ಭಾವ ಭೈರಾಗಿ

ಕವಿತೆ | ಅದೇ ಇಪ್ಪತ್ತಮೂರು ವಯಸ್ಸು ನಿನಗೆ..!

Published

on

  •  ವೆಂಕಟೇಶ್ ಪಿ ಮರಕಮದ್ದಿನಿ

ಜಾತ್ರೆಯಲಿ ಕಿವಿ ಚಾಟಿಗೆಂದು ಕೊಂಡ ಸ್ಕಾರ್ಫಿನಲಿ ಚಿತ್ರವಾಗಿದ್ದೀಯ ಭಗತ್
ನಿನ್ನ ಮಾತುಗಳು ಆ ಕಿವಿಯಲ್ಲಿ
ಸದಾ ಅನುರಣಿಸಲೆಂದು
ನಿನ್ನನೇ ಬೇಡಿಕೊಳ್ಳುವೆ ನಾನು

ನೀನಂದು ಬಾಟಲಿಯಲ್ಲಿ ಸಂಗ್ರಹಿಸಿದ್ದ
ಉಸುಕುಮಿಶ್ರಿತ ರಕ್ತ
ಥೇಟ್ ಅದೇ ರಕ್ತ ಇಂದಿಗೂ
ಅವೆಷ್ಟೋ ಹಸಿಮಯ್ಯ ಅಸಹಾಯಕ
ನರಗಳ ನೂಲಿನ ಮ್ಯೂಸಿಯಂನಲ್ಲಿ
ಶೇಖರವಾಗಿಯೇ ಇದೆ.

ನೀನು ಒಂದೇ ಒಂದು ಮಾತು
ಹೇಳಿಬಿಡು ಭಗತ್
ಎನ್ನುತ್ತಾ ಎಷ್ಟೋ ಸಂಗಾತಿಗಳು
ಈಗಲೂ ನಿನ್ನ ಒಡಲ ಘೋಷಣೆಗಳನ್ನು ಆಕಾಶಕ್ಕೆ ಚಿಮ್ಮುವಂತೆ ಕೂಗಲು ತಯ್ಯಾರಿದ್ದಾರೆ
ಹೊಸರೂಪವೆತ್ತ ಇಂದಿನ ಪರಕೀಯ ಮನಸುಗಳ ದಬ್ಬಾಳಿಕೆ ಸಹಿಸಲೊಲ್ಲೆವು
ಒಂದೇ ಒಂದು ಮಾತು ಹೇಳಿಬಿಡು ಭಗತ್
ನಾವು ತಯ್ಯಾರಿದ್ದೇವೆ!

ನಿನ್ನ ಶಿಸ್ತುಬದ್ಧ ಕ್ರಾಂತಿಯಲ್ಲೊಂದು
ಶಾಂತಿಯೇ ಇತ್ತಲ್ಲವೇ
ಅದನ್ನೇ ಅಲ್ಲವೇ ನೀನು ಕೊನೆಗೆ ಬಯಸಿದ್ದು
ಅದು ನಿನಗೆ ತಿಳಿದಿತ್ತೊ ಇಲ್ಲವೋ ಗೊತ್ತಿಲ್ಲ
ಆದರೆ ನನಗಂತೂ ಚೆನ್ನಾಗಿಯೇ ತಿಳಿದಿದೆ ಭಗತ್!

ನೀನು ಇರಬೇಕಿತ್ತು ಇಲ್ಲವಾದೆ
ಇವೆಲ್ಲ ಮಾತುಗಳು ಬೇಡ
ನೀನು ಇನ್ನು ಇದ್ದೀಯಾ
ಅದೆಷ್ಟೋ ವಿಪ್ಲವದ ತರುಣ
ಮೂರ್ತಿಗಳ ರೂಪದಲಿ
ನಿನ್ನ ಸಾಹಸ ಪ್ರೇಮ ಚೈತನ್ಯಕ್ಕೆಂದೂ ಸಾವಿಲ್ಲ
ಇನ್ನೂ ಇದೆ ನಿನ್ನ ಆಂತರ್ಯದ ಹಕ್ಕಿ ಸಂತತಿಗೆ ಹಸಿನೆತ್ತರು
ಇನ್ನೂ ನಿನಗೆ ವಯಸ್ಸು ಅದೇ ಇಪ್ಪತ್ತಮೂರು!

ಕವಿ | ವೆಂಕಟೇಶ್ ಪಿ ಮರಕಮದ್ದಿನಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version