ಭಾವ ಭೈರಾಗಿ
ಕವಿತೆ | ಅಪ್ಪ
- ಎನ್ಕೆ ಹನುಮಂತಯ್ಯ
ಯಜಮಾನರ ಗದ್ದೆಯೊಳಗೆ
ಗೊಬ್ಬರವಾದವನು.
ನಾವು ಹಸಿದು ಹಲ್ಲು ಕಿಸಿದರೂ
ಹೆಂಡವ ಹೀರಿ
ಹಣೆಬರಹ ಜರಿದವನು.
ಪ್ರತಿದಿನ ಊರೊಳ್ಳ ಕಸ ಗುಡಿಸಿ
ಬೀಳುಗಳ ಹೊತ್ತು
ಮಡಕೆಗಟ್ಟಲೆ ಬಾಡ ಕೂಡಿಟ್ಟವನು
ಎಕ್ಕಡದೊಳಗೇ ಬುದ್ಧನ ಹಾಗೆ ಕೂತು
ಅವರಿವರಿತ್ತ ತುತ್ತ ತಿಂದವನು.
ಉತ್ತಮರ ಪರುಸೆಗೆ ಬೆದರಿ
ನಮಗೆ ಹರುಕು ಚೆಡ್ಡಿಯ ಸಿಗಾಕಿ
ದೂರದಿಂದಲೇ
ಹೊಳೆವ ತೇರ ತೋರಿದವನು.
ಹಾಳೆಯೊಳಗಿನ ಹಕ್ಕಿಗಳು
ನಮ್ಮ ಮುದಿಗಣ್ಣ
ಹಣ್ಣ ತೋಟದಲಿ ಹಾರಾಡದಂತೆ
ಯಾರ ಸೇವೆಗೋ
ಕವಣೆಯ ಬೀಸಿ ಕಾದವನು.
ಅವನ ಸೆರಗಿನಲಿ ಮೀಸೆಗಳ ಹುಡುಕಿ
ಒನಕೆ ಹಿಟ್ಟಿನ ಕೋಲಿನಲೆ
ಹೊಡೆದೊಡೆದು ಅತ್ತವನು.
ಇರುಳ ಉರುಳಿಗೆ ಶಿರವಿಟ್ಟು ಸತ್ತವನು.
ಈಗಲೂ ನನ್ನೊಡಲ
ಗೋಳ ಗುಮ್ಮಟದೊಳಗೆ
ಗಳಗಳ ಅಳುತ್ತಾನೆ
ಪೌರ್ಣಮಿಗೆ ಮುಖ ಮಾಡಿ
ಏನನೋ.. ಕಾಯುತ್ತಾನೆ.
( ಕವಿ ಎನ್ಕೆ ಹನುಮಂತಯ್ಯ ಅವರ ‘ ಮಾಂಸದಂಗಡಿಯ ನವಿಲು’ ಕವನ ಸಂಕಲನದಿಂದ ‘ ಅಪ್ಪ ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪುಸ್ತಕವನ್ನು ನಾಡಿನ ಪ್ರಸಿದ್ಧ ಪ್ರಕಾಶನ ಸಂಸ್ಥೆಯಾದ ಲಡಾಯಿ ಪ್ರಕಾಶನ ಹೊರತಂದಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243