ಅಂತರಂಗ

ಅರಿಮೆಯ ಅರಿವಿರಲಿ-48 : ನನ್ನ ಹಾಡು ನನ್ನದು

Published

on

  • ಯೋಗೇಶ್ ಮಾಸ್ಟರ್

ನ್ನ ಹಾಡು ನನ್ನದು, ನನ್ನ ರಾಗ ನನ್ನದು, ತನ್ನ ತಾಳ ನನ್ನದು, ನನ್ನ ಆಸೆ ನನ್ನದು, ಎಲ್ಲೆಲ್ಲಿಯೂ ಎಂದೆಂದಿಗೂ, ನನ್ನಂತೆ ನಾನು ಇರುವೆನು ನುಡಿವೆನು, ನಡೆವೆನು, ದುಡಿವೆನು ಈ ಬಾಳಲಿ” ಎಂದು ಆರಂಭವಾಗುವ ‘ಸುಪ್ರಭಾತ’ ಸಿನಿಮಾದಲ್ಲಿ ವಿಷ್ಣುವರ್ಧನ್ ಅಭಿನಯದ ಹಾಡು ತನ್ನತನದ ಹಾಡೇ ಆಗಿದೆ.

ಬಿಕ್ಕುವ ಸಮಸ್ಯೆ ಇರುವ ಹುಡುಗನೊಬ್ಬ ಅಪಹಾಸ್ಯಕ್ಕೆ ಗುರಿಯಾಗಿ ಆತ್ಮವಿಶ್ವಾಸ ಕಳೆದುಕೊಂಡಿರುತ್ತಾನೆ. ಸದಾ ಟೀಕೆ ಮತ್ತು ಅಪಹಾಸ್ಯಗಳನ್ನು ಮಾಡುವ ಜನರಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ತಾನೇ ಗಟ್ಟಿಯಾಗಿ ಮಾತಾಡಿಕೊಂಡು ನಕಾರಾತ್ಮಕವಾದ ಟೀಕೆಗಳಿಲ್ಲದೇ ತನ್ನ ಸಮಸ್ಯೆಯಿಂದ ಹೊರಬಂದಿರುತ್ತಾನೆ. ಅವನ ಧೋರಣೆ ಏನೆಂದರೆ “ನೂರು ಜನರು ಬಂದರೂ, ನೂರು ಜನರು ಹೋದರು ನನಗೆ ನಾನೇ ಸಂಗಾತಿಯು, ನಾನೆಂದು ಸುಖಜೀವಿಯು.

ನನ್ನತನವನ್ನು ಪಡೆಯುವುದು ಬರಿಯ ಸಾಕ್ಷಾತ್ಕಾರ ಮಾತ್ರವಲ್ಲ. ಸುಖವೂ ಕೂಡ. ಆ ಸುಖದ ರುಚಿಯನ್ನು ಕಂಡವರು ತಾವು ಮಾಡುವ ಕೆಲಸಗಳ ಮಾನ್ಯತೆಗಾಗಿ ಇತರರನ್ನು ಅವಲಂಬಿಸುವುದಿಲ್ಲ. ಟೀಕೆಗಳಿಗೆ ಹೆದರುವುದಿಲ್ಲ. ಯಾವುದಾದರೂ ಕೆಲಸ ಮಾಡಿ ಪ್ರಶಂಸೆಗಳು ಬಂದರೆ ಉಬ್ಬಿ ಹೋಗುವುದೂ ಇಲ್ಲ. ಅವರಿಗೆ ಗೊತ್ತಿರುತ್ತದೆ ನನ್ನ ಕೆಲಸದ ಮಟ್ಟ ಎಷ್ಟರಮಟ್ಟಿಗೆ ಇದೆ ಎಂದು. ಆತ್ಮರತಿಯಂತೆ ತನ್ನ ಕೆಲಸವು ಅದ್ಭುತವಾಗಿದೆ, ಅಮೋಘವಾಗಿದೆ, ವಿಸ್ಮಯದಿಂದ ಕೂಡಿದೆ ಎಂದೂ ಭ್ರಮಿತರಾಗಿರುವುದಿಲ್ಲ. ಹಾಗೆಯೇ ನಾನು ಚೆನ್ನಾಗಿ ಮಾಡಿಲ್ಲ, ಬೇರೆಯವರದೇ ಚೆನ್ನಾಗಿದೆ. ನನಗೆ ಮಾಡಲು ಬರುವುದಿಲ್ಲ ಎಂದು ಕೀಳರಿಮೆಯಿಂದ ನರಳುವುದೂ ಇಲ್ಲ. ತನ್ನತನದ ದರ್ಶನವೆಂದರೆ ಬರಿಯ ಕನ್ನಡಿಯಲ್ಲಿ ನೋಡಿಕೊಳ್ಳುವುದಲ್ಲ. ಅರಿಮೆಗಳಿಲ್ಲದೇ ಯಥಾಸ್ಥಿತಿಯಲ್ಲಿ ನೋಡಿಕೊಳ್ಳುವುದು.

ತನ್ನತನದ ಸಾಕ್ಷಾತ್ಕಾರ

ದೇಹದ ಬಣ್ಣ, ಗಾತ್ರ ಅಥವಾ ಇನ್ನಾವುದಾದರೂ ಕಾರಣಕ್ಕೆ ಟೀಕಿಸುವ, ಅಪಹಾಸ್ಯ ಮಾಡುವ ಅಸೂಕ್ಷ್ಮದ ಜನರು ನಮ್ಮಲ್ಲಿದ್ದಾರೆ. ಅಂಗವಿಕಲರನ್ನು ಹಾಸ್ಯದ ಸರಕಾಗಿ ಮನರಂಜನೆಯ ಕಲೆಗಳಲ್ಲಿ ಬಳಸಿಕೊಳ್ಳುವ ಮಂದಮತಿಗಳಿದ್ದಾರೆ. ಅಗ್ಗದ ಹಾಸ್ಯಕ್ಕೆ ಯಾರನ್ನಾದರೂ ಅಪಹಾಸ್ಯ ಮಾಡುವ ಕಳಪೆ ಅಭಿರುಚಿಯ ಕಲಾವಿದರೂ ಇದ್ದಾರೆ, ಅದಕ್ಕೆ ಪ್ರೇಕ್ಷಕ ಪ್ರಭುಗಳೂ ಇದ್ದಾರೆ. ಅಂತಹ ಸಮಯದಲ್ಲಿ ಅಪಹಾಸ್ಯಕ್ಕೆ ಒಳಗಾದವರಿಗೆ ಬೇಕಾಗುವುದೇ ಆತ್ಮವಿಶ್ವಾಸ.

ಇವರು ಓಡಾಡುವ ಲೋಕದ ದಾರಿಯಲ್ಲಿ ಎದುರಾಗುವ ಜನರಿಗೆಲ್ಲಾ ಜಾಗೃತಿ ಮೂಡಿಸಲು ಪ್ರಾಯೋಗಿಕವಾಗಿ ಸಾಧ್ಯವಾಗದು. ಆದರೆ ಇವರೇ ದೃಢಮನಸ್ಕರಾಗಿ ಮತ್ತು ಅಂತಹ ಜನರ ಟೀಕೆ ಮತ್ತು ಅಪಹಾಸ್ಯಗಳನ್ನು ನಿರ್ಲಕ್ಷಿಸುವ ಮತ್ತು ತಮ್ಮ ಪ್ರತಿಭೆ ಮತ್ತು ನೈತಿಕ ಸಾಮರ್ಥ್ಯವನ್ನು ನೆಚ್ಚಿಕೊಂಡಿರುವಂತಹ ಮನಸ್ಥಿತಿಯಿಂದಾಗಿ ತಮ್ಮ ಮೇಲಾಗಬಹುದಾದ ನಕಾರಾತ್ಮಕ ಪ್ರಭಾವಗಳಿಂದ ಪಾರಾಗುತ್ತಾರೆ.

ಮಕ್ಕಳಿಂದಲೇ ಇದನ್ನು ರೂಢಿಸಬೇಕು. ವ್ಯಂಗ್ಯ, ಅಪಹಾಸ್ಯ, ಅನಗತ್ಯ ಟೀಕೆ ಇತ್ಯಾದಿಗಳನ್ನು ಮಾಡಬಾರದೆಂದರೆ ಅವರು ಖಂಡಿತವಾಗಿ ಅಪರೂಪವೆನಿಸುವ ಸೂಕ್ಷ್ಮ ಸಂವೇದನೆಯನ್ನು ಹೊಂದಿರುವ ಅಗತ್ಯವೇನಿಲ್ಲ. ಹಾಗೆ ಮಾಡಿದರೆ ಅವರ ಮನಸ್ಸಿಗೆ ನೋವಾಗುತ್ತದೆ, ಹಾಗೆ ಮಾಡಬಾರದು. ಅದು ಅಮಾನವೀಯ ಎಂಬ ಸಾಮಾನ್ಯ ಪ್ರಜ್ಞೆ ಇದ್ದರೆ ಸಾಕು. ಅದು ನೈತಿಕತೆಯ ರೂಢಿ.

ನೈತಿಕತೆಯನ್ನು, ಪ್ರಜ್ಞಾವಂತಿಕೆಯನ್ನು ಮತ್ತು ಸೂಕ್ಷ್ಮ ಸಂವೇದನೆಯನ್ನು ತನ್ನತನವನ್ನಾಗಿಸಿಕೊಂಡವನು ಇತರರನ್ನು ಅಪಹಾಸ್ಯವನ್ನೂ ಮಾಡುವುದಿಲ್ಲ. ಹಾಗೆಯೇ ತನಗೆ ಅಪಹಾಸ್ಯ ಮಾಡಿದರೆ ಖಂಡಿತವಾಗಿಯೂ ಕುಗ್ಗುವುದಿಲ್ಲ. ಏಕೆಂದರೆ ಅವನಿಗೆ ಈ ಲೋಕವು ಹೇಗೆ ಇದೆ, ತಮ್ಮ ಮೇಲೆ ನಕಾರಾತ್ಮಕವಾಗಿ ಆಕ್ರಮಣ ಮಾಡುವವರ ಮಾನಸಿಕ ಸಮಸ್ಯೆ ಏನು ಎಂಬ ಅರಿವು ಇರುತ್ತದೆ. ಹಾಗಾಗಿ ಅವನು ವ್ಯಕ್ತಿಗತವಾಗಿ ಅವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದೇ ಅರಿಮೆಯ ಅರಿವನ್ನು ಹೊಂದುವುದರ ಬಹು ದೊಡ್ಡ ಲಾಭ.

ತನ್ನ ತಾನು ಅರಿಯುವ ಲಾಭದಲ್ಲಿ ಇತರರನ್ನು ಕರುಣೆಯಿಂದ ಮನ್ನಿಸುವ ಗುಣ ಅವನಾದಿರುತ್ತದೆ.
ಕ್ರಿಸ್ತ ಶಿಲುಬೆಯ ಮೇಲೆ ಸಾಯುವಾಗಲೂ ಅದನ್ನೇ ಹೇಳಿದ್ದು, “ತಂದೆಯೇ, ಕ್ಷಮಿಸು ಅವರನ್ನು (ತನಗೆ ತೊಂದರೆ ಕೊಟ್ಟವರನ್ನು), ಏಕೆಂದರೆ ಅವರು ತಿಳಿಯರು ತಾವು ಏನು ಮಾಡುತ್ತಿದ್ದೇವೆಂದು” ಎಂದು.

ತನ್ನತನವೆಂಬ ಪ್ರಕ್ರಿಯೆ

ತನ್ನ ಸಾಮರ್ಥ್ಯ, ಪ್ರತಿಭೆ, ದೌರ್ಬಲ್ಯ; ಹೀಗೆ ಯಾವುದರ ಬಗ್ಗೆಯೇ ಆಗಲಿ ಜಾಗೃತನಾಗಿರುವವನು ತನ್ನತನದ ಪರಿಕಲ್ಪನೆಯನ್ನು ಚೆನ್ನಾಗಿ ಕಟ್ಟಿಕೊಳ್ಳುತ್ತಿರುತ್ತಾನೆ. ಅಲ್ಲಿ ತಪ್ಪುಸರಿಗಳ ನಿರ್ಣಯಕ್ಕಿಂತಲೂ ತನ್ನ ಮೌಲ್ಯಗಳ ಬಗ್ಗೆ ಇರುವ ಪ್ರಾಮಾಣಿಕ ಬದ್ಧತೆಯೇ ಮುಖ್ಯವಾಗುತ್ತದೆ. ಈ ತನ್ನತನವು ತಾನೇ ರೂಪಿಸಿಕೊಳ್ಳುವುದೇ ಹೊರತು ಅನುವಂಶೀಯವಲ್ಲ.

ಒಬ್ಬ ವ್ಯಕ್ತಿಯ ಶರೀರ, ಕುಟುಂಬ ಮತ್ತು ಆತ ವಾಸಿಸುವ ಪರಿಸರ ಪ್ರಭಾವಗಳು ತಮ್ಮ ಕಾಣ್ಕೆಗಳನ್ನು ನೀಡುತ್ತವೆ. ಹಾಗೆಯೇ ಅವನ ಸಾಮಾಜಿಕ ಸಂವಹನವೂ ಕೂಡಾ ವಿಶೇಷ ಪಾತ್ರವನ್ನು ವಹಿಸುತ್ತದೆ. ಆದರೆ, ತನ್ನತನವೆನ್ನುವುದು ವ್ಯಕ್ತಿಯು ತನ್ನದೇ ಆದ ಪರಿಕಲ್ಪನೆ ಮತ್ತು ಮೌಲ್ಯಗಳಿಂದ ರೂಪಿಸಿಕೊಳ್ಳುವುದು.

ಬಾಲ್ಯದಲ್ಲಿಯೇ ರೂಪುಗೊಳ್ಳುವ ಈ ತನ್ನತನದ ಪರಿಕಲ್ಪನೆಯು ಹದಿಹರೆಯಕ್ಕೆ ಬಂದಾಗ ಬದಲಾಗುತ್ತದೆ. ನಂತರ ವಯಸ್ಕನಾಗುತ್ತಿದ್ದಂತೆ, ಪ್ರಬುದ್ಧನಾಗುತ್ತಾ ಬಂದಂತೆ, ಹೊಸ ಹೊಸ ವಿಚಾರಗಳ ಆವಿಷ್ಕಾರಗಳಾಗುತ್ತಿದ್ದಂತೆ, ಹಿಂದೆ ಅಪ್ಪಿಕೊಂಡಿದ್ದ ಮೌಲ್ಯಗಳ ಪ್ರಾಯೋಗಿಕ ಸತ್ಯಗಳ ಅರಿವಾಗುತ್ತಿದ್ದಂತೆ, ಹೊಸ ಹೊಸ ಸೈದ್ಧಾಂತಿಕವಾಗಿ ಪ್ರಭಾವಗಳಾಗುತ್ತಿದ್ದಂತೆ ತನ್ನತನದ ಪರಿಕಲ್ಪನೆಯೂ ಕೂಡಾ ಬದಲಾಗುತ್ತಾ ಹೋಗಬಹುದು.

ಅದು ಸಹಜ ಕೂಡ. ಇವು ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿಯೂ ಕೂಡಾ ಬದಲಾಗಬಹುದು. ಆದರೆ ಅದನ್ನು ತಾನೇ ನೋಡಿಕೊಳ್ಳುವ ಸೂಕ್ಷ್ಮತೆಯನ್ನೂ, ಪ್ರಜ್ಞಾವಂತಿಕೆಯನ್ನೂ ಮನಸ್ಸಿನ ಮೂಲ ಸಾಮರ್ಥ್ಯವಾಗಿ ಉಳಿಸಿಕೊಂಡಿದ್ದರೆ ಆತ ಆತ್ಮರತಿಯ ಅಥವಾ ಸಮೂಹ ಮಾನ್ಯತೆಗೆ ಹಾತೊರೆವಂತ ಉನ್ಮತ್ತನಾಗುವ ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು.

ಬಹಳ ಮುಖ್ಯವಾಗಿ ತಿಳಿಯಬೇಕಾದ ವಿಷಯವೆಂದರೆ ತನ್ನತನವೆಂಬುದು ಒಂದು ಸಿದ್ಧ ಚೌಕಟ್ಟಲ್ಲ. ಹಾಗೆಯೇ ದುರ್ಬಲವಾಗಿರುವ ಮತ್ತು ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಸತ್ವವೂ ಅಲ್ಲ. ಜಾಳುಜಾಳಾಗಿರದು, ಆದರೆ ಸಲಿಲತೆಯಿಂದ ಕೂಡಿರುವುದು. ಅಂದರೆ ಫ್ಲೆಕ್ಸಿಬಲ್ ಆಗಿರುವುದು. ಪೆಡುಸಾಗಿರದು, ಆದರೆ ಗಟ್ಟಿಯಾಗಿರುವುದು. ಸದೃಢವಾಗಿರುವುದು. ತನ್ನತನವು ಯಾವಾಗಲೂ ವಾಸ್ತವತೆಗೇ ಬದ್ಧವಾಗಿರಬೇಕು. ಆಗ ಅದು ಅರಿವಾಗಿರುತ್ತದೆ. ಅಮಲಿಗೆ ಜಾರಿದರೆ ಅರಿಮೆಯಾಗುತ್ತದೆ. ಈ ಎಚ್ಚರಿಕೆ ಇರಬೇಕು.

