕೆ ಸಿರಿ ಅವರು ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending