ಭಾವ ಭೈರಾಗಿ
ಕವಿತೆ | ಅಕ್ಷರ ಮಾಂತ್ರಿಕ
- ಡಾ.ಗಿರೀಶ್ ಮೂಗ್ತಿಹಳ್ಳಿ
ತಾರೆಯ ಮೀರಿದ
ಪ್ರೀತಿಯ ತೋರಿದ
ಮನದಲಿ ಊರಿದ
ದೊರೆ ನೀವು;
ಓದಿಗೆ ಒಲಿದು
ಛಲದಲಿ ಚಲಿಸಿ
ಬಂಧನ ಬಿಡಿಸಿದ
ಬರೆ ನೀವು.
ಬದುಕಿನ ಕಡಲಿಗೆ
ನಾವಿಕ ನೀವು
ಹಾಕುವ ಹುಟ್ಟಿಗೆ ಅಲಂಕಾರ ;
ಒಡಲಿನ ಹಸಿವಿಗೆ
ಬಾಳಿನ ಕುಲುಮೆಗೆ
ವಿದ್ಯಾ ಉಷ್ಣವೇ ಉಪಕಾರ.
ಅಕ್ಷರ ಮಂತ್ರಕೆ
ಸಾವಿರದ ತಂತ್ರಕೆ
ಅಷ್ಟದಿಕ್ಕಿಗೂ
ನಿಮ್ಮದೆ ಕಾವು;
ಬದುಕಿನ ದಾರಿಗೆ
ಬೆಳಕಿನ ದೀವಿಗೆ
ಇಷ್ಟದ ಬದುಕಿಗೆ
ತೋರಣ ಮಾವು.
ಕೋಟಿ ವಿದ್ಯೆಗೆ
ಮೈತ್ರಿ ನೀವು
ಸಾಟಿ ಯಾರು ನಿಮಗಿನ್ನು;
ದಾಟಿ ದಾಟಿ
ಎಲ್ಲೆಯ ದಾಟಿ
ಸಾಗರದಾಚೆಯ ಸಿರಿ ನೀವು.
ಅಕ್ಷರ ಅಕ್ಷರ
ಅಕ್ಷಯ ಸಾಗರ
ಸಾಗುತ ಸಾಗಲಿ ಬಹುದೂರ
ಬಿತ್ತರ ಬಿತ್ತರ
ಬಾನಿನ ನೇಸರ
ಬೀಗುತ ಬರಲಿ ಬಹದ್ದೂರ!
ಸುದ್ದಿದಿನ.ಕಾಂ|ವಾಟ್ಸಾಪ್|9980346243