ಮನಸ್ಸು ಮತ್ತು ಸಮಾಜ

ಮನಶಾಸ್ತ್ರ ಮತ್ತು ಸಮಾಜಶಾಸ್ತ್ರಗಳೆರಡೂ ಕೂಡ ತನ್ನತನದ ಪರಿಕಲ್ಪನೆಗೆ ಮಾನ್ಯತೆಯನ್ನು ಕೊಡುತ್ತದೆ. ಆದರೆ ಬೇರೆ ಬೇರೆ ಆಯಾಮಗಳಿಂದ ಅವುಗಳನ್ನು ವಿಶ್ಲೇಷಿಸುತ್ತವೆ. ಆದರೆ ಎರಡೂ ಅಧ್ಯಯನಗಳ ಗುರಿಯು ವ್ಯಕ್ತಿಯೇ ಆಗಿರುವುದರಿಂದ ನಾವು ಎರಡನ್ನೂ ಕೂಡ ಗಮನದಲ್ಲಿಟ್ಟುಕೊಳ್ಳುವುದು ಅಗತ್ಯವಾಗುತ್ತದೆ. ಸಾಮಾಜಿಕವಾಗಿ ವ್ಯಕ್ತಿಯನ್ನು ಗುರುತಿಸುವಾಗ, ವ್ಯಕ್ತಿಯು ತನ್ನ ಸ್ಥಾನ ಮತ್ತು ಗುರುತನ್ನು ಸಮಾಜದಲ್ಲಿ ಗುರುತಿಸಿಕೊಳ್ಳುವಾಗ ಅವನ ಧೋರಣೆ, ಅಭಿಪ್ರಾಯ ಮತ್ತು ಗ್ರಹಿಕೆಯನ್ನೇ ಅವಲಂಬಿಸಿರುತ್ತದೆ.

ಆದ್ದರಿಂದ ಸಮಾಜಶಾಸ್ತ್ರ ಹೊರಗಿನ ಗುರುತುಗಳಿಂದ ವ್ಯಕ್ತಿಯ ತನ್ನತನವನ್ನು ಅಧ್ಯಯನ ಮಾಡಲು ಮುಂದಾದರೆ, ಮನಶಾಸ್ತ್ರವು ವ್ಯಕ್ತಿಯ ಒಳಗಿನಿಂದ ತನ್ನತನವನ್ನು ವಿಶ್ಲೇಷಿಸಲು ಮುಂದಾಗುತ್ತದೆ. ಆದರೆ ಎರಡರ ಗುರಿಯೂ ವ್ಯಕ್ತಿಯ ಹಿತವೇ ಮತ್ತು ಸುಖವೇ. ಹಾಗಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ.
ವ್ಯಕ್ತಿಗಳೇ ಸಮೂಹವೇ ಸಮಾಜ. ಸಮಾಜ ಸದಸ್ಯರೇ ಒಬ್ಬೊಬ್ಬ ವ್ಯಕ್ತಿ. ಹಾಗಾಗಿ ಒಬ್ಬೊಬ್ಬರನ್ನೂ ಆದರಿಸುವ ತನ್ನತನದ ಪರಿಕಲ್ಪನೆಯು ತನ್ನಂತೆ ಇತರರು ಎಂದು ಎಲ್ಲರನ್ನೂ ಸಾಮಾಜಿಕವಾಗಿ ಅಪ್ಪಿಕೊಳ್ಳುತ್ತದೆ. ಹೇಳಿಕೇಳಿ ಮನುಷ್ಯ ಸಂಘಜೀವಿ ಅಥವಾ ಸಾಮಾಜಿಕ ಪ್ರಾಣಿಯಲ್ಲವೇ?

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version