ಅಂತರಂಗ
ಲಂಕೇಶರ ‘ಅವ್ವ’ ಕವಿತೆ : ಇನ್ನೊಂದು ನೋಟ ; ‘ತಾಯ್ತನ’ ಗಂಡಿನಲ್ಲೂ ಇರಲಿ
- ರಂಗನಾಥ ಕಂಟನಕುಂಟೆ
‘ಅಮ್ಮ’ ಎನ್ನುವುದು ಕಳ್ಳುಬಳ್ಳಿಯ ನಂಟಿನವಾಚಿಯಾಗಿರುವಂತೆ ಅದೊಂದು ಭಾವನಾತ್ಮಕ ಪರಿಕಲ್ಪನೆಯೂ ಹೌದು. ಅಲ್ಲದೆ ಇದು ‘ತಾಯ್ತನ’ ಎಂಬ ಜೀವಕಾರುಣ್ಯದ ಮೂಲವೂ ಹೌದು. ನಮ್ಮ ಸಾಹಿತ್ಯದಲ್ಲಿ ಈ ‘ಮೌಲ್ಯ’ ಪ್ರತಿಪಾದನೆ ಅತ್ಯಂತ ಶಕ್ತಿಯಾಲಿಯಾಗಿ ಮೂಡಿಬಂದಿದೆ. ವಿಶೇಶವೆಂದರೆ ಈ ಮೌಲ್ಯವನ್ನು ಮಹಿಳೆಯರು ವ್ಯಕ್ತಪಡಿಸಿರುವುದಕ್ಕಿಂತ ಪುರುಶರು ವ್ಯಕ್ತಪಡಿಸಿರುವುದೇ ಹೆಚ್ಚು!
ಅಂದರೆ ಹೆಣ್ಣು ತಾಯಿಯಾಗಿ ‘ತಾಯ್ತನ’ದ ಪರವಾಗಿ ವಕಾಲತ್ತು ವಹಿಸಿರುವುದಕ್ಕಿಂತ ಪುರುಶರು ತಾಯ್ತನದ ಬಗೆಗೆ ವಕಾಲತ್ತು ವಹಿಸಿರುವುದೇ ಹೆಚ್ಚು. ಇದು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮತ್ತು ಮಾತುಕತೆಗಳಲ್ಲಿ ಮತ್ತೆ ಮತ್ತೆ ಮಾರ್ದನಿಗೊಳ್ಳುವ ‘ಮೌಲ್ಯ’ವಾಗಿದೆ. ಅದರ ಎತ್ತುಗೆಯಾಗಿ ಕವಿ ಲಂಕೇಶ್ ಅವರ ‘ಅವ್ವ’ ಕವಿತೆಯೂ ಒಂದು. ಅದರ ಹಿನ್ನೆಲೆಯಲ್ಲಿ ‘ತಾಯ್ತನ’ ಕುರಿತು ಕೆಲವು ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗುವುದು.
ಈ ಕವಿತೆಯಲ್ಲಿ ‘ಅಮ್ಮ’ನ ವ್ಯಕ್ತಿತ್ವವು ಮೊದಲಿಗೆ ದೈಹಿಕವಾಗಿ ಮಗುವಿಗೆ ಜನ್ಮನೀಡುವುದರಿಂದ ಚಿಗುರೊಡೆಯುತ್ತದೆ. ಅದಕ್ಕೆ ಮೊದಲು ಆಕೆ ಫಲವತ್ತಾದ ಕಪ್ಪು ನೆಲದಂತಹ ಹೆಣ್ಣು. ಆಕೆ ಮುಂಗಾರು ಮಳೆಯನುಂಡ ನೆಲದಂತೆ ಚಿಗುರೊಡೆಯುವಳು. ಅಂದರೆ ಜೈವಿಕ ಮೂಲ ಆಕೆಯ ತಾಯ್ತನದ ಮೊದಲ ನೆಲೆ. ಅಲ್ಲಿ ಆರಂಭವಾಗಿ ಅಲ್ಲಿಗೆ ಆಕೆಯ ವ್ಯಕ್ತಿತ್ವದ ವ್ಯಾಪ್ತಿ ಸೀಮಿತವಾಗುವುದಿಲ್ಲ.
ಬದಲಿಗೆ ಲಾಲನೆ ಪಾಲನೆ ಪೋಷಣೆ ಮತ್ತು ಯಾವುದೇ ಶರತ್ತುಗಳಿಲ್ಲದೆ ನಿಸ್ವಾರ್ಥದಿಂದ ಪ್ರೀತಿ ಹಂಚುವ ಗುಣವುಳ್ಳ ಕರುಣಾಮಯಿ. ಹಾಗೆಯೇ ಬೇಸಾಯದಲ್ಲಿ ಸ್ವತಃ ತೊಡಗಿ ದುಡಿದು ಹೊಟ್ಟೆಬಟ್ಟೆ ಕಟ್ಟಿ ಕಾಸು ಕೂಡಿಟ್ಟು ಸಂಸಾರವನ್ನು ಸ್ವಾಭಿಮಾನದಿಂದ ನಡೆಸುವ ದಿಟ್ಟತನವುಳ್ಳವಳು. ಇಂತಹ ಗುಣವುಳ್ಳ ‘ಅವಳು’ ಮಗ ಕೆಟ್ಟಾಗ, ಗಂಡ ಬೇರೆ ಕಡೆ ಹೋದಾಗ ಸಿಡಿದೇಳುವ ಗುಣವನ್ನೂ ಉಳ್ಳವಳು. ಅಲ್ಲದೆ ಬೇಜವಾಬ್ದಾರಿ ಗಂಡನನ್ನು ಸಂಭಾಳಿಸಿಕೊಂಡು ಹೋಗುವ ಹೊಣೆಗಾರಿಕೆಯುಳ್ಳವಳೂ ಹೌದು.
ಈ ದೃಶ್ಟಿಯಿಂದ ನೋಡಿದಾಗ ನಮ್ಮ ಗ್ರಾಮೀಣ ಸಮಾಜದ ಯಾವುದೇ ದುಡಿಯುವ ಮಹಿಳೆಯ ವ್ಯಕ್ತಿತ್ವವೂ ಹೀಗೆಯೇ ಇರುತ್ತದೆ. ಹಾಗಾಗಿ ಈ ಕವಿತೆ ಗ್ರಾಮೀಣ ದುಡಿಯುವ ಮಹಿಳೆಯ ವ್ಯಕ್ತಿತ್ವವನ್ನು ಖಚಿತವಾಗಿ ಕಟ್ಟಿಕೊಡುತ್ತದೆ. ಮತ್ತೆ ಇಲ್ಲಿನ ಹೆಣ್ಣು ವೈದಿಕ ಪರಂಪರೆ ಕಟ್ಟಿಕೊಟ್ಟಿರುವ ಸತಿ ಸಾವಿತ್ರಿ, ಊರ್ಮಿಳೆಯರಂತಹ ‘ಭಾರತೀಯ ನಾರಿ’ಯಲ್ಲ. ಬದಲಿಗೆ ಶೂದ್ರ ಸಮುದಾಯಗಳಲ್ಲಿನ ದುಡಿವ ಸ್ವಾಭಿಮಾನಿ ರೈತ ಮಹಿಳೆ.
ಇದನ್ನೂ ಓದಿ |ಆತ್ಮನಿರ್ಭರ ಭಾರತದ ಆತ್ಮವಂಚಕ ಮುಖಗಳು..!
ಇಂತಹ ಮಹಿಳೆಯನ್ನು ತಾಯಾಗಿ ‘ಕಂಡ’ ಮಗ ಆಕೆಗೆ ‘ವಿನಯ ಮತ್ತು ಮೌನ’ದಿಂದ ತಲೆಬಾಗುತ್ತ ಕೃತಜ್ಞತೆಯ ಕಣ್ಣೀರು ಅರ್ಪಿಸುವ ಹಾಗೂ ಸಾರ್ಥಕ ಬದುಕನ್ನು ಬದುಕಿದ ಅಮ್ಮನಿಗೆ ಬೆಳೆದು ದೊಡ್ಡವನಾಗಿರುವ ಮಗ ತೋರುತ್ತಿರುವ ಗೌರವವೂ ಇಲ್ಲಿದೆ. ಅಂದರೆ ಮಗ ಎನ್ನುವುದೇ ಒಂದು ಗಂಡು ಕೇಂದ್ರಿತ ನೆಲೆ. ಇಡೀ ಕವಿತೆಯನ್ನು ಸೂಕ್ಶ್ಮವಾಗಿ ಗಮನಿಸಿದರೆ ಸದೂರದಲ್ಲಿದ್ದು ಹೆಣ್ಣಿನ ವ್ಯಕ್ತಿತ್ವವನ್ನು ಗಂಡು ನೆಲೆಯಿಂದ ವರ್ಣಿಸುವ ಮತ್ತು ವ್ಯಾಖ್ಯಾನಿಸುವ ದಾಟಿ ಇಲ್ಲಿದೆ.
ಇಂತಹ ತಾಯ್ತನದ ಗುಣವು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಯಾವುದೇ ತಾಯಂದಿರಲ್ಲಿ ಕಾಣಬಹುದು. ಉದಾ.ಗೆ ದೇವನೂರು ಮಹಾದೇವ ಅವರ ‘ಒಡಲಾಳ’ದ ಸಾಕವ್ವ ಇಂತಹ ಪಾತ್ರಗಳು. ಇಂತಹ ಅಸಂಖ್ಯ ಪಾತ್ರಗಳನ್ನು ನಮ್ಮ ಸಾಹಿತ್ಯ ಕೃತಿಗಳಲ್ಲಿ ಮತ್ತು ಸಮಾಜದಲ್ಲಿ ಕಾಣಬಹುದು. ಈ ಎಲ್ಲ ಪಾತ್ರಗಳು ಕರಡಿಯಂತೆ ಮಕ್ಕಳ ಬಗೆಗೆ ಕಾಳಜಿ ಮಾಡುವುದನ್ನು ಕಾಣಬಹುದು. ಅಲ್ಲದೆ ಮಕ್ಕಳ ಜನನದ ನಂತರ ಅವರ ಜೊತೆ ಹೆಚ್ಚು ಹೊತ್ತು ಸಮಯ ಕಳೆಯುವುದು ತಾಯಿಯೇ ಆಗಿರುತ್ತಾಳೆ. ಮತ್ತು ತಾಯಿ ನಿಜಕ್ಕೂ ಮಕ್ಕಳ ಬಗೆಗೆ ಕಾಳಜಿ ಮಾಡುತ್ತಾಳೆ.
ಆದ್ದರಿಂದಲೇ ಮಹಿಳೆಯರಲ್ಲಿ ತಾಯ್ತನವು ‘ಸಹಜ’ ಎಂಬಂತೆ ಗೋಚರಿಸುತ್ತದೆ. ಹೀಗೆ ಗೋಚರವಾಗುವ ಒಂದು ಗುಣವನ್ನೇ ತಾಯ್ತನವೆಂದು ಕರೆಯಲಾಗುತ್ತದೆ. ಹಾಗೆ ಕರೆಯುವ ಮೂಲಕ ಅದನ್ನು ದೈವೀಕರಿಸುವ ಕೆಲಸವನ್ನೂ ಮಾಡಲಾಗುತ್ತದೆ. ಆದರೆ ಇದು ತಾಯಂದಿರಲ್ಲಿ ಸಹಜವಾಗಿರುವುದೋ? ಇದನ್ನು ಸಹಜವೆಂದು ಒಪ್ಪಿಕೊಳ್ಳುವುದಾದರೆ ಅಂತಹ ಮೌಲ್ಯ ಪುರುಶರಲ್ಲಿಯೂ ಯಾಕಿರಬಾರದು? ತಾಯ್ತನ ಎನ್ನುವುದು ಪುರುಶ ಪ್ರಧಾನ ಸಮಾಜದ ಅಪೇಕ್ಶೆಯೋ? ಪಿತೃ ಪ್ರಧಾನ ಸಮಾಜ ಹೊರಿಸಿರುವ ಹೊಣೆಗಳನ್ನು ಅನಿವಾರ್ಯವಾಗಿ ಹೊತ್ತು ತಾಯ್ತನದ ಭಾರಕ್ಕೆ ಸಿಕ್ಕಿಕೊಂಡಿದ್ದಾಳೆಯೇ? ಹೀಗೆ ಹಲವು ಕೇಳ್ವಿಗಳು ಹುಟ್ಟುತ್ತವೆ.
ಯಾಕೆಂದರೆ ಜನ್ಮ ನೀಡುವುದು ಹೆಣ್ಣಿನ ನೈಸರ್ಗಿಕ ಸಾಮಥ್ರ್ಯವಾದರೂ, ‘ತಾಯ್ತನ’ ಎಂಬ ಮೌಲ್ಯವು ಹೆಣ್ಣು ಮತ್ತು ಗಂಡು ಇಬ್ಬರಲ್ಲಿಯೂ ಇರಬೇಕಾದ ಮೌಲ್ಯ. ಯಾಕೆಂದರೆ ಕೆಲವು ಪ್ರಾಣಿಗಳಲ್ಲಿ ಮತ್ತು ಪಕ್ಶಿಗಳಲ್ಲಿ ಇದನ್ನು ಕಾಣಬಹುದು. ಪಕ್ಶಿಗಳಲ್ಲಿ ಹೆಣ್ಣು ಮೊಟ್ಟೆಯನಿಟ್ಟರೂ ಗಂಡು ಹೆಣ್ಣುಗಳು ಕೂಡಿಯೇ ಕಾವು ಕೊಟ್ಟು ಮರಿಮಾಡುತ್ತವೆ. ನಂತರ ಅವುಗಳಿಗೆ ಆಹಾರವನ್ನು ಸಂಗ್ರಹಿಸಿ ಮರಿಗಳಿಗೆ ಉಣಿಸುತ್ತವೆ. ಎರಡೂ ಕೂಡಿ ಲಾಲಿಸಿ ಪಾಲಿಸಿ ರಕ್ಶಿಸಿ ಬೆಳೆಸುತ್ತವೆ.
ಅವುಗಳು ಬೆಳೆದು ಸ್ವತಂತ್ರಗೊಳ್ಳುವವರೆಗೂ ಎರಡು ಕೂಡಿಯೇ ಕಾಳಜಿ ಮಾಡುತ್ತವೆ. ಅವುಗಳಲ್ಲಿ ಗಂಡು ಮತ್ತು ಹೆಣ್ಣು ಎರಡು ಕೂಡಿ ಗೂಡು ಕಟ್ಟುವ ಹೊತ್ತಿನಿಂದಲೂ ಸಮನಾಗಿಯೇ ಕೆಲಸ ಮಾಡುತ್ತವೆ. ತಾಯ್ತನವನ್ನು ಎರಡೂ ಅನುಭವಿಸುತ್ತವೆ. ಹಾಗಾಗಿ ಪಕ್ಶಿ ಜಗತ್ತಿನಲ್ಲಿ ಹೆಣ್ಣಿಗೆ ಮಾತ್ರ ತಾಯ್ತನವನ್ನು ಸೀಮಿತಗೊಳಿಸಲು ಸಾಧ್ಯವಿಲ್ಲ. ಆದರೆ ಸಸ್ತನಿಗಳಲ್ಲಿ ಮಾತ್ರವೇ ‘ತಾಯ್ತನ’ವು ಹೆಣ್ಣಿಗೆ ಮಾತ್ರ ಎಂಬಂತಾಗಿದೆ. ಉಳಿದ ಪ್ರಾಣಿ ಜಗತ್ತಿಗೆ ಅರಿವು ಇಲ್ಲವೆಂದುಕೊಂಡರೂ ‘ನಾಗರಿಕ’ ಎಂದು ತನ್ನನ್ನು ತಾನು ಕರೆದುಕೊಂಡಿರುವ ಮಾನವರ ಜಗತ್ತಿನಲ್ಲಿಯೂ ತಾಯ್ತನ ಹೆಣ್ಣಿಗೆ ಮಾತ್ರ ಎಂಬಂತೆ ಭಾವಿಸಲಾಗಿದೆ.
ಇದು ಹೆಣ್ಣಿಗೆ ತೋರುವ ವಿಶೇಶ ಗೌರವವೋ? ಇಲ್ಲವೇ ತಾಯ್ತನ ಹೆಸರಿನಲ್ಲಿ ಆಕೆಯ ಮೇಳೆ ಇನ್ನಶ್ಟು ಕೆಲಸಗಳನ್ನು ಹೇರುವುದೋ? ಎಂಬ ಪ್ರಶ್ನೆ ಹುಟ್ಟುತ್ತದೆ. ಯಾಕೆಂದರೆ ಕನ್ನಡದ ಹೆಸರಾಂತ ಚಿಂತಕಿಯಾದ ಡಾ. ಎಚ್. ಎಸ್ ಶ್ರೀಮತಿ ಅವರು ‘ತಾಯ್ತನ’ ಒಂದು ಶಾಪವಾಗಿರುವ ಬಗೆಯನ್ನು ಹಲವು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಇದು ಅವರು ಎತ್ತಿರುವ ಬಹಳ ಗಂಭೀರವಾದ ಪ್ರಶ್ನೆ. ಇದು ಹೆಚ್ಚು ವ್ಯಾಪಕವಾಗಿ ಚರ್ಚೆಯಾಗಬೇಕಾದ ಅಗತ್ಯವಿದೆ.
ಹಾಗೆ ನೋಡಿದರೆ ‘ತಾಯ್ತನ’ ಎನ್ನುವುದು ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ಕಾರಣಕ್ಕಾಗಿಯೇ ತಾಯ್ತನ ಎನ್ನುವುದು ಹೆಣ್ಣಿನ ವಿಶೇಶ ಗುಣವೆಂದು ಭಾವಿಸುವ ಪುರುಶ ಜಗತ್ತು ಅಂತಹ ಗುಣವನ್ನು ಯಾಕೆ ರೂಢಿಸಿಕೊಳ್ಳಬಾರದು? ಎಂಬ ಪ್ರಶ್ನೆಗಳನ್ನು ಅನೇಕ ಮಹಿಳೆಯರು ಈಗಾಗಲೇ ಕೇಳಿದ್ದಾರೆ. ಈ ಪ್ರಶ್ನೆ ಸರಿಯಾದುದೂ ಆಗಿದೆ. ಸಂತಾನ ವೃದ್ಧಿಯಲ್ಲಿ ಗಂಡು ಹೆಣ್ಣುಗಳು ತೊಡಗುವುದು ಸಹಜ ಕ್ರಿಯೆ. ಆದರೆ ‘ತಾಯ್ತನ’ ಎನ್ನುವುದು ಜೈವಿಕವಾದ ಕಲ್ಪನೆಯಾಗಿರದೇ ಅದು ಸಾಮಾಜಿಕವಾದ ಒಂದು ಕಲ್ಪನೆ.
ಅದರಲ್ಲಿಯೂ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಪುರುಶರೇ ಕಟ್ಟಿಕೊಟ್ಟಿರುವ ಒಂದು ಕಲ್ಪನೆ. ಹಾಗಾಗಿ ತಾಯ್ತನ ಎಂಬುದನ್ನು ಒಂದು ಆತ್ಯಂತಿಕ ಜೀವನ ಮೌಲ್ಯ ಮತ್ತು ಸಾಹಿತ್ಯಕ ಮೌಲ್ಯ ಎಂದು ಮಂಡಿಸುವಾಗ ಈ ಬಗೆಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಆದರೆ ಬಹುತೇಕ ಪುರುಶ ಲೇಖಕರು ತಾಯ್ತನವನ್ನು ಒಂದು ಮೌಲ್ಯವಾಗಿ ಮಂಡಿಸುವಾಗ ಈ ಪ್ರಶ್ನೆಗಳನ್ನು ಕೇಳಿಕೊಳ್ಳದೇ ಕೇವಲ ಭಾವನಾತ್ಮಕವಾಗಿ ಮಂಡಿಸುತ್ತಾರೆ. ಕುಪ್ಪಳಿಯಲ್ಲಿ ನಡೆದ ಸಾಹಿತ್ಯಕ ಚರ್ಚೆಯಲ್ಲಿ ಕನ್ನಡದ ಪ್ರಸಿದ್ಧ ಲೇಖಕ ಕುಂ. ವೀರಭದ್ರಪ್ಪ ಅವರು ಸಾಹಿತ್ಯದಲ್ಲಿ ‘ತಾಯ್ತನ’ದ ಗುಣ ಇರಬೇಕು ಎಂದರು.
ಕೂಡಲೇ ಅಲ್ಲಿದ್ದ ಪ್ರಸಿದ್ಧ ಚಿಂತಕಿ ಡಾ. ಎಚ್. ಎಸ್. ಶ್ರೀಮತಿ ಅವರು ತಾಯ್ತನ ಎಂದರೇನು? ಎಂಬ ಪ್ರಶ್ನೆ ಕೇಳಿದರು. ಈ ಪ್ರಶ್ನೆ ನಿರೀಕ್ಶಿಸಿರದ ವೀರಭದ್ರಪ್ಪನವರು ತಬ್ಬಿಬ್ಬಾದರು. ಕೊನೆಗೆ ಆ ಚರ್ಚೆಯೇ ಮುಂದುವರೆಯಲಿಲ್ಲ. ತಾಯ್ತನದ ಬಗೆಗೆ ಭಾವುಕವಾಗಿ ಮಾತನಾಡುವ ಜನರಿಗೆ ಈ ಪ್ರಶ್ನೆಯನ್ನು ಕೇಳಿದರೆ ಬಹುತೇಕರು ತಬ್ಬಿಬ್ಬಾಗುವರು. ಇಲ್ಲವೇ ಅದನ್ನು ಒಂದು ಮೌಲ್ಯವಾಗಿ ವಿವರಿಸಲು ತೊಡಗಿದರೆ ಅಂತಹ ಮೌಲ್ಯಗಳನ್ನು ಪುರುಶರು ರೂಢಿಸಿಕೊಳ್ಳಲು ಕಶ್ಟವೇನು? ಎಂಬ ಪ್ರಶ್ನೆ ಹುಟ್ಟುತ್ತದೆ.
ಈ ಪ್ರಶ್ನೆಗೆ ಉತ್ತರಿಸುವುದು ಕೊಂಚ ಕಶ್ಟ. ಇಂತಹ ಪ್ರಶ್ನೆಗಳಿಲ್ಲದೆ ಭಾವುಕವಾಗಿ ಮಂಡಿಸುವುದೇ ನಮ್ಮಲ್ಲಿ ಹೆಚ್ಚು ರೂಢಿಯಾಗಿದೆ. ಹಾಗೆ ಭಾವುಕವಾಗಿ ಮಂಡನೆ ಮಾಡುವುದರ ಹಿಂದೆ ಹೆಣ್ಣಿನ ಶೋಶಣೆಯನ್ನು ಒಪ್ಪಿಕೊಂಡಿರುವ ಮತ್ತು ಶೋಶಣೆಯ ಮತ್ತೊಂದು ಮುಖವೇ ಆಗಿರುವ ಸಾಧ್ಯತೆಗಳಿರುತ್ತವೆ. ಈ ನಡುವೆ ಜರ್ಮನಿಯ ಪ್ರಸಿದ್ದ ಕವಿ ಮತ್ತು ನಾಟಕಕಾರ ಬೆರ್ಟೋಲ್ಟ್ ಬ್ರೆಕ್ಟ್ ತನ್ನ ‘ಕಕೇಶಿಯನ್ ಚಾಕ್ ಸರ್ಕಲ್’ ಎಂಬ ನಾಟಕದಲ್ಲಿ ತಾಯಿ ಪರಿಕಲ್ಪನೆಯನ್ನು ವಿಸ್ತರಿಸಿದ್ದಾನೆ.
ಈ ನಾಟಕದಲ್ಲಿ ‘ತಾಯ್ತನ’ ಎನ್ನುವುದು ದೈಹಿಕವಾಗಿ ಜನ್ಮ ನೀಡುವುದರಿಂದ ಬರುವುದಿಲ್ಲ ಎಂಬುದನ್ನು ಸ್ಪಶ್ಟಪಡಿಸಿದ್ದಾನೆ. ಅಲ್ಲಿ ಪ್ರೀತಿ ಮತ್ತು ಕಾಳಜಿ ಮಾಡುವ ಬಗೆ ಹಾಗೂ ಮಗುವಿನ ನೋವಿನೊಂದಿಗೆ ಮಿಡಿಯುವುದು ಕಾಣುತ್ತದೆ. ಅಂತಹ ಭಾವನೆಯನ್ನು ಯಾರೇ ಹೊಂದಿದ್ದರೂ ಅವರು ತಾಯ್ತನಕ್ಕೆ ಅರ್ಹರಾಗುತ್ತಾರೆ. ಇನ್ನು ರಶ್ಯನ್ ಲೇಖಕ ಮ್ಯಾಕ್ಸಿಂ ಗಾರ್ಕಿ ತನ್ನ ‘ತಾಯಿ’ ಕಾದಂಬರಿಯಲ್ಲಿ ತಾಯಿ ಪಾತ್ರವನ್ನು ಇನ್ನೊಂದು ಬೇರೆಯದೇ ನೆಲೆಯಲ್ಲಿ ಚಿತ್ರಿಸಿದ್ದಾನೆ. ಅಲ್ಲಿ ತಾಯಿ ಒಂದು ಕ್ರಾಂತಿಯ ತಾಯಿಯಾಗಿ ಕಾಣಿಸಿಕೊಳ್ಳುತ್ತಾಳೆ. ಕ್ರಾಂತಿಯ ಕಾಳಜಿಯೊಂದಿಗೆ ಅದರ ಲಾಲನೆ ಪಾಲನೆ ಪೋಶಣೆಯಲ್ಲಿ ತೊಡಗುತ್ತಾಳೆ.
ಲಂಕೇಶರ ಈ ಕವಿತೆಯಲ್ಲಿ ಅಂತಹ ಯಾವ ಹೊಸ ಸಾಧ್ಯತೆಗಳ ಅಭಿವ್ಯಕ್ತಿ ಇಲ್ಲ. ಬದಲಿಗೆ ರೂಡಿಗತವಾದ ಕಲ್ಪನೆಯ ಅವ್ವನನ್ನು ಚಿತ್ರಿಸಲಾಗಿದೆ. ಇಲ್ಲಿ ಆತ್ಮ ವಿಮರ್ಶಾತ್ಮಕ ನೆಲೆಯ ದಾಟಿಯಿರದೆ ರೂಢಿಗತ ನೆಲೆಯ ತಾಯ್ತನದ ಚಿತ್ರಣವೇ ಇದೆ. ಆದರೆ ಗಮನಿಸಬೇಕಾದ ಸಂಗತಿಯಂದೆ ಆಕೆ ದುಡಿವ ವರ್ಗದ ರೈತಾಪಿ ಮಹಿಳೆಯ ಚಿತ್ರಣ ಎದ್ದು ಕಾಣಿಸುತ್ತದೆ.
ಅಳುಬುರುಕು ಹೆಣ್ಣಿನ ಚಿತ್ರಕ್ಕೆ ಬದಲಾಗಿ ಸ್ವಾಭಿಮಾನಿ ದಿಟ್ಟ ಮಹಿಳೆಯ ಚಿತ್ರವನ್ನು ಕಟೆದಿರುವುದು ಗಮನಾರ್ಹ ಸಂಗತಿ. ಹಾಗೆ ದಿಟ್ಟವಾದ ತಾಯಿಯನ್ನು ಚಿತ್ರಿಸುವ ಹೊತ್ತಿನಲ್ಲಿ ಗಂಡು ಜವಾಬ್ದಾರಿಯಿಂದ ನುಣುಚಿಕೊಂಡಿರುವ ಬಗೆ ಚರ್ಚೆಗೆ ಒಳಗಾಗುವುದಿಲ್ಲ. ಅಲ್ಲದೆ ಗಂಡಿನ ಹೊಣೆಗೇಡಿತನದಿಂದ ಅನಿವಾರ್ಯವಾಗಿ ಎಲ್ಲ ಭಾರವನ್ನು ಹೊತ್ತು ನಡೆಯಬೇಕಾದ ಅನಿವಾರ್ಯತೆಗೆ ಸಿಕ್ಕಿದ ಹೆಣ್ಣು ಕುಟುಂಬವೆಂಬ ಆವುಗೆಯಲ್ಲಿ ಬೆಂದು ಮಾಗಿದ್ದಾಳೆ.
ಆದರೆ ಈ ಬಗೆಗೆ ಹೆಚ್ಚು ಚರ್ಚೆ ಮಾಡದೆ ರೂಢಿಗತವಾದ ತಾಯ್ತನದ ಮೌಲ್ಯವು ಲಂಕೇಶರಲ್ಲಿ ಮತ್ತು ನಮ್ಮ ಸಾಹಿತ್ಯದಲ್ಲಿ ಅಂತರ್ಗತವಾಗಿ ಹರಿಯುತ್ತಿದೆ. ಮತ್ತೆ ಇಂತಹ ಮೌಲ್ಯವನ್ನು ಹೆಚ್ಚು ಪ್ರತಿಪಾದಿಸುವವರು ಮಹಿಳೆಯರಲ್ಲ. ಬಹುತೇಕ ಪುರುಷ ಲೇಖಕರು. ಈ ಪುರುಶರು ಕಟ್ಟಿಕೊಟ್ಟಿರುವ ಈ ಕಲ್ಪನೆಯನ್ನು ಮಹಿಳೆಯರು ಹೇಗೆ ಗ್ರಹಿಸುತ್ತಾರೆ? ಎಂಬುದು ಮುಖ್ಯ ಸಂಗತಿ.
ಇದುವರೆಗೂ ಈ ಬಗೆಗೆ ನಡೆದಿರುವ ಚರ್ಚೆಗಳನ್ನು ಗಮನಿಸಿದರೆ ಗಂಡುನೋಟ ಕಟ್ಟಿರುವ ತಾಯ್ತನದ ಕಲ್ಪನೆಯನ್ನು ಒಂದು ಆದರ್ಶದ ಮತ್ತು ಮಾದರಿಯಾದ ಮೌಲ್ಯವಾಗಿ ಮಾನ್ಯ ಮಾಡಿಲ್ಲ. ಹಾಗಾಗಿ ತಾಯ್ತನದ ಬಗೆಗೆ ಜನಪ್ರಿಯವಾಗಿರುವ ರೂಢಿಗತ ವಿಚಾರವನ್ನು ಮರುವಿಮರ್ಶೆಗೆ ಒಳಪಡಿಸಬೇಕಾದ ಅಗತ್ಯವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243